ರಫೇಲ್ ಜೋಡಿಸ್ತಾರೆ, ಆದ್ರೆ ಪುಸ್ತಕದ ಪಾಠ ನೆನಪಿರಲ್ಲ!...ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಕುರಿತು ಸಿಎಂ ರೇವಂತ್ ಹೇಳಿಕೆ ವೈರಲ್ | Revanth Reddy

Revanth Reddy | ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಕುರಿತು ಸಿಎಂ ರೇವಂತ್ ಹೇಳಿಕೆ ವೈರಲ್
Revanth Reddy | ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಕುರಿತು ಸಿಎಂ ರೇವಂತ್ ಹೇಳಿಕೆ ವೈರಲ್
Published on

ಅಲ್ಪಸಂಖ್ಯಾತ ವಿದ್ಯಾರ್ಥಿಗಳು ರಫೇಲ್ ಯುದ್ಧ ವಿಮಾನವನ್ನೇ ಬಿಡಿಭಾಗಗಳಾಗಿ ಕಳಚಿ ಮತ್ತೆ ಜೋಡಿಸಬಲ್ಲ ತಾಂತ್ರಿಕ ಕುಶಲತೆ ಹೊಂದಿದ್ದಾರೆ ಎಂದಿರುವ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ (Revanth Reddy), ತಮ್ಮ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ, ಇದೇ ವೇಳೆ ಅವರು ವಿದ್ಯಾರ್ಥಿಗಳು ಪುಸ್ತಕದ ಪಾಠಗಳನ್ನು ನೆನಪಿಟ್ಟುಕೊಳ್ಳಲು ಹೆಣಗಾಡುತ್ತಾರೆ ಎಂದು ಹೇಳಿರುವುದು ಹೊಸ ಚರ್ಚೆಗೆ ಗ್ರಾಸವಾಗಿದೆ.

ಬಂಜಾರ ಹಿಲ್ಸ್‌ನ ಆದಿವಾಸಿ ಭವನದಲ್ಲಿ ನಡೆದ ಅಲ್ಪಸಂಖ್ಯಾತರ ಶ್ರೇಷ್ಠತಾ ಸಮಾವೇಶದಲ್ಲಿ ಮಾತನಾಡುತ್ತಾ, ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ಕುಶಲ ಕಾರ್ಮಿಕರಾಗಿದ್ದು, ಅವರಿಗೆ ನೀಡಿದರೆ ರಫೇಲ್ ವಿಮಾನವನ್ನೇ ಕಳಚಿ ಮತ್ತೆ ಜೋಡಿಸಬಲ್ಲರು ಎಂದಿದ್ದಾರೆ. ಅವರ ಈ ಹೇಳಿಕೆಗೆ ಬಿಜೆಪಿ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಸರ್ಕಾರವು ಓಲೈಕೆ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದೆ ಹಾಗೂ ಹೈದರಾಬಾದ್‌ನ ಹಳೆಯ ನಗರದಲ್ಲಿನ ವಿದ್ಯುತ್ ಬಾಕಿ ವಿಚಾರದಲ್ಲಿ ಸರ್ಕಾರದ ಧೋರಣೆಯನ್ನು ಪ್ರಶ್ನಿಸಿದೆ.

ಅಲ್ಪಸಂಖ್ಯಾತರಿಗೆ ಉಚಿತ ವಿದ್ಯುತ್ ಸಹಕಾರಿ ಎಂದ ಸಿಎಂ

ಇದೇ ವೇಳೆ ರೇವಂತ್ ರೆಡ್ಡಿ ಅವರು ತಮ್ಮ ಸರ್ಕಾರದ ಶಾದಿ ಮುಬಾರಕ್, ಕಲ್ಯಾಣ ಲಕ್ಷ್ಮಿ, ಇಂದಿರಮ್ಮ ಇಂಡ್ಲು ಮತ್ತು ತಿಂಗಳಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆ ಸೇರಿದಂತೆ ಹಲವು ಕಲ್ಯಾಣ ಯೋಜನೆಗಳನ್ನು ಎತ್ತಿಹಿಡಿದರು. ಹೈದರಾಬಾದ್‌ನ ಹಳೆಯ ನಗರದಲ್ಲಿ ವಿದ್ಯುತ್ ಕದಿಯುತ್ತಾರೆ ಮತ್ತು ಬಿಲ್ ಪಾವತಿಸುವುದಿಲ್ಲ ಎಂಬ ಟೀಕೆಗಳಿಗೆ ಉತ್ತರಿಸಿದ ಅವರು, ಕಾಂಗ್ರೆಸ್ ಸರ್ಕಾರ ನೀಡುತ್ತಿರುವ 200 ಯೂನಿಟ್ ಉಚಿತ ವಿದ್ಯುತ್ ಅಲ್ಪಸಂಖ್ಯಾತ ಸಮುದಾಯದ ಸಹೋದರ ಸಹೋದರಿಯರಿಗೆ ಹೆಚ್ಚು ಉಪಯುಕ್ತವಾಗಿದೆ ಎಂದು ಹೇಳಿದರು.
ಇದರ ಜೊತೆಗೆ ಮಹಾಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ರೈತು ಭರೋಸಾ ಮೂಲಕ ರೈತರಿಗೆ ಆರ್ಥಿಕ ನೆರವು ಮತ್ತು ವಸತಿ ಯೋಜನೆಗಳನ್ನು ಉಲ್ಲೇಖಿಸಿದರು. ತಮಗೆ ಹಿಂದೂ ಮತ್ತು ಮುಸ್ಲಿಮರು ಬೇರೆ ಬೇರೆಯಲ್ಲ, ಅವರು ತಮ್ಮ ಎರಡು ಕಣ್ಣುಗಳಿದ್ದಂತೆ ಎಂದ ಸಿಎಂ ರೆಡ್ಡಿ, ಹಿಂದೂಗಳಿಗೆ ಸಿಗುವಷ್ಟೇ ಸೌಲ್ಯಗಳು ಮುಸ್ಲಿಮರಿಗೂ ಸಿಗುವಂತೆ ನೋಡಿಕೊಳ್ಳಲು ಸರ್ಕಾರ ಶ್ರಮಿಸುತ್ತಿದೆ ಎಂದರು.
ಮಾಜಿ ಸಿಎಂ ವೈ ಎಸ್ ರಾಜಶೇಖರ ರೆಡ್ಡಿ, ಮಾಜಿ ಸಚಿವ ಮೊಹಮ್ಮದ್ ಅಲಿ ಶಬ್ಬೀರ್ ಹಾಗೂ ಕಾಂಗ್ರೆಸ್ ನಾಯಕ ಆಜಾದ್ ಅವರ ಕೊಡುಗೆಗಳನ್ನು ಸ್ಮರಿಸಿದ ರೇವಂತ್ ರೆಡ್ಡಿ, ಕಾಂಗ್ರೆಸ್ ಸರ್ಕಾರ ನೀಡಿದ್ದ ಶೇ. 4ರಷ್ಟು ಮೀಸಲಾತಿಯನ್ನು ಪ್ರಸ್ತಾಪಿಸಿದರು. ಇದೇ ವೇಳೆ ಯಾರ ಹೆಸರನ್ನೂ ಉಲ್ಲೇಖಿಸದೆ ವಾಗ್ದಾಳಿ ನಡೆಸಿದ ಅವರು, ಕೆಲವರು ಅಲ್ಪಸಂಖ್ಯಾತರನ್ನು ಭಾರತ ವಿರೋಧಿಗಳು ಎಂದು ಬಿಂಬಿಸುವ ವಿಭಜನಾತ್ಮಕ ವಾತಾವರಣ ಸೃಷ್ಟಿಸುತ್ತಿದ್ದಾರೆ. ಆದರೆ, ಅಲ್ಪಸಂಖ್ಯಾತರು ಶಿಕ್ಷಕರಾಗಿ ದೇಶ ಕಟ್ಟುವ ಮತ್ತು ದೇಶಕ್ಕಾಗಿ ವೀರರನ್ನು ರೂಪಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದರು.

ರೇವಂತ್ ರೆಡ್ಡಿನೋ ಅಥವಾ ರೇವಂತ್ ಉದ್ದೀನ್..?

ಸಿಎಂ ರೆಡ್ಡಿ ಹೇಳಿಕೆಗಳನ್ನು ಖಂಡಿಸಿದ ತೆಲಂಗಾಣ ಬಿಜೆಪಿ ಕಾರ್ಯದರ್ಶಿ ವೀರೇಂದರ್ ಗೌಡ್, ನಿರ್ದಿಷ್ಟ ಸಮುದಾಯಕ್ಕೆ ಆದ್ಯತೆಯ ಚಿಕಿತ್ಸೆ ನೀಡುವ ಬದಲು ಸರ್ಕಾರ ಕಾನೂನನ್ನು ಜಾರಿಗೆ ತರಬೇಕು, ಕಾನೂನು ಜಾರಿಗೊಳಿಸಲು ಸಾಧ್ಯವಾಗದಿದ್ದರೆ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಆಗ್ರಹಿಸಿದರು. ಹಳೆಯ ನಗರದ ವಿದ್ಯುತ್ ಬಿಲ್ ವಿಚಾರದಲ್ಲಿ ಬಿಲ್ ಪಾವತಿಸುತ್ತಿಲ್ಲ ಎಂಬ ಕಾರಣಕ್ಕೆ ಉಚಿತ ವಿದ್ಯುತ್ ನೀಡುವುದು ಅಸಂವಿಧಾನಿಕ ಎಂದ ಅವರು, ವಿದ್ಯುತ್ ಬಾಕಿ ವಸೂಲಿ ಮಾಡಲು ಸಾಧ್ಯವಾಗದ ಸರ್ಕಾರ ಕಾನೂನು ಸುವ್ಯವಸ್ಥೆ ಹೇಗೆ ಕಾಪಾಡುತ್ತದೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಎಂದರೆ ಮುಸ್ಲಿಮರು, ಮುಸ್ಲಿಮರು ಎಂದರೆ ಕಾಂಗ್ರೆಸ್ ಎಂದಾದರೆ ನೀವು ರೇವಂತ್ ರೆಡ್ಡಿನೋ ಅಥವಾ ರೇವಂತ್ ಉದ್ದೀನ್ ನೋ ಎಂದು ಕುಟುಕಿದ ವೀರೇಂದರ್ ಗೌಡ್, ಮುಖ್ಯಮಂತ್ರಿಯಾಗಿ ತಾರತಮ್ಯವಿಲ್ಲದೆ ಆಡಳಿತ ನಡೆಸಿ ಎಂದು ಸಲಹೆ ನೀಡಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net