ಹುದ್ದೆ ತೊರೆದ ಸಚಿವರು: ಶಾಸ್ತ್ರಿಯಿಂದ ಪ್ರಧಾನ್‌ವರೆಗೆ ರಾಜೀನಾಮೆಯ ಇತಿಹಾಸ

Shastri to Pradhan > ಹುದ್ದೆ ತೊರೆದ ಸಚಿವರು: ಶಾಸ್ತ್ರಿಯಿಂದ ಪ್ರಧಾನ್‌ವರೆಗೆ ರಾಜೀನಾಮೆಯ ಇತಿಹಾಸ
Shastri to Pradhan > ಹುದ್ದೆ ತೊರೆದ ಸಚಿವರು: ಶಾಸ್ತ್ರಿಯಿಂದ ಪ್ರಧಾನ್‌ವರೆಗೆ ರಾಜೀನಾಮೆಯ ಇತಿಹಾಸ
Published on
ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ, ಕಾಕ್ರೋಚ್ ಜನತಾ ಪಾರ್ಟಿ ನಡೆಸಿದ ಪ್ರತಿಭಟನೆಗೆ ಮಣಿದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜುಲೈ 25ರಂದು ರಾಜೀನಾಮೆ ನೀಡಿದ್ದಾರೆ. ಪ್ರಧಾನ್ ನಿರ್ಗಮನವು ರಾಜಕೀಯ ನೈತಿಕತೆ ಮತ್ತು ಹೊಣೆಗಾರಿಕೆ ಕುರಿತ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಬೃಹತ್ ಹಗರಣ, ದುರಂತ ಅಥವಾ ವೈಫಲ್ಯಗಳ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಪ್ರಮುಖ ನಾಯಕರ ಕುರಿತಾದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ನೈತಿಕ ಹೊಣೆ

ಲಾಲ್ ಬಹದ್ದೂರ್ ಶಾಸ್ತ್ರಿ (ರೈಲ್ವೆ ಸಚಿವ, 1956)

ತಮಿಳುನಾಡಿನ ಅರಿಯಲೂರ್‌ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 150ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. ಇದರ ಸಂಪೂರ್ಣ ನೈತಿಕ ಹೊಣೆಯನ್ನು ಹೊತ್ತು ಲಾಲ್ ಬಹದ್ದೂರ್ ಶಾಸ್ತ್ರಿ ರಾಜೀನಾಮೆ ನೀಡಿದರು. ಪ್ರಧಾನಿ ನೆಹರು ರಾಜೀನಾಮೆ ಸ್ವೀಕರಿಸಲು ನಿರಾಕರಿಸಿದರೂ, ಶಾಸ್ತ್ರಿ ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದರು. ಇದು ಭಾರತದ ರಾಜಕೀಯ ಇತಿಹಾಸದಲ್ಲಿ ನೈತಿಕ ಹೊಣೆಗಾರಿಕೆಗೆ ಶ್ರೇಷ್ಠ ಉದಾಹರಣೆಯಾಗಿ ಉಳಿದಿದೆ.

ನಿತೀಶ್ ಕುಮಾರ್ (ರೈಲ್ವೆ ಸಚಿವ, 1999)

ಪಶ್ಚಿಮ ಬಂಗಾಳದ ಗೈಸಲ್‌ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 290 ಜನರು ಮೃತಪಟ್ಟಿದ್ದರು. ಇದರ ನೈತಿಕ ಹೊಣೆಯನ್ನು ಹೊತ್ತು ನಿತೀಶ್ ಕುಮಾರ್ ಅವರು ವಾಜಪೇಯಿ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದರು.

ಭ್ರಷ್ಟಾಚಾರ ಪ್ರಕರಣಗಳು

ಟಿ.ಟಿ. ಕೃಷ್ಣಮಾಚಾರಿ (ಹಣಕಾಸು ಸಚಿವ, 1958)

ಸ್ವತಂತ್ರ ಭಾರತದ ಮೊದಲ ಆರ್ಥಿಕ ಹಗರಣವೆನಿಸಿದ 1958ರ ಮುಂಧ್ರಾ ಹಗರಣದ ತನಿಖಾ ವರದಿ ಬಂದ ನಂತರ ಟಿ.ಟಿ. ಕೃಷ್ಣಮಾಚಾರಿ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ 1963ರಲ್ಲಿ ಮತ್ತೆ ಹಣಕಾಸು ಸಚಿವರಾಗಿ ಹಿಂದಿರುಗಿದರೂ, 1965ರಲ್ಲಿ ಅವರ ವಿರುದ್ಧದ ಪಾಪಾತದ [ಪಕ್ಷಪಾತದ] ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸಿದಾಗ ಮತ್ತೆ ಹುದ್ದೆ ತೊರೆದರು.

ವಿ.ಪಿ.ಸಿಂಗ್ (ರಕ್ಷಣಾ ಸಚಿವ, 1987)

ಸಬ್‌ಮರೀನ್ ಖರೀದಿ ಒಪ್ಪಂದದಲ್ಲಿ ಕಮಿಷನ್ ಪಡೆದ ಆರೋಪಗಳ ತನಿಖೆಯ ಹಿನ್ನೆಲೆಯಲ್ಲಿ ವಿ.ಪಿ.ಸಿಂಗ್ ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ತಮ್ಮ ಅಲ್ಪಮತದ ಮೈತ್ರಿ ಸರ್ಕಾರ ಪತನಗೊಂಡಾಗ 1990ರ ನವೆಂಬರ್ 7ರಂದು ಪ್ರಧಾನಿ ಹುದ್ದೆಗೂ ರಾಜೀನಾಮೆ ನೀಡಿದ್ದರು.

ಮಾಧವರಾವ್ ಸಿಂಧಿಯಾ
(ನಾಗರಿಕ ವಿಮಾನಯಾನ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ, 1993 ಹಾಗೂ 1996)

ವಿಮಾನ ಪತನದ ಹೊಣೆ ಹೊತ್ತು ಮಾಧವರಾವ್ ಸಿಂಧಿಯಾ ನಾಗರಿಕ ವಿಮಾನಯಾನ ಸಚಿವ ಸ್ಥಾನಕ್ಕೆ 1993ರಲ್ಲಿ ರಾಜೀನಾಮೆ ನೀಡಿದರು. ನಂತರ 1996ರಲ್ಲಿ ಹವಾಲಾ ಹಗರಣಕ್ಕೆ ಸಂಬಂಧಿಸಿದಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

ಎ.ರಾಜಾ (ದೂರಸಂಪರ್ಕ ಮತ್ತು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ, 2010)

ಯುಪಿಎ-2 ಆಡಳಿತಾವಧಿಯಲ್ಲಿ ಕೋಲಾಹಲ ಸೃಷ್ಟಿಸಿದ್ದ ಬೃಹತ್ 2ಜಿ ಸ್ಪೆಕ್ಟ್ರಮ್ ಹಗರಣದ ಹಿನ್ನೆಲೆಯಲ್ಲಿ ಮನಮೋಹನ್ ಸಿಂಗ್ ಸಂಪುಟಕ್ಕೆ ಎ.ರಾಜಾ ರಾಜೀನಾಮೆ ನೀಡಿದರು.

ದಯಾನಿಧಿ ಮಾರನ್ (ಜವಳಿ ಸಚಿವ, 2011)

ಮಾಹಿತಿ ಮತ್ತು ತಂತ್ರಜ್ಞಾನ (2007) ಸಚಿವರಾಗಿದ್ದಾಗ ಏರ್‌ಸೆಲ್ ಸಂಸ್ಥೆಯ ಪ್ರವರ್ತಕ ಸಿ. ಶಿವಶಂಕರನ್ ಅವರ ಮೇಲೆ ಒತ್ತಡ ಹೇರಿ ಮಲೇಷ್ಯಾ ಮೂಲದ ಮ್ಯಾಕ್ಸಿಸ್ ಗ್ರೂಪ್‌ಗೆ ಷೇರು ಮಾರಾಟ ಮಾಡುವಂತೆ ಮಾಡಿದ್ದಾರೆ ಎಂಬ ಸಿಬಿಐ ವರದಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾದ ಬೆನ್ನಲ್ಲೇ ದಯಾನಿಧಿ ಮಾರನ್ 2011ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಪವನ್ ಕುಮಾರ್ ಬನ್ಸಲ್ (ರೈಲ್ವೆ ಸಚಿವ, 2013)

ರೈಲ್ವೆ ಮಂಡಳಿಯಲ್ಲಿ ಪ್ರಮುಖ ಹುದ್ದೆಗೆ ಬಡ್ತಿ ಕೊಡಿಸಲು ಪವನ್ ಕುಮಾರ್ ಬನ್ಸಲ್ ಸೋದರಳಿಯ ವಿಜಯ್ ಸಿಂಗ್ಲಾ ಲಂಚ ಪಡೆದ ಆರೋಪ ಜಗಜ್ಜಾಹಿರಾದ ಹಿನ್ನೆಲೆಯಲ್ಲಿ ಬನ್ಸಲ್ ರೈಲ್ವೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಅಶ್ವನಿ ಕುಮಾರ್ (ಕಾನೂನು ಸಚಿವ, 2013)

ಕಲ್ಲಿದ್ದಲು ಹಗರಣದ ತನಿಖೆಯ ವಿಚಾರದಲ್ಲಿ ಸರ್ಕಾರ ನಡೆದುಕೊಂಡ ರೀತಿಯನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನಂತರ ಅಶ್ವನಿ ಕುಮಾರ್ ರಾಜೀನಾಮೆ ನೀಡಿದರು.

ವೈಯಕ್ತಿಕ ಭಿನ್ನಾಭಿಪ್ರಾಯ

ಡಾ.ಬಿ.ಆರ್.ಅಂಬೇಡ್ಕರ್ (ಕಾನೂನು ಸಚಿವ, 1951)

ಮಹಿಳೆಯರಿಗೆ ಆಸ್ತಿಯಲ್ಲಿ ಸಮಾನ ಹಕ್ಕು, ವಿವಾಹ ವಿಚ್ಛೇದನ ಹಕ್ಕು, ಬಹುಪತ್ನಿತ್ವ ನಿಷೇಧ ಮುಂತಾದ ಸಾಮಾಜಿಕ ಸುಧಾರಣೆಗಳನ್ನು ಒಳಗೊಂಡ ಹಿಂದೂ ಕೋಡ್ ಬಿಲ್ ಅನ್ನು ಡಾ.ಬಿ.ಆರ್.ಅಂಬೇಡ್ಕರ್ ಸಿದ್ಧಪಡಿಸಿ ಸಂಸತ್ತಿನಲ್ಲಿ ಮಂಡಿಸಿದ್ದರು. ಆದರೆ, ಸಂಸತ್ತಿನ ಒಳಗೆ ಮತ್ತು ಹೊರಗೆ ಸಂಪ್ರದಾಯವಾದಿ ನಾಯಕರ ತೀವ್ರ ವಿರೋಧಕ್ಕೆ ಮಣಿದ ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಈ ಮಸೂದೆಯನ್ನು ಮುಂದೂಡಿದರು ಮತ್ತು ಭಾಗಶಃ ಮಾತ್ರ ಅಂಗೀಕರಿಸಲು ನಿರ್ಧರಿಸಿದ್ದರು. ಇದರಿಂದ ತೀವ್ರ ನಿರಾಸೆಗೊಂಡ ಬಾಬಾಸಾಹೇಬರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಹರಸಿಮ್ರತ್ ಕೌರ್ ಬಾದಲ್ (ಆಹಾರ ಸಂಸ್ಕರಣಾ ಸಚಿವೆ, 2020)

ಕೇಂದ್ರ ಸರ್ಕಾರದ ವಿವಾದಿತ ಕೃಷಿ ಮಸೂದೆಗಳನ್ನು ವಿರೋಧಿಸಿ ಹರಸಿಮ್ರತ್ ಕೌರ್ ಬಾದಲ್ ಸಚಿವ ಸ್ಥಾನ ತ್ಯಜಿಸಿದರು.

ಸಾರ್ವಜನಿಕರ ಆಕ್ರೋಶ

ವಿ.ಕೆ.ಕೃಷ್ಣ ಮೆನನ್ (ರಕ್ಷಣಾ ಸಚಿವ, 1962)

1962ರ ಭಾರತ-ಚೀನಾ ಯುದ್ಧದಲ್ಲಿ ಹಿನ್ನಡೆ ಹಾಗೂ ದೇಶದ ಸೇನೆಯನ್ನು ಯುದ್ಧಕ್ಕೆ ಸಜ್ಜುಗೊಳಿಸದ್ದರಿಂದ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ಹಾಗಾಗಿ, ಕೃಷ್ಣ ಮೆನನ್ ರಕ್ಷಣಾ ಸಚಿವ ಸ್ಥಾನದಿಂದ ಕೆಳಗಿಳಿದರು.

ಶಿವರಾಜ್ ಪಾಟೀಲ್ (ಗೃಹ ಸಚಿವ, 2008)

ಮುಂಬೈ ಭಯೋತ್ಪಾದನಾ ದಾಳಿಯ (26/11) ಭದ್ರತಾ ವೈಫಲ್ಯ ಸಾರ್ವಜನಿಕರಲ್ಲಿ ಆಕ್ರೋಶ ಸೃಷ್ಟಿಸಿತ್ತು. ಅಲ್ಲದೆ, 2008ರ ಸೆಪ್ಟೆಂಬರ್‌ನಲ್ಲಿ ನಡೆದ ದೆಹಲಿ ಸರಣಿ ಸ್ಫೋಟದ ನಂತರ ಶಿವರಾಜ್ ಪಾಟೀಲ್ ಮಾಧ್ಯಮಗಳ ಮುಂದೆ ಪದೇಪದೆ ಉಡುಪು ಬದಲಾಯಿಸಿ ಕಾಣಿಸಿಕೊಂಡಿದ್ದು ಸಾರ್ವಜನಿಕವಾಗಿ ತೀವ್ರ ಟೀಕೆಗೆ ಗುರಿಯಾಗಿತ್ತು. ಹಾಗಾಗಿ, 2008ರಲ್ಲಿ ಗೃಹ ಸಚಿವ ಸ್ಥಾನಕ್ಕೆ ಪಾಟೀಲ್ ರಾಜೀನಾಮೆ ನೀಡಿದರು.

ಎಂ.ಜೆ.ಅಕ್ಬರ್ (ವಿದೇಶಾಂಗ ರಾಜ್ಯ ಸಚಿವ, 2018)

"ಮೀ ಟೂ" ಚಳವಳಿಯ ಸಮಯದಲ್ಲಿ ಪತ್ರಕರ್ತೆ ಪ್ರಿಯಾ ರಮಣಿ ಸೇರಿದಂತೆ ಹಲವು ಮಹಿಳಾ ಸಹೋದ್ಯೋಗಿಗಳು ಎಂ.ಜೆ.ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದಾಗ, ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಸಲುವಾಗಿ ಹುದ್ದೆಗೆ ರಾಜೀನಾಮೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net