ಮೈಂಡ್‌ಸೆಟ್ ಕ್ಲಿಯರ್ ಆಗಿದೆ, ನಾವು ಆಡಲು ಸಿದ್ಧ: ಪಾಕ್​ ಪಂದ್ಯದ ಬಗ್ಗೆ ಕೊನೆಗೂ ಮೌನ ಮುರಿದ ಸೂರ್ಯ..! Suryakumar Yadav

ಮೈಂಡ್‌ಸೆಟ್ ಕ್ಲಿಯರ್ ಆಗಿದೆ, ನಾವು ಆಡಲು ಸಿದ್ಧ: ಪಾಕ್​ ಪಂದ್ಯದ ಬಗ್ಗೆ ಕೊನೆಗೂ ಮೌನ ಮುರಿದ ಸೂರ್ಯ..!
ಮೈಂಡ್‌ಸೆಟ್ ಕ್ಲಿಯರ್ ಆಗಿದೆ, ನಾವು ಆಡಲು ಸಿದ್ಧ: ಪಾಕ್​ ಪಂದ್ಯದ ಬಗ್ಗೆ ಕೊನೆಗೂ ಮೌನ ಮುರಿದ ಸೂರ್ಯ..!
Published on
ಮುಂಬೈ: 2026ರ ಟಿ20 ವಿಶ್ವಕಪ್‌ನ ಅತ್ಯಂತ ನಿರೀಕ್ಷಿತ ಪಂದ್ಯವೆನಿಸಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹಣಾಹಣಿಗೆ ಪಾಕಿಸ್ತಾನ ಸರ್ಕಾರವು ಅಡ್ಡಗಾಲು ಹಾಕಿದ ಬೆನ್ನಲ್ಲೇ, ಭಾರತದ ಟಿ20 ನಾಯಕ ಸೂರ್ಯಕುಮಾರ್ ಯಾದವ್(Suryakumar Yadav) ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮೌನ ಮುರಿದಿದ್ದಾರೆ. ನಾವು ಪಂದ್ಯ ಆಡುವುದಿಲ್ಲ ಎಂದು ಹೇಳಿಲ್ಲ, ಅವರೇ ಹಿಂದೆ ಸರಿಯುತ್ತಿದ್ದಾರೆ ಎಂದು ಹೇಳುವ ಮೂಲಕ ಪಾಕ್ ಸರ್ಕಾರದ ನಿಲುವನ್ನು ಸೂರ್ಯ ಲೇವಡಿ ಮಾಡಿದ್ದಾರೆ.

ನಮ್ಮ ನಿಲುವು ಸ್ಪಷ್ಟ: ಸೂರ್ಯ ಖಡಕ್ ಮಾತು

ಮುಂಬೈನಲ್ಲಿ ನಡೆದ ಕ್ಯಾಪ್ಟನ್ಸ್ ಡೇ ಸುದ್ದಿಗೋಷ್ಠಿಯಲ್ಲಿ ಪಾಕಿಸ್ತಾನದ ಬಹಿಷ್ಕಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸೂರ್ಯ, ನಮ್ಮ ಮೈಂಡ್‌ಸೆಟ್ ಬಹಳ ಸ್ಪಷ್ಟವಾಗಿದೆ. ನಾವು ಪಂದ್ಯ ಆಡುವುದಿಲ್ಲ ಎಂದು ಎಲ್ಲೂ ಹೇಳಿಲ್ಲ. ಅವರ ಕಡೆಯಿಂದಲೇ ನಿರಾಕರಣೆ ಬಂದಿದೆ. ಐಸಿಸಿ ನಿಗದಿಪಡಿಸಿದ ವೇಳಾಪಟ್ಟಿಯಂತೆ ನಾವು ನಡೆಯಲಿದ್ದೇವೆ. ಫೆಬ್ರವರಿ 15ರ ಪಂದ್ಯಕ್ಕಾಗಿ ಕೊಲೊಂಬೊಗೆ ನಮ್ಮ ವಿಮಾನದ ಟಿಕೆಟ್‌ಗಳು ಈಗಾಗಲೇ ಬುಕ್ ಆಗಿವೆ. ನಾವು ಅಲ್ಲಿಗೆ ಹೋಗುವುದು ಖಚಿತ ಎಂದು ಅತ್ಯಂತ ಆತ್ಮವಿಶ್ವಾಸದಿಂದ ನುಡಿದಿದ್ದಾರೆ.
ಬಾಂಗ್ಲಾದೇಶವನ್ನು ಟೂರ್ನಿಯಿಂದ ಕೈಬಿಟ್ಟಿದ್ದಕ್ಕೆ ಪ್ರತಿಭಟನೆಯಾಗಿ ಪಾಕಿಸ್ತಾನ ಈ ನಿರ್ಧಾರ ತಳೆದಿದೆ ಎನ್ನಲಾಗುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸೂರ್ಯ, ನಿರ್ಧಾರ ತೆಗೆದುಕೊಳ್ಳುವುದು ಅವರ ಕೈಯಲ್ಲಿದೆ. ನಾವು ಕೇವಲ ಕ್ರಿಕೆಟ್ ಆಡಲು ಬಂದಿದ್ದೇವೆ. ನಮ್ಮ ಪಂದ್ಯಗಳು ಅಮೆರಿಕ, ಕೆನಡಾ ನಂತರ ಕೊಲೊಂಬೊದಲ್ಲಿ ನಡೆಯಲಿವೆ. ನಾವು ಸಿದ್ಧರಿದ್ದೇವೆ ಎಂದರು.

ಬಾಂಗ್ಲಾದೇಶದ ಬೆಂಬಲಕ್ಕೆ ನಿಂತ ಪಾಕಿಸ್ತಾನ..!

ಈ ವಿವಾದದ ಹಿಂದೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (BCB) ನಿರ್ಧಾರವಿದೆ. ಭದ್ರತಾ ಕಾರಣಗಳನ್ನು ನೀಡಿ ಬಾಂಗ್ಲಾದೇಶ ತಂಡವು ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿದ ಕಾರಣ, ಐಸಿಸಿ ಅವರನ್ನು ಟೂರ್ನಿಯಿಂದಲೇ ಕೈಬಿಟ್ಟಿತ್ತು. ಇದರ ವಿರುದ್ಧ ಪ್ರತಿಭಟನೆಯ ರೂಪದಲ್ಲಿ ಪಾಕಿಸ್ತಾನ ಸರ್ಕಾರವು ಭಾರತದ ವಿರುದ್ಧದ ಪಂದ್ಯವನ್ನು ನಾವು ಬಹಿಷ್ಕರಿಸುತ್ತೇವೆ. ಆದರೆ ಉಳಿದ ಪಂದ್ಯಗಳನ್ನು ಆಡುತ್ತೇವೆ ಎಂಬ ನಿಲುವನ್ನು ತಳೆದಿದೆ.

ಐಸಿಸಿ ಮತ್ತು ಬಿಸಿಸಿಐ ಮಧ್ಯಪ್ರವೇಶ

ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಕೂಡ ಈ ಬಗ್ಗೆ ಮಾತನಾಡಿದ್ದು, ಬಿಸಿಸಿಐಗೆ ಈ ವಿವಾದಕ್ಕೂ ಸಂಬಂಧವಿಲ್ಲ, ಐಸಿಸಿ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದಿದ್ದಾರೆ. ಒಂದು ವೇಳೆ ಪಾಕಿಸ್ತಾನ ಪಂದ್ಯಕ್ಕೆ ಬಾರದಿದ್ದರೆ, ಐಸಿಸಿ ನಿಯಮದಂತೆ ಭಾರತಕ್ಕೆ ವಾಕೋವರ್ ಸಿಗಲಿದ್ದು, 2 ಅಂಕಗಳು ಸುಲಭವಾಗಿ ಲಭಿಸಲಿವೆ. ಆದರೆ, ಇದರಿಂದ ಪ್ರಸಾರಕರಿಗೆ ಸುಮಾರು 4,500 ಕೋಟಿ ರೂಪಾಯಿ ನಷ್ಟವಾಗುವ ಭೀತಿಯಿದೆ.
ಪಾಕಿಸ್ತಾನದ ಈ ಹಠಮಾರಿ ಧೋರಣೆಯಿಂದಾಗಿ ಕೊನೆಯ ಕ್ಷಣದಲ್ಲಿ ಐಸಿಸಿ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ. ಕ್ರೀಡಾಂಗಣದಲ್ಲಿ ಸೂರ್ಯನ ಸಿಕ್ಸರ್ ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗೆ ಈ ರಾಜಕೀಯ ಜಟಾಪಟಿ ನಿರಾಸೆ ತಂದಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net