ನೀಟ್ ಮರುಪರೀಕ್ಷೆಗೆ ಮಿಲಿಟರಿ ಮಾದರಿ ಭದ್ರತೆ: ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದ ಅಣ್ಣಾಮಲೈ; ವಿದ್ಯಾರ್ಥಿಗಳ ಒತ್ತಡಕ್ಕೆ ಯಾರು ಹೊಣೆ ಎಂದು ಸಿಂಗಂ ಪ್ರಶ್ನೆ! Annamalai

ನೀಟ್ ಮರುಪರೀಕ್ಷೆಗೆ ಮಿಲಿಟರಿ ಮಾದರಿ ಭದ್ರತೆ: ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದ ಅಣ್ಣಾಮಲೈ; ವಿದ್ಯಾರ್ಥಿಗಳ ಒತ್ತಡಕ್ಕೆ ಯಾರು ಹೊಣೆ ಎಂದು ಸಿಂಗಂ ಪ್ರಶ್ನೆ!
ನೀಟ್ ಮರುಪರೀಕ್ಷೆಗೆ ಮಿಲಿಟರಿ ಮಾದರಿ ಭದ್ರತೆ: ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದ ಅಣ್ಣಾಮಲೈ; ವಿದ್ಯಾರ್ಥಿಗಳ ಒತ್ತಡಕ್ಕೆ ಯಾರು ಹೊಣೆ ಎಂದು ಸಿಂಗಂ ಪ್ರಶ್ನೆ!
Published on
ಚೆನ್ನೈ: ಜೂನ್ 21 ರಂದು ನಡೆಯಲಿರುವ ದೇಶಾದ್ಯಂತದ ನೀಟ್ ಯುಜಿ 2026 (NEET UG) ಮರುಪರೀಕ್ಷೆಗೆ ಕೇಂದ್ರ ಶಿಕ್ಷಣ ಸಚಿವಾಲಯ ಹಾಗೂ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಕೈಗೊಂಡಿರುವ ಅತಿಯಾದ ಭದ್ರತಾ ಕ್ರಮಗಳ ವಿರುದ್ಧ ತಮಿಳುನಾಡಿನ ಪ್ರಮುಖ ನಾಯಕ ಕೆ. ಅಣ್ಣಾಮಲೈ(Annamalai) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪರೀಕ್ಷಾ ಅಕ್ರಮಗಳನ್ನು ತಡೆಯುವ ನೆಪದಲ್ಲಿ ಜಾರಿಗೆ ತರಲಾಗಿರುವ ಮಿಲಿಟರಿ ಮಾದರಿಯ ಕಠಿಣ ನಿಯಮಗಳು, ಹಗಲಿರುಳು ಕಷ್ಟಪಟ್ಟು ಓದುತ್ತಿರುವ ಕೋಟ್ಯಂತರ ವಿದ್ಯಾರ್ಥಿಗಳಲ್ಲಿ ಮಾನಸಿಕ ಒತ್ತಡವನ್ನು ದುಪ್ಪಟ್ಟು ಮಾಡಲಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ ಬಿಜೆಪಿಯಿಂದ ಹೊರಬಂದು ಹೊಸ ರಾಜಕೀಯ ಪಕ್ಷ ಕಟ್ಟುವುದಾಗಿ ಘೋಷಿಸಿರುವ ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ, ಮಂಗಳವಾರ ತಮ್ಮ ಅಧಿಕೃತ Xಯಲ್ಲಿ ಈ ಕುರಿತು ಸರಣಿ ಪ್ರಶ್ನೆಗಳನ್ನು ಎತ್ತುವ ಮೂಲಕ ಕೇಂದ್ರ ಸರ್ಕಾರದ ನೀತಿಯನ್ನು ಮುಕ್ತವಾಗಿ ಟೀಕಿಸಿದ್ದಾರೆ.

ಇದು ಪರೀಕ್ಷೆಯೋ ಅಥವಾ ರಹಸ್ಯ ಮಿಲಿಟರಿ ಕಾರ್ಯಾಚರಣೆಯೋ?: ಅಣ್ಣಾಮಲೈ ಪ್ರಶ್ನೆ

ಕೇಂದ್ರ ಸರ್ಕಾರ ರೂಪಿಸಿರುವ ಭದ್ರತಾ ವ್ಯವಸ್ಥೆಯ ಸ್ವರೂಪವನ್ನು ಬಿಚ್ಚಿಟ್ಟಿರುವ ಅಣ್ಣಾಮಲೈ, ಸಿಆರ್‌ಪಿಎಫ್ ಮತ್ತು ಸಿಐಎಸ್ಎಫ್ ಪಡೆಗಳ ಎರಡು ಹಂತದ ಕಾವಲು, ಭಾರತೀಯ ವಾಯುಸೇನೆಯ (IAF) ವಿಮಾನಗಳ ಮೂಲಕ ರಕ್ಷಣೆ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ 4 ಪದರಗಳ ಸಿಸಿಟಿವಿ ಕಣ್ಗಾವಲು, ಪರೀಕ್ಷಾ ಕೇಂದ್ರ ಪ್ರವೇಶಕ್ಕೂ ಮುನ್ನ ಬಯೋಮೆಟ್ರಿಕ್ ಮತ್ತು ಫೇಶಿಯಲ್ ರೆಕಗ್ನಿಷನ್, ಹಲವು ಹಂತದ ತಪಾಸಣೆ ಹಾಗೂ ಖುದ್ದಾಗಿ ಪ್ರಧಾನಿ ಕಾರ್ಯಾಲಯದಿಂದಲೇ ನೇರ ಉಸ್ತುವಾರಿಯಾಗಿದೆ. ನೀವೀಗ ಓದಿದ್ದು ನಿಜ. ಆದರೆ, ಇಷ್ಟೆಲ್ಲಾ ಸಿದ್ಧತೆಗಳು ದೇಶದ ಯಾವುದೋ ಅತ್ಯಂತ ರಹಸ್ಯವಾದ ಮಿಲಿಟರಿ ಸಾಫ್ಟ್‌ವೇರ್ ಖರೀದಿಸಲು ಮಾಡುತ್ತಿರುವುದಲ್ಲ, ಬದಲಿಗೆ ಜೂನ್ 21 ರಂದು ನಡೆಯಲಿರುವ ನೀಟ್ ಮರುಪರೀಕ್ಷೆಗಾಗಿ ಶಿಕ್ಷಣ ಸಚಿವಾಲಯ ಮಾಡಿಕೊಂಡಿರುವ ವ್ಯವಸ್ಥೆ ಎಂದು ಲೇವಡಿ ಮಾಡಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳುವುದನ್ನು ವಿದ್ಯಾರ್ಥಿಗಳು ಮತ್ತು ಪೋಷಕರು ಸ್ವಾಗತಿಸುತ್ತಾರೆ. ಆದರೆ, ಪರೀಕ್ಷಾ ಕೇಂದ್ರದ ಒಳಗೆ ಹೋಗುವ ಮುನ್ನ ನಡೆಸಲಾಗುವ ಸುದೀರ್ಘ ತಪಾಸಣೆಗಳು ಹಾಗೂ ತಾಸುಗಟ್ಟಲೆ ಸಾಲಿನಲ್ಲಿ ನಿಲ್ಲುವ ಪ್ರಕ್ರಿಯೆಗಳು ವಿದ್ಯಾರ್ಥಿಗಳಲ್ಲಿ ಅನಗತ್ಯ ಆತಂಕ ಮತ್ತು ಗೊಂದಲವನ್ನು ಸೃಷ್ಟಿಸುತ್ತವೆ ಎಂದು ಅಣ್ಣಾಮಲೈ ವಾದಿಸಿದ್ದಾರೆ.

ಹೊಸ ಶಿಕ್ಷಣ ನೀತಿಯ  ಆಶಯಕ್ಕೆ ವಿರುದ್ಧವಾದ ನಡೆ

ಪರೀಕ್ಷಾ ಅವಧಿಯನ್ನು 180 ನಿಮಿಷಗಳಿಂದ 195 ನಿಮಿಷಗಳಿಗೆ ಹೆಚ್ಚಿಸಿರುವುದನ್ನು ಪ್ರಸ್ತಾಪಿಸಿದ ಅಣ್ಣಾಮಲೈ, ಕೇಂದ್ರ ಸರ್ಕಾರವು ಪೇಪರ್ ಸೋರಿಕೆಯನ್ನು ತಡೆಯುವ ಭರದಲ್ಲಿ, ತಿಂಗಳುಗಟ್ಟಲೆ ಪರೀಕ್ಷೆಗಾಗಿ ತಯಾರಿ ನಡೆಸಿದ ವಿದ್ಯಾರ್ಥಿಯ ಮನಸ್ಸಿನ ಮೇಲಾಗುವ ದುಷ್ಪರಿಣಾಮವನ್ನು ಸಂಪೂರ್ಣವಾಗಿ ಮರೆತಿದೆ. ಇದು ನಮ್ಮ ಒಟ್ಟಾರೆ ಪರೀಕ್ಷಾ ವ್ಯವಸ್ಥೆಯ ಉದ್ದೇಶವನ್ನೇ ನಾಶಪಡಿಸುತ್ತದೆ. ಪರೀಕ್ಷೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲಿರುವ ಮಾನಸಿಕ ಒತ್ತಡವನ್ನು ಕಡಿಮೆ ಮಾಡಬೇಕು ಎನ್ನುವ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಮೂಲ ಆಶಯಕ್ಕೇ ಈ ಕಠಿಣ ಕ್ರಮಗಳು ತದ್ವಿರುದ್ಧವಾಗಿವೆ ಎಂದು ಅಣ್ಣಾಮಲೈ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರವೇಶ ಪತ್ರ ಡೌನ್‌ಲೋಡ್ ಸಮಸ್ಯೆಗೆ ತಕ್ಷಣ ಪರಿಹಾರ ಸಿಗಲಿ

ಇದೇ ವೇಳೆ, ದೇಶದ ಹಲವು ಭಾಗಗಳಲ್ಲಿ ನೀಟ್ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವಾಗ ವಿದ್ಯಾರ್ಥಿಗಳು ಎದುರಿಸುತ್ತಿರುವ ತಾಂತ್ರಿಕ ದೋಷಗಳ ಬಗ್ಗೆಯೂ ಅವರು ಧ್ವನಿ ಎತ್ತಿದ್ದಾರೆ. ಈ ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸಲಾಗುವುದು ಎಂದು ಎನ್‌ಟಿಎ ಅಭ್ಯರ್ಥಿಗಳಿಗೆ ಭರವಸೆ ನೀಡಿದೆ ನಿಜ. ಆದರೆ, ಪರೀಕ್ಷೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಇಂತಹ ತಾಂತ್ರಿಕ ಅಡಚಣೆಗಳು ವಿದ್ಯಾರ್ಥಿಗಳ ಆತಂಕವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಸದ್ಯಕ್ಕೆ ಎದುರಾಗಿರುವ ಸವಾಲುಗಳಿಗೆ ಅರ್ಥಪೂರ್ಣ ಪರಿಹಾರಗಳನ್ನು ಕಂಡುಕೊಳ್ಳಬೇಕಾಗಿದೆ ಎಂದಿದ್ದಾರೆ.
ಆದರೆ, ನೀಟ್ ಮರುಪರೀಕ್ಷೆಗಾಗಿ ರೂಪಿಸಲಾಗಿರುವ ಈ ಕಠಿಣ ಮಿಲಿಟರಿ ಮಾದರಿಯ ದಾರಿ ಹಳೆಯ ಸಮಸ್ಯೆಯನ್ನು ಮುಚ್ಚಿಟ್ಟು, ಹೊಸ ಸಮಸ್ಯೆಗಳ ಸರಮಾಲೆಯನ್ನೇ ಸೃಷ್ಟಿಸುವ ಅಪಾಯವನ್ನು ಹೊಂದಿದೆ ಎಂದು ಕೆ. ಅಣ್ಣಾಮಲೈ ಎಚ್ಚರಿಸಿದ್ದಾರೆ. ಜೂನ್ 21 ರಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ರವರೆಗೆ ಈ ಮಹತ್ವದ ಪರೀಕ್ಷೆ ನಡೆಯಲಿದ್ದು, ರಾಜಕೀಯ ವಲಯದಲ್ಲೂ ಭಾರಿ ಚರ್ಚೆಗೆ ಕಾರಣವಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net