ನನ್ನ ಬಳಿ ಸಾಕಷ್ಟು ಭೂಮಿ ಇದೆ, ನಾಯಿಗಳ ಕಲ್ಯಾಣಕ್ಕಾಗಿ 10 ಎಕರೆ ದಾನ ಮಾಡುತ್ತೇನೆ: ಮಿಕಾ ಸಿಂಗ್..Mika Singh

Mika Singh
Mika Singh
Published on
ಮುಂಬೈ: ( Mika Singh ) ಬೀದಿ ನಾಯಿಗಳ ಹಾವಳಿ ಮತ್ತು ಅವುಗಳ ಸುರಕ್ಷತೆಯ ಕುರಿತು ನಡೆಯುತ್ತಿರುವ ವಿವಾದಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ನ ಖ್ಯಾತ ಗಾಯಕ ಮಿಕಾ ಸಿಂಗ್ (Mika Singh) ಅವರು ಬೀದಿ ನಾಯಿಗಳ ರಕ್ಷಣೆಗಾಗಿ ತಮ್ಮ 10 ಎಕರೆ ಜಮೀನನ್ನು ದಾನ ಮಾಡಲು ಸಿದ್ಧರಿರುವುದಾಗಿ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಬೀದಿ ನಾಯಿಗಳ ಕಡಿತದ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಅವುಗಳನ್ನು ಸಾರ್ವಜನಿಕ ಸ್ಥಳಗಳಿಂದ ತೆರವುಗೊಳಿಸುವ ಅಥವಾ ನಿಯಂತ್ರಿಸುವ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಪ್ರಾಣಿ ಪ್ರೇಮಿಗಳು ಮತ್ತು ಸಂಘಟನೆಗಳು ನಾಯಿಗಳ ಹಕ್ಕುಗಳ ಪರವಾಗಿ ದನಿ ಎತ್ತಿವೆ.
ದೇಶದಲ್ಲಿ ಬೀದಿ ನಾಯಿಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಎಕ್ಸ್ (ಟ್ವಿಟರ್) ಮೂಲಕ ಪ್ರತಿಕ್ರಿಯಿಸಿರುವ ಮಿಕಾ ಸಿಂಗ್, "ಬೀದಿ ನಾಯಿಗಳಿಗೆ ಹಾನಿಯಾಗುವಂತಹ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ನಾಯಿಗಳ ರಕ್ಷಣೆ, ಅವುಗಳಿಗೆ ಆಶ್ರಯ ತಾಣಮತ್ತು ಸರಿಯಾದ ಆರೈಕೆ ಒದಗಿಸಲು ತಮ್ಮ ಬಳಿ ಇರುವ 10 ಎಕರೆ ಜಮೀನನ್ನು ನೀಡಲು ಸಿದ್ಧನಿದ್ದೇನೆ, ಆದರೆ ಆ ಪ್ರಾಣಿಗಳನ್ನು ನೋಡಿಕೊಳ್ಳಲು ಸರಿಯಾದ ಸಿಬ್ಬಂದಿ ಮತ್ತು ಮೂಲಸೌಕರ್ಯದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಅಥವಾ ಸಂಬಂಧಪಟ್ಟ ಸಂಸ್ಥೆಗಳು ಸಹಕರಿಸಬೇಕು" ಎಂದು ಅವರು ತಿಳಿಸಿದ್ದಾರೆ.
ಖ್ಯಾತ ಪಂಜಾಬಿ ನಟ ಮಿಕಾ ಸಿಂಗ್ ಅವರು ಭಾರತದ ಸುಪ್ರೀಂ ಕೋರ್ಟ್‌ಗೆ ಭಾವನಾತ್ಮಕ ಮನವಿಯನ್ನು ಸಲ್ಲಿಸಿದ್ದು, ಬೀದಿ ನಾಯಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಯಾವುದೇ ಕ್ರಮ ಕೈಗೊಳ್ಳದಂತೆ ಒತ್ತಾಯಿಸಿದ್ದಾರೆ.
ಮಿಕಾ ಸಿಂಗ್ ಅವರು ಮೊದಲಿನಿಂದಲೂ ಪ್ರಾಣಿ ದಯೆ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದು, ಈಗ ಈ ನಿರ್ಧಾರದ ಮೂಲಕ ಗಮನ ಸೆಳೆದಿದ್ದಾರೆ.
ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಮೂರ್ತಿಗಳ ವಿಶೇಷ ಪೀಠವು (ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ) ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಮಾಹಿತಿ ನೀಡಿದೆ.
ಬೀದಿಗಳಿಂದ ಎಲ್ಲಾ ನಾಯಿಗಳನ್ನು ಸಂಪೂರ್ಣವಾಗಿ ಹೊರಹಾಕುವಂತೆ ನಾವು ಎಲ್ಲಿಯೂ ಆದೇಶ ನೀಡಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಬೀದಿ ನಾಯಿಗಳ ನಿರ್ವಹಣೆಯನ್ನು 'ಪ್ರಾಣಿ ಜನನ ನಿಯಂತ್ರಣ (ABC) ನಿಯಮಗಳು, 2023' ರ ಅನ್ವಯವೇ ಮಾಡಬೇಕು ಎಂಬುದು ನ್ಯಾಯಾಲಯದ ಮುಖ್ಯ ಉದ್ದೇಶವಾಗಿದೆ.ನಾಯಿಗಳನ್ನು ಹಿಡಿಯುವುದು, ಅವುಗಳಿಗೆ ಸಂತಾನಹರಣ ಚಿಕಿತ್ಸೆ (Sterilisation) ಮಾಡುವುದು, ಲಸಿಕೆ (Vaccination) ನೀಡುವುದು ಮತ್ತು ನಂತರ ಅವುಗಳನ್ನು ಅದೇ ಜಾಗಕ್ಕೆ ಮರಳಿ ಬಿಡುವುದು ಕಾನೂನುಬದ್ಧ ಕ್ರಮವಾಗಿದೆ ಎಂದು ನ್ಯಾಯಾಲಯ ನೆನಪಿಸಿದೆ.
ಈ ಹಿಂದೆ ಸಾರ್ವಜನಿಕ ಸಂಸ್ಥೆಗಳು (ಶಾಲೆ, ಆಸ್ಪತ್ರೆ) ಮತ್ತು ಹೆದ್ದಾರಿಗಳನ್ನು ನಾಯಿ ಮುಕ್ತಗೊಳಿಸಬೇಕು ಎಂಬ ಆದೇಶದಿಂದ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿತ್ತು. ಅದರ ಬಗ್ಗೆ ನ್ಯಾಯಾಲಯ ಹೀಗೆ ಹೇಳಿದೆ: ಆಸ್ಪತ್ರೆಗಳು, ಶಾಲೆಗಳು ಮತ್ತು ಹೆಚ್ಚಿನ ಜನಸಂದಣಿ ಇರುವ ಸರ್ಕಾರಿ ಕಚೇರಿಗಳ ಆವರಣದಲ್ಲಿ ನಾಯಿಗಳಿರುವುದು ಅಪಾಯಕಾರಿ. ಅಂತಹ ನಿರ್ದಿಷ್ಟ ಸ್ಥಳಗಳಿಂದ ಮಾತ್ರ ನಾಯಿಗಳನ್ನು ತೆರವುಗೊಳಿಸಿ ಆಶ್ರಯ ತಾಣಗಳಿಗೆ (Shelters) ಸ್ಥಳಾಂತರಿಸಲು ಸೂಚಿಸಲಾಗಿದೆ.ಬೀದಿ ನಾಯಿಗಳ ಹಾವಳಿ ಹೆಚ್ಚಾಗಲು ಮುನ್ಸಿಪಲ್ ಅಧಿಕಾರಿಗಳು ಅಸ್ತಿತ್ವದಲ್ಲಿರುವ ನಿಯಮಗಳನ್ನು ಸರಿಯಾಗಿ ಜಾರಿಗೆ ತರದಿರುವುದೇ ಮುಖ್ಯ ಕಾರಣ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.
ಸುಪ್ರೀಂ ಕೋರ್ಟ್ ಬೀದಿ ನಾಯಿಗಳನ್ನು ಕೊಲ್ಲಲು ಅಥವಾ ಬೀದಿಗಳಿಂದ ಸಂಪೂರ್ಣವಾಗಿ ಓಡಿಸಲು ಹೇಳಿಲ್ಲ; ಬದಲಾಗಿ ವೈಜ್ಞಾನಿಕವಾಗಿ ಅವುಗಳ ಸಂಖ್ಯೆಯನ್ನು ನಿಯಂತ್ರಿಸಲು ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಆದೇಶಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net