ದೆಹಲಿಯಲ್ಲಿ ಮಧ್ಯರಾತ್ರಿ ಅಗ್ನಿ ತಾಂಡವ: ಉತ್ತಮ್ ನಗರದ 400 ಗುಡಿಸಲುಗಳು ಭಸ್ಮ! | Uttam Nagar

Uttam Nagar
Uttam Nagar
Published on
ನವದೆಹಲಿ: ದೇಶದ ರಾಜಧಾನಿ ದೆಹಲಿಯ ಉತ್ತಮ್ ನಗರದ(Uttam Nagar) ಸಮೀಪವಿರುವ ಮಟಿಯಾಲಾ ಪ್ರದೇಶದಲ್ಲಿ ಬುಧವಾರ ತಡರಾತ್ರಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. 
ಇಲ್ಲಿನ ಮೀನು ಮಾರುಕಟ್ಟೆಯ ಬಳಿ ಇರುವ ನೂರಾರು ಗುಡಿಸಲುಗಳಿಗೆ ಬೆಂಕಿ ತಗುಲಿದ್ದು, ಸುಮಾರು 300 ರಿಂದ 400 ಗುಡಿಸಲುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ ಎಂದು ದೆಹಲಿ ಅಗ್ನಿಶಾಮಕ ಸೇವೆ (DFS) ತಿಳಿಸಿದೆ.
ಬುಧವಾರ ರಾತ್ರಿ ಜನರು ಗಾಢ ನಿದ್ರೆಯಲ್ಲಿದ್ದಾಗ ಈ ದುರಂತ ಸಂಭವಿಸಿದೆ. ಮಟಿಯಾಲಾದ ಮೀನು ಮಾರುಕಟ್ಟೆ ಪ್ರದೇಶದಿಂದ ಆರಂಭವಾದ ಬೆಂಕಿ, ಗಾಳಿಯ ವೇಗಕ್ಕೆ ಕ್ಷಣಾರ್ಧದಲ್ಲಿ ಪಕ್ಕದ ಗುಡಿಸಲುಗಳಿಗೆ ವ್ಯಾಪಿಸಿತು. ಬೆಂಕಿಯ ತೀವ್ರತೆ ಎಷ್ಟಿತ್ತೆಂದರೆ, ಕಿಲೋಮೀಟರ್ ದೂರದವರೆಗೂ ಬೆಂಕಿಯ ಜ್ವಾಲೆ ಮತ್ತು ದಟ್ಟವಾದ ಹೊಗೆ ಆಕಾಶದಲ್ಲಿ ಕಂಡುಬರುತ್ತಿತ್ತು ಎಂದು ವರದಿ ಉಲ್ಲೇಖಿಸಿದೆ.
ಘಟನೆ ಸಂಭವಿಸುತ್ತಿದ್ದಂತೆ ಸುಮಾರು 23 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು. ಅಗ್ನಿಶಾಮಕ ಸಿಬ್ಬಂದಿ ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು. ದಟ್ಟವಾದ ಜನವಸತಿ ಪ್ರದೇಶ ಮತ್ತು ಕಿರಿದಾದ ರಸ್ತೆಗಳಿದ್ದ ಕಾರಣ ಕಾರ್ಯಾಚರಣೆಗೆ ಆರಂಭದಲ್ಲಿ ಅಡ್ಡಿಯುಂಟಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಷ್ಟದ ಅಂದಾಜು
ಸುಮಾರು 400ಕ್ಕೂ ಹೆಚ್ಚು ಬಡವರ ಆಸರೆಗಳು ಬೆಂಕಿಗೆ ಆಹುತಿಯಾಗಿವೆ. ಅದೃಷ್ಟವಶಾತ್ ಈವರೆಗೆ ಯಾವುದೇ ಪ್ರಾಣಾಪಾಯ ಅಥವಾ ಗಂಭೀರ ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ಗುಡಿಸಲುಗಳಲ್ಲಿದ್ದ ಬಟ್ಟೆಬರೆ, ಆಹಾರ ಪದಾರ್ಥಗಳು ಮತ್ತು ಅವರ ಸಣ್ಣಪುಟ್ಟ ಉಳಿತಾಯದ ಹಣ ಎಲ್ಲವೂ ಬೆಂಕಿಯ ಪಾಲಾಗಿದೆ. ನೂರಾರು ಕುಟುಂಬಗಳು ಈಗ ಬೀದಿಗೆ ಬಿದ್ದಿವೆ.

ಬೆಂಕಿಗೆ ಕಾರಣವೇನು?

ಬೆಂಕಿ ಅವಘಡಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಶಾರ್ಟ್ ಸರ್ಕ್ಯೂಟ್ ಅಥವಾ ಅಡುಗೆ ಮಾಡುವಾಗ ಸಿಡಿದ ಕಿಡಿಯಿಂದ ಈ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ದೆಹಲಿ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಂತ್ರಸ್ತರಿಗೆ ತಾತ್ಕಾಲಿಕ ಆಶ್ರಯ ಮತ್ತು ಆಹಾರದ ವ್ಯವಸ್ಥೆ ಮಾಡಲು ಸ್ಥಳೀಯ ಆಡಳಿತ ಮುಂದಾಗಿದೆ,(ಏಜೆನ್ಸೀಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net