Middle East War: ಸೌದಿ ಹಾಗೂ ಬಹ್ರೇನ್ ರಾಜರ ಜೊತೆ ಪ್ರಧಾನಿ ಮೋದಿ ದೂರವಾಣಿ ಕರೆ ಮೂಲಕ ಮಾತುಕತೆ!

Middle East War
Middle East War
Published on
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ(Middle East War) ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಭೀಕರ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಮತ್ತು ಬಹ್ರೇನ್ ರಾಜ ಹಮದ್ ಬಿನ್ ಇಸಾ ಅಲ್ ಖಲೀಫಾ ಅವರೊಂದಿಗೆ ದೂರವಾಣಿ ಮೂಲಕ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಗಲ್ಫ್ ರಾಷ್ಟ್ರಗಳಾದ ಸೌದಿ ಅರೇಬಿಯಾ ಮತ್ತು ಬಹ್ರೇನ್ ಮೇಲೆ ಇರಾನ್ ನಡೆಸುತ್ತಿರುವ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಪ್ರಧಾನಿ ಮೋದಿ ತೀವ್ರವಾಗಿ ಖಂಡಿಸಿದ್ದಾರೆ. ಯುದ್ಧದ ವಾತಾವರಣದ ನಡುವೆ ಆಯಾ ದೇಶಗಳಲ್ಲಿ ನೆಲೆಸಿರುವ ಲಕ್ಷಾಂತರ ಭಾರತೀಯ ಸಮುದಾಯದ ಕ್ಷೇಮೋದ್ಯೋಗದ ಬಗ್ಗೆ ಮೋದಿ ಕಳಕಳಿ ವ್ಯಕ್ತಪಡಿಸಿದರು. ಭಾನುವಾರವಷ್ಟೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರೊಂದಿಗೂ ಮೋದಿ ಮಾತುಕತೆ ನಡೆಸಿ, ಶಾಂತಿಯ ಕರೆ ನೀಡಿದ್ದರು.
ಹೈ ಅಲರ್ಟ್‌ನಲ್ಲಿ ಭಾರತ
ದೇಶದ ಭದ್ರತೆ ಮತ್ತು ಗಲ್ಫ್‌ನಲ್ಲಿರುವ ಭಾರತೀಯರ ರಕ್ಷಣೆಗಾಗಿ ಪ್ರಧಾನಿ ಮೋದಿ ಭಾನುವಾರ ತಡರಾತ್ರಿ Cabinet Committee on Security (CCS) ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಎನ್‌ಎಸ್‌ಎ ಅಜಿತ್ ದೋವಲ್ ಪಾಲ್ಗೊಂಡಿದ್ದರು. ಯುದ್ಧ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿದೆ. ರಾಜತಾಂತ್ರಿಕ ಮಾತುಕತೆಗಳ ಮೂಲಕ ಸಂಘರ್ಷಕ್ಕೆ ಅಂತ್ಯ ಹಾಡುವಂತೆ ಭಾರತ ಜಾಗತಿಕ ವೇದಿಕೆಯಲ್ಲಿ ಒತ್ತಾಯಿಸಿದೆ.
ಓರ್ವ ಭಾರತೀಯ ಸಾವು
ದುರದೃಷ್ಟವಶಾತ್, ಗಲ್ಫ್‌ನಲ್ಲಿ ನಡೆಯುತ್ತಿರುವ ಈ ಸಂಘರ್ಷಕ್ಕೆ ಒಬ್ಬ ಭಾರತೀಯ ಬಲಿಯಾಗಿದ್ದಾರೆ. ಮಸ್ಕತ್ ಕರಾವಳಿಯ ಬಳಿ ಸ್ಫೋಟಕಗಳನ್ನು ಹೊತ್ತಿದ್ದ ಡ್ರೋನ್ ಬೋಟ್ ಒಂದು ತೈಲ ಟ್ಯಾಂಕರ್ ಮೇಲೆ ದಾಳಿ ಮಾಡಿದ ಪರಿಣಾಮ ಈ ಸಾವು ಸಂಭವಿಸಿದೆ. ಹಡಗಿನಲ್ಲಿದ್ದ ಉಳಿದ 16 ಭಾರತೀಯರು ಸೇರಿದಂತೆ 21 ಸಿಬ್ಬಂದಿಗಳನ್ನು ಓಮನ್ ಸರ್ಕಾರ ರಕ್ಷಿಸಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net