_1769798214965.webp?w=480&auto=format%2Ccompress&fit=max)
_1769798214965.webp?w=480&auto=format%2Ccompress&fit=max)
ಭಾರತದ ಗುರಿ ಈಗ ವಿಶ್ವದ ಮೂರನೇ ದೊಡ್ಡ ಆರ್ಥಿಕ ಶಕ್ತಿಯಾಗುವುದು. ಇದಕ್ಕಾಗಿ ಸರ್ಕಾರ ಹಲವು ರಂಗಗಳ ಸಬಲೀಕರಣಕ್ಕೆ ಮುಂದಾಗಿದೆ. ಹರಿದು ಬರಲಿರುವ ಬಂಡವಾಳಕ್ಕೆ ಸರ್ಕಾರ ಸೌಕರ್ಯಗಳನ್ನು ಸೃಷ್ಟಿಸುವ ಸವಾಲೂ ಇದೆ. ಆದರೆ, ಅನೇಕ ದೊಡ್ಡ ರಾಷ್ಟ್ರಗಳು ಮತ್ತು ಉದ್ಯಮಸ್ನೇಹಿ ವಾತಾವರಣ ಹೊಂದಿರುವ ದೇಶಗಳು ಭಾರತದಲ್ಲಿ ಹೂಡಿಕೆಗೆ ಮುಂದಾಗಿರುವುದು, ಉದ್ಯೋಗಸೃಷ್ಟಿ ನಿಟ್ಟಿನಲ್ಲಿಯೂ ಆಶಾವಾದ ಮೂಡಿಸಿದೆ. ಮತ್ತೊಂದೆಡೆ, ಮಧ್ಯಮವರ್ಗದವರ ನಿರೀಕ್ಷೆ, ಆಶೋತ್ತರಗಳಿಗೂ ಸ್ಪಂದಿಸಬೇಕಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2026-27ನೇ ಸಾಲಿನ ಕೇಂದ್ರ ಬಜೆಟ್ನ್ನು ನಾಳೆ (ಭಾನುವಾರ) ಪೂರ್ವಾಹ್ನ 11 ಗಂಟೆಗೆ ಮಂಡಿಸಲಿದ್ದಾರೆ. ಬಜೆಟ್ಪೂರ್ವದ ಸಿದ್ಧತೆ ಹಾಗೂ ಸಮಾಲೋಚನಾ ಸಭೆಗಳಲ್ಲಿ ಅವರು ಆಯಾ ರಂಗದ ಬೇಡಿಕೆ, ಕಳವಳಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆಲ್ಲ ಅವರ ಸ್ಪಂದನೆ ಹೇಗಿರುತ್ತದೆ ಎಂಬುದು ಕುತೂಹಲ ಮೂಡಿಸಿದ್ದರೂ, ಹಳೆಯ ನಿರೀಕ್ಷೆಗಳು ಹಾಗೂ ಕೆಲ ಪ್ರಮುಖ ಬೇಡಿಕೆಗಳು ಈ ಬಾರಿ ಈಡೇರುವ ನಿರೀಕ್ಷೆ ಇದೆ ಎಂದಿವೆ ಮೂಲಗಳು. ಜಾಗತಿಕ ಅನಿಶ್ಚಿತತೆ ನಡುವೆಯೂ ಭಾರತ ಆರ್ಥಿಕ ಬೆಳವಣಿಗೆಯ ವೇಗ ಕಾಯ್ದುಕೊಂಡಿದ್ದು, ಈ ಬಜೆಟ್ ಸಹಜವಾಗಿ ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು 75 ಸಾವಿರ ರೂ.ದಿಂದ 1 ಲಕ್ಷ ರೂ.ಗೆ ಹೆಚ್ಚಿಸುವ ಸಾಧ್ಯತೆ ಇದೆ. ಈ ಕ್ರಮ ಕೈಗೊಂಡಲ್ಲಿ ವೇತನ ಪಡೆಯುವವರಿಗೆ -ಠಿ;13 ಲಕ್ಷವರೆಗಿನ ಆದಾಯ ಟ್ಯಾಕ್ಸ್ ಫ್ರೀ ಆಗಲಿದೆ. ಹೀಗಾದರೆ, ಮಧ್ಯಮವರ್ಗದವರ ಕೈಯಲ್ಲಿ ಒಂದಿಷ್ಟು ಹಣ ಉಳಿಯಲಿದ್ದು, ಖರೀದಿ ಸಾಮರ್ಥ್ಯ ಹೆಚ್ಚಲಿದೆ. ಹೊಸ ತೆರಿಗೆ ಪದ್ಧತಿಯನ್ನು ಆಕರ್ಷಕವಾಗಿಸಲು ಸರ್ಕಾರ ಈ ಕ್ರಮ ಕೈಗೊಳ್ಳಬಹುದು ಎನ್ನುತ್ತಾರೆ ತೆರಿಗೆ ತಜ್ಞರು.
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮತ್ತು 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪ್ರಸಕ್ತ ಆಯುಷ್ಮಾನ್ ಭಾರತ್ ಯೋಜನೆಯಡಿ 5 ಲಕ್ಷ ರೂ.ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆಯ ಲಾಭ ಸಿಗುತ್ತಿದೆ. ಈ ಯೋಜನೆಯಡಿ 40 ಕೋಟಿಗೂ ಅಧಿಕ ಕಾರ್ಡ್ಗಳನ್ನು ಮಾಡಲಾಗಿದೆ. ಮತ್ತಷ್ಟು ಜನರಿಗೆ ಆರೋಗ್ಯ ಸೇವೆಯನ್ನು ಪರಿಣಾಮಕಾರಿಯಾಗಿ ಒದಗಿಸುವ ದೃಷ್ಟಿಯಿಂದ ಯೋಜನೆಯ ವ್ಯಾಪ್ತಿಯನ್ನು ಹೆಚ್ಚಿಸಿ, 60 ವರ್ಷ ಮೇಲ್ಪಟ್ಟವರಿಗೆ ಉಚಿತ ಚಿಕಿತ್ಸೆ ದೊರಕಿಸುವ ನಿರೀಕ್ಷೆ ಇದೆ. ಭಾರತದಲ್ಲಿ 60 ವರ್ಷ ಮೇಲ್ಪಟ್ಟ ಶೇ.82ರಷ್ಟು ಜನರ ಬಳಿ ಯಾವುದೇ ಆರೋಗ್ಯ ವಿಮೆ ಇಲ್ಲ. ಹಾಗಾಗಿ, ಸರ್ಕಾರ 60 ವರ್ಷ ಮೇಲ್ಪಟ್ಟವರಿಗೆ ಈ ಯೋಜನೆಯಡಿ ಉಚಿತ ಚಿಕಿತ್ಸೆ ಒದಗಿಸಬೇಕು ಮತ್ತು 5 ಲಕ್ಷ ರೂ. ಮಿತಿಯನ್ನು ಹೆಚ್ಚಿಸಬೇಕು ಎಂಬ ಆಗ್ರಹ ಈ ಬಾರಿ ಈಡೇರಬಹುದು.
ಗ್ರಾಮೀಣ ಭಾಗದಲ್ಲಿ ಸರ್ಕಾರಿ ಸೇವೆಯ ಗುಣಮಟ್ಟವನ್ನು ಹೆಚ್ಚಿಸುವುದು, ಸರ್ಕಾರಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ತಲುಪಿಸುವುದು ಸರ್ಕಾರದ ಉದ್ದೇಶವಾಗಿದೆ. ಇದಕ್ಕಾಗಿ, ‘ಏಕೀಕೃತ ರಾಷ್ಟ್ರೀಯ ಉದ್ಯೋಗ ನೀತಿ’ಯನ್ನು ಅನುಷ್ಠಾನಕ್ಕೆ ತರಲು ಸರ್ಕಾರ ಚಿಂತನೆ ನಡೆಸಿದ್ದು, ಇದರ ನೀಲಿನಕ್ಷೆ ಬಜೆಟ್ನಲ್ಲಿ ವಿವರಿಸಬಹುದು. ‘ಏಕೀಕೃತ ರಾಷ್ಟ್ರೀಯ ಉದ್ಯೋಗ ನೀತಿ’ಯನ್ನು ಜಾರಿಗೆ ತರುವಂತೆ ಸಿಐಐ ಕೂಡ ಆಗ್ರಹಿಸಿದೆ.
ಪ್ರಯಾಣಿಕರ ದಟ್ಟಣೆ ವ್ಯಾಪಕವಾಗಿದ್ದು, ಇದನ್ನು ನಿಯಂತ್ರಿಸಲು ಹೊಸ ರೈಲುಗಳ ಸಂಚಾರ ಆರಂಭಿಸಲು ಉದ್ದೇಶಿಸಿರುವ ಸರ್ಕಾರ, ಟಿಕೆಟ್ ಕಾಯ್ದಿರಿಸುವಿಕೆಯಲ್ಲಿ ವೇಟಿಂಗ್ ಲಿಸ್ಟ್ ವ್ಯವಸ್ಥೆಯನ್ನು 2030ರ ಹೊತ್ತಿಗೆ ಕೊನೆಗೊಳಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಪೂರಕ ಕ್ರಮವಾಗಿ ಈ ಬಜೆಟ್ನಲ್ಲಿ 300 ಹೊಸ ಅಮೃತ್ ಭಾರತ್ ಹಾಗೂ ವಂದೇ ಭಾರತ್ ರೈಲುಗಳ ಘೋಷಣೆ ಯಾಗುವ ನಿರೀಕ್ಷೆ ಇದೆ. 2025-26ರ ಬಜೆಟ್ನಲ್ಲಿ ರೈಲ್ವೆ ಇಲಾಖೆಗೆ ದಾಖಲೆಯ 2.65 ಲಕ್ಷ ಕೋಟಿ ರೂ. ಅನುದಾನ ನೀಡಲಾಗಿತ್ತು. ಇದು ಈ ಬಾರಿ 3 ಲಕ್ಷ ಕೋಟಿ ರೂ.ಗೆ ಹೆಚ್ಚಳವಾದರೆ, ಅಚ್ಚರಿ ಪಡಬೇಕಿಲ್ಲ.
ಪಿಎಂ ಕಿಸಾನ್ ಸಮ್ಮಾನ್ ನಿಧಿಯಡಿ ರೈತರಿಗೆ ಪ್ರಸಕ್ತ ವಾರ್ಷಿಕ 6 ಸಾವಿರ ರೂಪಾಯಿಗಳ ಆರ್ಥಿಕ ನೆರವು ನೀಡಲಾಗುತ್ತಿದೆ. ಡಿಬಿಟಿ ಮೂಲಕ ಮೂರು ಕಂತುಗಳಲ್ಲಿ ತಲಾ 2 ಸಾವಿರ ರೂ. ವರ್ಗಾವಣೆಯಾಗುತ್ತಿದೆ. ಈ ಬಜೆಟ್ನಲ್ಲಿ ಈ ಮೊತ್ತವನ್ನು ಶೇಕಡ 50ರಷ್ಟು ಏರಿಸಿ, 6ರಿಂದ 9 ಸಾವಿರ ರೂ.ಗೆ ಹೆಚ್ಚಿಸುವ ಸಾಧ್ಯತೆ ಇದೆ ಎಂದಿದ್ದಾರೆ ಕೃಷಿ ತಜ್ಞರು. ಕೃಷಿ ಕ್ಷೇತ್ರದ ವೆಚ್ಚ ಹೆಚ್ಚಳವಾಗಿದ್ದು, ರೈತರ ಜೀವನವೆಚ್ಚ ಕೂಡ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕಿಸಾನ್ ಸಮ್ಮಾನ್ ನಿಧಿ ಮೊತ್ತವನ್ನು ಹೆಚ್ಚಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಲೇ ಇದೆ. 2019ರಲ್ಲಿ ಈ ಯೋಜನೆ ಆರಂಭಿಸಿದ ಬಳಿಕ, ಯಾವುದೇ ಬದಲಾವಣೆ ಮಾಡಲಾಗಿಲ್ಲ. ಸಂಸತ್ತಿನ ಸ್ಥಾಯಿ ಸಮಿತಿ ಕೂಡ ಕಿಸಾನ್ ಸಮ್ಮಾನ್ ನಿಧಿಯನ್ನು 12 ಸಾವಿರ ರೂ.ಗೆ ಹೆಚ್ಚಿಸುವ ಶಿಫಾರಸನ್ನು 2024ರಲ್ಲೇ ಮಾಡಿದೆ ಎಂಬುದು ಗಮನಾರ್ಹ. ಈ ಯೋಜನೆಯಡಿ ಪ್ರಸಕ್ತ 11 ಕೋಟಿಗಿಂತ ಅಧಿಕ ರೈತರು ಲಾಭ ಪಡೆಯುತ್ತಿದ್ದಾರೆ. ಕೇಂದ್ರ ಇದಕ್ಕಾಗಿ ಪ್ರತಿವರ್ಷ ಸರಾಸರಿ 60ರಿಂದ 65 ಸಾವಿರ ಕೋಟಿ ರೂ. ವೆಚ್ಚ ಮಾಡುತ್ತಿದೆ. ನೆರವನ್ನು-ಠಿ;6 ಸಾವಿರದಿಂದ -ಠಿ;9 ಸಾವಿರಕ್ಕೆ ಹೆಚ್ಚಿಸಿದರೆ ವರ್ಷಕ್ಕೆ 95 ಸಾವಿರ ಕೋಟಿ ರೂ. ವೆಚ್ಚ ಮಾಡಬೇಕಾಗುತ್ತದೆ. ಬಿಹಾರದಲ್ಲಿ ಮಾತ್ರ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 3 ಸಾವಿರ ರೂ. ನೀಡಲಾಗುತ್ತಿದ್ದು, ಅಲ್ಲಿನ ರೈತರಿಗೆ ಒಟ್ಟು 9 ಸಾವಿರ ರೂ. ದೊರೆಯುತ್ತಿದೆ. ಕೇಂದ್ರ ಸರ್ಕಾರ ದೇಶಾದ್ಯಂತ ಇದನ್ನು ಜಾರಿಗೆ ತರುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರ 2027ರ ಹೊತ್ತಿಗೆ 1 ಕೋಟಿ ಮನೆಗಳನ್ನು ಸೋಲಾರ್ ಗ್ರೀಡ್ನೊಂದಿಗೆ ಜೋಡಿಸುವ ಗುರಿ ಇರಿಸಿಕೊಂಡಿದೆ. ಆದ್ದರಿಂದ, ಪಿಎಂ ಸೂರ್ಯ ಘರ್ ಯೋಜನೆಗೆ ನೀಡಲಾಗುತ್ತಿರುವ ಸಹಾಯಧನವನ್ನು ಈ ಬಾರಿ ಹೆಚ್ಚಿಸುವ ಚಿಂತನೆ ಇದೆ. ಪ್ರಸ್ತುತ 2 ಕಿಲೋವಾಟ್ವರೆಗಿನ ಸೋಲಾರ್ ಸಿಸ್ಟಮ್ ಅಳವಡಿಸಿದರೆ, ಪ್ರತಿ ಕಿಲೋವಾಟ್ಗೆ ತಲಾ -ಠಿ;30 ಸಾವಿರದಂತೆ -ಠಿ;60 ಸಾವಿರ ಸಬ್ಸಿಡಿ ನೀಡಲಾಗುತ್ತಿದೆ. ಇದನ್ನು ಪ್ರತಿ ಕಿಲೋವಾಟ್ಗೆ -ಠಿ;40 ಸಾವಿರಕ್ಕೆ ಹೆಚ್ಚಿಸಿ, 2 ಕಿಲೋವಾಟ್ ಸೋಲಾರ್ ಸಿಸ್ಟಮ್ೆ ಒಟ್ಟು -ಠಿ;80 ಸಾವಿರ ನೆರವು ಸಿಗುವಂತೆ ಮಾಡುವ ಉದ್ದೇಶ ಹೊಂದಲಾಗಿದೆ. 3 ಕಿಲೋವಾಟ್ ಮೇಲ್ಪಟ್ಟ ಸೋಲಾರ್ ಸಿಸ್ಟಮ್ೆ 78 ಸಾವಿರ ರೂ. ಸಬ್ಸಿಡಿ ನೀಡಲಾಗುತ್ತಿದ್ದು, ಈ ಮಿತಿಯನ್ನೂ ಹೆಚ್ಚಿಸುವ ನಿರೀಕ್ಷೆ ಇದೆ. 2025ರ ಡಿಸೆಂಬರ್ವರೆಗೆ 19.45 ಲಕ್ಷಕ್ಕೂ ಅಧಿಕ ಸೋಲಾರ್ ಪ್ಯಾನಲ್ಗಳನ್ನು ಪಿಎಂ ಸೂರ್ಯ ಘರ್ ಯೋಜನೆಯಡಿ ಅಳವಡಿಸಲಾಗಿದೆ.
ಅಸಂಘಟಿತ ವಲಯದ ಕಾರ್ವಿುಕರಿಗೆ ವೃದ್ಧಾಪ್ಯದಲ್ಲಿ ಆದಾಯ ಭದ್ರತೆ ಒದಗಿಸುವ ದೃಷ್ಟಿಯಿಂದ 2015ರ ಮೇ 9ರಂದು ಆರಂಭಿಸಲಾದ ಅಟಲ್ ಪಿಂಚಣಿ ಯೋಜನೆ (ಎಪಿವೈ) ಯಡಿ ಕುಟುಂಬ ಪಿಂಚಣಿ ಮಾಸಿಕ ಗರಿಷ್ಠ 5 ಸಾವಿರ ರೂ.ವರೆಗೆ ಮಾತ್ರ ದೊರೆಯುತ್ತಿದೆ. ಈಗಿನ ಬೆಲೆಯೇರಿಕೆ, ಹಣದುಬ್ಬರ ಪ್ರಮಾಣವನ್ನು ಗಮನದಲ್ಲಿ ಇರಿಸಿಕೊಂಡು ಇದನ್ನು 10 ಸಾವಿರ ರೂ.ಗೆ ಹೆಚ್ಚಿಸುವ ಸಾಧ್ಯತೆ ಇದೆ. ಈವರೆಗೆ 8.66 ಕೋಟಿಗೂ ಅಧಿಕ ಜನರು ಅಟಲ್ ಪಿಂಚಣಿ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಯೋಜನೆಯನ್ನು 2030-31ರ ಹಣಕಾಸು ವರ್ಷದವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಇತ್ತೀಚೆಗೆ ಅನುಮೋದನೆ ನೀಡಿದೆ.
ಭಾರತ ಜಾಗತಿಕವಾಗಿ ನಾಲ್ಕನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿ ರುವುದರಿಂದ, ಈ ಸಾಧನೆ ಕಾಯ್ದುಕೊಳ್ಳಲು, ಆರ್ಥಿಕ ಚಟುವಟಿಕೆ ಹೆಚ್ಚಿಸಲು ಮೂಲಸೌಕರ್ಯ ಕ್ಷೇತ್ರಕ್ಕೆ ಆದ್ಯತೆ ನೀಡುವುದು ಅಗತ್ಯವಾಗಿದೆ. ಕಳೆದ ಬಜೆಟ್ಗಳನ್ನು ಗಮನಿಸಿದರೆ ಸರ್ಕಾರ ಇದನ್ನು ಪರಿಗಣಿಸಲಿದೆ, ಇನ್ಪ್ರಾ ಯೋಜನೆಗಳಿಗೆ ಒತ್ತು ನೀಡಲಿದೆ ಎನ್ನುತ್ತಿವೆ ಮೂಲಗಳು. ಅಲ್ಲದೆ, ಸಾಮಾಜಿಕ ಕಲ್ಯಾಣ ಯೋಜನೆಗಳಿಗೂ ಈ ಬಾರಿ ಹೆಚ್ಚಿನ ಅನುದಾನ ಸಿಗುವ ನಿರೀಕ್ಷೆ ಇದೆ.