ಮುಂಬೈ: ( Varun Dhawan ) ಬಾಲಿವುಡ್ ನಟ ವರುಣ್ ಧವನ್ ಅವರು ಮುಂಬೈ ಮೆಟ್ರೋ ರೈಲಿನಲ್ಲಿ ಪುಲ್-ಅಪ್ಸ್ (Pull-ups) ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ, ಮುಂಬೈ ಮೆಟ್ರೋ ಆಡಳಿತ ಮಂಡಳಿ ಸ್ಟಾರ್ ನಟ ಮತ್ತು ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.
ನಡೆದಿದ್ದೇನು?
ಇತ್ತೀಚೆಗೆ ಬಿಡುಗಡೆಯಾದ ತಮ್ಮ ಹೊಸ ಸಿನಿಮಾ 'ಬಾರ್ಡರ್ 2' (Border 2) ಸಿನಿಮಾದ ಪ್ರಚಾರದ ಭಾಗವಾಗಿ ವರುಣ್ ಧವನ್ ಮೆಟ್ರೋದಲ್ಲಿ ಸಂಚರಿಸಿದ್ದರು. ಈ ವೇಳೆ ರೈಲಿನ ಒಳಗಿನ ಹ್ಯಾಂಡಲ್ ಬಾರ್‌ಗಳನ್ನು ಹಿಡಿದು ಕಸರತ್ತು (ಪುಲ್-ಅಪ್ಸ್) ಮಾಡಿದ್ದರು. ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆ ಮೆಟ್ರೋ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಹಾ ಮುಂಬೈ ಮೆಟ್ರೋ ಆಪರೇಷನ್ ಕಾರ್ಪೊರೇಷನ್ ಲಿಮಿಟೆಡ್ (MMMOCL) ತನ್ನ ಅಧಿಕೃತ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡು ಕಟ್ಟುನಕಿಟ್ಟಿನ ಎಚ್ಚರಿಕೆ ನೀಡಿದೆ.
'ವರುಣ್ ಧವನ್ ಅವರೇ, ನಿಮ್ಮ ಆಕ್ಷನ್ ಸಿನಿಮಾಗಳಲ್ಲಿ ಇರುವಂತೆ ಈ ವಿಡಿಯೋದಲ್ಲೂ 'ಇದನ್ನು ಪ್ರಯತ್ನಿಸಬೇಡಿ' ಎಂಬ ಎಚ್ಚರಿಕೆ ಸಂದೇಶ ಇರಬೇಕಿತ್ತು. ಮೆಟ್ರೋ ಹ್ಯಾಂಡಲ್‌ಗಳು ಪ್ರಯಾಣಿಕರ ಸುರಕ್ಷತೆಗಾಗಿ ಇವೆಯೇ ಹೊರತು ಇಂತಹ ಸಾಹಸ ಅಥವಾ ಕಸರತ್ತು ಮಾಡಲು ಅಲ್ಲ.
ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ 2002ರ ಅಡಿಯಲ್ಲಿ ಇಂತಹ ವರ್ತನೆಗಳು ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಮತ್ತು ಆಸ್ತಿಗೆ ಹಾನಿ ಮಾಡುವ ವಿಭಾಗಕ್ಕೆ ಸೇರುತ್ತವೆ. ಇದಕ್ಕೆ ದಂಡ ಅಥವಾ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ ಎಂದು ಅಧಿಕಾರಿಗಳು ನೆನಪಿಸಿದ್ದಾರೆ.
"ಸ್ನೇಹಿತರೊಂದಿಗೆ ಮೆಟ್ರೋದಲ್ಲಿ ಸಮಯ ಕಳೆಯುವುದು ಒಳ್ಳೆಯದು, ಆದರೆ ಜವಾಬ್ದಾರಿಯುತವಾಗಿ ಪ್ರಯಾಣಿಸಿ. ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಬೇಡಿ" ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.