ಹಣ ಪಡೆದು ದಂಧೆಗೆ ಪ್ರವೇಶ ಕಲ್ಪಿಸಿದ ಆರೋಪ: ಮೆಟಾಗೆ ಮುಳ್ಳಾಗಲಿದೆಯೇ ಇನ್‌ಸ್ಟಾಗ್ರಾಮ್‌ನ ಜಾಹೀರಾತು ನೀತಿ? Instagram Controversy

Instagram Controversy ಸಾಂದರ್ಭಿಕ ಚಿತ್ರ
Instagram Controversy ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಮಕ್ಕಳ ಲೈಂಗಿಕ ಶೋಷಣೆ ಮತ್ತು ನಿಂದನೆಗೆ ಸಂಬಂಧಿಸಿದ ಆಕ್ಷೇಪಾರ್ಹ ವಿಷಯಗಳು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಸಾರ
  • ಇನ್‌ಸ್ಟಾಗ್ರಾಮ್‌ನಲ್ಲಿ ಮಕ್ಕಳ ಶೋಷಣೆಯ ಜಾಹೀರಾತು: ಮೆಟಾ ಸಂಸ್ಥೆಗೆ ಕೇಂದ್ರ ಸರ್ಕಾರದಿಂದ ಕಟ್ಟುನಿಟ್ಟಿನ ನೋಟಿಸ್!
  • ಮೆಟಾದ ಶಿಫಾರಸು ಅಲ್ಗಾರಿದಮ್ CSAM ಹೊಂದಿರುವ ವೀಡಿಯೊಗಳನ್ನು ಪ್ರಚಾರ ಮಾಡುತ್ತಿದೆ ಎಂದು ವರದಿ ಮಾಡಿದ ಬಿಬಿಸಿ
ನವದೆಹಲಿ: ಮಕ್ಕಳ ಲೈಂಗಿಕ ಶೋಷಣೆ ಮತ್ತು ನಿಂದನೆಗೆ (CSEAM) ಸಂಬಂಧಿಸಿದ ಆಕ್ಷೇಪಾರ್ಹ ವಿಷಯಗಳು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಸಾರವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರವು, ಮೆಟಾ ಸಂಸ್ಥೆಗೆ (Instagram Controversy) ಕಟ್ಟುನಿಟ್ಟಿನ ನೋಟಿಸ್ ಜಾರಿ ಮಾಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಫೇಸ್‌ಬುಕ್ ಮತ್ತು ವಾಟ್ಸಾಪ್‌ನಂತಹ ಪ್ರಮುಖ ಸಾಮಾಜಿಕ ಮಾಧ್ಯಮಗಳ ಮಾತೃ ಸಂಸ್ಥೆಯಾದ ಮೆಟಾಗೆ ಈ ನೋಟಿಸ್ ನೀಡಲಾಗಿದ್ದು, ಇಂಟರ್ನೆಟ್ ಜಗತ್ತಿನಲ್ಲಿ ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಸರ್ಕಾರದ ಕಠಿಣ ನಿಲುವನ್ನು ಇದು ಬಿಂಬಿಸುತ್ತದೆ.
ಆದಾಗ್ಯೂ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಶನಿವಾರ ಇನ್​ಸ್ಟಾಗ್ರಾಮ್​ಗೆ CSEAM ಗೆ ಪ್ರವೇಶವನ್ನು ಸುಗಮಗೊಳಿಸುವ ಎಲ್ಲಾ ವಿಷಯವನ್ನು ತೆಗೆದುಹಾಕುವಂತೆ ಆದೇಶಿಸಿದ ಏಳು ದಿನಗಳಲ್ಲಿ ಈ ವಿವರವಾದ ಪ್ರತಿಕ್ರಿಯೆಯನ್ನು ಕೋರಿದೆ.
ಒಂದು ವೇಳೆ ಮಾಹಿತಿ ನೀಡಲು ವಿಫಲವಾದರೆ ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆ, 2012 ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬಹುದು. CSEAM ನ ಕ್ರಮಾವಳಿ ವರ್ಧನೆಯ ವಿರುದ್ಧ ಸರ್ಕಾರ ತಕ್ಷಣದ ಸರಿಪಡಿಸುವ ಕ್ರಮವನ್ನು ಒತ್ತಾಯಿಸಿತು.
ಮೆಟಾದ ಶಿಫಾರಸು ಅಲ್ಗಾರಿದಮ್ CSAM ಹೊಂದಿರುವ ವೀಡಿಯೊಗಳನ್ನು ಪ್ರಚಾರ ಮಾಡುತ್ತಿದೆ ಎಂದು ಬಿಬಿಸಿ ವರದಿ ಮಾಡಿರುವ ಹಿನ್ನಲೆಯಲ್ಲಿ ಈ ಸೂಚನೆ ಹೊರಬಿದ್ದಿದ್ದು, ಇದು ಸುರಕ್ಷತಾ ಕ್ರಮಗಳಲ್ಲಿನ ಗಂಭೀರ ಅಂತರವನ್ನು ಬಹಿರಂಗಪಡಿಸಿದೆ. ಮೆಟಾದ ಜಾಹೀರಾತು ನೀತಿಗಳು ನಗ್ನತೆ ಮತ್ತು ಲೈಂಗಿಕತೆಯಂತಹ ಸ್ಪಷ್ಟವಾದ ವಿಷಯವನ್ನು ನಿಷೇಧಿಸಿದ್ದರೂ ಸಹ, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಈ ರೀತಿಯ ಜಾಹೀರಾತುಗಳು ಕಾಣಿಸಿಕೊಳ್ಳುತ್ತಿರುವುದನ್ನು ಬಿಬಿಸಿ ತನಿಖೆಯು ಕಂಡುಕೊಂಡಿದೆ ಎಂದು ಹೇಳಲಾಗಿದೆ.
ವರದಿಗಳ ಪ್ರಕಾರ, ಇನ್‌ಸ್ಟಾಗ್ರಾಮ್‌ನಲ್ಲಿ ರೇಪ್ ವಿಡಿಯೋ ಮತ್ತು ಚೈಲ್ಡ್ ವಿಡಿಯೋನಂತಹ ನಿಷೇಧಿತ ಪದಗಳನ್ನು ಒಳಗೊಂಡ ಪಾವತಿಸಿದ ಜಾಹೀರಾತುಗಳು ಕಾಣಿಸಿಕೊಂಡಿದ್ದವು. ಈ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿದರೆ, ಬಳಕೆದಾರರನ್ನು ಇಂತಹ ಕಾನೂನುಬಾಹಿರ ಕಂಟೆಂಟ್‌ಗಳನ್ನು ಮಾರಾಟ ಮಾಡುವ ಟೆಲಿಗ್ರಾಮ್ ಚಾನೆಲ್‌ಗಳಿಗೆ ಮರುನಿರ್ದೇಶಿಸಲಾಗುತ್ತಿತ್ತು ಎನ್ನಲಾಗಿದೆ.
ಅಂತಹ ಕಾನೂನುಬಾಹಿರ ಜಾಹೀರಾತುಗಳಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅನುಮೋದನೆ ಸಿಕ್ಕಿದ್ದು ಹೇಗೆ? ಆರೋಪಗಳು ಬಂದ ನಂತರ ಮೆಟಾ ಯಾವ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು ಭವಿಷ್ಯದಲ್ಲಿ ಇದೇ ರೀತಿಯ ಘಟನೆಗಳನ್ನು ತಡೆಗಟ್ಟಲು ಯಾವ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲು ಯೋಜಿಸಿದೆ ಎಂದು ಸರ್ಕಾರ ಪ್ರಶ್ನೆ ಮಾಡಿದೆ.

ಮಧ್ಯವರ್ತಿ ರಕ್ಷಣೆ ಸಿಗಲ್ಲ; ಕಠಿಣ ಕ್ರಮದ ಎಚ್ಚರಿಕೆ

ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮಗಳು ತಮ್ಮ ವೇದಿಕೆಯಲ್ಲಿ ಮೂರನೇ ವ್ಯಕ್ತಿಗಳು ಪೋಸ್ಟ್ ಮಾಡುವ ಕಂಟೆಂಟ್‌ಗಳಿಗೆ ಐಟಿ ಕಾಯ್ದೆಯ ಅಡಿಯಲ್ಲಿ ಸುರಕ್ಷಿತ ವಲಯ ಎಂಬ ರಕ್ಷಣೆ ಪಡೆಯುತ್ತವೆ. ಆದರೆ, ಈ ಪ್ರಕರಣದಲ್ಲಿ ವಿಷಯ ಸಂಪೂರ್ಣ ವಿಭಿನ್ನವಾಗಿದೆ.
ಅಧಿಕೃತ ಮೂಲಗಳ ಪ್ರಕಾರ, ಇದು ಕೇವಲ ಬಳಕೆದಾರರು ಪೋಸ್ಟ್ ಮಾಡಿದ ವಿಷಯವಲ್ಲ, ಬದಲಿಗೆ ಮೆಟಾ ಸಂಸ್ಥೆಯು ಹಣ ಪಡೆದು ಪ್ರಸಾರ ಮಾಡಿರುವ ಪೇಡ್ ಜಾಹೀರಾತುಗಳಾಗಿವೆ. ಜಾಹೀರಾತುಗಳ ಮೂಲಕ ಸಂಸ್ಥೆಯು ಆದಾಯ ಗಳಿಸುತ್ತಿರುವುದರಿಂದ, ಇಲ್ಲಿ ಮೂರನೇ ವ್ಯಕ್ತಿಯ ರಕ್ಷಣೆಯ ವಾದ ನಡೆಯುವುದಿಲ್ಲ. ಆರೋಪಗಳು ನಿಜವೆಂದು ಸಾಬೀತಾದರೆ, ಮೆಟಾ ಸಂಸ್ಥೆಯನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿದುಬಂದಿದೆ.
ಭಾರತೀಯ ಐಟಿ ಕಾಯ್ದೆಯ ಸೆಕ್ಷನ್ 67B ಅಡಿಯಲ್ಲಿ ಮಕ್ಕಳ ಲೈಂಗಿಕ ಶೋಷಣೆಯ ದೃಶ್ಯಗಳನ್ನು ಆನ್‌ಲೈನ್‌ನಲ್ಲಿ ಪ್ರಸಾರ ಮಾಡುವುದು ಅಥವಾ ಉತ್ತೇಜಿಸುವುದು ಗಂಭೀರ ಅಪರಾಧವಾಗಿದ್ದು, ಇದು ಕಠಿಣ ಜೈಲು ಶಿಕ್ಷೆ ಮತ್ತು ದಂಡಕ್ಕೆ ಅರ್ಹವಾಗಿದೆ.

ಮೆಟಾ ಸಂಸ್ಥೆಯ ಸ್ಪಷ್ಟನೆ ಏನು?

ಈ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಮೆಟಾ ವಕ್ತಾರರು, ನಮ್ಮ ವೇದಿಕೆಯಲ್ಲಿ ಮಕ್ಕಳ ಸುರಕ್ಷತೆಯ ವಿಷಯದಲ್ಲಿ ನಾವು ಶೂನ್ಯ ಸಹಿಷ್ಣುತೆ ನೀತಿಯನ್ನು ಹೊಂದಿದ್ದೇವೆ. ಜಾಹೀರಾತುಗಳೂ ಸೇರಿದಂತೆ ಯಾವುದೇ ರೂಪದಲ್ಲಿ ಇಂತಹ ಕಂಟೆಂಟ್‌ಗಳನ್ನು ಹರಡುವುದನ್ನು ನಾವು ಕಟ್ಟುನಿಟ್ಟಾಗಿ ನಿಷೇಧಿಸುತ್ತೇವೆ ಎಂದು ತಿಳಿಸಿದ್ದಾರೆ.
ನಮ್ಮ 350 ಕೋಟಿ ಬಳಕೆದಾರರ ನಡುವೆ ಅಡಗ ಕುಳಿತು ತಂತ್ರಜ್ಞಾನವನ್ನು ವಂಚಿಸಲು ಯತ್ನಿಸುವ ಇಂತಹ ಅಪರಾಧಿಗಳ ವಿರುದ್ಧ ನಾವು ನಿರಂತರ ಹೋರಾಟ ನಡೆಸುತ್ತಿದ್ದೇವೆ. ಇಂತಹ ಆಕ್ಷೇಪಾರ್ಹ ವಿಷಯಗಳನ್ನು ಪತ್ತೆಹಚ್ಚಲು ನಾವು ಸುಧಾರಿತ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ. ನಮ್ಮ ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು, ದುಷ್ಕರ್ಮಿಗಳ ಲಿಂಕ್‌ಗಳನ್ನು ಬ್ಲಾಕ್ ಮಾಡಲು ಮತ್ತು ಇತರ ತಂತ್ರಜ್ಞಾನ ಸಂಸ್ಥೆಗಳೊಂದಿಗೆ ಮಾಹಿತಿ ಹಂಚಿಕೊಳ್ಳಲು ನಮ್ಮ ಪರಿಣಿತ ತಂಡಗಳು ನಿರಂತರವಾಗಿ ಶ್ರಮಿಸುತ್ತಿವೆ, ಎಂದು ಮೆಟಾ ಸಮರ್ಥಿಸಿಕೊಂಡಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net