ಮೇಕೆದಾಟು ಅಣೆಕಟ್ಟು ನಿರ್ಮಾಣ ವಿರೋಧಿಸಿ ಪ್ರಧಾನಿ ಮೋದಿಗೆ ವಿಜಯ್ ಪತ್ರ; ಏನಿದು ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ಜಟಾಪಟಿ? | Mekedatu Dam Controversy

Mekedatu Dam Controversy | ಏನಿದು ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ಜಟಾಪಟಿ?
Mekedatu Dam Controversy | ಏನಿದು ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ಜಟಾಪಟಿ?
Published on
Mekedatu Dam Controversy: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವ ಮೂಲಕ ಕರ್ನಾಟಕದ ಪ್ರಸ್ತಾವಿತ ಮೇಕೆದಾಟು ಅಣೆಕಟ್ಟು ಯೋಜನೆಗೆ ಕೇಂದ್ರ ಸರ್ಕಾರ ಬ್ರೇಕ್ ಹಾಕಬೇಕು ಎಂದು ಒತ್ತಾಯಿಸಿದ್ದಾರೆ. ಇದು ದಶಕಗಳ ಇತಿಹಾಸವಿರುವ ಕಾವೇರಿ ನದಿ ನೀರು ಹಂಚಿಕೆ ವಿವಾದವನ್ನು ಮತ್ತೆ ಮುಂಚೂಣಿಗೆ ತಂದಿದ್ದು, ರಾಜ್ಯ ಸಿದ್ಧಪಡಿಸಿರುವ ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಬೇಕು ಎಂದು ವಿಜಯ್​ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಯೋಜನೆಯು ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿರುವ ಆದೇಶಗಳಿಗೆ ಸಂಪೂರ್ಣ ವಿರುದ್ಧವಾಗಿದೆ ಎಂದು ಹೇಳಿರುವ ಸಿಎಂ ವಿಜಯ್​, ತಮಿಳುನಾಡು ಸರ್ಕಾರದ ತೀವ್ರ ಆಕ್ಷೇಪಗಳ ಹೊರತಾಗಿಯೂ ಕರ್ನಾಟಕದ ಪ್ರಸ್ತಾವನೆಯನ್ನು ಪರಿಶೀಲಿಸುತ್ತಿರುವ ಕೇಂದ್ರ ಜಲಶಕ್ತಿ ಸಚಿವಾಲಯ ಮತ್ತು ಕೇಂದ್ರ ಜಲ ಆಯೋಗದ ನಡವಳಿಕೆಯನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ.

ಏನಿದು ಮೇಕೆದಾಟು ಯೋಜನೆ..?

ಕರ್ನಾಟಕ-ತಮಿಳುನಾಡು ಗಡಿಯ ಸಮೀಪವಿರುವ ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಎಂಬಲ್ಲಿ ಅಣೆಕಟ್ಟು ಮತ್ತು ಜಲಾಶಯವನ್ನು ನಿರ್ಮಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಮುಖ್ಯವಾಗಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಕುಡಿಯುವ ನೀರಿನ ಅಗತ್ಯವನ್ನು ಪೂರೈಸಲು ಮತ್ತು ವಿದ್ಯುತ್ ಉತ್ಪಾದಿಸಲು ಈ ಯೋಜನೆ ಅಗತ್ಯವಾಗಿದೆ ಎಂಬುದು ರಾಜ್ಯದ ವಾದ. ಆದರೆ, ಕರ್ನಾಟಕವು ನದಿಯ ಮೇಲ್ಭಾಗದಲ್ಲಿ ಹೆಚ್ಚಿನ ನೀರನ್ನು ಸಂಗ್ರಹಿಸಿಟ್ಟುಕೊಂಡರೆ, ತಮಿಳುನಾಡಿಗೆ ತಲುಪುವ ಕಾವೇರಿ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಬಹುದು, ವಿಶೇಷವಾಗಿ ಕೃಷಿ ಹಂಗಾಮಿನಲ್ಲಿ ತೊಂದರೆಯಾಗಬಹುದು ಎಂಬ ಆತಂಕ ತಮಿಳುನಾಡಿನದ್ದಾಗಿದೆ.

ತಮಿಳುನಾಡು ವಿರೋಧಿಸುತ್ತಿರುವುದೇಕೆ..?

ತಮಿಳುನಾಡು ತನ್ನ ನೀರಾವರಿಗಾಗಿ, ವಿಶೇಷವಾಗಿ ಲಕ್ಷಾಂತರ ರೈತರು ಕೃಷಿಗಾಗಿ ನದಿಯನ್ನೇ ನಂಬಿಕೊಂಡಿರುವ ಡೆಲ್ಟಾ ಜಿಲ್ಲೆಗಳಲ್ಲಿ ಕಾವೇರಿ ನೀರನ್ನು ಹೆಚ್ಚಾಗಿ ಅವಲಂಬಿಸಿದೆ. ಮೇಕೆದಾಟು ಬಳಿ ಹೊಸ ಅಣೆಕಟ್ಟು ನಿರ್ಮಿಸಿದರೆ ರೈತರಿಗೆ ನೀರಿನ ಪೂರೈಕೆ ಇಳಿಮುಖವಾಗುವುದರ ಜೊತೆಗೆ ಹಲವು ಜಿಲ್ಲೆಗಳ ಕುಡಿಯುವ ನೀರಿಗೂ ತತ್ವಾರ ಎದುರಾಗಬಹುದು ಎಂದು ತಮಿಳುನಾಡು ಭಾವಿಸಿದೆ. ಪ್ರಧಾನಿಯವರಿಗೆ ಬರೆದ ಪತ್ರದಲ್ಲಿ ಸಿಎಂ ವಿಜಯ್, ಈ ಯೋಜನೆಯು ಸುಪ್ರೀಂ ಕೋರ್ಟ್ ತೀರ್ಪು ಮತ್ತು ಕಾವೇರಿ ನೀರು ವಿವಾದ ನ್ಯಾಯಾಧಿಕರಣದ (CWDT) ಆದೇಶವನ್ನು ಉಲ್ಲಂಘಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತೊಂದು ಜಲಾಶಯ ನಿರ್ಮಾಣಕ್ಕೆ ಅವಕಾಶ ನೀಡಿದರೆ, ನದಿ ನೀರಿನ ಹರಿವಿನ ಮೇಲೆ ಕರ್ನಾಟಕಕ್ಕೆ ಹೆಚ್ಚಿನ ನಿಯಂತ್ರಣ ಸಿಗುತ್ತದೆ ಎಂಬುದು ತಮಿಳುನಾಡು ನಾಯಕರ ದಿಗಿಲಿಗೆ ಕಾರಣವಾಗಿದೆ.
ಸುಮಾರು ಮೂರು ದಶಕಗಳ ಸುದೀರ್ಘ ಕಾನೂನು ಹೋರಾಟದ ನಂತರ ಸೂಕ್ಷ್ಮ ಕಾವೇರಿ ನೀರು ವಿವಾದಕ್ಕೆ ಪರಿಹಾರ ಸಿಕ್ಕಿದ್ದು, 2018ರ ಫೆಬ್ರವರಿ 16ರ ಸುಪ್ರೀಂ ಕೋರ್ಟ್ ತೀರ್ಪು ಪ್ರಸ್ತುತ ಜಾರಿಯಲ್ಲಿದೆ ಎಂಬುದು ತಮಗೆ ತಿಳಿದೇ ಇದೆ. ನ್ಯಾಯಾಧಿಕರಣವು ಅನುಮತಿ ನೀಡಿರುವ ಯೋಜನೆಗಳ ಪಟ್ಟಿಯಲ್ಲಿ ಮೇಕೆದಾಟು ಸೇರಿಲ್ಲ ಮತ್ತು ಈ ಅಂಶವನ್ನು ಸುಪ್ರೀಂ ಕೋರ್ಟ್ ಕೂಡ ದೃಢಪಡಿಸಿದೆ.
ಕಾವೇರಿ ಕಣಿವೆಯು ನೀರಿನ ಕೊರತೆಯನ್ನು ಎದುರಿಸುತ್ತಿರುವುದರಿಂದ ಮತ್ತು ಲಭ್ಯವಿರುವ ನೀರನ್ನು ಈಗಾಗಲೇ ಸಂಬಂಧಪಟ್ಟ ರಾಜ್ಯಗಳಿಗೆ ಹಂಚಿಕೆ ಮಾಡಿರುವುದರಿಂದ, ಇಲ್ಲಿ ಹೆಚ್ಚುವರಿ ಬಳಕೆಗಾಗಲಿ ಅಥವಾ ಬೃಹತ್ ಸಂಗ್ರಹಣಾ ಜಲಾಶಯವನ್ನು ನಿರ್ಮಿಸುವುದಕ್ಕಾಗಲಿ ಯಾವುದೇ ಅವಕಾಶವಿಲ್ಲ. ಆದ್ದರಿಂದ, ನ್ಯಾಯಾಲಯ ಎತ್ತಿಹಿಡಿದಿರುವ ಆದೇಶಗಳನ್ನು ಹೊರತುಪಡಿಸಿ ಕಾವೇರಿ ಅಥವಾ ಅದರ ಉಪನದಿಗಳಿಗೆ ಅಡ್ಡಲಾಗಿ ಯಾವುದೇ ಹೊಸ ಯೋಜನೆಗಳನ್ನು ರೂಪಿಸುವುದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ ಎಂದು ವಿಜಯ್​ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ದಿಢೀರ್ ರಾಜಕೀಯ ಸಂಘರ್ಷಕ್ಕೆ ಕಾರಣ ಏನು?

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಇತ್ತೀಚೆಗೆ, ಕರ್ನಾಟಕ ಸರ್ಕಾರವು ಶೀಘ್ರದಲ್ಲೇ ಪರಿಷ್ಕೃತ ಯೋಜನಾ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಿದ್ದು, ಅನುಮತಿ ಸಿಕ್ಕ ತಕ್ಷಣ ಯೋಜನೆಯನ್ನು ಮುಂದುವರಿಸಲಾಗುವುದು ಮತ್ತು ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಪ್ರಕಟಿಸಿದ್ದರು. ಅವರ ಈ ಹೇಳಿಕೆ ತಮಿಳುನಾಡು ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿತು. ಕರ್ನಾಟಕದ ಈ ಕ್ರಮವು ಕಾವೇರಿ ನೀರನ್ನು ನಂಬಿ ಬದುಕುತ್ತಿರುವ ತಮಿಳುನಾಡಿನ ಲಕ್ಷಾಂತರ ರೈತರಲ್ಲಿ ಆತಂಕವನ್ನು ಸೃಷ್ಟಿಸಿದೆ ಎಂದು ಸಿಎಂ ವಿಜಯ್ ಹೇಳಿದ್ದಾರೆ.

ಈ ವಿಷಯ ಇಷ್ಟೊಂದು ಸೂಕ್ಷ್ಮವಾಗಿರುವುದೇಕೆ..?

ಕಾವೇರಿ ನದಿ ನೀರು ಹಂಚಿಕೆ ವಿವಾದವು ದಕ್ಷಿಣ ಭಾರತದ ಅತ್ಯಂತ ಸೂಕ್ಷ್ಮ ವಿಷಯಗಳಲ್ಲಿ ಒಂದಾಗಿದೆ. ನೀರನ್ನು ಹೇಗೆ ಹಂಚಿಕೊಳ್ಳಬೇಕು ಎಂಬ ವಿಷಯದಲ್ಲಿ ತಮಿಳುನಾಡು, ಕರ್ನಾಟಕ, ಕರಾವಳಿ ರಾಜ್ಯ ಕೇರಳ ಮತ್ತು ಪುದುಚೇರಿ ದಶಕಗಳಿಂದ ಹೋರಾಡುತ್ತಿವೆ. ಈ ವಿವಾದವು ಈ ಹಿಂದೆ ಹಲವು ಬಾರಿ ಪ್ರತಿಭಟನೆಗಳು, ರಾಜಕೀಯ ಸಂಘರ್ಷಗಳು ಮತ್ತು ಎರಡು ರಾಜ್ಯಗಳ ನಡುವೆ ಹಿಂಸಾಚಾರಕ್ಕೂ ಕಾರಣವಾಗಿತ್ತು. ತಮಿಳುನಾಡಿಗೆ ತನ್ನ ಡೆಲ್ಟಾ ಪ್ರದೇಶದ ರೈತರನ್ನು ರಕ್ಷಿಸುವುದು ಮುಖ್ಯವಾದರೆ, ಕರ್ನಾಟಕಕ್ಕೆ ದಿನೇದಿನೆ ಬೆಳೆಯುತ್ತಿರುವ ಬೆಂಗಳೂರಿನ ಕುಡಿಯುವ ನೀರಿನ ಅಗತ್ಯವನ್ನು ಪೂರೈಸುವುದು ಅನಿವಾರ್ಯವಾಗಿದೆ.

ತಮಿಳುನಾಡು ಸಿಎಂ ವಿಜಯ್‌ಗೆ ವಿರೋಧ ಪಕ್ಷಗಳ ಒತ್ತಡ

ಮೆಕೇದಾಟು ವಿಷಯವು ತಮಿಳುನಾಡಿನ ಒಳಗೂ ಮುಖ್ಯಮಂತ್ರಿ ವಿಜಯ್​ಗೆ ಒಂದು ದೊಡ್ಡ ರಾಜಕೀಯ ಪರೀಕ್ಷೆಯಾಗಿದೆ. ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳ ಸರ್ಕಾರಗಳು ಕಾಂಗ್ರೆಸ್ ಪಕ್ಷದೊಂದಿಗೆ ರಾಜಕೀಯ ನಿಕಟತೆ ಹೊಂದಿರುವುದರಿಂದ, ಹೊಸ ಮುಖ್ಯಮಂತ್ರಿಗಳು ಕರ್ನಾಟಕದ ವಿರುದ್ಧ ಬಲವಾದ ನಿಲುವು ತಳೆಯುತ್ತಾರೆಯೇ ಎಂದು ವಿರೋಧ ಪಕ್ಷಗಳು ಪ್ರಶ್ನಿಸಿವೆ. ಎಐಎಡಿಎಂಕೆ, ಪಿಎಂಕೆ ಮತ್ತು ಡಿಎಂಕೆ ಸೇರಿದಂತೆ ಪ್ರಮುಖ ಪಕ್ಷಗಳ ನಾಯಕರು ತಮಿಳುನಾಡಿನ ನೀರಿನ ಹಕ್ಕುಗಳನ್ನು ರಕ್ಷಿಸಲು ಈ ಯೋಜನೆಯನ್ನು ಬಲವಾಗಿ ವಿರೋಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಒಂದು ವೇಳೆ ಅಣೆಕಟ್ಟು ನಿರ್ಮಾಣವಾದರೆ ತಮಿಳುನಾಡಿನ ಡೆಲ್ಟಾ ಜಿಲ್ಲೆಗಳು ತೀವ್ರ ನೀರಿನ ಅಭಾವ ಎದುರಿಸಬೇಕಾಗುತ್ತದೆ ಎಂದು ಎಡಪ್ಪಾಡಿ ಕೆ. ಪಳನಿಸ್ವಾಮಿ ಎಚ್ಚರಿಸಿದ್ದಾರೆ. ಹಾಗೆಯೇ, ಈ ಯೋಜನೆಯು ತಮಿಳುನಾಡಿನ ಕೋಟ್ಯಂತರ ಜನರ ಕುಡಿಯುವ ನೀರು ಮತ್ತು ನೀರಾವರಿ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಪಿಎಂಕೆ ನಾಯಕ ಅನ್ಬುಮಣಿ ರಾಮದಾಸ್ ಕಳವಳ ವ್ಯಕ್ತಪಡಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net