ಮೇಘಾಲಯ ಕಲ್ಲಿದ್ದಲು ಗಣಿ ಸ್ಫೋಟ: ಸಾವಿನ ಸಂಖ್ಯೆ 25 ಕ್ಕೆ ಏರಿಕೆ; ಮುಂದುವರಿದ ರಕ್ಷಣಾ ಕಾರ್ಯಾಚರಣೆ | Coal Mine

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಮೇಘಾಲಯದ ಕಲ್ಲಿದ್ದಲು ಗಣಿ ಸ್ಪೋಟ
  • ಮೃತ ಕಾರ್ಮಿಕರ ಸಂಖ್ಯೆ 25 ಕ್ಕೆ ಏರಿಕೆ
  • ಸ್ಪೋಟಗೊಂಡ ಗಣಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ಆರೋಪ
ಮೇಘಾಲಯ: ಮೇಘಾಲಯದ ಪೂರ್ವ ಜೈಂಟಿಯಾ ಬೆಟ್ಟಗಳಲ್ಲಿರುವ ಅಕ್ರಮ ಕಲ್ಲಿದ್ದಲು ಗಣಿ (Coal Mine) ಯಲ್ಲಿ ಶುಕ್ರವಾರ (ಫೆ.6) ಏಳು ಶವಗಳು ಪತ್ತೆಯಾಗಿದ್ದು, ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 25 ಕ್ಕೆ ಏರಿದೆ ಎಂದು ಪೊಲೀಸ್ ಮಹಾನಿರ್ದೇಶಕ ಐ. ನೊಂಗ್ರಾಂಗ್ ತಿಳಿಸಿದ್ದಾರೆ.
ಉಮ್ಸ್‌ಂಗತ್ ಗ್ರಾಮದ ಥಾಂಗ್ಸ್ಕು ಪ್ರದೇಶದಲ್ಲಿ ಗುರುವಾರ (ಫೆ.5) ಸ್ಫೋಟ ಸಂಭವಿಸಿದ್ದು, ಅಧಿಕಾರಿಗಳು ದೊಡ್ಡ ಪ್ರಮಾಣದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಆರಂಭಿಸಿದ ಹಿನ್ನಲೆ ಮೊದಲ ದಿನ ಹದಿನೆಂಟು ಶವಗಳು ಪತ್ತೆಯಾಗಿದ್ದವು. ಇಲ್ಲಿಯವರೆಗೆ, ಇಂದು ಇನ್ನೂ ಏಳು ಶವಗಳು ಪತ್ತೆಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 25 ಕ್ಕೆ ತಲುಪಿದೆ. ಇವುಗಳಲ್ಲಿ 12 ಶವಗಳನ್ನು ಗುರುತಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ನೊಂಗ್ರಾಂಗ್ ತಿಳಿಸಿದ್ದಾರೆ.
ಶೋಧ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ, ಮತ್ತು ಉಳಿದಿರುವ ಯಾವುದೇ ಬಲಿಪಶುಗಳನ್ನು ಕಂಡುಹಿಡಿಯಲು ಮತ್ತು ಗುರುತಿನ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಡಿಜಿಪಿ ಹೇಳಿದರು. ಜಿಲ್ಲಾಡಳಿತ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದರಿಂದ ಸೇನೆ ಮತ್ತು ವಾಯುಪಡೆಯು ಸನ್ನದ್ಧ ಸ್ಥಿತಿಯಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಫೋಟ ಹೇಗೆ ಸಂಭವಿಸಿತು?

ಮಾಹಿತಿ ಪ್ರಕಾರ, ಕಲ್ಲಿದ್ದಲು ಗಣಿಗಾರಿಕೆ ಕಾರ್ಯಾಚರಣೆಯ ಸಮಯದಲ್ಲಿ ಸ್ಫೋಟ ಸಂಭವಿಸಿದೆ ಎಂದು ಶಂಕಿಸಲಾಗಿದೆ, ಸ್ಪೋಟಗೊಂಡ ಗಣಿಯು ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿತ್ತು ಎಂದು ನಂಬಲಾಗಿದೆ. ಸ್ಫೋಟಕ್ಕೆ ಸ್ಪಷ್ಟ ಕಾರಣವೇನು ಎಂದು ಇನ್ನು ತಿಳಿದು ಬಂದಿಲ್ಲ, ಈ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸ್​ ಅಧಿಕಾರಿ ವಿಕಾಸ್ ಕುಮಾರ್ ತಿಳಿಸಿದ್ದಾರೆ.
ಇದಕ್ಕೂ ಮೊದಲು, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) 2014 ರಲ್ಲಿ ಮೇಘಾಲಯದಲ್ಲಿ ಪರಿಸರ ಹಾನಿ ಮತ್ತು ಸುರಕ್ಷತಾ ಅಪಾಯಗಳನ್ನು ಉಲ್ಲೇಖಿಸಿ, ಇಲಿರಂಧ್ರ ಕಲ್ಲಿದ್ದಲು ಗಣಿಗಾರಿಕೆ ಮತ್ತು ಇತರ ಅವೈಜ್ಞಾನಿಕ ಗಣಿಗಾರಿಕೆ ಪದ್ಧತಿಗಳ ಮೇಲೆ ನಿಷೇಧ ಹೇರಿತ್ತು. ಹಾಗೆಯೇ ಅಂತಹ ವಿಧಾನಗಳ ಮೂಲಕ ಹೊರತೆಗೆಯಲಾದ ಕಲ್ಲಿದ್ದಲಿನ ಅಕ್ರಮ ಸಾಗಣೆಯನ್ನು ನಿರ್ಬಂಧಿಸಿತ್ತು.

ಇಲಿರಂಧ್ರ ಗಣಿಗಾರಿಕೆ ಎಂದರೇನು?

ಇಲಿರಂಧ್ರ ಗಣಿಗಾರಿಕೆ ಎಂದರೆ 3 ರಿಂದ 4 ಅಡಿ ಎತ್ತರದ ಕಿರಿದಾದ ಸುರಂಗಗಳ ಮೂಲಕ ಕಾರ್ಮಿಕರು ಗಣಿಯನ್ನು ಪ್ರವೇಶಿಸಿ ಕಲ್ಲಿದ್ದಲನ್ನು ತೆಗೆಯುವುದಾಗಿದೆ. ಈ ಗಣಿಗಳ ಪ್ರವೇಶ ದ್ವಾರದಲ್ಲಿ ಕೇವಕ ಒಬ್ಬ ವ್ಯಕ್ತಿ ಮಾತ್ರ ತರಳಬಹುದಾದ ಕಾರಣ ಇದನ್ನು ಇಲಿರಂಧ್ರ ಗಣಿಗಾರಿಕೆ ಎಂದು ಕರೆಯುತ್ತಾರೆ. ಈ ಮಾದರಿಯ ಗಣಿಗಾರಿಕೆಯನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದ ಹಿನ್ನಲೆ ಭಾರತದಲ್ಲಿ ಇಲಿರಂಧ್ರ ಗಣಿಗಾರಿಕೆ ಗಣನೀಯವಾಗಿ ಕಡಿಮೆಯಾಗಿದೆ.

ಇಲಿರಂಧ್ರ ಗಣಿಗಾರಿಕೆಯ ಸವಾಲುಗಳು

ಇಲಿರಂಧ್ರ ಗಣಿಗಾರಿಕೆಯು ಕಾರ್ಮಿಕರ ಸುರಕ್ಷತೆ ಮತ್ತು ಪರಿಸರ ಎರಡರ ಮೇಲೂ ಅಪಾಯಕಾರಿಯಾಗಿದೆ. ಈ ಇಲಿರಂಧ್ರ ಗಣಿಗಾರಿಕೆಯಲ್ಲಿ ಕೆಲಸ ಮಾಡುವ ಹೆಚ್ಚಿನ ಕಾರ್ಮಿಕರ ಬಳಿ ಸರಿಯಾದ ಸುರಕ್ಷತಾ ಕಿಟ್‌ಗಳು ಇರುವುದಿಲ್ಲ. ಮತ್ತು ಈ ಗಣಿಗಳು ತೀರಾ ಚಿಕ್ಕದಾಗಿರುವುದರಿಂದ ಉಸಿರಾಡಲು ಸಹ ತೊಂದರೆಯಾಗುತ್ತದೆ.

2018 ಮೇಘಾಲಯ ಇಲಿರಂಧ್ರ ಗಣಿಗಾರಿಕೆ ದುರಂತ

ಈಗ ನಡೆದಿರುವ ಘಟನೆಯು 2018 ರಲ್ಲಿ ಮೇಘಾಲಯದ ಪೂರ್ವ ಜೈಂಟಿಯಾ ಬೆಟ್ಟಗಳಲ್ಲಿ ಸಂಭವಿಸಿದ ಕಲ್ಲಿದ್ದಲು ಗಣಿ ದುರಂತಕ್ಕೆ ಹೋಲಿಸಲಾಗುತ್ತಿದೆ. ಅಲ್ಲಿ ಸಹ 370 ಅಡಿ ಆಳದ ಪ್ರಪಾತಕ್ಕೆ ಸಿಲುಕಿ 15 ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದರು. 20 ಗಣಿಗಾರರಲ್ಲಿ ಕೇವಲ ಐದು ಮಂದಿ ಮಾತ್ರ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಮೃತರಲ್ಲಿ ಹೆಚ್ಚಿನ ಕಾರ್ಮಿಕರು ಅಸ್ಸಾಂ ಮೂಲದವರಾಗಿದ್ದು, ಅಸ್ಸಾಂ ಸರ್ಕಾರ ಮೃತರ ಕುಟುಂಬಗಳಿಗೆ 10 ಲಕ್ಷ ಪರಿಹಾರವನ್ನು ಘೋಷಿಸಿದ್ದು, ಇಂತಹ ಅಪಘಾತಗಳನ್ನು ತಡೆಗಟ್ಟಲು 220 ಅಕ್ರಮ ಗಣಿಗಳನ್ನು ಮುಚ್ಚುವುದಾಗಿ ಪ್ರತಿಜ್ಞೆ ಮಾಡಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net