ಅಯೋಧ್ಯೆಯ ರಾಮ ಮಂದಿರದ ಬಳಿಯ ಯಜ್ಞಶಾಲೆಯ ಬಳಿ ಭಾರೀ ಅಗ್ನಿ ಅವಘಡ; ಹೊತ್ತಿ ಉರಿದ ಯಜ್ಞಶಾಲೆ | Ayodhya

ಘಟನೆಯ ಸ್ಥಳ
ಘಟನೆಯ ಸ್ಥಳ
Published on
ಲಖನೌ: ಉತ್ತರ ಪ್ರದೇಶದ ಪ್ರಮುಖ ಹಿಂದೂ ಧಾರ್ಮಿಕ ಕೇಂದ್ರವಾಗಿರುವ ಅಯೋಧ್ಯೆಯ ರಾಮಮಂದಿರದ ಬಳಿಯ ಯಜ್ಞಶಾಲೆಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಸುಮಾರು ಒಂದು ಎಕರೆಯಷ್ಟು ನಾಶವಾಗಿ, ಸ್ಥಳದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ.
ಬೆಂಕಿಯ ಜ್ವಾಲೆಯ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಬೆಂಕಿಯು ನಿಯಂತ್ರಣಕ್ಕೆ ಬಾರದೆ ಉರಿಯುತ್ತಿರುವುದನ್ನು ತೋರಿಸುತ್ತವೆ. ಒಂಬತ್ತು ದಿನಗಳ ಮಹಾಯಜ್ಞ ಮುಗಿದ ಸ್ವಲ್ಪ ಸಮಯದ ಬಳಿಕ, ಜನರು ಖಾಲಿಯಾಗುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.
ಮಾಹಿತಿ ಪ್ರಕಾರ, ಮಾರ್ಚ್ 20ರಿಂದ 28ರವರೆಗೆ ಉತ್ತರ ಪ್ರದೇಶದ ಸಾರಿಗೆ ಸಚಿವ ದಯಾಶಂಕರ್ ಸಿಂಗ್ ಅವರ ನೇತೃತ್ವದಲ್ಲಿ ಮಹಾಯಜ್ಞ ನಡೆದಿದ್ದು, ಇಂದು ಬೆಳಿಗ್ಗೆ 11:30ರ ಸುಮಾರಿಗೆ ಪೂರ್ಣಾಹುತಿಯೊಂದಿಗೆ ಆಚರಣೆ ಮುಕ್ತಾಯವಾಯಿತು, ನಂತರ ಭಕ್ತರು ಚದುರಿದ್ದಾರೆ. ಆ ಬಳಿಕ ಬೆಂಕಿ ಹೊತ್ತಿ ಉರಿದು ಲಕ್ಷಾಂತರ ರೂ.ಗಳ ಆಸ್ತಿ ನಷ್ಟವುಂಟಾಗಿದೆ.
ಘಟನಾ ಸ್ಥಳವು ರಾಮ ಮಂದಿರದಿಂದ ಕೇವಲ 800 ಮೀಟರ್ ದೂರದಲ್ಲಿದೆ. ಪ್ರಮುಖ ಧಾರ್ಮಿಕ ಹೆಗ್ಗುರುತಿಗೆ ಹತ್ತಿರದಲ್ಲಿರುವುದರಿಂದ ಘಟನೆಯಿಂದ ಕಳವಳ ವ್ಯಕ್ತವಾಗಿದೆ. ಬೆಂಕಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ. ಮಾಹಿತಿ ತಿಳಿದ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net