_1784225023503.webp?w=480&auto=format%2Ccompress&fit=max)
_1784225023503.webp?w=480&auto=format%2Ccompress&fit=max)
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಗ್ರೂಪ್ ‘ಎ’ ವಿಭಾಗದ ವಿಜ್ಞಾನಿಗಳು ಮತ್ತು ತಾಂತ್ರಿಕ ಸಿಬ್ಬಂದಿ ಸರಣಿ ರಾಜೀನಾಮೆ ಹಾಗೂ ಸ್ವಯಂ ನಿವೃತ್ತಿ ಮೂಲಕ ಸಂಸ್ಥೆಯಿಂದ ಹೊರನಡೆಯುತ್ತಿರುವುದನ್ನು ತಡೆಯಲು ಕೇಂದ್ರ ಬಾಹ್ಯಾಕಾಶ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ.
ಇಸ್ರೋದ ಪ್ರಮುಖ ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳಿಗೆ ಜುಲೈ 14ರಂದು ಹೊಸ ಅಧಿಕೃತ ಜ್ಞಾಪನಾ ಪತ್ರ ರವಾನಿಸಲಾಗಿದ್ದು, ವಿಜ್ಞಾನಿಗಳ ನಿರ್ಗಮನ ನಿಯಮಗಳನ್ನು ಬಿಗಿಗೊಳಿಸಲಾಗಿದೆ. ಬೆಂಗಳೂರಿನ ಯು.ಆರ್.ರಾವ್ ಉಪಗ್ರಹ ಕೇಂದ್ರ (ಯುಆರ್ಎಸ್ಸಿ) ಮತ್ತು ತಿರುವನಂತಪುರಂನ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (ವಿಎಸ್ಎಸ್ಸಿ) ಸೇರಿದಂತೆ ದೇಶದ ಪ್ರಮುಖ ಇಸ್ರೋ ಕೇಂದ್ರಗಳಿಗೆ ಈ ನಿರ್ದೇಶನ ನೀಡಲಾಗಿದೆ. ಭಾರತದ ಅತ್ಯಂತ ಪ್ರತಿಷ್ಠಿತ ಮಾನವಸಹಿತ ಬಾಹ್ಯಾಕಾಶ ಯೋಜನೆಯಾದ ಗಗನಯಾನ ಮತ್ತು ಇತರ ಪ್ರಮುಖ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿರುವ ಗ್ರೂಪ್ ’ಎ’ ವಿಜ್ಞಾನಿಗಳು ಹಾಗೂ ತಾಂತ್ರಿಕ ಸಿಬ್ಬಂದಿಯ ರಾಜೀನಾಮೆ ಅಥವಾ ಸ್ವಯಂ ನಿವೃತ್ತಿ ಅರ್ಜಿಗಳನ್ನು ಇನ್ನು ಮುಂದೆ ಸಹಜ ಪ್ರಕ್ರಿಯೆಯಾಗಿ ಸ್ವೀಕರಿಸಬಾರದು ಎಂದು ಸೂಚಿಸಲಾಗಿದೆ.
ಈ ಸಾಮೂಹಿಕ ನಿರ್ಗಮನವನ್ನು ಗಂಭೀರವಾಗಿ ಪರಿಗಣಿಸಿರುವ ಬಾಹ್ಯಾಕಾಶ ಇಲಾಖೆ, ಇನ್ನು ಮುಂದೆ ಇಂತಹ ಯಾವುದೇ ರಾಜೀನಾಮೆ ಅಥವಾ ಸ್ವಯಂನಿವೃತ್ತಿ ವಿನಂತಿಗಳು ಬಂದರೆ, ವಿಜ್ಞಾನಿ ಅಥವಾ ಇಂಜಿನಿಯರ್ ದರ್ಜೆಯ ಕೆಳಗಿನ ಅಧಿಕಾರಿಗಳಾಗಿದ್ದರೂ ಆಯಾ ಕೇಂದ್ರಗಳ ನಿರ್ದೇಶಕರ ಸ್ಪಷ್ಟ ಶಿಫಾರಸುಗಳೊಂದಿಗೆ ಅಂತಿಮ ನಿರ್ಧಾರಕ್ಕಾಗಿ ಬಾಹ್ಯಾಕಾಶ ಇಲಾಖೆಗೆ ಕಳುಹಿಸಬೇಕು ಎಂದು ಆದೇಶಿಸಲಾಗಿದೆ. ಇದು 2020ರಲ್ಲಿ ಮಾಡಲಾಗಿದ್ದ ಆಡಳಿತಾತ್ಮಕ ನಿಯಮವನ್ನು ರದ್ದುಗೊಳಿಸಿದೆ. ಅಂದು ರಾಜೀನಾಮೆ ಅಂಗೀಕರಿಸುವ ಅಧಿಕಾರ ಕೇಂದ್ರದ ನಿರ್ದೇಶಕರಿಗೆ ನೀಡಲಾಗಿತ್ತು.
ಇತ್ತೀಚಿನ ದಿನಗಳಲ್ಲಿ ಇಸ್ರೋದಿಂದ ನೂರಕ್ಕೂ ಹೆಚ್ಚು ನುರಿತ ಸಿಬ್ಬಂದಿ ಹೊರನಡೆದಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದರಲ್ಲಿ ಗಗನಯಾನ ಯೋಜನೆಗೆ ಬಳಸಲಾಗುವ ಎಲ್ವಿಎಂ3 ರಾಕೆಟ್ ಯೋಜನೆಯ ನಿರ್ದೇಶಕರಾಗಿದ್ದ ಹಿರಿಯ ವಿಜ್ಞಾನಿ ವಿಕ್ಟರ್ ಜೋಸೆಫ್ ಟಿ. ಅವರ ರಾಜೀನಾಮೆಯೂ ಸೇರಿದೆ. ಅವರು ಕೇವಲ 13 ತಿಂಗಳು ಸೇವೆ ಸಲ್ಲಿಸಿ ಫೆಬ್ರವರಿಯಲ್ಲಿ ಹೊರನಡೆದಿದ್ದಾರೆ. ಹೀಗೆ ಹೊರಬರುತ್ತಿರುವ ವಿಜ್ಞಾನಿಗಳಲ್ಲಿ ಬಹುತೇಕರು ಖಾಸಗಿ ಬಾಹ್ಯಾಕಾಶ ಸ್ಟಾರ್ಟಪ್ಗಳನ್ನು ಸೇರುತ್ತಿದ್ದಾರೆ.
ಕೇಂದ್ರ ಸರ್ಕಾರ 2020ರಲ್ಲಿ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಯವರಿಗೆ ಮುಕ್ತಗೊಳಿಸಿ, 2023ರಲ್ಲಿ ಭಾರತೀಯ ಬಾಹ್ಯಾಕಾಶ ನೀತಿಯನ್ನು ತಂದ ನಂತರ ಈ ಕ್ಷೇತ್ರ ಭಾರಿ ಬೆಳವಣಿಗೆ ಕಂಡಿದೆ. ಪ್ರಸ್ತುತ ಭಾರತದಲ್ಲಿ 400ಕ್ಕೂ ಹೆಚ್ಚು ನೋಂದಾಯಿತ ಬಾಹ್ಯಾಕಾಶ ಸ್ಟಾರ್ಟಪ್ಗಳಿದ್ದು, ಕೋಟ್ಯಂತರ ರೂಪಾಯಿ ಹೂಡಿಕೆ ಆಕರ್ಷಿಸುತ್ತಿವೆ. ಪಿಕ್ಸೆಲ್, ಧ್ರುವ ಸ್ಪೇಸ್, ಸ್ಕೈರೂಟ್ ಏರೋಸ್ಪೇಸ್ ಮತ್ತು ಬೆಲ್ಲಾಟ್ರಿಕ್ಸ್ ಏರೋಸ್ಪೇಸ್ನಂಥ ಕಂಪನಿಗಳು ಮುಂಚೂಣಿಯಲ್ಲಿವೆ.
ವಿಜ್ಞಾನಿಗಳು-ಇಂಜಿನಿಯರ್ಗಳ ಇತ್ತೀಚಿನ ಈ ಸರಣಿ ನಿರ್ಗಮನಗಳು ಏಕೆ ಸಂಭವಿ ಸುತ್ತಿವೆ ಎಂಬುದರ ಕುರಿತು ಬಾಹ್ಯಾಕಾಶ ಇಲಾಖೆ ಅಥವಾ ಇಸ್ರೋ ಅಧಿಕೃತವಾಗಿ ಯಾವುದೇ ಕಾರಣ ನೀಡಿಲ್ಲ. ಆದರೆ, ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದ ತ್ವರಿತ ಬೆಳವಣಿಗೆಯೇ ಇದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತಿದೆ.
ಇಸ್ರೋದಲ್ಲಿ ವಿಜ್ಞಾನಿಗಳ ಸಾಮೂಹಿಕ ರಾಜೀನಾಮೆ ಹಾಗೂ ನಿರ್ಗಮನ ನಿಯಮಗಳನ್ನು ಬಿಗಿಗೊಳಿಸಿರುವ ಕೇಂದ್ರದ ಆದೇಶದ ಕುರಿತು ಎದ್ದಿರುವ ವಿವಾದವನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಜಿತೇಂದ್ರ ಸಿಂಗ್ ತಳ್ಳಿಹಾಕಿದ್ದು, ಇಸ್ರೋದಲ್ಲಿ ಅನೇಕರು ಬರುತ್ತಾರೆ ಮತ್ತು ಹೋಗುತ್ತಾರೆ, ಇದರಲ್ಲಿ ಯಾವುದೇ ವಿವಾದವಿಲ್ಲ ಎಂದಿದ್ದಾರೆ. ಇಸ್ರೋ ಹೊರಡಿಸಿರುವ ಹೊಸ ಮಾರ್ಗಸೂಚಿ ಕೇವಲ ಆಡಳಿತಾತ್ಮಕ ಕಾರಣಗಳಿಗಾಗಿ ಹೊರತು ಬೇರೆ ಯಾವುದೇ ಕಾರಣಕ್ಕಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ಇಂಥ ರಾಜೀನಾಮೆ ವಿನಂತಿಗಳ ಹೆಚ್ಚಳವು ರಾಷ್ಟ್ರೀಯ ಪ್ರಾಮುಖ್ಯತೆಯ ಯೋಜನೆಗಳ ಅನುಷ್ಠಾನದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದೆ. ಇಂತಹ ಮಿಷನ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜ್ಞಾನಿಗಳು ವಿಶೇಷ ಪರಿಣತಿ ಹೊಂದಿರುತ್ತಾರೆ, ಅವರಿಗೆ ಪರ್ಯಾಯವಾಗಿ ವಿಜ್ಞಾನಿಗಳನ್ನು ಹುಡುಕುವುದು ಕಷ್ಟಕರವಾಗಿರುತ್ತದೆ. ಹೀಗಾಗಿ ಅವರ ಹಠಾತ್ ನಿರ್ಗಮನವು ಮಿಷನ್ನ ಕಾಲಮಿತಿ ಮತ್ತು ನಿರಂತರತೆಗೆ ಸಂಭವನೀಯ ಅಪಾಯ ಉಂಟುಮಾಡುತ್ತದೆ ಎಂಬುದು ಬಾಹ್ಯಾಕಾಶ ಇಲಾಖೆಯ ಲೆಕ್ಕಾಚಾರ.
ವಿಜ್ಞಾನಿಗಳ ರಾಜೀನಾಮೆ ಮಾತ್ರವಲ್ಲದೆ, ಇಸ್ರೋ ಇತ್ತೀಚೆಗೆ ಕೆಲವು ಮಿಷನ್ಗಳಲ್ಲಿ ಹಿನ್ನಡೆ ಅನುಭವಿಸಿದೆ. ವಿಶ್ವಾಸಾರ್ಹ ಪಿಎಸ್ಎಲ್ವಿ ರಾಕೆಟ್ ಒಂದು ವರ್ಷದ ಅವಧಿಯಲ್ಲಿ 2 ಬಾರಿ ಸತತ ವೈಫಲ್ಯ ಕಂಡಿದೆ. ಮೇ ತಿಂಗಳಲ್ಲಿ ಪಿಎಸ್ಎಲ್ವಿಸಿ61 ಮತ್ತು ಇತ್ತೀಚೆಗೆ ಜನವರಿಯಲ್ಲಿ ಇಒಎಸ್ಎನ್1 ಉಪಗ್ರಹ ಹೊತ್ತೊಯ್ಯುತ್ತಿದ್ದ ಪಿಎಸ್ಎಲ್ವಿಸಿ62 ರಾಕೆಟ್ ನಿಗದಿತ ಪಥದಿಂದ ವಿಚಲಿತಗೊಂಡು ವಿಫಲವಾಗಿದ್ದವು. ಅದಾಗ್ಯೂ, ಇಸ್ರೋ ಈ ಹಿನ್ನಡೆಗಳಿಂದ ಪಾಠ ಕಲಿಯುತ್ತ ತನ್ನ ಮುಂಬರುವ ಬೃಹತ್ ಯೋಜನೆಗಳ ಮೇಲೆ ಗಮನ ಕೇಂದ್ರೀಕರಿಸಿದೆ. ಭಾರತವನ್ನು ಜಗತ್ತಿನ ನಾಲ್ಕನೇ ಮಾನವಸಹಿತ ಬಾಹ್ಯಾಕಾಶ ರಾಷ್ಟ್ರವನ್ನಾಗಿ ಮಾಡುವ ಗಗನಯಾನ, ಚಂದ್ರನಿಂದ ಮಣ್ಣಿನ ಮಾದರಿ ತರುವ ಚಂದ್ರಯಾನ-4, ಭಾರತದ ಸ್ವಂತ ಬಾಹ್ಯಾಕಾಶ ನಿಲ್ದಾಣ ಮತ್ತು ಮಂಗಳನ ಅನ್ವೇಷಣೆೆಯ ‘ಮಂಗಳಯಾನ2’ ಯೋಜನೆಗಳಿಗೆ ಇಸ್ರೋ ಸಜ್ಜಾಗುತ್ತಿದೆ.