ಭಿಕ್ಷಾಟನೆಯಿಂದ ಸಾಮ್ರಾಜ್ಯ ಕಟ್ಟಿದ ಮಂಗಿಲಾಲ್: ಈತನ ಬಳಿ ಇದೆ 3 ಮನೆ, 3 ಆಟೋ ಮತ್ತು ಐಷಾರಾಮಿ ಕಾರು!

Mangilal
Mangilal
Published on
ಇಂದೋರ್: ಸಾಮಾನ್ಯವಾಗಿ ಭಿಕ್ಷುಕರು ಅಂದ ತಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಹರಿದ ಬಟ್ಟೆ, ಹಸಿವಿನಿಂದ ಬಳಲುವ ಮುಖಗಳು. ಆದರೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಒಬ್ಬ ಭಿಕ್ಷುಕನಿದ್ದಾನೆ. ಆತನ ಆಸ್ತಿ ವಿವರ ಕೇಳಿದರೆ ನೀವು ದಂಗಾಗುವುದು ಗ್ಯಾರಂಟಿ. ಆತನ ಹೆಸರೇ ಮಂಗಿಲಾಲ್. ಕಾಲುಗಳ ಸ್ವಾಧೀನವಿಲ್ಲದಿದ್ದರೂ, ಭಿಕ್ಷಾಟನೆಯ ಮೂಲಕವೇ ಈತ ಇಂದು ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ಪಾಸ್ತಿಗಳನ್ನು ಹೊಂದಿದ್ದಾನೆ.

ಹೀಗಿದೆ ಮಂಗಿಲಾಲ್ ಹಿನ್ನೆಲೆ

ಮಂಗಿಲಾಲ್ ಅವರಿಗೆ ಜನ್ಮತಃ ಕಾಲುಗಳ ಸ್ವಾಧೀನವಿಲ್ಲ. ಎದ್ದು ನಡೆಯಲು ಸಾಧ್ಯವಾಗದ ಕಾರಣ ಇವರಿಗೆ ವ್ಹೀಲ್ ಚೇರ್ ಅನಿವಾರ್ಯ. ಓದು-ಬರಹ ಕಲಿಯಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದ ಮಂಗಿಲಾಲ್, ಜೀವನೋಪಾಯಕ್ಕಾಗಿ ಅಂತಿಮವಾಗಿ ಆರಿಸಿಕೊಂಡಿದ್ದು ಭಿಕ್ಷಾಟನೆಯನ್ನು. ಆದರೆ ಅವರ ಭಿಕ್ಷಾಟನೆಯ ರೀತಿ ಇತರರಿಗಿಂತ ಭಿನ್ನ. ಅವರು ಯಾರ ಬಳಿಯೂ ಕೈಚಾಚಿ ಹಣ ಕೇಳುವುದಿಲ್ಲ. ಅವರ ದಯನೀಯ ಸ್ಥಿತಿ ಮತ್ತು ಅಸಹಾಯಕತೆಯನ್ನು ಕಂಡು ಜನರೇ ಸ್ವಯಂಪ್ರೇರಿತರಾಗಿ ಹಣ ಮತ್ತು ನೆರವು ನೀಡುತ್ತಾರೆ.

ಶ್ರೀಮಂತ ಭಿಕ್ಷುಕನ ಆಸ್ತಿ ವಿವರ

ಹನಿ ಹನಿ ಕೂಡಿದರೆ ಹಳ್ಳ ಎಂಬಂತೆ, ಜನರು ನೀಡಿದ ಈ ಸಹಾಯದ ಹಣವನ್ನು ಮಂಗಿಲಾಲ್ ವ್ಯರ್ಥ ಮಾಡಲಿಲ್ಲ. ಭಿಕ್ಷಾಟನೆಯಿಂದ ಬಂದ ಹಣವನ್ನು ಚಾಣಾಕ್ಷತನದಿಂದ ಹೂಡಿಕೆ ಮಾಡಿದ ಇವರು, ಇಂದು ಇಂದೋರ್ ನಗರದಲ್ಲಿ ಬರೋಬ್ಬರಿ ಮೂರು ಮನೆಗಳ ಮಾಲೀಕರಾಗಿದ್ದಾರೆ.
ಇಷ್ಟಕ್ಕೇ ಇವರ ಶ್ರೀಮಂತಿಕೆ ನಿಲ್ಲುವುದಿಲ್ಲ. ಮಂಗಿಲಾಲ್ ಹೆಸರಿನಲ್ಲಿ ಮೂರು ಆಟೋ ರಿಕ್ಷಾಗಳಿವೆ. ವಿಶೇಷವೆಂದರೆ, ಇವುಗಳನ್ನು ನಡೆಸಲು ಅವರು ಚಾಲಕರನ್ನೂ ನೇಮಿಸಿದ್ದಾರೆ. ಇದರ ಜೊತೆಗೆ, ವೈಯಕ್ತಿಕ ಓಡಾಟಕ್ಕಾಗಿ ಒಂದು ಮಾರುತಿ ಸುಜುಕಿ ಸ್ವಿಫ್ಟ್ ಡಿಸೈರ್ ಕಾರನ್ನು ಕೂಡ ಹೊಂದಿದ್ದಾರೆ. ಇಂದೋರ್‌ನ ರಸ್ತೆಗಳಲ್ಲಿ ಭಿಕ್ಷಾಟನೆ ಮಾಡುವ ಇವರು, ಸಂಜೆ ಹೊತ್ತಿಗೆ ತಮ್ಮ ಐಷಾರಾಮಿ ಜೀವನದತ್ತ ಮರಳುತ್ತಾರೆ.

ಕಾಯಕವೇ ಭಿಕ್ಷಾಟನೆ

ಮನೆಯಲ್ಲಿ ಸಕಲ ಸೌಲಭ್ಯಗಳಿದ್ದರೂ, ಮಂಗಿಲಾಲ್ ಇಂದಿಗೂ ಭಿಕ್ಷಾಟನೆಯನ್ನು ಬಿಟ್ಟಿಲ್ಲ. ಇಂದೋರ್‌ನ ಪ್ರಮುಖ ವೃತ್ತಗಳಲ್ಲಿ ವ್ಹೀಲ್ ಚೇರ್ ಮೇಲೆ ಕುಳಿತು ನೆರವು ಯಾಚಿಸುವುದು ಅವರ ದೈನಂದಿನ ಕಾಯಕವಾಗಿದೆ. ಅಂಗವೈಕಲ್ಯವು ಬದುಕಲು ಅಡ್ಡಿಯಾಗಬಹುದು ಎಂದು ಭಾವಿಸುವವರಿಗೆ ಮಂಗಿಲಾಲ್ ಅವರ ಈ 'ಉದ್ಯಮ' ಅಚ್ಚರಿ ಮೂಡಿಸಿದೆ. ಒಬ್ಬ ಭಿಕ್ಷುಕ ಇಷ್ಟೊಂದು ಆಸ್ತಿ ಮಾಡಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ. ತಮ್ಮ ದೈಹಿಕ ಸವಾಲುಗಳನ್ನೇ ಬಂಡವಾಳವಾಗಿಸಿಕೊಂಡು, ಭಿಕ್ಷಾಟನೆಯನ್ನೇ ಒಂದು ಲಾಭದಾಯಕ ವೃತ್ತಿಯನ್ನಾಗಿ ಪರಿವರ್ತಿಸಿರುವ ಮಂಗಿಲಾಲ್ ಅವರ ಕಥೆ ಈಗ ಇಡೀ ದೇಶಾದ್ಯಂತ ಸದ್ದು ಮಾಡುತ್ತಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net