ದುರಂತ ಅಂತ್ಯ ಕಂಡ ಡೈವೋರ್ಸ್ ಜಗಳ!...ಕಣ್ಣೆದುರೇ ತಂದೆ ಸಾವಿಗೆ ಶರಣಾಗುವುದನ್ನು ಮೊಬೈಲ್‌ನಲ್ಲಿ ಸೆರೆಹಿಡಿದ ಮಗ! Divorce Dispute
Divorce Dispute ಸಾಂದರ್ಭಿಕ ಚಿತ್ರ
Published on:
Copied
Follow Us
ಚಂಡೀಗಢ: ಪತ್ನಿ ವಿಚ್ಛೇದನ (Divorce Dispute) ಕೋರಿದ ಹಿನ್ನೆಲೆಯಲ್ಲಿ ಮನನೊಂದ ಉದ್ಯೋಗಿಯೊಬ್ಬರು ಹರಿಯಾಣದ ಗುರುಗ್ರಾಮ್‌ನಲ್ಲಿ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಆದರೆ, ಇದು ಆತ್ಮಹತ್ಯೆಯಲ್ಲ, ಪತ್ನಿಯೇ ಯೋಜನೆ ರೂಪಿಸಿ ನಡೆಸಿದ ಕೊಲೆ ಎಂದು ಮೃತನ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಮೃತರನ್ನು ಮೂಲತಃ ಪಂಜಾಬ್‌ನ ಅಮೃತಸರದ ನಿವಾಸಿ, ಖಾಸಗಿ ಕಂಪನಿಯ (ಡೆನ್ಸೊ) ಅಸೋಸಿಯೇಟ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂಜೀವ್ ಯಾದವ್ (36) ಎಂದು ಗುರುತಿಸಲಾಗಿದೆ.
ಪೋಲಿಸರು ನೀಡಿದ ಮಾಹಿತಿಯ ಪ್ರಕಾರ, ಗುರುವಾರ (ಜು.30) ಸಂಜೀವ್ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಘಟನೆ ನಡೆದ ಸಮಯದಲ್ಲಿ ಮನೆಯಲ್ಲಿ ಅವರ ಪತ್ನಿ ಮನ್‌ಪ್ರೀತ್ ಕೌರ್ ಹಾಗೂ ಅವರ ಏಳು ವರ್ಷದ ಮಗ ಮಾತ್ರ ಇದ್ದರು. ತಂದೆ ಫ್ಯಾನ್‌ಗೆ ನೇಣು ಹಾಕಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಮಗ ಅದನ್ನು ಮೊಬೈಲ್‌ನಲ್ಲಿ ವೀಡಿಯೊ ರೆಕಾರ್ಡ್ ಮಾಡಿದ್ದಾನೆ ಎಂದು ಹೇಳಲಾಗಿದ್ದು, ತಕ್ಷಣ ಪತ್ನಿ ನೆರೆಹೊರೆಯವರನ್ನು ಮತ್ತು ಕುಟುಂಬಸ್ಥರನ್ನು ಸಹಾಯಕ್ಕಾಗಿ ಕರೆದಿದ್ದಾರೆ ಎನ್ನಲಾಗಿದೆ.
ಆದರೆ, ಈ ಸಾವಿನ ಸುತ್ತ ಹಲವು ಅನುಮಾನಾಸ್ಪದ ಬೆಳವಣಿಗೆ ಕಂಡುಬಂದಿದ್ದು, ಮೃತನ ತಂದೆ ರಾಮಸೇವಕ್ ಯಾದವ್ ಮತ್ತು ಸಹೋದರಿ ಕಿರಣ್ ಪೊಲೀಸರಿಗೆ ದೂರು ನೀಡಿದ್ದಾರೆ. ಸಂಜೀವ್ ಮತ್ತು ಮನ್‌ಪ್ರೀತ್ ಕೌರ್ 2018 ರಲ್ಲಿ ಪ್ರೇಮವಿವಾಹವಾಗಿದ್ದರು. 2019 ರಲ್ಲಿ ಮಗ ಜನಿಸಿದ ಬಳಿಕ ದಂಪತಿ ನಡುವೆ ವಿವಾದಗಳು ಆರಂಭವಾಗಿದ್ದವು. ಇತ್ತೀಚಿಗೆ ಜಗಳ ತೀವ್ರಗೊಂಡ ಬೆನ್ನಲ್ಲೇ ಮನ್‌ಪ್ರೀತ್ ವಿಚ್ಚೇದನಕ್ಕೆ ಪಟ್ಟು ಹಿಡಿದಿದ್ದರು. ಈ ಕುಟುಂಬ ಕಲಹವೇ ದುರಂತಕ್ಕೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮೃತನ ಸಹೋದರಿ ಕಿರಣ್ ಮಾತನಾಡಿ, ನಮ್ಮ ಸಹೋದರ 100 ಕೆಜಿಗಿಂತ ಹೆಚ್ಚು ತೂಕ ಹೊಂದಿದ್ದು, ಆತ ಫ್ಯಾನ್‌ಗೆ ನೇಣು ಬಿಗಿದುಕೊಳ್ಳಲು ಸಾಧ್ಯವೇ ಇಲ್ಲ. ಮಗ ರೆಕಾರ್ಡ್ ಮಾಡಿದ್ದಾನೆ ಎನ್ನಲಾದ ವೀಡಿಯೊ ಕೂಡ ತೀವ್ರ ಅನುಮಾನಾಸ್ಪದವಾಗಿದೆ. ವಿಚ್ಛೇದನದ ಕಾರಣಕ್ಕೆ ಪತ್ನಿಯೇ ತನ್ನ ಸಹಚರರೊಂದಿಗೆ ಸೇರಿ ಪತಿಯನ್ನು ಹತ್ಯೆ ಮಾಡಿ, ಆತ್ಮಹತ್ಯೆಯ ಬಣ್ಣ ಬಳಿಯಲು ಯತ್ನಿಸುತ್ತಿದ್ದಾಳೆ ಎಂದು ಹೇಳಿದ್ದಾರೆ.
ಸದ್ಯ ಕುಟುಂಬಸ್ಥರ ದೂರಿನ ಆಧಾರದ ಮೇಲೆ ಗುರುಗ್ರಾಮ್ ಪೊಲೀಸರು ಪತ್ನಿ ಮನ್‌ಪ್ರೀತ್ ಕೌರ್ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪೊಲೀಸ್ ಮಹೇಂದರ್ ಸಿಂಗ್, "ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಮೃತನ ದೇಹದ ತೂಕ ಹಾಗೂ ಘಟನೆಯ ವೀಡಿಯೊ ಸಾಕ್ಷ್ಯಗಳನ್ನು ಆಧರಿಸಿ, ಕೊಲೆ ಮತ್ತು ಆತ್ಮಹತ್ಯೆ ಎರಡೂ ಕೋನಗಳಿಂದ ತನಿಖೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ಪೂರ್ಣ ವರದಿ ಬಂದ ನಂತರವೇ ಸಾವಿಗೆ ನಿಖರ ಕಾರಣ ತಿಳಿಯಲಿದ್ದು, ಅದರಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ (ಏಜೆನ್ಸೀಸ್).