ಆಟೋದಲ್ಲಿ ಬಿಟ್ಟುಹೋಗಿದ್ದ ವಾಲೆಟ್ ಸುರಕ್ಷಿತವಾಗಿ ತಲುಪಿಸಿದ ರ್‍ಯಾಪಿಡೋ ಚಾಲಕ: ನರೇಶ್ ಪ್ರಾಮಾಣಿಕತೆಗೆ ನೆಟ್ಟಿಗರ ಸಲಾಂ! Rapido Driver

Rapido Driver ಸಾಂದರ್ಭಿಕ ಚಿತ್ರ
Rapido Driver ಸಾಂದರ್ಭಿಕ ಚಿತ್ರ
Published on

ಹೈದರಾಬಾದ್​: ನಗರದ ಕೊಂಡಾಪುರದ ನಿವಾಸಿ ಪಾರ್ವ್ ಶರ್ಮಾ ಅವರಿಗೆ ತೀವ್ರ ಜ್ವರ ಬಂದ ಹಿನ್ನಲೆ ಸ್ವತಃ ಅವರೇ ವಾಹನ ಚಲಾಯಿಸಲು ಸಾಧ್ಯವಾಗದ ಕಾರಣ, ಪತ್ನಿಯೊಂದಿಗೆ ಕಿಮ್ಸ್​ ಆಸ್ಪತ್ರೆಗೆ ಹೋಗಲು ರ್‍ಯಾಪಿಡೋ ಆಟೋ ಬುಕ್ (Rapido Driver) ಮಾಡಿದ್ದರು. ಈ ಪ್ರಯಾಣದ ವೇಳೆ ನಡೆದ ಮಾನವೀಯ ಘಟನೆಯೊಂದನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಏನಿದು ಘಟನೆ?

ಶರ್ಮಾ ಅವರು ಆಸ್ಪತ್ರೆಯಲ್ಲಿ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದ ನಂತರ ಔಷಧಗಳನ್ನು ಪಡೆದುಕೊಂಡು ಜೇಬಿನಲ್ಲಿದ್ದ ವಾಲೆಟ್ ಇಲ್ಲದಿರುವುದು ಕಂಡುಕೊಂಡಿದ್ದಾರೆ. ಈಗಾಗಲೇ ಜ್ವರ, ತಲೆನೋವು ಹಾಗೂ ಮೈಕೈ ನೋವಿನಿಂದ ಬಳಲುತ್ತಿದ್ದ ಅವರಿಗೆ ವಾಲೆಟ್ ಕಳೆದುಹೋಗಿರುವುದು ತೀವ್ರ ಆತಂಕಕ್ಕೆ ದೂಡಿತ್ತು. ತಕ್ಷಣವೇ ಯೋಚಿಸಿದ ಅವರು ತಮ್ಮನ್ನು ಆಸ್ಪತ್ರೆಗೆ ತಲುಪಿಸಿದ್ದ ರ್‍ಯಾಪಿಡೋ ಚಾಲಕ ನರೇಶ್ ಅವರಿಗೆ ಕರೆ ಮಾಡಿ ಆಟೋದ ಹಿಂಬದಿಯ ಸೀಟ್ ಪರಿಶೀಲಿಸಲು ವಿನಂತಿಸಿದರು.
ಚಾಲಕ ಪರಿಶೀಲಿಸಿದಾಗ ವಾಲೆಟ್ ಆಟೋದಲ್ಲೇ ಬಿದ್ದಿರುವುದು ಕಂಡುಬಂದಿದೆ. ತಕ್ಷಣವೇ ವಾಲೆಟ್ ಅನ್ನು ಸುರಕ್ಷಿತವಾಗಿ ಇರಿಸಿಕೊಂಡಿರುವುದಾಗಿ ಶರ್ಮಾ ಅವರಿಗೆ ತಿಳಿಸಿದ ನರೇಶ್, ಒಂದೂವರೆ ಗಂಟೆಯೊಳಗೆ ಅದನ್ನು ವಾಪಸ್ ತಲುಪಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಗ್ರಾಹಕನಿಗೆ ಯಾವುದೇ ಆತಂಕವಾಗಬಾರದು ಎಂಬ ಉದ್ದೇಶದಿಂದ ಚಾಲಕ ಸುಮಾರು 8 ರಿಂದ 9 ಗಂಟೆಗಳ ಕಾಲ ವಾಟ್ಸಾಪ್‌ನಲ್ಲಿ ತಮ್ಮ ಲೈವ್ ಲೊಕೇಶನ್ ಹಂಚಿಕೊಂಡಿದ್ದರು. ಶರ್ಮಾ ಅವರು ಆತಂಕದಿಂದ ಕನಿಷ್ಠ 10 ಬಾರಿಯಾದರೂ ಕರೆ ಮಾಡಿದ್ದರೂ, ಚಾಲಕ ಎಲ್ಲೂ ಕಿರಿಕಿರಿ ಮಾಡಿಕೊಳ್ಳದೆ ಪ್ರತಿ ಬಾರಿಯೂ ತಾವು ಎಲ್ಲಿದ್ದೇವೆ ಎಂಬುದನ್ನು ತಾಳ್ಮೆಯಿಂದ ವಿವರಿಸಿದ್ದಾರೆ.
ಅಂತಿಮವಾಗಿ ತಮ್ಮ ವಾಲೆಟ್‌ನಲ್ಲಿದ್ದ ಹಣ ಹಾಗೂ ಪ್ರಮುಖ ದಾಖಲೆಗಳು ಯಾವುದೇ ಹಾನಿಯಿಲ್ಲದೆ ಸುರಕ್ಷಿತವಾಗಿ ಕೈಸೇರಿದ ನಂತರ, ನರೇಶ್ ಅವರ ಪ್ರಾಮಾಣಿಕತೆಗೆ ಶರ್ಮಾ ಶ್ಲಾಘಿಸಿದ್ದಾರೆ. ಈ ಕುರಿತು ವೀಡಿಯೊ ಹಂಚಿಕೊಂಡಿರುವ ಶರ್ಮಾ ನರೇಶ್​ ಅವರಂತಹ ಪ್ರಾಮಾಣಿಕ ಚಾಲಕರಿಗೆ ರ್‍ಯಾಪಿಡೋ ಸಂಸ್ಥೆಯು ಸೂಕ್ತ ಬೋನಸ್ ಅಥವಾ ಪುರಸ್ಕಾರ ನೀಡಿ ಗೌರವಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸ್ಪಂದಿಸಿರುವ ರ್‍ಯಾಪಿಡೋ ಸಂಸ್ಥೆಯು, "ಕಷ್ಟದ ಸಮಯದಲ್ಲಿ ಗ್ರಾಹಕರಿಗೆ ನೆರವಾದ ಚಾಲಕ ನರೇಶ್ ಅವರ ಕಾರ್ಯ ಮೆಚ್ಚುವಂತದ್ದು. ಈ ಪ್ರಶಂಸೆಯನ್ನು ಖಂಡಿತವಾಗಿಯೂ ನರೇಶ್ ಅವರಿಗೆ ತಲುಪಿಸಲಾಗುವುದು" ಎಂದು ಕಾಮೆಂಟ್ ಮಾಡಿದೆ. ಇನ್ನು ನೆಟ್ಟಿಗರು ಕೂಡ ಚಾಲಕ ನರೇಶ್ ಅವರ ತಾಳ್ಮೆ ಹಾಗೂ ಪ್ರಾಮಾಣಿಕತೆಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net