ಹರಿದ ಬಟ್ಟೆ, ಕೆಟ್ಟ ಆಟೋ... ಆದರೂ 5 ರೂ. ಚಿಲ್ಲರೆ ಬೇಡವೆಂದ ಚಾಲಕ!: ಆಟೋ ಡ್ರೈವರ್ ಪ್ರಾಮಾಣಿಕತೆಗೆ ನೆಟ್ಟಿಗರು ಫಿದಾ! Auto Driver

Auto Driver ಸಾಂದರ್ಭಿಕ ಚಿತ್ರ
Auto Driver ಸಾಂದರ್ಭಿಕ ಚಿತ್ರ
Published on

ಮಹಾರಾಷ್ಟ್ರ: ಇಂದಿನ ಕಾಲದಲ್ಲಿ ಸಣ್ಣಪುಟ್ಟ ವಿಚಾರಕ್ಕೂ ಜಗಳವಾಡುವ, ಹಣಕ್ಕಾಗಿ ಅಡ್ಡದಾರಿ ಹಿಡಿಯುವ ಮನಸ್ಥಿತಿಯ ನಡುವೆ, ಅತ್ಯಂತ ಬಡತನದಲ್ಲಿದ್ದರೂ ತಮ್ಮ ತತ್ತ್ವ-ಸಿದ್ದಾಂತವನ್ನು ಬಿಟ್ಟುಕೊಡದ ಅಪರೂಪದ ಆಟೋ ಚಾಲಕನೊಬ್ಬನ (

Auto Driver) 

ಕಥೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. 

ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಕಲ್ಯಾಣ್ ನಿಲ್ದಾಣದ ಬಳಿ ನಡೆದ ಈ ಘಟನೆಯನ್ನು ಪ್ರಯಾಣಿಕರೊಬ್ಬ ರೆಡ್ಡಿಟ್​ನಲ್ಲಿ ಹಂಚಿಕೊಂಡಿದ್ದು, ಸದ್ಯ ಸಾವಿರಾರು ಜನರ ಹೃದಯ ಗೆದ್ದಿದೆ.  

ಘಟನೆಯ ಹಿನ್ನೆಲೆ

ಪ್ರಯಾಣಿಕರೊಬ್ಬರು ಶೇರಿಂಗ್​ ಆಟೋ ಒಂದರಲ್ಲಿ ಪ್ರಯಾಣಿಸುತ್ತಿದ್ದರು. ಸಾಮಾನ್ಯವಾಗಿ ಕಲ್ಯಾಣ್ ಭಾಗದಲ್ಲಿ ಶೇರಿಂಗ್ ಆಟೋದಲ್ಲಿ ನಾಲ್ಕು ಜನ ಪ್ರಯಾಣಿಕರಿದ್ದರೆ ಒಬ್ಬರಿಗೆ 15 ರೂ.ಗಳು ಹಾಗೂ ಮೂವರು ಇದ್ದರೆ 20 ರೂಪಾಯಿ ದರ ನಿಗದಿಪಡಿಸಲಾಗುತ್ತದೆ. ಆದರೆ, ಬಹುತೇಕ ಚಾಲಕರು 4 ಜನರನ್ನು ಕುಳ್ಳಿರಿಸಿಕೊಂಡರೂ ಪ್ರತಿಯೊಬ್ಬರಿಂದ 20 ರೂಪಾಯಿಗಳನ್ನು ವಸೂಲಿ ಮಾಡುತ್ತಾರೆ.  
ಆದರೆ, ಈ ಆಟೋ ಚಾಲಕ ಮಾತ್ರ ನಿಯಮದಂತೆ ನಾಲ್ಕು ಜನರಿದ್ದ ಕಾರಣ ಪ್ರತಿಯೊಬ್ಬರಿಗೂ ಸರಿಯಾಗಿ 15 ರೂಪಾಯಿ ಮಾತ್ರ ಕೇಳಿದ್ದಾರೆ. ಚಾಲಕನ ಈ ನಿಯಮಬದ್ಧತೆಯನ್ನು ಕಂಡು ಮೆಚ್ಚಿದ ಪ್ರಯಾಣಿಕರು, 20 ರೂಪಾಯಿ ನೋಟು ನೀಡಿ ಉಳಿದ 5 ರೂಪಾಯಿ ಚಿಲ್ಲರೆಯನ್ನು ನೀವೇ ಇಟ್ಟುಕೊಳ್ಳಿ ಎಂದಿದ್ದಾರೆ. ಆದರೆ, ಆ ಚಾಲಕ ತಕ್ಷಣವೇ ಆ 5 ರೂಪಾಯಿಯನ್ನು ವಾಪಾಸ್ಸು ನೀಡಿ ನನ್ನ ಶ್ರಮಕ್ಕೆ ಎಷ್ಟು ಬರಬೇಕೋ ಅಷ್ಟೇ ಸಾಕು ಎಂದು ಹೇಳಿದ್ದಾರೆ. 

ಕಣ್ಣೀರು ತರಿಸುವಂತಿತ್ತು ಆಟೋ ಸ್ಥಿತಿ

ಈ ಘಟನೆಯನ್ನು ರೆಡ್ಡಿಟ್​​ನಲ್ಲಿ ಹಂಚಿಕೊಂಡ ವ್ಯಕ್ತಿ ಆ ಚಾಲಕನ ದಯನೀಯ ಸ್ಥಿತಿಯನ್ನು ಕಂಡು ಭಾವುಕರಾಗಿದ್ದರು. ಆ ಆಟೋ ರಿಕ್ಷಾ ಅತ್ಯಂತ ಹಳೆಯದಾಗಿದ್ದು, ಮಳೆಯ ನೀರು ಒಳಗೆ ಬೀಳುವಂತಿತ್ತು. ಹೊರಗೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರೂ, ಆಟೋದ ಮುಂಭಾಗದ ವೈಪರ್ ಕೆಲಸ ಮಾಡುತ್ತಿರಲಿಲ್ಲ. ಈ ವೇಳೆ ಚಾಲಕ ತಮ್ಮ ಕೈಯಿಂದಲೇ ಗಾಜಿನ ಮೇಲೆ ಬಿದ್ದಂತಹ ನೀರನ್ನು ಒರೆಸುತ್ತಾ ಕಷ್ಟಪಟ್ಟು ವಾಹನ ಚಲಾಯಿಸುತ್ತಿದ್ದರು. 
ಆದಾಗ್ಯೂ, ದಿನದ ಹೊಟ್ಟೆಪಾಡಿಗೇ ಪರದಾಡುವಂತಹ ಸ್ಥಿತಿಯಲ್ಲಿದ್ದರೂ, ಆ ಚಾಲಕ ಹೆಚ್ಚುವರಿ 5 ರೂಪಾಯಿಯ ಲಾಭವನ್ನು ತೆಗೆದುಕೊಳ್ಳದೇ ಪ್ರಾಮಾಣಿಕತೆ ಮೆರೆದಿದ್ದಾರೆ ಎಂದು ಬರೆದು ಪೋಸ್ಟ್ ಮಾಡಿದ್ದರು. 

ನೆಟ್ಟಿಗರ ಭಾವುಕ ಅನಿಸಿಕೆಗಳು

ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರ ಗಮನ ಸೆಳೆಯಿತು. ಒಬ್ಬ ಬಳಕೆದಾರರು ಇಂದಿನ ಜಗತ್ತಿನಲ್ಲಿ ಈ ರೀತಿಯ ಪ್ರಾಮಾಣಿಕತೆಗೆ ಬೆಲೆ ಇದೆಯೇ? ಒಳ್ಳೆಯ ಗುಣವುಳ್ಳವರೇ ಏಕೆ ಹೆಚ್ಚು ಕಷ್ಟಪಡುತ್ತಾರೆ? ಎಂದು ಕಾಮೆಂಟ್​ ಮಾಡಿದ್ದರೆ, ಇನ್ನೊಬ್ಬ ಬಳಕೆದಾರ ಅವರ ಪ್ರಾಮಾಣಿಕತೆಗೆ ನನ್ನದೊಂದು ಬಿಗ್ ಸಲ್ಯೂಟ್, ಇಂತಹ ಮನಸ್ಸಿನವರು ಇಂದಿನ ಸಮಾಜಕ್ಕೆ ಅತ್ಯಗತ್ಯ" ಎಂದು ಒಬ್ಬರು ಬರೆದಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net