ವೃದ್ಧಾಶ್ರಮದಲ್ಲಿ ತಂದೆಯ ದುರಂತ ಅಂತ್ಯ!...ವಿಡಿಯೋ ಕಾಲ್‌ನಲ್ಲೇ ಅಂತ್ಯಕ್ರಿಯೆ ನೆರವೇರಿಸಿದ ಪಾಪಿ ಮಕ್ಕಳು Video Call Funeral

 (Video Call Funeral ಚಿತ್ರ X)
(Video Call Funeral ಚಿತ್ರ X)
Published on

ಹರಿಯಾಣ: ತಮ್ಮ ಇಡೀ ಜೀವಮಾನವನ್ನು ಮೂವರು ಹೆಣ್ಣುಮಕ್ಕಳ ಶಿಕ್ಷಣ, ಉನ್ನತ ಭವಿಷ್ಯ ಮತ್ತು ಪಾಲನೆಗಾಗಿ ಧಾರೆ ಎರೆದ ತಂದೆಯೊಬ್ಬರ ಕೊನೆಗಾಲ ವೃದ್ಧಾಶ್ರಮದಲ್ಲಿ ಅತ್ಯಂತ ದಯನೀಯವಾಗಿ ಅಂತ್ಯಗೊಂಡಿದೆ. ಮರಣದ ಸಮಯದಲ್ಲಾಗಲಿ ಅಥವಾ ಅಂತಿಮ ವಿಧಿವಿಧಾನಗಳ ಸಂದರ್ಭದಲ್ಲಾಗಲಿ ಕನಿಷ್ಠ ಒಬ್ಬ ಮಗಳೂ ಸಶರೀರವಾಗಿ ಭಾಗಿಯಾಗಲು ಸಾಧ್ಯವಾಗದೆ, ವಾಟ್ಸಾಪ್ ವೀಡಿಯೊ ಕರೆ ಮೂಲಕವೇ ಅಂತಿಮ ದರ್ಶನ

(Video Call Funeral)

ಪಡೆದ ಕರುಣಾಜನಕ ಘಟನೆ ಹರಿಯಾಣದ ಸೋನಿಪತ್‌ನಲ್ಲಿ ನಡೆದಿದೆ.

ಉದ್ಯಮಿಯಾಗಿದ್ದ ವ್ಯಕ್ತಿಗೆ ವೃದ್ಧಾಶ್ರಮವೇ ಗತಿಯಾಯ್ತು

ಮೂಲತಃ ಮುಂಬೈನ ಜವಳಿ ಉದ್ಯಮಿಯಾಗಿದ್ದ ಶಿವಚರಣ್ ರಾಮ್ ರತನ್ ಗುಪ್ತಾ ಎಂಬವರೇ ಈ ದುರದೃಷ್ಟಕರ ತಂದೆ. ಕಳೆದ ಒಂದೂವರೆ ವರ್ಷದಿಂದ ಅವರು ಸೋನಿಪತ್‌ನ ವೆಸ್ಟ್ ರಾಮ್ ನಗರದಲ್ಲಿರುವ 'ಸಮಾಜ ಕಲ್ಯಾಣ ಶಿಕ್ಷಣ ಸಮಿತಿ' ನಡೆಸುತ್ತಿರುವ ವೃದ್ಧಾಶ್ರಮದಲ್ಲಿ ವಾಸಿಸುತ್ತಿದ್ದರು. ಅವರ ಪತ್ನಿ ಮೀನಾ ಕೂಡ ಈ ಹಿಂದೆ ಇದೇ ವೃದ್ಧಾಶ್ರಮದಲ್ಲಿದ್ದು, ಕೆಲವು ಸಮಯದ ಹಿಂದೆ ನಿಧನರಾಗಿದ್ದರು.
ಗುಪ್ತಾ ಅವರು ತಮ್ಮ ಮೂವರೂ ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದ್ದರು. ಅವರ ಹಿರಿಯ ಮಗಳು ಅನಿತಾ ನೇಪಾಳದಲ್ಲಿ (ಶಿಕ್ಷಕಿ), ಎರಡನೇ ಮಗಳು ನಿಶಾ ಉತ್ತರ ಪ್ರದೇಶದ ಅಜಂಘಡದಲ್ಲಿ ಹಾಗೂ ಕಿರಿಯ ಮಗಳು ಪ್ರಿಯಾ ಮುಂಬೈನಲ್ಲಿ ನೆಲೆಸಿದ್ದಾರೆ. ಮೂವರೂ ವಿವಾಹಿತರಾಗಿದ್ದು ತಮ್ಮದೇ ಆದ ಕುಟುಂಬಗಳನ್ನು ಹೊಂದಿದ್ದಾರೆ.

ಆರೋಗ್ಯ ಹದಗೆಟ್ಟರೂ ಬರಲಿಲ್ಲ ಮಕ್ಕಳು

ವೃದ್ಧಾಶ್ರಮದ ಆಡಳಿತಾಧಿಕಾರಿ ಆನಂದ್ ಕುಮಾರ್ ನೀಡಿರುವ ಮಾಹಿತಿಯಂತೆ, ಗುಪ್ತಾ ಅವರು ಆರಂಭದಲ್ಲಿ ಮಕ್ಕಳೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಆದರೆ ಅನಾರೋಗ್ಯ ಪೀಡಿತರಾದ ನಂತರ ಕರೆಗಳು ಕಡಿಮೆಯಾಗಿದ್ದವು. ನಿಧನ ಹೊಂದುವ 20 ದಿನಗಳ ಮುಂಚೆಯೇ ಅವರ ಆರೋಗ್ಯ ಕ್ಷೀಣಿಸುತ್ತಿರುವ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಲಾಗಿದ್ದರೂ, ಯಾರೊಬ್ಬರೂ ಅವರನ್ನು ನೋಡಲು ಬರಲಿಲ್ಲ.

ಗುಪ್ತಾ ಅವರು ಕೊನೆಯುಸಿರೆಳೆದಾಗ ವೃದ್ಧಾಶ್ರಮದ ಆಡಳಿತ ಮಂಡಳಿಯು ತಕ್ಷಣವೇ ಮಕ್ಕಳಿಗೆ ಕರೆ ಮಾಡಿ ಸೋನಿಪತ್‌ಗೆ ಬರಲು ವ್ಯವಸ್ಥೆ ಮಾಡುವುದಾಗಿ ತಿಳಿಸಿತು. ಆದರೆ, ನಮಗೆ ಬರಲು ಸಮಯವಿಲ್ಲ ಎಂದು ಮಕ್ಕಳು ನೇರವಾಗಿ ಹೇಳಿದ್ದಾರೆ.


ವೀಡಿಯೊ ಕಾಲ್‌ನಲ್ಲಿ ಅಂತ್ಯಕ್ರಿಯೆ ವೀಕ್ಷಣೆ

ಮಕ್ಕಳು ಬರಲು ನಿರಾಕರಿಸಿದ ಹಿನ್ನೆಲೆಯಲ್ಲಿ, ನೇಪಾಳ, ಉತ್ತರ ಪ್ರದೇಶ ಹಾಗೂ ಮುಂಬೈನಲ್ಲಿ ನೆಲೆಸಿದ್ದ ಮಕ್ಕಳು ವೀಡಿಯೊ ಕರೆಯ ಮೂಲಕವೇ ಅಂತಿಮ ವಿಧಿವಿಧಾನಗಳನ್ನು ವೀಕ್ಷಿಸಿದರು. ನೇಪಾಳದಲ್ಲಿದ್ದ ಹಿರಿಯ ಮಗಳು ಅನಿತಾ, ಆನ್‌ಲೈನ್ ಮೂಲಕ 5,100 ರೂಪಾಯಿ ಕಳುಹಿಸಿ ತಂದೆಯ ಅಂತ್ಯಕ್ರಿಯೆ ನೆರವೇರಿಸುವಂತೆ ಕೋರಿಕೊಂಡರು.
ಅಷ್ಟೇ ಅಲ್ಲದೆ, ವೀಡಿಯೊ ಕರೆಯ ಸಂದರ್ಭದಲ್ಲಿ "ಇದಕ್ಕೆ ಇನ್ಯಷ್ಟು ಸಮಯ ಬೇಕಾಗುತ್ತದೆ? ನಾವು ಊಟ ಮಾಡಿ ಸ್ನಾನ ಮಾಡಬೇಕಿದೆ" ಎಂದು ಮಗಳೊಬ್ಬಳು ಹೇಳಿರುವುದು ಅಲ್ಲಿನ ಸಿಬ್ಬಂದಿಗೆ ಕೇಳಿಸಿದ್ದು, ಮಕ್ಕಳ ಕಲ್ಲುಮನಸ್ಸಿಗೆ ಸಾಕ್ಷಿಯಾಗಿದೆ.

ನೇತ್ರದಾನ ಹಾಗೂ ಗಂಗಾ ವಿಸರ್ಜನೆ

ಮಕ್ಕಳು ಬಾರದ ಕಾರಣ ವೃದ್ಧಾಶ್ರಮದ ಆಡಳಿತ ಮಂಡಳಿ ಮತ್ತು ಸ್ಥಳೀಯ ನಿವಾಸಿಗಳೇ ಸೇರಿ ಶಿವಚರಣ್ ಅವರ ಅಂತಿಮ ಸಂಸ್ಕಾರ ನೆರವೇರಿಸಿದರು. ಆದಾಗ್ಯೂ, ಕುಟುಂಬದ ಇಚ್ಛೆಯಂತೆ ಗುಪ್ತಾ ಅವರ ಮರಣದ ನಂತರ ಅವರ ಕಣ್ಣುಗಳನ್ನು ದಾನ ಮಾಡಲಾಗಿದ್ದು, ಅವರು ನಿಧನರಾದ ನಂತರವೂ ಮತ್ತೊಬ್ಬರ ಬಾಳಿಗೆ ಬೆಳಕಾಗಿದ್ದಾರೆ.
ಆರಂಭದಲ್ಲಿ ಚಿತಾಭಸ್ಮವನ್ನು ತೆಗೆದಿರಿಸಲು ಕೋರಿದ್ದ ಕುಟುಂಬಸ್ಥರು, ಆ ನಂತರ ತಮಗೆ ಸೋನಿಪತ್‌ಗೆ ಬರಲು ಸಾಧ್ಯವಿಲ್ಲವೆಂದು ತಿಳಿಸಿ, ಚಿತಾಭಸ್ಮವನ್ನು ಗಂಗಾ ನದಿಯಲ್ಲಿ ವಿಸರ್ಜಿಸುವಂತೆ ವೃದ್ಧಾಶ್ರಮದ ಸಿಬ್ಬಂದಿಗೇ ವಿನಂತಿಸಿದ್ದಾರೆ.
ತಂದೆಯ ಕಷ್ಟದ ದುಡಿಮೆಯಲ್ಲಿ ಬೆಳೆದು ಉತ್ತಮ ಹಂತ ತಲುಪಿದ ಮಕ್ಕಳು, ಕೊನೆಗಾಲದಲ್ಲಿ ತಂದೆಗೆ ಆಸರೆಯಾಗದೆ ವೀಡಿಯೊ ಕಾಲ್ ಮೂಲಕವೇ ವಿದಾಯ ಹೇಳಿದ ಈ ಘಟನೆ ಸಮಾಜದಲ್ಲಿ ಧೃತಿಗೆಡುತ್ತಿರುವ ಕೌಟುಂಬಿಕ ಮೌಲ್ಯಗಳಿಗೆ ಕನ್ನಡಿ ಹಿಡಿದಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net