ಇಂಧನ ತುಂಬಿಸುವಾಗ ನಡೆದ ಸಣ್ಣ ಜಗಳ ರಕ್ತಪಾತದಲ್ಲಿ ಅಂತ್ಯ!...ಪೆಟ್ರೋಲ್ ಹಾಕಿಸಲು ಹೋದ ಯುವಕನ ಕೈ ಕತ್ತರಿಸಿದ ದುಷ್ಕರ್ಮಿಗಳು! Petrol Pump Attack

Petrol Pump Attack ಸಾಂದರ್ಭಿಕ ಚಿತ್ರ
Petrol Pump Attack ಸಾಂದರ್ಭಿಕ ಚಿತ್ರ
Published on
Petrol Pump Attack: ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ಮನುಕುಲವೇ ತಲೆತಗ್ಗಿಸುವಂತಹ ಅತ್ಯಂತ ಅಮಾನುಷ ಘಟನೆಯೊಂದು ತಡರಾತ್ರಿ ನಡೆದಿದೆ. ಪೆಟ್ರೋಲ್ ಪಂಪ್‌ನಲ್ಲಿ ಇಂಧನ ತುಂಬಿಸುವಾಗ ನಡೆದ ಸಣ್ಣ ಜಗಳವೊಂದು ವಿಕೋಪಕ್ಕೆ ತಿರುಗಿ, 28 ವರ್ಷದ ಯುವಕನೊಬ್ಬನ ಎರಡೂ ಕೈಗಳನ್ನು ಕೊಡಲಿಯಿಂದ ಕ್ರೂರವಾಗಿ ಕತ್ತರಿಸಲಾಗಿದೆ. ಈ ರಕ್ತಸಿಕ್ತ ದಾಳಿಯಲ್ಲಿ ಸ್ಥಳೀಯ ರಾಜಕಾರಣಿಯೊಬ್ಬರ ಪಾತ್ರವಿದೆ ಎಂದು ಸಂತ್ರಸ್ತನ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಇಂಧನ ತುಂಬಿಸುವಾಗ ಶುರುವಾದ ಜಗಳ ರಕ್ತಪಾತದಲ್ಲಿ ಅಂತ್ಯ

ಬಲಿಪಶು ಯುವಕನನ್ನು ಜೈವೇಂದ್ರ ಸಿಂಗ್ ಅಲಿಯಾಸ್​ ವಿಕ್ಕಿ (28) ಎಂದು ಗುರುತಿಸಲಾಗಿದೆ. ಸಿಂಗ್​ ರಾತ್ರಿ ಪೆಟ್ರೋಲ್ ಪಂಪ್‌ಗೆ ಇಂಧನ ತರಲು ಹೋಗಿದ್ದರು. ಈ ವೇಳೆ ಇಂಧನ ತುಂಬಿಸುವ ವಿಚಾರದಲ್ಲಿ ಅಲ್ಲಿ ಗಲಾಟೆ ಸಂಭವಿಸಿದ್ದು, ಆರೋಪಿಗಳು ಸಿಂಗ್​ ಮೇಲೆ ಕೊಡಲಿಯಿಂದ ಭೀಕರವಾಗೊ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ.
ದಾಳಿಯ ತೀವ್ರತೆಗೆ, ವಿಕ್ಕಿಯ ಎರಡೂ ಕೈಗಳು ಮಣಿಕಟ್ಟುಗಳಿಂದ ಸಂಪೂರ್ಣವಾಗಿ ತುಂಡಾಗಿದ್ದವು. ಅಷ್ಟೇ ಅಲ್ಲದೆ, ಹರಿತವಾದ ಕೊಡಲಿಯಿಂದ ಆತನ ಕಾಲಿಗೆ ಗಂಭೀರ ಗಾಯಗಳಾಗಿದ್ದು, ತಲೆಗೂ ಆಳವಾದ ಪೆಟ್ಟು ಬಿದ್ದಿತ್ತು. ವಿಕ್ಕಿ ರಕ್ತದ ಮಡುವಿನಲ್ಲಿ ಸ್ಥಳದಲ್ಲೇ ಕುಸಿದು ಬಿದ್ದಿದ್ದನು.

ಮಗನ ಸ್ಥಿತಿ ಕಂಡು ತಾಯಿ ಆಘಾತ

ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಓಡಿಬಂದ ವಿಕ್ಕಿಯ ತಾಯಿ, ಮಗನ ದಾರುಣ ಸ್ಥಿತಿಯನ್ನು ಕಂಡು ತೀವ್ರ ಆಘಾತಕ್ಕೊಳಗಾದರು. ಆದರೂ ಧೈರ್ಯ ಗುಂದದೆ, ಮಗನ ಜೀವ ಉಳಿಸಲು ತಕ್ಷಣವೇ ರಕ್ತಸ್ರಾವವಾಗುತ್ತಿದ್ದ ಆತನ ಕತ್ತರಿಸಿದ ಕೈಗಳನ್ನು ಬಟ್ಟೆಯಿಂದ ಗಟ್ಟಿಯಾಗಿ ಕಟ್ಟಿದರು. ಅಲ್ಲದೆ, ತಲೆಗೆ ಬಿದ್ದಿದ್ದ ಆಳವಾದ ಗಾಯಗಳಿಂದ ರಕ್ತ ಸುರಿಯುವುದನ್ನು ತಡೆಯಲು ತಲೆಗೂ ಬಟ್ಟೆಯನ್ನು ಸುತ್ತಿ ಮಾನವೀಯತೆ ಮೆರೆದರು.
ಆನಂತರ, ಆ ರಸ್ತೆಯಲ್ಲಿ ಹೋಗುತ್ತಿದ್ದ ದಾರಿಹೋಕರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನನ್ನು ನೋಡಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು.

ಯುವಕನ ಸ್ಥಿತಿ ಗಂಭೀರ: ಉನ್ನತ ಆಸ್ಪತ್ರೆಗೆ ರವಾನೆ

ತೀವ್ರವಾಗಿ ಗಾಯಗೊಂಡಿದ್ದ ವಿಕ್ಕಿಯನ್ನು ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಪ್ರಾಥಮಿಕ ಚಿಕಿತ್ಸೆಯ ನಂತರ, ಯುವಕನ ಸ್ಥಿತಿ ಅತ್ಯಂತ ಗಂಭೀರವಾಗಿದ್ದರಿಂದ ವೈದ್ಯರು ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಉನ್ನತ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲು ಸೂಚಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆಸ್ಪತ್ರೆಯ ವೈದ್ಯರಾದ ಶಿಶುಪಾಲ್, ರೋಗಿಯ ಎರಡೂ ಕೈಗಳು ಬಹುತೇಕ ಸಂಪೂರ್ಣವಾಗಿ ಕತ್ತರಿಸಲ್ಪಟ್ಟಿದ್ದವು. ತಕ್ಷಣವೇ ಅವುಗಳನ್ನು ಆಧಾರವಾಗಿಟ್ಟುಕೊಂಡು ಬ್ಯಾಂಡೇಜ್ ಹಾಕಬೇಕಾಯಿತು. ಆತನ ಕಾಲಿಗೆ ಗಂಭೀರವಾದ ಗಾಯಗಳಾಗಿದ್ದು, ಹರಿತವಾದ ಆಯುಧದಿಂದ ತಲೆಯ ಮೇಲೂ ಆಳವಾಗಿ ಪೆಟ್ಟಾಗಿದೆ. ಪ್ರಾಥಮಿಕ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಉನ್ನತ ಕೇಂದ್ರಕ್ಕೆ ರೆಫರ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಪೊಲೀಸ್ ತನಿಖೆ ಚುರುಕು: ಒಬ್ಬ ಆರೋಪಿ ಬಂಧನ

ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತನ ಕುಟುಂಬ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ದಾಳಿಯ ಸಂಪೂರ್ಣ ಸತ್ಯಾಸತ್ಯತೆಯನ್ನು ತಿಳಿಯಲು ಪೊಲೀಸರು ಪೆಟ್ರೋಲ್​ ಪಂಪ್​ನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಒಬ್ಬ ಆರೋಪಿಯನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಪತ್ತೆಗಾಗಿ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ನಡೆದ ಈ ಭೀಕರ ಕೃತ್ಯ ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಿಸಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net