ಸ್ವಪಕ್ಷದ ಸಂಸದೆಯ ಮಗನಿಂದಲೇ ಮಮತಾ ಬ್ಯಾನರ್ಜಿಗೆ ನೋಟಿಸ್; ದೀದಿಗೆ ಹೊಸ ತಲೆನೋವು ತಂದ ಆ ಒಂದು ಹೇಳಿಕೆ! | Mamata Banerjee

Mamata Banerjee | ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
Mamata Banerjee | ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
Published on
ಕೊಲ್ಕತ್ತಾ: ತೃಣಮೂಲ ಕಾಂಗ್ರೆಸ್ (TMC) ಪಕ್ಷದೊಳಗೆ ಭಿನ್ನಮತದ ಬೇಗುದಿ ತಾರಕಕ್ಕೇರಿದ್ದು, ಭಿನ್ನಮತಿಯರ ನಾಯಕಿಯಾಗಿರುವ ಹಿರಿಯ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಅವರ ಪುತ್ರ ಡಾ. ಬೈದ್ಯನಾಥ್ ಘೋಷ್ ದಸ್ತಿದಾರ್ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ಸೇರಿದಂತೆ ಐದು ಜನ ಪ್ರಮುಖ ನಾಯಕರಿಗೆ ಲೀಗಲ್ ನೋಟಿಸ್ ನೀಡಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗೆ ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿಯ ಇತರ ನಾಯಕರು, ಬೈದ್ಯನಾಥ್ ಅವರು ಬಾರಾಸತ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷದ ಟಿಕೆಟ್ ಕೇಳಿದ್ದರು ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ನಿರಾಕರಿಸಿರುವ ಬೈದ್ಯನಾಥ್, ಮಾಜಿ ಸಿಎಂ ಮಮತಾ ಬ್ಯಾನರ್ಜಿ, ಸಂಸದರಾದ ಕಲ್ಯಾಣ್ ಬ್ಯಾನರ್ಜಿ, ಸೌಗತ ರಾಯ್, ಮಹುವಾ ಮೊಯಿತ್ರಾ ಮತ್ತು ಸೋನಾಲಿ ಗುಹಾ ಅವರಿಗೆ ಪತ್ರ ಬರೆದಿದ್ದಾರೆ.

ಸುಳ್ಳು ಆರೋಪಕ್ಕೆ ಬಹಿರಂಗ ಕ್ಷಮೆಯಾಚಿಸಲು ಆಗ್ರಹ

ನಾನು ರಾಜಕೀಯ ಟಿಕೆಟ್ ಆಕಾಂಕ್ಷಿಯಾಗಿರಲಿಲ್ಲ. ನನ್ನ ಮತ್ತು ನನ್ನ ತಾಯಿ ಕಾಕೋಲಿ ಘೋಷ್ ಅವರ ವಿರುದ್ಧ ಸೋನಾಲಿ ಗುಹಾ ಮಾಡಿರುವ ವೈಯಕ್ತಿಕ ನಿಂದನೆಗಳು ಹಾಗೂ ಸುಳ್ಳು ಆರೋಪಗಳು ತೀವ್ರ ಬೇಸರ ತಂದಿವೆ. ನನ್ನ ಹೆಸರನ್ನು ರಾಜಕೀಯ ಲಾಭಕ್ಕಾಗಿ ಮತ್ತು ಪಕ್ಷದ ಆಂತರಿಕ ಭಿನ್ನಮತದ ವಿವಾದಗಳಿಗೆ ಎಳೆದು ತರುವುದನ್ನು ನಾನು ತೀವ್ರವಾಗಿ ವಿರೋಧಿಸುತ್ತೇನೆ. ಈ ಸುಳ್ಳು ಹೇಳಿಕೆಗಳ ಕುರಿತು ಎಲ್ಲಾ ನಾಯಕರು ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಸೋಮವಾರ ಮಾನನಷ್ಟ ಮೊಕದ್ದಮೆ ಸೇರಿದಂತೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಬೈದ್ಯನಾಥ್ ತಮ್ಮ ಪತ್ರದ ಮೂಲಕ ಎಚ್ಚರಿಸಿದ್ದಾರೆ.
ಈಗಾಗಲೇ ಪಕ್ಷದೊಳಗೆ ಭಾರಿ ಬಂಡಾಯ ಎದುರಿಸುತ್ತಿರುವ ಮಮತಾ ಬ್ಯಾನರ್ಜಿಗೆ ಈ ಬೆಳವಣಿಗೆ ಮತ್ತಷ್ಟು ಹಿನ್ನಡೆ ತಂದಿದೆ. ಬೈದ್ಯನಾಥ್ ಅವರ ತಾಯಿ ಕಾಕೋಲಿ ಘೋಷ್ ದಸ್ತಿದಾರ್ ಅವರೇ ಈಗ ಬಂಡಾಯಗಾರರ ನೇತೃತ್ವ ವಹಿಸಿದ್ದು, ಲೋಕಸಭೆಯ ಸುಮಾರು 18 ಟಿಎಂಸಿ ಸಂಸದರು ಮಮತಾ ಬ್ಯಾನರ್ಜಿ ವಿರುದ್ಧ ಸಹಿ ಹಾಕಿ ಪತ್ರ ಸಿದ್ಧಪಡಿಸಿದ್ದಾರೆ. ಮಮತಾ ಅವರ ಕಾಕೋಲಿ ಘೋಷ್​ ಈಗಾಗಲೇ ಪಕ್ಷದ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡಿದ್ದಾರೆ.

ಭಿನ್ನಮತ ಶಮನಕ್ಕೆ ಮಮತಾ ಕಸರತ್ತು!...

ಪಕ್ಷದೊಳಗಿನ ಈ ಬಿಕ್ಕಟ್ಟನ್ನು ನಿಯಂತ್ರಿಸಲು ಮಮತಾ ಬ್ಯಾನರ್ಜಿ ಪ್ರಮುಖ ಬದಲಾವಣೆಗಳನ್ನು ಜಾರಿಗೆ ತಂದಿದ್ದಾರೆ. ಸಾಯೋನಿ ಘೋಷ್ ಅವರನ್ನು ಟಿಎಂಸಿ ಯುವ ಘಟಕದ ಅಧ್ಯಕ್ಷರನ್ನಾಗಿ ಹಾಗೂ ಕೋಲ್ಕತ್ತಾ ದಕ್ಷಿಣ ಸಂಸದೆ ಮಾಲಾ ರಾಯ್ ಅವರ ಬದಲಿಗೆ ಕಾಲಿಗಂಜ್ ಶಾಸಕಿ ಅಲಿಫಾ ಅಹ್ಮದ್ ಅವರನ್ನು ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ.
ಶನಿವಾರವಷ್ಟೇ ಹಿರಿಯ ನಾಯಕ ಸುದೀಪ್ ಬಂದೋಪಾಧ್ಯಾಯ ಅವರು ದೆಹಲಿಯಲ್ಲಿ ಕೇಂದ್ರ ಸಚಿವ ಭೂಪೇಂದರ್ ಯಾದವ್ ಅವರನ್ನು ಭೇಟಿಯಾಗಿ ಬಂಡಾಯಗಾರರ ಗುಂಪು ಸೇರಿಕೊಂಡಿರುವುದು ಮಮತಾ ಬ್ಯಾನರ್ಜಿಗೆ ಮತ್ತಷ್ಟು ಆಘಾತ ನೀಡಿದೆ. ದಿನದಿಂದ ದಿನಕ್ಕೆ ಕೈಮೀರುತ್ತಿರುವ ಈ ಆಂತರಿಕ ಬಿಕ್ಕಟ್ಟನ್ನು ಮಮತಾ ಹೇಗೆ ನಿಭಾಯಿಸುತ್ತಾರೆ ಎಂಬುದು ಈಗ ತೀವ್ರ ಕುತೂಹಲ ಮೂಡಿಸಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net