

ಮತಬೇಟೆಗೆ ನಮ್ಮ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಮಾಡುವ ತಂತ್ರಗಳು ಒಂದೆರಡಲ್ಲ. ಐದು ರಾಜ್ಯಗಳ ಚುನಾವಣೆಯ ಪೈಕಿ ಹೆಚ್ಚು ಜಿದ್ದಾಜಿದ್ದಿಯಿಂದ ಕೂಡಿರುವ ಕಣ ಪಶ್ಚಿಮ ಬಂಗಾಳದ್ದು. ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿಯ ಹಿಂದುತ್ವದ ಅಲೆಯನ್ನು ತಡೆಯಲು ಸ್ವತಃ ಹಿಂದುತ್ವದ ಮಂತ್ರ ಜಪಿಸುತ್ತಿರುವುದು ವಿರೋಧಿಗಳಲ್ಲೂ ದಿಗ್ಭŠಮೆ ಮೂಡಿಸಿದೆ. ಈ ಹಿಂದೆಲ್ಲ ಅಲ್ಪಸಂಖ್ಯಾತರ ಬೃಹತ್ ಸಮಾವೇಶ ನಡೆಸುತ್ತಿದ್ದ, ಮುಸ್ಲಿಂ ಧಾರ್ವಿುಕ ಮುಖಂಡರೊಂದಿಗೆ ವೇದಿಕೆ ಹಂಚಿಕೊಂಡು ಭಾಷಣ ಮಾಡುತ್ತಿದ್ದ ಮಮತಾ ಈಗ ‘ಟೆಂಪಲ್ ರನ್’ ಶುರು ಮಾಡಿಕೊಂಡಿದ್ದಾರೆ. 2025ರ ನವರಾತ್ರಿ ಸಂದರ್ಭದಲ್ಲೂ ಕೊಲ್ಕತಾದ ದುರ್ಗಾ ಪೆಂಡಾಲ್ಗಳಿಗೆ ಭೇಟಿ ನೀಡಿ ದರ್ಶನ ಪಡೆದಿದ್ದಲ್ಲದೆ, ಪೆಂಡಾಲ್ನಲ್ಲೇ ಕುಳಿತು ‘ದುರ್ಗಾ ಚಾಲೀಸಾ’ ಪಠಿಸಿದ್ದರು. ಮಮತಾ ಈಗ ಮಂದಿರಗಳ ನಿರ್ವಣದತ್ತ ಚಿತ್ತ ಹರಿಸಿದ್ದಾರೆ. ಮಾತ್ರವಲ್ಲ, 2025ರ ರಾಮ ನವಮಿಯ ವೇಳೆ ಮೊದಲ ಬಾರಿಗೆ ತೃಣಮೂಲ ಕಾಂಗ್ರೆಸ್ ವತಿಯಿಂದ ರಾಜ್ಯಾದ್ಯಂತ ಶೋಭಾಯಾತ್ರೆ ನಡೆಸಲಾಗಿತ್ತು.
ಸಿಲಿಗುಡಿಯಲ್ಲಿ ಮಹಾಕಾಲ ಮಹಾತೀರ್ಥ ಮಂದಿರದ ನಿರ್ಮಾಣಕ್ಕೆ 2026ರ ಜನವರಿ 16ರಂದು ಮಮತಾ ಶಿಲಾನ್ಯಾಸ ನೆರವೇರಿಸಿದ್ದಾರೆ. 17.41 ಎಕರೆ ಜಾಗದಲ್ಲಿ ನಿರ್ಮಾಣಗೊಳ್ಳಲಿರುವ ಈ ಮಂದಿರ ಜಗತ್ತಿನ ಭವ್ಯ ಶಿವ ಮಂದಿರಗಳ ಪೈಕಿ ಒಂದಾಗಲಿದೆ. ಇದಕ್ಕೆ 344 ಕೋಟಿ ರೂಪಾಯಿ ವೆಚ್ಚವಾಗುವ ಅಂದಾಜಿದೆ. 2025ರ ಡಿಸೆಂಬರ್ 29ರಂದು ಕೋಲ್ಕತ್ತದಲ್ಲಿ ದುರ್ಗಾ ಮಂದಿರಕ್ಕೆ (ದುರ್ಗಾ ಆಂಗನ್) ಶಿಲಾನ್ಯಾಸ ನೆರವೇರಿಸಿದ್ದಾರೆ. ಇದು ಕೂಡ 17 ಎಕರೆ ವಿಶಾಲವಾದ ಪ್ರದೇಶದಲ್ಲಿ ನಿರ್ವಣಗೊಳ್ಳಲಿದ್ದು, 262 ಕೋಟಿ ರೂಪಾಯಿ ವೆಚ್ಚವಾಗಲಿದೆ.
ಇದಕ್ಕೂ ಮುನ್ನ ಒಡಿಶಾದ ಜಗನ್ನಾಥಪುರಿ ಮಂದಿರದ ಮಾದರಿಯಲ್ಲಿ ದಿಘಾದಲ್ಲಿ ಜಗನ್ನಾಥ ಧಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದರು. ಮಾತ್ರವಲ್ಲ, ಪಶ್ಚಿಮ ಬಂಗಾಳದ ಇತಿಹಾಸದಲ್ಲಿ ಮುಖ್ಯಮಂತ್ರಿ ಕಡೆಯಿಂದ ಪ್ರಾಣ ಪ್ರತಿಷ್ಠಾಪನೆಗೊಂಡ ಮೊದಲ ಮಂದಿರವಿದು. 2025ರ ಏಪ್ರಿಲ್ 30ರಂದು ಇದು ಉದ್ಘಾಟನೆಗೊಂಡಿತು. 20 ಎಕರೆ ಪ್ರದೇಶದಲ್ಲಿ, 250 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಲಾಗಿದೆ. ಜಗನ್ನಾಥಧಾಮ ಮಂದಿರ ನಿರ್ಮಾಣದಿಂದ ಪ್ರದೇಶದಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚಿವೆ ಎಂದು ಸರ್ಕಾರ ಹೇಳಿದೆ. ‘ಕುರ್ಚಿ ಉಳಿಸಿಕೊಳ್ಳುವ ಭಯದಲ್ಲಿ ಮಮತಾ ಮಂದಿರ ನಿರ್ವಿುಸಿದ್ದಾರೆ’ ಎಂದು ಬಿಜೆಪಿ ಆರೋಪಿಸಿದೆ.
ರಾಜ್ಯದಲ್ಲಿ ಹೊಸದಾಗಿ ಮಂದಿರಗಳನ್ನು ನಿರ್ವಿುಸುವುದಕ್ಕಿಂತ, ಹಿಂದೂಗಳಿಗೆ ಸುರಕ್ಷೆ ಒದಗಿಸುವುದು ಮುಖ್ಯ. ಹಿಂದೂಗಳು ಆತಂಕದ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂಬುದು ಹಿಂದೂ ಸಂಘಟನೆಗಳ ಮುಖಂಡರ ಅಭಿಪ್ರಾಯ. ಹಿಂದೂಗಳ ಮೇಲೆ ಹಲ್ಲೆ, ಹತ್ಯೆ ಯತ್ನ, ಅವರ ಆಸ್ತಿಪಾಸ್ತಿಗಳಿಗೆ ಹಾನಿಯಂಥ ಪ್ರಕರಣಗಳು ಹೆಚ್ಚುತ್ತಿದ್ದು, ಇದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು. ಹಿಂದೂಗಳು ಸುರಕ್ಷಿತ ವಾತಾವರಣದಲ್ಲಿ ಬದುಕುವಂತಾಗಬೇಕು. ಆದರೆ, ಈ ವಿಷಯದಲ್ಲಿ ಸರ್ಕಾರ ವಿಫಲವಾಗಿದೆ. ಹಿಂದೂಗಳ ನೋವು, ಸುರಕ್ಷತೆಯ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ. ಚುನಾವಣೆ ಸಮೀಪಿಸುತ್ತಿದ್ದಂತೆ ಮಂದಿರ ಪಾಲಿಟಿಕ್ಸ್ ಮಾಡುವುದನ್ನು ಜನ ಸ್ವೀಕರಿಸುವುದಿಲ್ಲ ಎನ್ನುತ್ತಾರೆ ಹಿಂದೂ ಸಂಘಟನೆಗಳ ಮುಖಂಡರು.
ಕಮ್ಯುನಿಸ್ಟರ ದುರಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತ, ಆ ಆಡಳಿತ ವಿರೋಧಿ ಅಲೆಯ ಲಾಭ ಪಡೆದು ಮಮತಾ ಬ್ಯಾನರ್ಜಿ ಮೊದಲ ಬಾರಿ ಅಧಿಕಾರಕ್ಕೆ ಏರಿದರು. ಎರಡನೇ ಅವಧಿಗೆ ಅಭಿವೃದ್ಧಿ ಬಗ್ಗೆ ಮಾತನಾಡಿ, ಅಧಿಕಾರಕ್ಕೆ ಏರಿದರು. ಮೂರನೇ ಅವಧಿಯಲ್ಲಿ, ಬಿಜೆಪಿ ಪ್ರಬಲ ಪ್ರತಿಸ್ಪರ್ಧಿಯಾಗಿ ಬೆಳೆಯುತ್ತಿದ್ದತೆ ಮೃದು ಹಿಂದುತ್ವದತ್ತ ವಾಲಿದರು. 2024ರ ಲೋಕಸಭೆ ಚುನಾವಣೆಯ ಮುನ್ನ ಈ ನೀತಿ ಆರಂಭಿಸಿದ ಅವರು, 2026ರ ವಿಧಾನಸಭೆ ಚುನಾವಣೆಯ ಮುನ್ನ 2025ರಲ್ಲಿ ಮೃದು ಹಿಂದುತ್ವ ನೀತಿಗೆ ಮತ್ತಷ್ಟು ಬಲ ತುಂಬಿದರು. ಒಟ್ಟಾರೆ, ‘ಮಾ, ಮಾಟಿ, ಮಾನುಷ್’ ಎನ್ನುತ್ತಿದ್ದ ಮಮತಾ ಹಾಗೂ ಟಿಎಂಸಿ ಬಾಯಲ್ಲಿ ಈಗ ಮಂದಿರವೂ ಸೇರಿಕೊಂಡಿದೆ.
ಪಶ್ಚಿಮ ಬಂಗಾಳದಲ್ಲಿ ಎರಡು ಹಂತದ ಮತದಾನ ನಡೆಯಲಿದೆ. ಏಪ್ರಿಲ್ 23 ಮತ್ತು ಏಪ್ರಿಲ್ 29. ಮೇ 4ರಂದು ಫಲಿತಾಂಶ. ‘ಬಿಜೆಪಿಯನ್ನು ಇಲ್ಲಿನ ಜನರು ಸ್ವೀಕರಿಸುವುದಿಲ್ಲ’ ಎಂದು ಮಮತಾ ಪ್ರಚಾರದುದ್ದಕ್ಕೂ ಹೇಳುತ್ತಿದ್ದಾರೆ. ಆದರೆ, ಮಮತಾರ ಮೃದು ಹಿಂದುತ್ವ ಮತ್ತು ಮಂದಿರ ರಾಜಕಾರಣ ಚುನಾವಣಾ ರಾಜಕೀಯದ ಲೆಕ್ಕಾಚಾರ ಬದಲಿಸಬಹುದೆ ಎಂಬ ಜಿಜ್ಞಾಸೆ ಆರಂಭವಾಗಿದೆ. ಹಿಂದೂಗಳ ಮತಗಳನ್ನು ಸೆಳೆಯದಿದ್ದರೆ ಗೆಲುವು ಕಷ್ಟ ಎಂಬ ಸ್ಪಷ್ಟ ಸಂದೇಶ ಟಿಎಂಸಿ ಪಕ್ಷದೊಳಗಿನ ನಾಯಕರೇ ಮಮತಾಗೆ ಚುನಾವಣೆಯ ಸಾಕಷ್ಟು ಮುಂಚೆಯೇ ನೀಡಿದ್ದಾರೆ.
‘ಮಮತಾರ ಅಲ್ಪಸಂಖ್ಯಾತರ ತುಷ್ಟೀಕರಣ ಬಿಜೆಪಿಗೆ ಲಾಭ ತಂದುಕೊಡಲಿದೆ’ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದರು. ಹಾಗಾಗಿಯೇ, ಮಮತಾ ಈ ಬಾರಿ ಸ್ವಲ್ಪ ಭಿನ್ನ ನಡೆ ಅನುಸರಿಸುತ್ತಿದ್ದು, ಹಿಂದುತ್ವವನ್ನು ಬಿಜೆಪಿ ಗುತ್ತಿಗೆ ಪಡೆದುಕೊಂಡಿಲ್ಲ ಎಂಬ ಖಡಕ್ ಸಂದೇಶ ರವಾನಿಸಿದ್ದಾರೆ. ದಿಘಾದಲ್ಲಿ ಜಗನ್ನಾಥ ಮಂದಿರ ಉದ್ಘಾಟನೆಯ ಬಳಿಕ ಮಂದಿರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚುತ್ತ ಸಾಗಿದ್ದು, ಸ್ಥಳೀಯ ವ್ಯಾಪಾರಿಗಳಿಗೆ ಲಾಭವಾಗಿದೆ. ಒಟ್ಟಾರೆ, ಒಂದೇ ವರ್ಷದಲ್ಲಿ ಎರಡು ಮಂದಿರಗಳಿಗೆ ಶಿಲಾನ್ಯಾಸ ಮತ್ತು ಒಂದು ಮಂದಿರದ ಉದ್ಘಾಟನೆ ಮೂಲಕ ಮಮತಾ ‘ಹಿಂದೂ ವಿರೋಧಿ’ ಹಣೆಪಟ್ಟಿಯನ್ನು ಕಳಚಿಕೊಳ್ಳಲು ಯತ್ನಿಸುತ್ತಿದ್ದಾರೆ. ಮುಸ್ಲಿಂ ಬಾಹುಳ್ಯದ ಪ್ರದೇಶಗಳನ್ನು ಹೊರತುಪಡಿಸಿದರೆ ಉಳಿದೆಡೆ ಗೆಲುವಿನಲ್ಲಿ ಹಿಂದೂಗಳ ಮತಗಳೇ ನಿರ್ಣಾಯಕ. ಹೀಗಾಗಿ, ಮಮತಾ ವರ್ಚಸ್ಸು ಬದಲಿಸಿಕೊಳ್ಳಲು ಯತ್ನಿಸುತ್ತಿದ್ದು, ಮೃದು ಹಿಂದುತ್ವದ ಮೊರೆ ಹೋಗಿದ್ದಾರೆ. ಆಡಳಿತ ವಿರೋಧಿ ಅಲೆಯೂ ಪ್ರಬಲವಾಗಿದ್ದು, ಇದನ್ನು ತಗ್ಗಿಸಲು ಮಮತಾ ಈ ತಂತ್ರ ಅನುಸರಿಸಿದ್ದಾರೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಸರ್ಕಾರದ ನೀತಿಯು ಹೂಡಿಕೆ ಆಕರ್ಷಿಸುವ ಪರ ಇಲ್ಲ ಎಂಬುದು ಉದ್ಯಮಿಗಳ ಆರೋಪ. ಹಾಗಾಗಿಯೇ, ಪ್ರಮುಖ ಕೈಗಾರಿಕೆಗಳು ರಾಜ್ಯಕ್ಕೆ ಬರುತ್ತಿಲ್ಲ, ಬಂಡವಾಳ ಹೂಡುತ್ತಿಲ್ಲ. ಟಾಟಾದ ನ್ಯಾನೋ ಘಟಕವನ್ನು ಮಮತಾ ರಾಜ್ಯದಲ್ಲಿ ತಡೆದಿದ್ದನ್ನು ಉದ್ಯಮಿಗಳು ಇನ್ನೂ ಮರೆತಿಲ್ಲ, ಹೊಸ ಉದ್ಯಮಗಳ ಸ್ಥಾಪನೆ ಇಲ್ಲದ್ದರಿಂದ ಉದ್ಯೋಗಸೃಷ್ಟಿ ಆಗುತ್ತಿಲ್ಲ. ಯುವಕರು ಕೆಲಸ ಹುಡುಕಿಕೊಂಡು ಬೇರೆ-ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ದೇಶದ ಯಾವುದೇ ಪ್ರದೇಶಕ್ಕೆ ಹೊದರೂ, ಅಲ್ಲಿ ಪಶ್ಚಿಮ ಬಂಗಾಳ ಮೂಲದ ಕಾರ್ವಿುಕರು ಸಿಗುತ್ತಾರೆ. ಹಾಗಾಗಿ, ತಮ್ಮದೇ ರಾಜ್ಯದಲ್ಲಿ ಕೆಲಸ ಸಿಗುತ್ತಿಲ್ಲ ಎಂಬುದರ ಬಗ್ಗೆ ಯುವಕರಲ್ಲಿ ಆಕ್ರೋಶವಿದೆ.
ಆಡಳಿತದ ಎಲ್ಲ ಹಂತಗಳಲ್ಲೂ ಭ್ರಷ್ಟಾಚಾರ ವ್ಯಾಪಿಸಿಕೊಂಡಿದೆ ಎಂಬುದು ಜನಸಾಮಾನ್ಯರ ನೇರ ಆರೋಪ. ಅಲ್ಲದೆ, ಸರ್ಕಾರಿ ನೇಮಕಾತಿಗಳು ಪಾರದರ್ಶಕವಾಗಿ ನಡೆಯುತ್ತಿಲ್ಲ, ಅಲ್ಲೂ ಅವ್ಯವಹಾರ ವ್ಯಾಪಕವಾಗಿ ನಡೆಯುತ್ತಿದೆ. ಇದರಿಂದ ನೈಜ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂಬ ಕೂಗು ಎದ್ದಿದೆ.
ಮಹಿಳೆಯರ ಸುರಕ್ಷತೆಯ ಬಗ್ಗೆ ಆತಂಕದ ಭಾವವಿದೆ. ರಾಜ್ಯದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳು ಮತ್ತು ಮಹಿಳೆಯರ ಮೇಲಿನ ಹಲ್ಲೆ ಪ್ರಕರಣಗಳು ಭೀತಿ ಮೂಡಿಸಿರುವುದಂತೂ ಹೌದು.
ಬಾಂಗ್ಲಾದೇಶದಿಂದ ಬಂದು ನೆಲೆಸಿರುವ ಅಕ್ರಮ ವಲಸಿಗರು ಸ್ಥಳೀಯರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂಬ ಆಕ್ರೋಶವೂ ವ್ಯಾಪಕವಾಗಿದೆ. ಎಸ್ಐಆರ್ ಹೊತ್ತಲ್ಲಿ ಅಕ್ರಮ ವಲಸಿಗರ ಹೆಸರನ್ನು ಮತದಾರ ಪಟ್ಟಿಯಿಂದ ಕೈ ಬಿಡಲಾಗಿದೆಯಾದರೂ, ಈ ವಿಷಯದಲ್ಲಿ ಪೂರ್ತಿ ಶುದ್ಧೀಕರಣ ಸಾಧ್ಯವಾಗಿಲ್ಲ ಎಂಬುದು ವಾಸ್ತವ.
ಚುನಾವಣೆ ವೇಳಾಪಟ್ಟಿ ಘೋಷಣೆಯ ಕೆಲ ದಿನ ಮುನ್ನ ಅಂದರೆ ಮಾರ್ಚ್ 1ರಂದು ಬಿಜೆಪಿ ರಾಜ್ಯದಲ್ಲಿ ಪರಿವರ್ತನಾ ಯಾತ್ರೆಯನ್ನು ಆರಂಭಿಸಿ, 5 ಸಾವಿರ ಕಿ.ಮೀ. ಕ್ರಮಿಸಿದೆ. ಆಡಳಿತ ವಿರೋಧಿ ಅಲೆಯ ಲಾಭವನ್ನು ಪಡೆದು, ಗೆಲುವಿನತ್ತ ಸಾಗಬೇಕು ಎಂಬುದೇ ಈ ಯಾತ್ರೆಯ ಉದ್ದೇಶವಾಗಿದೆ. ಮಾರ್ಚ್ 14ರಂದು ಕೋಲ್ಕತ್ತದಲ್ಲಿ ನಡೆದ ಯಾತ್ರೆಯ ಸಮಾರೋಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ, ಟಿಎಂಸಿ ಸರ್ಕಾರದ ನೀತಿಗಳನ್ನು ಕಟುವಾಗಿ ಟೀಕಿಸಿದರು. ‘ಜಂಗಲ್ರಾಜ್ ನಡೆಸಿದವರು ಆಡಳಿತದಿಂದ ನಿರ್ಗಮಿಸಲು ಕೌಂಟ್ಡೌನ್ ಆರಂಭವಾಗಿದೆ.
ಯುವ ಮತದಾರರು ಬಂಗಾಳದಲ್ಲಿ ಬದಲಾವಣೆ ತರಲು ಸಜ್ಜಾಗಿದ್ದಾರೆ. ಈ ಬಾರಿಯ ಚುನಾವಣೆ ಕೇವಲ ಸರ್ಕಾರ ಬದಲಾಯಿಸುವುದಕ್ಕಲ್ಲ, ಬದಲಾಗಿ, ಬಂಗಾಳದ ಆತ್ಮವನ್ನು ರಕ್ಷಿಸುವುದಕ್ಕಾಗಿ ನಡೆಯುತ್ತಿದೆ’ ಎಂದರು. ಈ ಯಾತ್ರೆಯ ನಿಮಿತ್ತ ಬಿಜೆಪಿಯ ರಾಷ್ಟ್ರೀಯ ನಾಯಕರು ಒಂದು ಸುತ್ತಿನ ಪ್ರಚಾರ ನಡೆಸಿದ್ದಾರೆ. ಬಿಜೆಪಿ ನೂತನ ಅಧ್ಯಕ್ಷ ನಿತಿನ್ ನವೀನ್, ಕೇಂದ್ರ ಸಚಿವರುಗಳಾದ ಅಮಿತ್ ಷಾ, ರಾಜನಾಥ್ ಸಿಂಗ್, ಜೆ.ಪಿ.ನಡ್ಡಾ, ಶಿವರಾಜ್ ಸಿಂಗ್ ಚೌಹಾಣ್, ಅನ್ನಪೂರ್ಣಾ ದೇವಿ, ಧಮೇಂದ್ರ ಪ್ರಧಾನ್ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.