700 ಮತಗಳ ಪೈಕಿ ದೀದಿಗೆ ಬಿದ್ದಿದ್ದು ಕೇವಲ 28 ವೋಟ್!; ಸ್ವಂತ ವಾರ್ಡ್‌ನಲ್ಲೇ ಮಮತಾ ಬ್ಯಾನರ್ಜಿಗೆ ದೊಡ್ಡ ಮುಖಭಂಗ | Bhabanipur Result

Bhabanipur Result | ಸ್ವಂತ ವಾರ್ಡ್‌ನಲ್ಲೇ ಮಮತಾ ಬ್ಯಾನರ್ಜಿಗೆ ದೊಡ್ಡ ಮುಖಭಂಗ
Bhabanipur Result | ಸ್ವಂತ ವಾರ್ಡ್‌ನಲ್ಲೇ ಮಮತಾ ಬ್ಯಾನರ್ಜಿಗೆ ದೊಡ್ಡ ಮುಖಭಂಗ
Published on
Bhabanipur Result: ಮಮತಾ ಬ್ಯಾನರ್ಜಿಯನ್ನು ಅವರದೇ ಕೋಟೆಯಲ್ಲಿ ಸೋಲಿಸಿ ಎಂದು ಚುನಾವಣೆಗೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಷಾ ನೀಡಿದ್ದ ಸೂಚನೆಯನ್ನು, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅಕ್ಷರಶಃ ನಿಜ ಮಾಡಿ ತೋರಿಸಿದ್ದಾರೆ. ಕೋಲ್ಕತ್ತಾದ ಭವಾನಿಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಸೋಲಿಸುವುದು ಮಾತ್ರವಲ್ಲದೆ, ಅವರು ವಾಸಿಸುವ ಸ್ವಂತ ವಾರ್ಡ್‌ನಲ್ಲಿಯೇ ಸುವೇಂದು ಭರ್ಜರಿ ಜಯ ಸಾಧಿಸಿದ್ದಾರೆ ಎಂದು ಚುನಾವಣಾ ಆಯೋಗದ ಬೂತ್‌ವಾರು ಫಲಿತಾಂಶಗಳು ಬಹಿರಂಗಪಡಿಸಿವೆ.
ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಭವಾನಿಪುರ ಕ್ಷೇತ್ರದ ಒಟ್ಟು 267 ಬೂತ್‌ಗಳ ಪೈಕಿ 207 ಬೂತ್‌ಗಳಲ್ಲಿ ಸುವೇಂದು ಅಧಿಕಾರಿ ಭಾರಿ ಮುನ್ನಡೆ ಸಾಧಿಸಿದ್ದಾರೆ. ಮಮತಾ ಬ್ಯಾನರ್ಜಿ ಅವರ ಕಾಲಿಘಾಟ್ ನಿವಾಸವಿರುವ ವಾರ್ಡ್ ನಂಬರ್ 73 ರಲ್ಲಿಯೇ ಸುವೇಂದು ಅಧಿಕಾರಿ 8,932 ಮತಗಳನ್ನು ಪಡೆದರೆ, ಮಮತಾ ಬ್ಯಾನರ್ಜಿ ಕೇವಲ 4,284 ಮತಗಳನ್ನು ಪಡೆಯಲಷ್ಟೇ ಶಕ್ತರಾಗಿದ್ದಾರೆ. ಅಂದರೆ ತಮ್ಮದೇ ಸ್ವಂತ ವಾರ್ಡ್‌ನಲ್ಲಿ ದೀದಿ ಮುಖಭಂಗ ಅನುಭವಿಸಿದ್ದಾರೆ.
ಚುನಾವಣೆಗೂ ಮುನ್ನ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಅಮಿತ್ ಷಾ, ಮಮತಾ ಬ್ಯಾನರ್ಜಿಯನ್ನು ಅವರ ಮನೆಗೇ ಹೋಗಿ ಸೋಲಿಸಬೇಕು ಎಂದು ನಾನು ಸುವೇಂದು ಅಧಿಕಾರಿಗೆ ಸ್ಪಷ್ಟವಾಗಿ ಹೇಳಿದ್ದೇನೆ ಎಂದು ತಿಳಿಸಿದ್ದರು. ಪಕ್ಷದ ಹಿರಿಯ ನಾಯಕರ ಆ ಆಸೆಯನ್ನು ಸುವೇಂದು ಅಧಿಕಾರಿ ಈಡೇರಿಸಿದ್ದಾರೆ.
ಮಮತಾ ಬ್ಯಾನರ್ಜಿ ಕಾಲಿಘಾಟ್ ನಿವಾಸದಿಂದ ಸುಮಾರು 150 ಕಿಲೋಮೀಟರ್ ದೂರದಲ್ಲಿರುವ ಕಾಂತಿ (Kanthi) ನಿವಾಸಿಯಾದ ಸುವೇಂದು ಅಧಿಕಾರಿಗೆ ದಕ್ಷಿಣ ಕೋಲ್ಕತ್ತಾದ ಈ ಕ್ಷೇತ್ರದಲ್ಲಿ ಚುನಾವಣೆಗೂ ಮುಂಚೆ ಯಾವುದೇ ರಾಜಕೀಯ ನೆಲೆಯಾಗಲಿ ಅಥವಾ ಬಲವಾಗಲಿ ಇರಲಿಲ್ಲ. ಆದರೆ ದೀದಿ ಅವರದೇ ವಾರ್ಡ್‌ನಲ್ಲಿ ಅವರಿಗಿಂತ ಎರಡರಷ್ಟು ಹೆಚ್ಚು ಮತಗಳನ್ನು ಪಡೆಯುವ ಮೂಲಕ ಸುವೇಂದು ಇತಿಹಾಸ ಸೃಷ್ಟಿಸಿದ್ದಾರೆ. ಕ್ಷೇತ್ರದಲ್ಲಿ ಸುವೇಂದು ಅಧಿಕಾರಿ ಶೇಕಡಾ 63 ರಷ್ಟು ಮತ ಪಡೆದುಕೊಂಡರೆ, ಮಮತಾ ಬ್ಯಾನರ್ಜಿ ಕೇವಲ ಶೇಕಡಾ 30 ರಷ್ಟು ಮತಗಳನ್ನಷ್ಟೇ ಪಡೆಯಲು ಯಶಸ್ವಿಯಾಗಿದ್ದಾರೆ.

ಒಂದೊಂದು ಬೂತ್‌ನಲ್ಲಿ 28, 29, 31 ಮತಗಳಷ್ಟೇ ದೀದಿ ಪಾಲು!

ಇನ್ನು ಭವಾನಿಪುರದಾದ್ಯಂತ ಸುವೇಂದು ಗೆಲುವಿನ ಅಂತರ ಎಷ್ಟು ಆಘಾತಕಾರಿಯಾಗಿತ್ತೆಂದರೆ, ಕೆಲವು ಬೂತ್‌ಗಳಲ್ಲಿ ಮಮತಾ ಬ್ಯಾನರ್ಜಿಗೆ ಕನಿಷ್ಠ 50 ಮತಗಳೂ ಸಿಕ್ಕಿಲ್ಲ! ಭವಾನಿಪುರದ ಪ್ರತಿಯೊಂದು ಬೂತ್‌ನಲ್ಲಿ ಸರಿಸುಮಾರು 400 ರಿಂದ 700 ಮತದಾರರಿದ್ದಾರೆ. ಆದರೂ, ಬೂತ್ ನಂಬರ್ 14 ರಲ್ಲಿ ಮಮತಾ ಬ್ಯಾನರ್ಜಿಗೆ ಕೇವಲ 43 ಮತಗಳು, ಬೂತ್ 16 ರಲ್ಲಿ 42, ಬೂತ್ 20 ರಲ್ಲಿ 41, ಬೂತ್ 24 ರಲ್ಲಿ 45, ಬೂತ್ 77 ರಲ್ಲಿ 40, ಬೂತ್ 89 ರಲ್ಲಿ 41 ಮತ್ತು ಬೂತ್ 105 ರಲ್ಲಿ ಕೇವಲ 31 ಮತಗಳು ಬಿದ್ದಿವೆ. ಇದೇ ರೀತಿ ಬೂತ್ 149 ರಲ್ಲಿ 44, ಬೂತ್ 158 ರಲ್ಲಿ 46, ಬೂತ್ 176 ರಲ್ಲಿ 29, ಬೂತ್ 242 ರಲ್ಲಿ 40, ಬೂತ್ 249 ರಲ್ಲಿ 28 ಮತ್ತು ಬೂತ್ 263 ರಲ್ಲಿ ಕೇವಲ 30 ಮತಗಳನ್ನು ಪಡೆಯಲಷ್ಟೇ ದೀದಿ ಶಕ್ತರಾಗಿದ್ದಾರೆ.
ಹಿಂದಿನ 2021 ರ ಭವಾನಿಪುರ ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಎಲ್ಲಾ ಏಳು ವಾರ್ಡ್‌ಗಳಲ್ಲಿ ಜಯಗಳಿಸಿದ್ದರು. ಆದರೆ ಈ ಬಾರಿ ಭವಾನಿಪುರದ ಮೇಲಿನ ತಮ್ಮ ಹಿಡಿತವನ್ನು ಸಂಪೂರ್ಣವಾಗಿ ಕಳೆದುಕೊಂಡಿರುವ ಮಮತಾ ಬ್ಯಾನರ್ಜಿ 58,812 ಮತಗಳನ್ನು ಪಡೆದರೆ, ಸುವೇಂದು ಅಧಿಕಾರಿ 73,917 ಮತಗಳನ್ನು ಪಡೆದು ಟಿಎಂಸಿ ಕೋಟೆಯನ್ನು ಧೂಳೀಪಟ ಮಾಡಿದ್ದಾರೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net