Bengal SIR​ | ಸಿಎಂ ಮಮತಾ ಬ್ಯಾನರ್ಜಿ ಕ್ಷೇತ್ರದ 44,787 ಮತದಾರರ ಹೆಸರು ಡಿಲೀಟ್​!

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
Published on
ಕೊಲ್ಕತ್ತಾ: ಚುನಾವಣಾ ಆಯೋಗ ಶುಕ್ರವಾರ (ಡಿ.13) ಬಿಡುಗಡೆ ಮಾಡಿದ ಕ್ಷೇತ್ರವಾರು ಅಂಕಿಅಂಶಗಳ ಪ್ರಕಾರ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಭಬಾನಿಪುರ ಕ್ಷೇತ್ರವ ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಮತದಾರರ ಪಟ್ಟಿಯಲ್ಲಿನ ಹೆಸರುಗಳನ್ನು ಅಳಿಸಲಾಗಿದೆ ಎನ್ನುವ ಮಾಹಿತಿ ಇದ್ದು, ಇತ್ತ ವಿಪಕ್ಷ ನಾಯಕ ಸುವೇಂದು ಅಧಿಕಾರಿ ಅವರ ನಂದಿಗ್ರಾಮಕ್ಕೆ ಹೋಲಿಸಿದರೆ ಸುಮಾರು ನಾಲ್ಕು ಪಟ್ಟು ಹೆಚ್ಚು ಎನ್ನಲಾಗಿದೆ.
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಡಿಯಲ್ಲಿ ಎಣಿಕೆ ನಮೂನೆಗಳನ್ನು ಸಲ್ಲಿಸಲು ಗಡುವು ಮುಗಿದ ಒಂದು ದಿನದ ಬಳಿಕ ಚುನಾವಣಾ ಆಯೋಗವು ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ.
ಸಿಎಂ ಬ್ಯಾನರ್ಜಿ ಪ್ರತಿನಿಧಿಸುವ ದಕ್ಷಿಣ ಕೋಲ್ಕತ್ತಾದ ಭಬಾನಿಪುರದಲ್ಲಿ ಪಟ್ಟಿ ಮಾಡಲಾದ 2,06,295 ಮತದಾರರಲ್ಲಿ 44,787 ಮತದಾರರನ್ನು ಅಳಿಸಲಾಗಿದೆ ಎಂದು ಅಂಕಿ ಅಂಶದಲ್ಲಿ ಉಲ್ಲೇಖವಾಗಿದ್ದು, ಭೂಸ್ವಾಧೀನ ವಿರೋಧಿ ಚಳವಳಿಯ ನಿರ್ಣಾಯಕ ಮತ್ತು ಸುವೇಂದು ಅಧಿಕಾರಿಯ ಭದ್ರಕೋಟೆಯಾಗಿದ್ದ ನಂದಿಗ್ರಾಮ್‌ನಲ್ಲಿ 2,78,212 ಮತದಾರರಲ್ಲಿ 10,599 ಮತದಾರರನ್ನು ಅಳಿಸಲಾಗಿದೆ. ಮೃತರು, ಸ್ಥಳಾಂತರಗೊಂಡವರು ಮತ್ತು ಪತ್ತೆಹಚ್ಚಲಾಗದ ವಿಳಾಸಗಳು ಮತ್ತು ನಕಲಿ ನಮೂದುಗಳಂತಹ ಪ್ರಮಾಣಿತ ವರ್ಗಗಳ ಅಡಿಯಲ್ಲಿ ಇದನ್ನು ವರ್ಗೀಕರಿಸಿದೆ. ಅಧಿಕಾರಿಗಳು ಈ ಪ್ರಕ್ರಿಯೆಯನ್ನು ರಾಜ್ಯಾದ್ಯಂತ ಏಕರೂಪದ ಮಾನದಂಡಗಳನ್ನು ಅನುಸರಿಸಿದ್ದಾರೆ ಎನ್ನಲಾಗಿದೆ.
ರಾಜ್ಯದ 294 ವಿಧಾನಸಭಾ ಕ್ಷೇತ್ರಗಳ ಪೈಕಿ, ಟಿಎಂಸಿ ಶಾಸಕಿ ನಯನಾ ಬಂಡೋಪಾಧ್ಯಾಯ ಪ್ರತಿನಿಧಿಸುವ ಉತ್ತರ ಕೋಲ್ಕತ್ತಾದ ಚೌರಿಂಗೀ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರನ್ನು (74,553) ಪಟ್ಟಿಯಿಂದ ತೆಗೆದುಹಾಕಲಾಗಿದೆ. ಮೂರು ಬಾರಿ ಶಾಸಕಿಯಾಗಿ ಆಯ್ಕೆಯಾಗಿರುವ ನಯನಾ, 2021 ರಲ್ಲಿ 44,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಹಿರಿಯ ಸಚಿವ ಫಿರ್ಹಾದ್ ಹಕೀಮ್ ಪ್ರತಿನಿಧಿಸುವ ಕೋಲ್ಕತ್ತಾ ಬಂದರು ಕ್ಷೇತ್ರದ 63,730, ಸಚಿವ ಅರೂಪ್ ಬಿಸ್ವಾಸ್​​ರ ಟಾಲಿಗಂಜ್‌ನಲ್ಲಿ 35,309 ಮತದಾರರು ಪಟ್ಟಿಯಿಂದ ಹೊರಬಿದ್ದಿದ್ದಾರೆ. ಬಿಜೆಪಿಯ ಶಾಸಕರ ಕ್ಷೇತ್ರಗಳಲ್ಲೂ ಸಹ ದೊಡ್ಡ ಮಟ್ಟದಲ್ಲಿ ಮತದಾರರನ್ನು ತೆಗೆದುಹಾಕಲಾಗಿದ್ದು, ಅಗ್ನಿಮಿತ್ರ ಪಾಲ್ ಪ್ರತಿನಿಧಿಸುವ ಅಸನ್ಸೋಲ್ ದಕ್ಷಿಣವು 39,202, ಶಂಕರ್ ಘೋಷ್ ಪ್ರತಿನಿಧಿಸುವ ಸಿಲಿಗುರಿಯಲ್ಲಿ 31,181 ಮತದಾರರ ಹೆಸರು ಡಿಲೀಟ್​ ಆಗಿವೆ.
ಈ ಅಂಕಿ ಅಂಶಗಳ ಬಗ್ಗೆ ಮಾತನಾಡಿರುವ ಟಿಎಂಸಿ ವಕ್ತಾರ ಕ್ರಿಶಾನು ಮಿತ್ರ, ಪಕ್ಷವು ಇದನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದು, ಮೃತ ಮತದಾರರು ಮತ್ತು ವಿಳಾಸ ಬದಲಾಯಿಸಿಕೊಂಡಿರುವ ಮತದಾರರನ್ನು ಕೈಬಿಟ್ಟಿದ್ದರೆ, ನಮ್ಮ ಅಭ್ಯಂತರವಿಲ್ಲ, ಆದರೆ, ಒಬ್ಬನೇ ಒಬ್ಬ ನೈಜ ಮತದಾರ ಪಟ್ಟಿಯಿಂದ ಹೊರಬಿದ್ದರೆ, ನಾವು ಈ ದುಷ್ಟ ಉದ್ದೇಶದ ವಿರುದ್ಧ ಪ್ರಜಾಸತ್ತಾತ್ಮಕವಾಗಿ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದರು.

ಪಶ್ಚಿಮ ಬಂಗಾಳದಲ್ಲಿ ಎಸ್​​ಐಆರ್​​

ಪಶ್ಚಿಮ ಬಂಗಾಳದಲ್ಲಿ ಕರಡು ಮತದಾರರ ಪಟ್ಟಿಯನ್ನು ಡಿಸೆಂಬರ್ 16 ರಂದು ಪ್ರಕಟಿಸಲಿದ್ದು, ಆ ಪಟ್ಟಿಯ ಕುರಿತಾಗಿ ಯಾವುದೇ ರೀತಿಯ ದೂರುಗಳು ಅಥವಾ ದೋಷಗಳಿದ್ದರೆ ಅವುಗಳನ್ನು ಆಯೋಗಕ್ಕೆ ವರದಿ ಮಾಡಬಹುದು. ಈ ವರದಿಗಳ ಆಧಾರದ ಮೇಲೆ ವಿಚಾರಣೆಗಳನ್ನು ನಡೆಸಲಾಗುತ್ತದೆ. ಎಲ್ಲಾ ಪುರಾವೆಗಳನ್ನು ಪರಿಶೀಲಿಸಿದ ಬಳಿಕವೇ, ಆಯೋಗ ಅಂತಿಮ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ರಾಜ್ಯದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ನವೆಂಬರ್ 4 ರಂದು ಎಣಿಕೆ ನಮೂನೆಗಳ ವಿತರಣೆಯೊಂದಿಗೆ ಪ್ರಾರಂಭವಾಯಿತು, ಇದು ಡಿಸೆಂಬರ್ 11 ರಂದು ಕೊನೆಗೊಂಡಿದೆ. ಅಂತಿಮ ಮತದಾರರ ಪಟ್ಟಿಯನ್ನು ಫೆಬ್ರವರಿ 14, 2026 ರಂದು ಬಿಡುಗಡೆ ಮಾಡಲಾಗುತ್ತದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net