ದೆಹಲಿಯ ಬಂಗಾ ಭವನದಲ್ಲಿ ಮಮತಾ ಬ್ಯಾನರ್ಜಿ ವರ್ಸಸ್ ದೆಹಲಿ ಪೊಲೀಸ್: ಹೈ-ವೋಲ್ಟೇಜ್ ಡ್ರಾಮಾಕ್ಕೆ ಸಾಕ್ಷಿಯಾದ ರಾಜಧಾನಿ | Mamata In Delhi

ದೆಹಲಿಯ ಬಂಗಾ ಭವನದಲ್ಲಿ ಮಮತಾ ಬ್ಯಾನರ್ಜಿ ವರ್ಸಸ್ ದೆಹಲಿ ಪೊಲೀಸ್: ಹೈ-ವೋಲ್ಟೇಜ್ ಡ್ರಾಮಾಕ್ಕೆ ಸಾಕ್ಷಿಯಾದ ರಾಜಧಾನಿ
ದೆಹಲಿಯ ಬಂಗಾ ಭವನದಲ್ಲಿ ಮಮತಾ ಬ್ಯಾನರ್ಜಿ ವರ್ಸಸ್ ದೆಹಲಿ ಪೊಲೀಸ್: ಹೈ-ವೋಲ್ಟೇಜ್ ಡ್ರಾಮಾಕ್ಕೆ ಸಾಕ್ಷಿಯಾದ ರಾಜಧಾನಿ
Published on
ನವದೆಹಲಿ: ಮತದಾರರ ಪಟ್ಟಿ ಪರಿಷ್ಕರಣೆ(SIR) ಪ್ರಕ್ರಿಯೆಯಿಂದ ಸಂತ್ರಸ್ತರಾದ ಕುಟುಂಬಗಳಿಗೆ ನ್ಯಾಯ ಕೊಡಿಸಲು ದೆಹಲಿಗೆ ಆಗಮಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata In Delhi), ದೆಹಲಿ ಪೊಲೀಸರ ವಿರುದ್ಧ ಕಿಡಿಗಾರಿದ್ದಾರೆ. ದೆಹಲಿಯ ಬಂಗಾ ಭವನದ ಹೊರಗೆ ನಿಯೋಜಿಸಲಾಗಿದ್ದ ಭಾರಿ ಭದ್ರತಾ ಪಡೆಯನ್ನು ಕಂಡು ಕೆರಳಿದ ಮಮತಾ, ಭದ್ರತಾ ಸಿಬ್ಬಂದಿಯನ್ನು ನೇರವಾಗಿ ಪ್ರಶ್ನಿಸುವ ಮೂಲಕ ಮುಖಾಮುಖಿಯಾಗಿದ್ದಾರೆ.
ಬಂಗಾ ಭವನದ ಹೊರಗೆ ಪೊಲೀಸರ ಭಾರಿ ಸರ್ಪಗಾವಲನ್ನು ಕಂಡು ಮಮತಾ ಬ್ಯಾನರ್ಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನಿಲ್ಲಿ ಪ್ರತಿಭಟನೆ ಮಾಡಲು ಬಂದಿಲ್ಲ, ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಕೊಡಿಸಲು ಬಂದಿದ್ದೇನೆ. ಪೊಲೀಸರು ಸಂವೇದನಾಶೀಲರಾಗಿ ವರ್ತಿಸಬೇಕು ಎಂದು ಪೊಲೀಸರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸಂತ್ರಸ್ತ ಕುಟುಂಬಗಳ ಭೇಟಿ
ಬಂಗಾಳದ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಿಂದಾಗಿ ಲಕ್ಷಾಂತರ ಜನರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ ಮತ್ತು ಅನೇಕ ಕುಟುಂಬಗಳು ಬೀದಿಗೆ ಬಂದಿವೆ ಎಂಬುದು ತೃಣಮೂಲ ಕಾಂಗ್ರೆಸ್ (TMC) ಆರೋಪವಾಗಿದೆ. ಇಂತಹ ಸಂತ್ರಸ್ತ ಕುಟುಂಬಗಳು ತಂಗಿರುವ ಬಂಗಾ ಭವನಕ್ಕೆ ಮಮತಾ ಭೇಟಿ ನೀಡಿದ್ದರು.

SIR ಎಂದರೆ ಸಾಫ್ಟ್‌ವೇರ್ ಇಂಟೆನ್ಸಿವ್ ರಿಗ್ಗಿಂಗ್..?

ಮುಂದುವರೆದು ಮಾತನಾಡಿದ ಮಮತಾ, ಈ ಪ್ರಕ್ರಿಯೆಯನ್ನು ಸಾಫ್ಟ್‌ವೇರ್ ಇಂಟೆನ್ಸಿವ್ ರಿಗ್ಗಿಂಗ್ ಎಂದು ಕರೆದಿದ್ದಾರೆ. ಚುನಾವಣಾ ಆಯೋಗವು ಉದ್ದೇಶಪೂರ್ವಕವಾಗಿ ಬಂಗಾಳದ ಮತದಾರರನ್ನು ಗುರಿಯಾಗಿಸುತ್ತಿದೆ ಎಂದು ದೂರಿದ್ದಾರೆ.

ಅಮಿತ್ ಶಾ ವಿರುದ್ಧ ವಾಗ್ದಾಳಿ 

ಗೃಹ ಸಚಿವರು ಬಂಗಾಳಕ್ಕೆ ಬಂದಾಗ ನಾವು ಕೆಂಪು ಕಾರ್ಪೆಟ್ ಹಾಸಿ ಸ್ವಾಗತಿಸುತ್ತೇವೆ. ಆದರೆ ನಾವು ದೆಹಲಿಗೆ ಬಂದರೆ ನೀವು ನಮಗೆ ಕಪ್ಪು ಕಾರ್ಪೆಟ್ ಹಾಸಿ ಕಿರುಕುಳ ನೀಡುತ್ತೀರಿ ಎಂದು ದೀದಿ ದೆಹಲಿ ಪೊಲೀಸರ ನಿಯಂತ್ರಣ ಹೊಂದಿರುವ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ಧಾರೆ.

SIR ವಿವಾದವೇನು..?

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗವು ನಡೆಸುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸುಮಾರು 58 ಲಕ್ಷ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಟಿಎಂಸಿ ಆರೋಪಿಸಿದೆ. ಈ ಕುರಿತು ಮಮತಾ ಬ್ಯಾನರ್ಜಿ ಈಗಾಗಲೇ ಮುಖ್ಯ ಚುನಾವಣಾ ಆಯುಕ್ತರಿಗೆ 6 ಪತ್ರಗಳನ್ನು ಬರೆದಿದ್ದಾರೆ. ಈ ಪ್ರಕ್ರಿಯೆಯಿಂದಾಗಿ ಉಂಟಾದ ಒತ್ತಡದಿಂದ ರಾಜ್ಯದಲ್ಲಿ ಸುಮಾರು 140 ಜನರು ಮೃತಪಟ್ಟಿದ್ದಾರೆ ಎಂದು ಮಮತಾ ಗಂಭೀರ ಆರೋಪ ಮಾಡಿದ್ದಾರೆ.

ರಾಜಕೀಯ ಪ್ರಹಸನ

ದೆಹಲಿಯಲ್ಲಿ ಬೀಡುಬಿಟ್ಟಿರುವ ಮಮತಾ ಮತ್ತು ಅಭಿಷೇಕ್ ಬ್ಯಾನರ್ಜಿ ನೇತೃತ್ವದ 15 ಸದಸ್ಯರ ನಿಯೋಗವು ಇಂದು ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ಈ ಬಗ್ಗೆ ದೂರು ನೀಡಲಿದೆ. ಬಂಗಾ ಭವನದ ಹೊರಗಿನ ಈ ಸಂಘರ್ಷವು ಮುಂಬರುವ ಬಂಗಾಳ ಚುನಾವಣೆಯ ಮುನ್ಸೂಚನೆಯಂತೆ ಕಂಡುಬರುತ್ತಿದೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net