ಮೋದಿ-ಅಮಿತ್ ಷಾ ಕಾರುಗಳನ್ನೇಕೆ ಚೆಕ್ ಮಾಡಲ್ಲ..? ತಪಾಸಣೆ ನಡೆಸಿದ ಕೇಂದ್ರ ಪಡೆಗಳ ವಿರುದ್ಧ ದೀದಿ ಕಿಡಿ | Mamata Banerjee

Mamata Banerjee | ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
Mamata Banerjee | ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
Published on
ಕೊಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಕಣದಲ್ಲಿ ಕೇಂದ್ರ ಪಡೆಗಳ ಭದ್ರತಾ ತಪಾಸಣೆಯ ವಿಚಾರ ಈಗ ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದು, ಕೋಲ್ಕತ್ತಾ ವಿಮಾನ ನಿಲ್ದಾಣದ ಬಳಿ ಕೇಂದ್ರ ಪಡೆಗಳು ತಮ್ಮ ಕಾರನ್ನು ತಡೆದು ತಪಾಸಣೆ ನಡೆಸಲು ಯತ್ನಿಸಿದ ಬೆನ್ನಲ್ಲೇ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಕೇಂದ್ರ ಸರ್ಕಾರದ ವಿರುದ್ಧ ಸೆಲೆಕ್ಟಿವ್​ ಟಾರ್ಗೆಟ್​ ಆರೋಪ ಮಾಡಿದ್ದಾರೆ.
ಈ ಕುರಿತಾಗಿ ತೃಣಮೂಲ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಅಧಿಕೃತ ದೂರು ಸಲ್ಲಿಸಿದ್ದು, ಪೊಲೀಸರು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಿಗೆ ರವಾನಿಸಲಾಗಿದೆ ಎನ್ನಲಾದ ಆಪಾದಿತ ವಾಟ್ಸಾಪ್ ನಿರ್ದೇಶನದ ಸ್ಕ್ರೀನ್‌ಶಾಟ್‌ಗಳನ್ನು ಬಹಿರಂಗಪಡಿಸಿದೆ.
ಇಸ್ಲಾಂಪುರದಲ್ಲಿ ನಡೆದ ಬೃಹತ್ ಸಭೆಯಲ್ಲಿ ಈ ಘಟನೆಯನ್ನು ಉಲ್ಲೇಖಿಸಿದ ಮಮತಾ ಬ್ಯಾನರ್ಜಿ, ಡಮ್ ಡಮ್ ವಿಮಾನ ನಿಲ್ದಾಣಕ್ಕೆ ತೆರಳುವಾಗ ಕೇಂದ್ರ ಪಡೆಗಳು ತಮ್ಮ ಕಾರನ್ನು ತಡೆದಿದ್ದವು ಎಂದು ತಿಳಿಸಿದರು. ನನ್ನ ಕಾರನ್ನು ಪರೀಕ್ಷಿಸಲು ಅವರಿಗೆ ಮುಕ್ತ ಅವಕಾಶ ನೀಡಿದೆ. ಆದರೆ ನನ್ನ ಪ್ರಶ್ನೆಯೆಂದರೆ, ಕೇವಲ ತೃಣಮೂಲ ಕಾಂಗ್ರೆಸ್ ನಾಯಕರನ್ನು ಮಾತ್ರ ಏಕೆ ಗುರಿ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು.

ಮೋದಿ-ಅಮಿತ್ ಷಾ ಕಾರುಗಳನ್ನೇಕೆ ಚೆಕ್ ಮಾಡಲ್ಲ..?

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಅಥವಾ ಬಿಜೆಪಿ ನಾಯಕರ ವಾಹನಗಳನ್ನು ಏಕೆ ತಪಾಸಣೆ ನಡೆಸುತ್ತಿಲ್ಲ..? ಎಂದು ಪ್ರಶ್ನಿಸಿದ ದೀದಿ, ಕೇಂದ್ರ ಸಚಿವರು ಹಣವನ್ನು ಸಾಗಿಸುತ್ತಾರೆ ಎಂದು ಆರೋಪಿಸುತ್ತಾ, ತಾವೊಬ್ಬ ರಾಜಕಾರಣಿಯಾಗಿ ಒಂದು ಪೈಸೆ ಸಂಬಳವನ್ನೂ ಪಡೆಯದೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು.
ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮತ್ತು ಅವರ ಪತ್ನಿ ರುಜಿರಾ ಬ್ಯಾನರ್ಜಿ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ನಡೆಸುವಂತೆ ಭದ್ರತಾ ಅಧಿಕಾರಿಗಳಿಗೆ ವಾಟ್ಸಾಪ್ ಮೂಲಕ ಸೂಚನೆ ನೀಡಲಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ದೂರಿನಲ್ಲಿ ಆರೋಪಿಸಿದೆ. ಅಕ್ರಮ ಹಣ ಸಾಗಣೆಯ ಸಂಶಯದ ಮೇಲೆ ಈ ತಪಾಸಣೆ ನಡೆಸಲು ನಿರ್ದೇಶಿಸಲಾಗಿದೆ ಎಂಬ ಸ್ಕ್ರೀನ್‌ಶಾಟ್‌ಗಳಿವೆ ಎನ್ನುವುದು ಪಕ್ಷದ ವಾದವಾಗಿದೆ. ಈ ವಾಟ್ಸಾಪ್ ನಿರ್ದೇಶನದ ಹಿಂದೆ ಇರುವ ಅಧಿಕಾರಿಗಳನ್ನು ಪತ್ತೆಹಚ್ಚಲು ಆಂತರಿಕ ತನಿಖೆ ನಡೆಸಬೇಕು ಮತ್ತು ಅಂತಹ ಅಧಿಕಾರಿಗಳನ್ನು ತಕ್ಷಣವೇ ಚುನಾವಣಾ ಕರ್ತವ್ಯದಿಂದ ಮುಕ್ತಗೊಳಿಸಬೇಕು ಎಂದು ಟಿಎಂಸಿ ಆಗ್ರಹಿಸಿದೆ.

ಬಿಜೆಪಿ ತಿರುಗೇಟು..

ಟಿಎಂಸಿ ಆರೋಪಗಳಿಗೆ ತಿರುಗೇಟು ನೀಡಿರುವ ಬಿಜೆಪಿ, ಈ ಸ್ಕ್ರೀನ್‌ಶಾಟ್‌ಗಳು ಸುಳ್ಳು ಅಥವಾ ಎಐ ತಂತ್ರಜ್ಞಾನ ಬಳಸಿ ಸೃಷ್ಟಿಸಿರಬೇಕು ಎಂದಿದ್ದಾರೆ. ಬಿಜೆಪಿಯ ಮಾಜಿ ಸಂಸದೆ ಲಾಕೆಟ್ ಚಟರ್ಜಿ ಈ ವಿಷಯವಾಗಿ ಮಾತನಾಡಿದ್ದು, ಚುನಾವಣಾ ಆಯೋಗವು ನೀತಿ ಸಂಹಿತೆಯ ಅಡಿಯಲ್ಲಿ ಯಾವುದೇ ವಾಹನವನ್ನು ತಪಾಸಣೆ ನಡೆಸುವ ಅಧಿಕಾರ ಹೊಂದಿದೆ. ಇದರಲ್ಲಿ ಹೆದರುವ ಅಗತ್ಯವೇನಿದೆ? ಟಿಎಂಸಿ ನಾಯಕರು ಸಹಾನುಭೂತಿ ಪಡೆಯಲು ಈ ನಾಟಕವಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಈ ವಿವಾದದ ಕುರಿತು ಚುನಾವಣಾ ಆಯೋಗವು ಈವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಹೊರಬೀಳಲಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net