ಟಿಎಂಸಿಪಿ ಸಮಾವೇಶದಲ್ಲಿ ಕೋರ್ಟ್ ಆದೇಶ ಉಲ್ಲಂಘನೆ ಆರೋಪ: ಮಮತಾ ಬ್ಯಾನರ್ಜಿ ವಿರುದ್ಧ ಎಫ್​ಐಆರ್​ ದಾಖಲು! | Mamata Banerjee

Mamata Banerjee | ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
Mamata Banerjee | ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
Published on

ಇಲ್ಲಿನ ಹೈಕೋರ್ಟ್‌ ಆದೇಶವನ್ನು ಉಲ್ಲಂಘಿಸಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ವಿರುದ್ಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶುಕ್ರವಾರ, (ಆಗಸ್ಟ್ 28) ನಡೆದ ತೃಣಮೂಲ ಛಾತ್ರ ಪರಿಷತ್ (ಟಿಎಂಸಿಪಿ) ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.

ಮಾಜಿ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿಪಿ ಸಭೆಯ ಸಂಘಟಕರ ವಿರುದ್ಧ ಹೆಸ್ಟಿಂಗ್ಸ್ ಪೊಲೀಸ್ ಠಾಣೆಯಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘನೆಯ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ತನಿಖೆಯ ವೇಳೆ ಈ ಉಲ್ಲಂಘನೆಯಲ್ಲಿ ಭಾಗಿಯಾದ ಎಲ್ಲರ ಪಾತ್ರವನ್ನು ವಿವರವಾಗಿ ಪರಿಶೀಲಿಸಲಾಗುವುದು ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿ ನಾಯಕರ ವಿರುದ್ಧ ಕೇಸ್

ಇದಕ್ಕೂ ಮುನ್ನ ಶುಕ್ರವಾರ, ಕೋಲ್ಕತಾದ ಕೆಮ್ಯಾಕ್ ಸ್ಟ್ರೀಟ್‌ನಲ್ಲಿ ಹಾಕಿದ್ದ ಪಕ್ಷದ ಅನಧಿಕೃತ ಬೋರ್ಡ್‌ ವಿರುದ್ಧ ಆಡಳಿತ ಮಂಡಳಿ ಕ್ರಮ ಕೈಗೊಳ್ಳುತ್ತಿದ್ದಾಗ, ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಟಿಎಂಸಿ ನಾಯಕರಾದ ಅಭಿಷೇಕ್ ಬ್ಯಾನರ್ಜಿ, ಡೆರೆಕ್ ಓಬ್ರಿಯಾನ್ ಸೇರಿದಂತೆ ಹಲವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಶೇಕ್ಸ್‌ಪಿಯರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಕೋಲ್ಕತಾ ಮಹಾನಗರ ಪಾಲಿಕೆಯ ತಂಡವು ಪೊಲೀಸರೊಂದಿಗೆ ಗುರುವಾರ ಕೆಮ್ಯಾಕ್ ಸ್ಟ್ರೀಟ್‌ನ ಕಟ್ಟಡ ಸಂಖ್ಯೆ 9ರಲ್ಲಿ ಇದ್ದ ಅನಧಿಕೃತ ಹೋರ್ಡಿಂಗ್ ತೆರವುಗೊಳಿಸಲು ಬಂದಿತ್ತು. ಟಿಎಂಸಿ ಚಿಹ್ನೆ ಹೊಂದಿದ್ದ ಈ ಹೋರ್ಡಿಂಗ್ ತೆರವಿಗೆ ಪಾಲಿಕೆಯು ಪೊಲೀಸರ ನೆರವು ಪಡೆದಿತ್ತು. ಆದರೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ ಅಭಿಷೇಕ್ ಬ್ಯಾನರ್ಜಿ, ಡೆರೆಕ್ ಓಬ್ರಿಯಾನ್, ಬೈಶಾನೋರ್ ಚಟ್ಟೋಪಾಧ್ಯಾಯ ಹಾಗೂ ಇತರ ಟಿಎಂಸಿ ನಾಯಕರು ಗುಂಪು ಕಟ್ಟಿಕೊಂಡು, ಕರ್ತವ್ಯ ನಿರತರಾಗಿದ್ದ ಕೆಎಂಸಿ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಯೊಂದಿಗೆ ಗಲಾಟೆ ನಡೆಸಿ ಅಡ್ಡಿಪಡಿಸಿದ್ದರು.
ಟಿಎಂಸಿ ನಾಯಕರ ವಿರುದ್ಧ ಶೇಕ್ಸ್‌ಪಿಯರ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್‌ಗಳು 191(2), 191(3), 190, 121(1), 74, 3(5) ಮತ್ತು 351(2) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದು ರಾಜಕೀಯ ದ್ವೇಶವೆಂದ ಟಿಎಂಸಿ!...

ಪಾಲಿಕೆ ಮತ್ತು ಪೊಲೀಸರ ಈ ನಡವಳಿಕೆಯನ್ನು ಟಿಎಂಸಿ ಖಂಡಿಸಿದ್ದು, ಇದನ್ನು ರಾಜಕೀಯ ದ್ವೇಷ ಎಂದು ಕರೆದಿದೆ. ಏಪ್ರೀಲ್​​ ತಿಂಗಳಲ್ಲಿ ನಡೆದ ಪಶ್ಚಿಮ ಬಂಗಾಳ ಚುನಾವಣೆಯ ನಂತರ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಟಿಎಂಸಿಯನ್ನು ಕಂಡು ಭಯಗೊಂಡಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಂಸದ ಅಭಿಷೇಕ್ ಬ್ಯಾನರ್ಜಿ, ರಾಜ್ಯದಲ್ಲಿ ಸಾಂವಿಧಾನಿಕ ಆಡಳಿತವು ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ರಾಜ್ಯವು ಪೋಲಿಸ್ ಆಡಳಿತವಾಗಿ ಬದಲಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದರು.
ಸಾಂವಿಧಾನಿಕ ನಿಯಂತ್ರಣವಿಲ್ಲದೆ ರಾಜ್ಯ ಸರ್ಕಾರ ಕಾರ್ಯನಿರ್ವಹಿಸುತ್ತಿದ್ದಾಗ, ನ್ಯಾಯಾಂಗವೇ ನಮಗೆ ಕೊನೆಯ ಭರವಸೆಯಾಗಿರುತ್ತದೆ. ಮೂಲಭೂತ ಹಕ್ಕುಗಳು ಕಸಿಯಲ್ಪಡುತ್ತಿರುವಾಗ ನ್ಯಾಯಾಂಗ ಮಧ್ಯಪ್ರವೇಶಿಸದಿದ್ದರೆ, ವ್ಯಕ್ತಿಗಳ ಸ್ವಾತಂತ್ರ್ಯದೊಂದಿಗೆ, ಇಡೀ ಪ್ರಜಾಪ್ರಭುತ್ವದ ಅಸ್ತಿತ್ವವೇ ಅಪಾಯಕ್ಕೆ ಸಿಲುಕುತ್ತದೆ ಎಂದು ಬ್ಯಾನರ್ಜಿ ಬರೆದುಕೊಂಡಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net