ಕೇಂದ್ರದ ನೂತನ ಮಸೂದೆಯಲ್ಲಿ ಗಾಂಧಿ ಹೆಸರು ಮಾಯ..ನಮ್ಮ ಕರ್ಮಶ್ರೀಗೆ ರಾಷ್ಟ್ರಪಿತನ ಹೆಸರಿಡುತ್ತೇವೆ ಎಂದ ಮಮತಾ ಬ್ಯಾನರ್ಜಿ | Mamata Banerjee

Mamata Banerjee | ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
Mamata Banerjee | ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
Published on
ಕೊಲ್ಕತ್ತಾ: ಕೇಂದ್ರ ಸರ್ಕಾರ ಇತ್ತ ಲೋಕಸಭೆಯಲ್ಲಿ ನರೇಗಾ ಯೋಜನೆಯನ್ನು ಬದಲಾಯಿಸಿ ಹೊಸ ಜಿ ರಾಮ್​ ಜಿ ಮಸೂದೆಯನ್ನು ಅಂಗಿಕರಿಸಿದ್ದು, ಇತ್ತ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ತಮ್ಮ ಸರ್ಕಾರದ ಉದ್ಯೋಗ ಖಾತರಿ ಯೋಜನೆ ಕರ್ಮಶ್ರೀಗೆ ಮಹಾತ್ಮಾ ಗಾಂಧಿಯವರ ಹೆಸರನ್ನು ಇಡುವುದಾಗಿ ಘೋಷಿಸಿದ್ದಾರೆ.
ಧೋನೋ ಧನ್ಯೋ ಸಭಾಂಗಣದಲ್ಲಿ ನಡೆದ ವ್ಯಾಪಾರ ಮತ್ತು ಕೈಗಾರಿಕಾ ಸಮಾವೇಶದಲ್ಲಿ ಮಾತನಾಡಿದ ಬ್ಯಾನರ್ಜಿ, ನರೇಗಾ ಯೋಜನೆಯಿಂದ ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕಿದ್ದಕ್ಕೆ ನಾಚಿಕೆಯಾಗುತ್ತಿದೆ, ಅವರು ರಾಷ್ಟ್ರಪಿತನಿಗೆ ಗೌರವ ಸಲ್ಲಿಸಲು ಸಾಧ್ಯವಾಗದಿದ್ದರೆ, ನಾವು ಆ ಕೆಲಸವನ್ನು ಮಾಡುತ್ತೇವೆ ಎಂದು ಹೇಳಿದರು. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ, 2005 (MGNREGA) ಬದಲಿಗೆ ಉದ್ದೇಶಿಸಿರುವ ವಿಕ್ಷಿತ್ ಭಾರತ್ - ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (VB-G RAM G) ಮಸೂದೆಯನ್ನು ಲೋಕಸಭೆ ಅಂಗೀಕರಿಸಿದ ಸಂದರ್ಭದಲ್ಲಿ ಮಮತಾರಿಂದ ಈ ಘೋಷಣೆ ಹೊರಬಿದ್ದಿದೆ.

ಏನಿದು ಕರ್ಮಶ್ರೀ ಯೋಜನೆ..?

ಪಶ್ಚಿಮ ಬಂಗಾಳದಲ್ಲಿ ಕರ್ಮಶ್ರೀ ಯೋಜನೆಯಡಿಯಲ್ಲಿ ಅಲ್ಲಿನ ಸರ್ಕಾರ ಫಲಾನುಭವಿಗಳಿಗೆ 75 ದಿನಗಳವರೆಗೆ ಕೆಲಸ ಒದಗಿಸುವುದಾಗಿ ಹೇಳಿಕೊಂಡಿದೆ. ಈಗ ಕೇಂದ್ರ ಸರ್ಕಾರ MGNREGS ಅಡಿಯಲ್ಲಿ ಹಣವನ್ನು ನಿರ್ಬಂಧಿಸುತ್ತಿದೆ, ಭವಿಷ್ಯದಲ್ಲಿ ಕರ್ಮಶ್ರೀ ಅಡಿಯಲ್ಲಿ ಕೆಲಸದ ದಿನಗಳ ಸಂಖ್ಯೆಯನ್ನು 100 ಕ್ಕೆ ಹೆಚ್ಚಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ಮುಖ್ಯಮಂತ್ರಿ ಬ್ಯಾನರ್ಜಿ ತಿಳಿಸಿದ್ದಾರೆ. ನಾವು ಈಗಾಗಲೇ ಕರ್ಮಶ್ರೀ ಯೋಜನೆಯಡಿಯಲ್ಲಿ ಸಾಕಷ್ಟು ಕೆಲಸದ ದಿನಗಳನ್ನು ಸೃಷ್ಟಿಸಿದ್ದೇವೆ, ನಮ್ಮ ಸ್ವಂತ ಸಂಪನ್ಮೂಲಗಳಿಂದ ನಡೆಸುತ್ತಿದ್ದೇವೆ. ಕೇಂದ್ರದ ನಿಧಿಯನ್ನು ನಿಲ್ಲಿಸಿದರೂ, ಜನರಿಗೆ ಕೆಲಸ ಸಿಗುವಂತೆ ನೋಡಿಕೊಳ್ಳುತ್ತೇವೆ. ನಾವು ಭಿಕ್ಷುಕರಲ್ಲ ಎಂದು ಹೇಳಿದರು.

ಹೊಸ ಮಸೂದೆ ವಿರುದ್ಧ ವಿಪಕ್ಷಗಳ ಪ್ರತಿಭಟನೆ..

ಕೇಂದ್ರ ಸರ್ಕಾರ ಇಂದು ಸಂಸತ್ತಿನಲ್ಲಿ ಅಂಗೀಕರಿಸಿರುವ ಹೊಸ ಮಸೂದೆಯ ವಿರುದ್ಧ ವಿರೋಧ ಪಕ್ಷಗಳ ಸಂಸದರು ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಶ್ವದ ಅತಿದೊಡ್ಡ ಉದ್ಯೋಗ ಯೋಜನೆಯ ವ್ಯವಸ್ಥಿತ ಹತ್ಯೆಯ ವಿರುದ್ಧ ರಾಷ್ಟ್ರವ್ಯಾಪಿ ಚಳುವಳಿ ನಡೆಯಲಿದೆ ಎಂದು ಘೊಷಿಸಿದರು. ಪ್ರೇರಣಾ ಸ್ಥಳದ ಗಾಂಧಿ ಪ್ರತಿಮೆಯಿಂದ ಮಕರ ದ್ವಾರದವರೆಗೆ ಮೆರವಣಿಗೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಏನಿದು ಹೊಸ ಬಿಲ್​..?

ಈ ಮಸೂದೆಯು ಪ್ರತಿ ಹಣಕಾಸು ವರ್ಷದಲ್ಲಿ 125 ದಿನಗಳ ಕೂಲಿ ಉದ್ಯೋಗದ ಶಾಸನಬದ್ಧ ಖಾತರಿಯನ್ನು ಒದಗಿಸುತ್ತದೆ ಎಂದು ಹೇಳಲಾಗುತ್ತಿದ್ದು, ಅಲ್ಲಿ ವಯಸ್ಕ ಸದಸ್ಯರು ಕೌಶಲ್ಯರಹಿತ ದೈಹಿಕ ಕೆಲಸವನ್ನು ಕೈಗೊಳ್ಳಲು ಸ್ವಯಂಸೇವಕರಾಗುತ್ತಾರೆ. ಕಾಯ್ದೆ ಪ್ರಾರಂಭವಾದ ದಿನಾಂಕದಿಂದ ಆರು ತಿಂಗಳೊಳಗೆ, ರಾಜ್ಯಗಳು ಹೊಸ ಕಾನೂನಿನ ನಿಬಂಧನೆಗಳಿಗೆ ಅನುಗುಣವಾಗಿ ಒಂದು ಯೋಜನೆಯನ್ನು ರೂಪಿಸಬೇಕಾಗುತ್ತದೆ. ಇದರ ಹಣಕಾಸಿನ ಹೊಣೆಗಾರಿಕೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹಂಚಿಕೊಳ್ಳಲಾಗುವುದು. ಈಶಾನ್ಯ ರಾಜ್ಯಗಳು ಮತ್ತು ಹಿಮಾಲಯನ್ ರಾಜ್ಯಗಳಿಗೆ ಇದು 90:10 ರಷ್ಟಿದ್ದರೆ, ಇತರ ಎಲ್ಲಾ ರಾಜ್ಯಗಳು ಮತ್ತು ಶಾಸಕಾಂಗ ಹೊಂದಿರುವ ಕೇಂದ್ರಾಡಳಿತ ಪ್ರದೇಶಗಳಿಗೆ 60:40 ರಷ್ಟಿರುತ್ತದೆ. ಶಾಸಕಾಂಗವಿಲ್ಲದ ಕೇಂದ್ರಾಡಳಿತ ಪ್ರದೇಶಗಳಿಗೆ, ಸಂಪೂರ್ಣ ವೆಚ್ಚವನ್ನು ಕೇಂದ್ರವೇ ಭರಿಸುತ್ತದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net