ಮಾಲ್ವನ್ ಯುದ್ಧ ನೌಕೆ ಸೇವೆಗೆ: ಒಗ್ಗಟ್ಟಿನ ಕಾರ್ಯಾಚರಣೆ ಅನಿವಾರ್ಯ

ಮಾಲ್ವನ್ ಯುದ್ಧ ನೌಕೆ ಸೇವೆಗೆ
ಮಾಲ್ವನ್ ಯುದ್ಧ ನೌಕೆ ಸೇವೆಗೆ
Published on

ಕಾರವಾರ: ಭವಿಷ್ಯದ ಸವಾಲುಗಳನ್ನು ಎದುರಿಸಲು ಎಲ್ಲ ರಕ್ಷಣಾ ಪಡೆಗಳ ಒಗ್ಗಟ್ಟಿನ ಕಾರ್ಯಾಚರಣೆಗೆ ಇನ್ನಷ್ಟು ಮಹತ್ವ ನೀಡುವುದು ಅಗತ್ಯ ಎಂದು ಭಾರತೀಯ ವಾಯು ಸೇನೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಅಭಿಪ್ರಾಯಪಟ್ಟರು. ಕದಂಬ ನೌಕಾನೆಲೆಯಲ್ಲಿ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ‘ಐಎನ್​ಎಸ್ ಮಾಲ್ವನ್’ ಯುದ್ಧ ನೌಕೆಯನ್ನು ಸೇವೆಗೆ ಆರ್ಪಿಸಿ ಮಾತನಾಡಿದರು.

ಭವಿಷ್ಯದ ಯುದ್ಧಗಳನ್ನು ಒಂದೇ ಸೇನೆಯಿಂದ ಎದುರಿಸಲು ಸಾಧ್ಯವಿಲ್ಲ. ನೌಕಾಸೇನೆ, ವಾಯುಸೇನೆ ಮತ್ತು ಭೂಸೇನೆ ಒಟ್ಟಾಗಿ ಹೋರಾಡಬೇಕು. ರಕ್ಷಣಾ ಪಡೆಗಳ ಮುಖ್ಯಸ್ಥರ (ಸಿಡಿಎಸ್) ಹುದ್ದೆ ಸೃಷ್ಟಿಯಾದ ನಂತರ ಸೇನೆಗಳ ಜಂಟಿ ಸಹಭಾಗಿತ್ವದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತಿವೆ. ಇದರಲ್ಲಿ ವಾಯು ಸೇನೆಯ ಸಕ್ರಿಯ ಭಾಗವಹಿಸುವಿಕೆಯನ್ನು ಖಚಿತಪಡಿಸುತ್ತೇವೆ ಎಂದು ಹೇಳಿದರು.

ಒಂದು ದೇಶದ ಪರಂಪರೆ ಅದರ ವ್ಯಾಪಾರವನ್ನು ನಿರ್ಧರಿಸುತ್ತದೆ. ವ್ಯಾಪಾರವು ದೇಶದ ಭವಿಷ್ಯ ನಿರ್ಧರಿಸುತ್ತದೆ. ದೇಶ ಅಭಿವೃದ್ಧಿಯಾಗಲು ವ್ಯಾಪಾರವು ಸ್ವತಂತ್ರವಾಗಿರಬೇಕು. ಅದಕ್ಕೆ ಸಮುದ್ರ ಮಾರ್ಗಗಳು ಮುಕ್ತವಾಗಿರಬೇಕು. ಭಾರತದ ಭದ್ರತೆ ಹಾಗೂ ಅಭಿವೃದ್ಧಿಗೆ ಹಿಂದೂ ಮಹಾಸಾಗರ ಪ್ರದೇಶವು ಬಹಳ ಮುಖ್ಯವಾದುದು. ನಮ್ಮ ಸಮುದ್ರ ಮಾರ್ಗಗಳು ಸುರಕ್ಷಿತವಾಗಿರಲು, ವ್ಯಾಪಾರ ವಹಿವಾಟು ಹಾಗೂ ದೇಶದ ಬೆಳವಣಿಗೆಯು ಅಡೆತಡೆಯಿಲ್ಲದೆ ಮುಂದುವರಿಯುವಲ್ಲಿ ನೌಕಾಪಡೆಯು ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.

ಆತ್ಮನಿರ್ಭರತೆ ಮಾದರಿ

ಹಡಗು ನಿರ್ಮಾಣದಲ್ಲಿ ಶೇ.80ಕ್ಕಿಂತ ಹೆಚ್ಚು ಸ್ಥಳೀಯ ಸಾಮಗ್ರಿ ಬಳಸುವುದು ಸಣ್ಣ ವಿಷಯವಲ್ಲ. ಭಾರತೀಯ ತಂತ್ರಜ್ಞಾನ ಅಳವಡಿಸಿಕೊಂಡು ಆತ್ಮನಿರ್ಭರತೆ ಸಾಧಿಸುವಲ್ಲಿ ನೌಕಾ ಸೇನೆ ಮುಂದಿದೆ. ಹಡಗಿನ ವಿನ್ಯಾಸದ ಹಂತದಲ್ಲೇ ಅಲ್ಲಿ ನೌಕಾಸೇನೆಯ ಅಧಿಕಾರಿಗಳನ್ನು, ನಿರ್ಮಾಣವಾಗುವ ಶಿಪ್​ಯಾರ್ಡ್​ಗಳಲ್ಲಿ ನಿವೃತ್ತ ಅಧಿಕಾರಿಗಳನ್ನು ನೇಮಿಸಲಾಗುತ್ತದೆ. ವಾಯು ಸೇನೆಯಲ್ಲೂ ಸ್ವಾವಲಂಬನೆಯ ಕನಸು ನನಸಾಗಿಸಲು ನಾವು ನೌಕಾಸೇನೆಯ ಮಾದರಿಯನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ಸಿಂಗ್ ಹೇಳಿದರು. ದೇಶದ ಒಳಗೆ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಆಂಡ್ ಡಿ) ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕು. ಈಗ ಸ್ವದೇಶಿ ಮೂಲಸೌಕರ್ಯಗಳು ವೇಗವಾಗಿ ಬೆಳೆಯುತ್ತಿವೆ ಎಂದು ಅಭಿಪ್ರಾಯಪಟ್ಟರು.

ಪಶ್ಚಿಮ ನೌಕಾ ವಲಯ ಮುಖ್ಯಸ್ಥ ವೈಸ್ ಅಡ್ಮಿರಲ್ ಸಂಜಯ್ ವಾತ್ಸಾಯನ ಮಾತನಾಡಿ, ಈ ವರ್ಷ ಭಾರತೀಯ ನೌಕಾಸೇನೆಗೆ ಏಳು ಹಡಗುಗಳು ಸೇರ್ಪಡೆಯಾಗಿವೆ. ಇನ್ನೂ 12 ನೌಕೆಗಳ ಸೇರ್ಪಡೆಯಾಗಲಿವೆ ಎಂದರು. ಕೊಚ್ಚಿ ಶಿಪ್ ಯಾರ್ಡ್​ನ ಚೇರ್ಮನ್ ಜೋಸ್ ವಿ.ಜೆ. ಮಾತನಾಡಿ, ಜಾಗತಿಕ ಯುದ್ಧ ಪರಿಸ್ಥಿತಿಯಿಂದ ಸಾಮಗ್ರಿ ಪೂರೈಕೆಯಲ್ಲಿನ ಸಮಸ್ಯೆಗಳ ಮಧ್ಯೆಯೂ ಒಪ್ಪಂದದಂತೆ ನಿಗದಿತ ಅವಧಿಗೆ ಯುದ್ಧ ನೌಕೆಗಳನ್ನು ಸಿದ್ಧ ಮಾಡಿಕೊಟ್ಟಿದ್ದೇವೆ. ಈ ಶ್ರೇಣಿಯ ಮೊದಲ ನೌಕೆ ‘ಮಾಹೆ’ಯನ್ನು ಒಪ್ಪಂದವಾದ 48 ತಿಂಗಳಲ್ಲಿ ಹಸ್ತಾಂತರಿಸಿದ್ದೇವೆ. ಈಗ ಮಾಲ್ವಾಣ್ ಲೋಕಾರ್ಪಣೆಯಾಗಿದ್ದು, ಶೀಘ್ರದಲ್ಲಿ ಮೂರನೇ ನೌಕೆಯೂ ಹಸ್ತಾಂತರವಾಗಲಿದೆ ಎಂದರು.

ನೌಕಾದಳದ ಉತ್ಪಾದನೆ ಮತ್ತು ನಿಯಂತ್ರಣ ವಿಭಾಗದ ಮುಖ್ಯಸ್ಥ ವೈಸ್ ಅಡ್ಮಿರಲ್ ಸಂಜಯ ಸಾಧು, ಕರ್ನಾಟಕ ನೌಕಾವಲಯ ಮುಖ್ಯಸ್ಥ ವಿಕ್ರಂ ಮೆನನ್ ಇದ್ದರು. ಮಾಲ್ವಾಣ್ ನೌಕೆಯ ಮೊದಲ ಕಮಾಂಡಿಂಗ್ ಅಧಿಕಾರಿ ಕ್ಯಾಪ್ಟನ್ ಪ್ರವೀಣಕುಮಾರ್ ತಿವಾರಿ ಲೋಕಾರ್ಪಣೆಯ ವಾರಂಟ್ ಓದಿದರು.

ವಿಶ್ವದ ಆಧುನಿಕ ನೌಕಾನೆಲೆ

ಕಾರವಾರವು ಭಾರತ ಮಾತ್ರವಲ್ಲ, ವಿಶ್ವದಲ್ಲೇ ಆಯಕಟ್ಟಿನ ನೌಕಾನೆಲೆಯಾಗಿ ಬೆಳೆದಿದೆ. ಜಾಗತಿಕ ಮಟ್ಟದ ಮೂಲಸೌಕರ್ಯ ಮತ್ತು ಸುಧಾರಿತ ಕಾರ್ಯಾಚರಣೆಯ ಸೌಲಭ್ಯಗಳನ್ನು ಇದು ಹೊಂದಿದೆ ಎಂದು ಏರ್ ಚೀಫ್ ಮಾರ್ಷಲ್ ಎ.ಪಿ.ಸಿಂಗ್ ಶ್ಲಾಘಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net