ರಾಜ್ಯಸಭೆಗೆ ಖರ್ಗೆ, ತರುಣ್ ಚುಗ್ ಸೇರಿ 24 ನಾಯಕರ ಅವಿರೋಧ ಆಯ್ಕೆ; ಯಾವ ಪಕ್ಷಕ್ಕೆ ಎಷ್ಟು ಸೀಟು..? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್! | Rajya Sabha Election

Rajya Sabha Election > ಯಾವ ಪಕ್ಷಕ್ಕೆ ಎಷ್ಟು ಸೀಟು..? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್!
Rajya Sabha Election > ಯಾವ ಪಕ್ಷಕ್ಕೆ ಎಷ್ಟು ಸೀಟು..? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್!
Published on
ನವದೆಹಲಿ: ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ (Rajya Sabha Election) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಸೇರಿದಂತೆ ಹಲವು ಪ್ರಮುಖ ನಾಯಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಮಪತ್ರಗಳ ಪರಿಶೀಲನೆ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ಚುನಾವಣಾಧಿಕಾರಿಗಳು ಅಧಿಕೃತ ಫಲಿತಾಂಶ ಪ್ರಕಟಿಸಿದ್ದಾರೆ.
ಒಟ್ಟು ಘೋಷಣೆಯಾಗಿದ್ದ 27 ರಾಜ್ಯಸಭಾ ಕ್ಷೇತ್ರಗಳ ಪೈಕಿ 24 ಸ್ಥಾನಗಳ ಫಲಿತಾಂಶ ಪ್ರಕಟವಾಗಿದ್ದು, ಅಭ್ಯರ್ಥಿಗಳು ಯಾವುದೇ ಪೈಪೋಟಿ ಇಲ್ಲದೆ ಜಯಗಳಿಸಿದ್ದಾರೆ. ಈ ಪೈಕಿ ಬಿಜೆಪಿ ನೇತೃತ್ವದ ಎನ್​​ಡಿಎ ಬರೋಬ್ಬರಿ 19 ಸ್ಥಾನಗಳನ್ನು ಬಾಚಿಕೊಂಡಿದ್ದರೆ, ಇಂಡಿಯಾ ಒಕ್ಕೂಟ ಉಳಿದ 5 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ.

ಹೆಚ್ಚಿದ ಎನ್‌ಡಿಎ ಬಲ; ಪ್ರಾದೇಶಿಕ ಪಕ್ಷಗಳಿಗೆ ಆಘಾತ

ಈ ಬಾರಿಯ ಫಲಿತಾಂಶದಿಂದಾಗಿ ಮೇಲ್ಮನೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಸಂಖ್ಯಾಬಲ ಮೂರು ಸ್ಥಾನಗಳಷ್ಟು ವೃದ್ಧಿಸಿದೆ. ಗೆದ್ದಿರುವ 19 ಸ್ಥಾನಗಳ ಪೈಕಿ 16 ಸ್ಥಾನಗಳು ಈಗಾಗಲೇ ಎನ್‌ಡಿಎ ವಶದಲ್ಲಿದ್ದವು. ಇತ್ತ ಕಾಂಗ್ರೆಸ್ ತಾನು ಗೆದ್ದಿರುವ 5 ಸ್ಥಾನಗಳ ಪೈಕಿ 4 ಸ್ಥಾನಗಳನ್ನು ಈ ಹಿಂದೆಯೇ ಹೊಂದಿದ್ದರಿಂದ, ಅದರ ಸಂಖ್ಯಾಬಲದಲ್ಲಿ ಕೇವಲ ಒಂದು ಸ್ಥಾನದಷ್ಟು ಹೆಚ್ಚಳವಾಗಿದೆ. ಆಂಧ್ರಪ್ರದೇಶದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಪಕ್ಷ (YSRCP) ಈ ಚುನಾವಣೆಯಲ್ಲಿ ತನ್ನ 3 ರಾಜ್ಯಸಭಾ ಸ್ಥಾನಗಳನ್ನು ಕಳೆದುಕೊಂಡು ಭಾರಿ ಮುಖಭಂಗ ಅನುಭವಿಸಿದೆ. ಒಡಿಶಾದಲ್ಲೂ ಮಾಜಿ ಸಿಎಂ ನವೀನ್ ಪಟ್ನಾಯಕ್​ರ ಬಿಜು ಜನತಾ ದಳಕ್ಕೆ ಆಘಾತ ಎದುರಾಗಿದ್ದು, ಬಿಎಸ್‌ಡಿಯಿಂದ ಇತ್ತೀಚೆಗಷ್ಟೇ ಹೊರಬಂದು ಬಿಜೆಪಿ ಸೇರಿದ್ದ ದೆಬಾಶಿಶ್ ಸಮಂತರಾಯ್ ಒಡಿಶಾದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಯಾವ ರಾಜ್ಯದಲ್ಲಿ ಯಾರಿಗೆ ಎಷ್ಟು ಸೀಟು..?

  • ಕರ್ನಾಟಕ (4 ಸ್ಥಾನ): ಕಾಂಗ್ರೆಸ್ 3 ಸ್ಥಾನಗಳನ್ನು ಗೆದ್ದುಕೊಂಡಿದ್ದು (ಮಲ್ಲಿಕಾರ್ಜುನ ಖರ್ಗೆ, ಮನ್ಸೂರ್ ಅಲಿ ಖಾನ್, ಪವನ್ ಖೇರಾ), ಬಿಜೆಪಿ 1 ಸ್ಥಾನ (ಎಂ. ನಾಗರಾಜ) ಪಡೆದುಕೊಂಡಿದೆ.
  • ಆಂಧ್ರಪ್ರದೇಶ (4 ಸ್ಥಾನ): ನಾಲ್ಕೂ ಸ್ಥಾನಗಳು ಎನ್‌ಡಿಎ ಪಾಲಾಗಿವೆ. ಟಿಡಿಪಿಯ ಬಾಶ್ಯಾಮ್ ರಾಮಕೃಷ್ಣ, ಚಿಂತಕಾಯಲ ವಿಜಯ್, ಸನಾ ಸತೀಶ್ ಬಾಬು ಮತ್ತು ಜನಸೇನಾದ ಲಿಂಗಮನೇನಿ ರಮೇಶ್ ಜಯಗಳಿಸಿದ್ದಾರೆ.
  • ಗುಜರಾತ್ (4 ಸ್ಥಾನ): ನಾಲ್ಕೂ ಸ್ಥಾನಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ (ರಾಜುಭಾಯ್ ಶುಕ್ಲಾ, ಮಾನ್‌ಸಿನ್ಹ್ ಪರ್ಮಾರ್, ಮುಕೇಶ್ ಭಾಯ್ ರಾತ್ವಾ ಮತ್ತು ಜಿತೇಂದ್ರ ಕಂಜಾರಿಯಾ).
  • ಮಧ್ಯಪ್ರದೇಶ (3 ಸ್ಥಾನ): ಮೂರೂ ಸ್ಥಾನಗಳನ್ನು ಬಿಜೆಪಿ ಸುಲಭವಾಗಿ ಗೆದ್ದಿದೆ (ತರುಣ್ ಚುಗ್, ರಜನೀಶ್ ಅಗರ್ವಾಲ್ ಮತ್ತು ಮಹೇಶ್ ಕೇವತ್).
  • ರಾಜಸ್ಥಾನ (3 ಸ್ಥಾನ): ಬಿಜೆಪಿ 2 ಸ್ಥಾನ (ಸತೀಶ್ ಪೂನಿಯಾ, ಅಲ್ಕಾ ಗುರ್ಜರ್) ಮತ್ತು ಕಾಂಗ್ರೆಸ್ 1 ಸ್ಥಾನ (ನೀರಜ್ ಡಾಂಗಿ) ಪಡೆದಿವೆ.
ಇತರ ರಾಜ್ಯಗಳು: ಅರುಣಾಚಲ ಪ್ರದೇಶ, ಮಣಿಪುರ, ಮಹಾರಾಷ್ಟ್ರ ಮತ್ತು ಒಡಿಶಾಗಳಲ್ಲಿ ತಲಾ ಒಂದು ಸ್ಥಾನ ಎನ್‌ಡಿಎ ಪಾಲಾಗಿದ್ದರೆ, ಮೇಘಾಲಯದ ಏಕೈಕ ಸ್ಥಾನವನ್ನು ಎನ್‌ಡಿಎ ಮಿತ್ರಪಕ್ಷ ಎನ್‌ಪಿಪಿ ಗೆದ್ದಿದೆ. ತಮಿಳುನಾಡಿನ ಒಂದು ಸ್ಥಾನ ಕಾಂಗ್ರೆಸ್‌ನ ಪ್ರವೀಣ್ ಚಕ್ರವರ್ತಿ ಪಾಲಾಗಿದೆ.

ಜೂನ್ 18ರ ಜಾರ್ಖಂಡ್, ಮಿಜೋರಾಂ ಕದನಕ್ಕೆ ಕೌಂಟ್‌ಡೌನ್

ಈಗ ಎಲ್ಲರ ಗಮನ ಜಾರ್ಖಂಡ್ ಮತ್ತು ಮಿಜೋರಾಂ ರಾಜ್ಯಗಳತ್ತ ನೆಟ್ಟಿದ್ದು, ಬಾಕಿ ಉಳಿದಿರುವ 3 ಸ್ಥಾನಗಳಿಗೆ ಜೂನ್ 18 ರಂದು ಮತದಾನ ನಡೆಯಲಿದೆ. ಜಾರ್ಖಂಡ್‌ನ 2 ಸ್ಥಾನಗಳಿಗಾಗಿ ಜೆಎಂಎನ್‌ನ ಬೈದ್ಯನಾಥ್ ರಾಮ್, ಕಾಂಗ್ರೆಸ್‌ನ ಪ್ರಣವ್ ಝಾ ಮತ್ತು ಪ್ರಭಾವಿ ಪಕ್ಷೇತರ ಅಭ್ಯರ್ಥಿ ಪರಿಮಳ್ ನಥ್ವಾನಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಇತ್ತ ಮಿಜೋರಾಂನ ಒಂದು ಸ್ಥಾನಕ್ಕಾಗಿ ಝಡ್‌ಪಿಎಂ ಮತ್ತು ಎಂಎನ್‌ಎಫ್ ಪಕ್ಷಗಳ ನಡುವೆ ನೇರ ಹಣಾಹಣಿ ಇದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net