ದಿಶಾ ಸಾಲಿಯನ್ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಸಿಬಿಐ FIR ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿ ಘಟಾನುಘಟಿಗಳ ಹೆಸರು ದಾಖಲು! Disha Salian

ದಿಶಾ ಸಾಲಿಯನ್ ಪ್ರಕರಣ: ಸಿಬಿಐ ಎಫ್‌ಐಆರ್‌ನಲ್ಲಿ ಆದಿತ್ಯ ಠಾಕ್ರೆ ಮತ್ತು ರಿಯಾ ಚಕ್ರವರ್ತಿ ಹೆಸರುಗಳು
ದಿಶಾ ಸಾಲಿಯನ್ ಪ್ರಕರಣ: ಸಿಬಿಐ ಎಫ್‌ಐಆರ್‌ನಲ್ಲಿ ಆದಿತ್ಯ ಠಾಕ್ರೆ ಮತ್ತು ರಿಯಾ ಚಕ್ರವರ್ತಿ ಹೆಸರುಗಳು
Published on
ಮುಂಬೈ: ದಿಶಾ ಸಾಲಿಯನ್ (Disha Salian) ಅವರ ಸಾವಿನ ಪ್ರಕರಣ ದಿನಕ್ಕೊಂದು ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಕೆಲವೇ ದಿನಗಳ ಮೊದಲು ನಿಗೂಢವಾಗಿ ಮೃತಪಟ್ಟಿದ್ದ ಟ್ಯಾಲೆಂಟ್ ಮ್ಯಾನೇಜರ್ ದಿಶಾ ಸಾಲಿಯನ್ ಸಾವು ಈಗ ರಾಜಕೀಯವಾಗಿ ಭಾರಿ ಸಂಚಲನ ಸೃಷ್ಟಿಸಿದೆ.
ಬಾಂಬೆ ಹೈಕೋರ್ಟ್‌ನ ನಿರ್ದೇಶನದ ಮೇರೆಗೆ ಸಿಬಿಐ (CBI) ಈ ಪ್ರಕರಣದಲ್ಲಿ ಹೊಸ ಎಫ್‌ಐಆರ್ ದಾಖಲಿಸಿದ್ದು, ಶಿವಸೇನೆ (ಯುಬಿಟಿ) ಪ್ರಮುಖ ನಾಯಕರು ಸೇರಿದಂತೆ ಹಲವು ಗಣ್ಯರ ಹೆಸರುಗಳು ಪಟ್ಟಿಯಲ್ಲಿ ಸೇರಿಕೊಂಡಿವೆ.

ಎಫ್‌ಐಆರ್‌ನಲ್ಲಿ ಯಾರ್ಯಾರ ಹೆಸರಿದೆ?

ಬಾಂಬೆ ಹೈಕೋರ್ಟ್ ಆದೇಶದಂತೆ ಸಿಬಿಐ ದಾಖಲಿಸಿರುವ ಹೊಸ ಎಫ್‌ಐಆರ್‌ನಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಅವರ ಮಗ, ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಅವರ ಹೆಸರುಗಳನ್ನು ತನಿಖೆ ಅಗತ್ಯವಿರುವವರ ಪಟ್ಟಿಯಲ್ಲಿ ಸೇರಿಸಲಾಗಿದೆ.
ಇಷ್ಟೇ ಅಲ್ಲದೆ, ಪ್ರಮುಖ ಅಪರಾಧಗಳು, ಕ್ರಿಮಿನಲ್ ಪಿತೂರಿ, ಆತ್ಮಹತ್ಯೆಯ ಸುಳ್ಳು ಕಥೆ ಸೃಷ್ಟಿಸುವುದು ಮತ್ತು ಸಾಕ್ಷ್ಯಗಳನ್ನು ಮುಚ್ಚಿಹಾಕಿದ ಆರೋಪದಡಿ ನಟರಾದ ಡಿನೋ ಮೋರಿಯಾ, ಸೂರಜ್ ಪಂಚೋಲಿ, ರಿಯಾ ಚಕ್ರವರ್ತಿ ಹಾಗೂ ಅವರ ಸಹೋದರ ಶೋವಿಕ್ ಚಕ್ರವರ್ತಿ ಅವರ ಹೆಸರುಗಳೂ ಈ ಪಟ್ಟಿಯಲ್ಲಿವೆ.
ಇದರೊಂದಿಗೆ ಆದಿತ್ಯ ಠಾಕ್ರೆ ಅಂಗರಕ್ಷಕರು, ವಿವಾದಿತ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ, ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್, ಡಿಸಿಪಿ ವಿಶಾಲ್ ಠಾಕೂರ್, ಅಂದಿನ ಗೃಹ ಸಚಿವ ಅನಿಲ್ ದೇಶಮುಖ್ ಹಾಗೂ ಹಲವು ಪೊಲೀಸ್ ಸಿಬ್ಬಂದಿಯ ಹೆಸರುಗಳೂ ಸಿಬಿಐ ಕೈ ಸೇರಿವೆ. ಮರಣೋತ್ತರ ಪರೀಕ್ಷೆಯಲ್ಲಿ ವಿಳಂಬ ಮಾಡಿದ ವೈದ್ಯರು, ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಮತ್ತು ಕಟ್ಟಡದ ಭದ್ರತಾ ಸಿಬ್ಬಂದಿಯ ತನಿಖೆ ನಡೆಯಲಿದೆ.

2020ರ ಆ ಕರಾಳ ದಿನ ಹಾಗೂ ಹೈಕೋರ್ಟ್ ಪ್ರಶ್ನೆಗಳು

2020ರ ಜೂನ್ 8ರಂದು ಮುಂಬೈನ ಕಟ್ಟಡವೊಂದರಿಂದ ಬಿದ್ದು ದಿಶಾ ಸಾಲಿಯನ್ ಮೃತಪಟ್ಟಿದ್ದರು. ಇದಾದ ಕೆಲವೇ ದಿನಗಳಲ್ಲಿ ಅಂದರೆ ಜೂನ್ 14ರಂದು ಬಾಂದ್ರಾದ ತಮ್ಮ ನಿವಾಸದಲ್ಲಿ ಸುಶಾಂತ್ ಸಿಂಗ್ ರಜಪೂತ್ ಕೂಡ ಶವವಾಗಿ ಪತ್ತೆಯಾಗಿದ್ದರು. ದಿಶಾ ಸಾವನ್ನು ಆರಂಭದಲ್ಲಿ ಮುಂಬೈ ಪೊಲೀಸರು ಕೇವಲ ಅಪಘಾತಕಾರಿ ಸಾವು ಎಂದು ಮುಕ್ತಾಯಗೊಳಿಸಿದ್ದರು.
ಆದರೆ, ದಿಶಾಳದ್ದು ಕೊಲೆ ಎಂದು ಕುಟುಂಬದವರು ಆರೋಪಿಸಿದ್ದರೂ ಕೇವಲ ಎಡಿಆರ್ ಮಾತ್ರ ದಾಖಲಿಸಿದ್ದೇಕೆ ಎಂದು ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಗಳಾದ ಭಾರತಿ ಡಂಗ್ರೆ ಮತ್ತು ಮಂಜೂಷಾ ದೇಶಪಾಂಡೆ ಅವರಿದ್ದ ವಿಭಾಗೀಯ ಪೀಠವು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಮರಣದ 5 ವರ್ಷ ಕಳೆದರೂ ಮರಣೋತ್ತರ ಪರೀಕ್ಷೆ ಹಾಗೂ ಎಡಿಆರ್ ಪ್ರತಿಗಳನ್ನು ಕುಟುಂಬಕ್ಕೆ ನೀಡದಿರುವುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತ್ತು.
ದಿಶಾ ತಂದೆ ಸತೀಶ್ ಸಾಲಿಯನ್ ಹೇಳಿಕೆ!
ನ್ಯಾಯಾಲಯದ ಸೂಚನೆಯಂತೆ ತನಿಖಾಧಿಕಾರಿಗಳ ಬಳಿ ತನ್ನ ಮಗಳ ಸಾವಿನ ಹಿಂದಿನ ಎಲ್ಲಾ ಸತ್ಯಾಂಶಗಳನ್ನು ಹಂಚಿಕೊಂಡಿರುವುದಾಗಿ ದಿಶಾ ಸಾಲಿಯನ್ ಅವರ ತಂದೆ ಸತೀಶ್ ಸಾಲಿಯನ್ ತಿಳಿಸಿದ್ದಾರೆ. ನಾನು ಆದಿತ್ಯ, ಸೂರಜ್ ಪಂಚೋಲಿ, ಡಿನೋ ಮೋರಿಯಾ ಹಾಗೂ ಅಂಗರಕ್ಷಕರ ಹೆಸರುಗಳನ್ನು ಪಟ್ಟಿ ಮಾಡಿದ್ದೇನೆ. ಸತ್ಯವನ್ನು ಸೋಲಿಸಲು ಸಾಧ್ಯವಿಲ್ಲ, ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಭಾವುಕರಾಗಿ ನುಡಿದಿದ್ದಾರೆ.
ಮತ್ತೊಂದೆಡೆ, ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಕೂಡ ಸಿಬಿಐ ತನಿಖೆಯನ್ನು ಮುಕ್ತವಾಗಿ ಸ್ವಾಗತಿಸಿದ್ದು, ಸತ್ಯವನ್ನು ಸ್ವಲ್ಪ ಕಾಲ ಹತ್ತಿಕ್ಕಬಹುದು ಆದರೆ ಸೋಲಿಸಲಾಗದು ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ಹೊಸ ಸಿಬಿಐ ತನಿಖೆಯು ದಿಶಾ ಸಾಲಿಯನ್ ಸಾವಿನ ರಹಸ್ಯವನ್ನು ಸಂಪೂರ್ಣವಾಗಿ ಹೊರಹಾಕಲಿದೆಯಾ? ಮತ್ತು ಪ್ರಭಾವಿಗಳ ಪಾತ್ರ ಬಯಲಾಗಲಿದೆಯಾ? ಎಂಬುದನ್ನು ಕಾದು ನೋಡಬೇಕಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net