ಆಡಳಿತದಲ್ಲಿ ಮೇಜರ್ ಸರ್ಜರಿ; ಒಂದೇ ಬಾರಿಗೆ ಹಲವು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಕೇಂದ್ರ ಸರ್ಕಾರ | Central government

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ(Central government) ಆಡಳಿತದಲ್ಲಿ ಮಂಗಳವಾರ(ಮಾ. 31) ಮೇಜರ್ ಸರ್ಜರಿ ಮಾಡಿದ್ದು, ಒಂದೇ ಬಾರಿಗೆ ಹಲವು ಇಲಾಖೆಗಳ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಮತ್ತು ಹಲವು ಅಧಿಕಾರಿಗಳನ್ನು ವಿವಿಧ ಇಲಾಖೆಗಳಿಗೆ ಕಾರ್ಯದರ್ಶಿಗಳು, ಹೆಚ್ಚುವರಿ ಕಾರ್ಯದರ್ಶಿಗಳು ಮತ್ತು ಡಿಜಿಗಳಾಗಿ ನೇಮಕ ಮಾಡಿದೆ.
ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದಲ್ಲಿ (DoNER) ಕಾರ್ಯದರ್ಶಿಯಾಗಿದ್ದ ಬಿಹಾರ ಕೇಡರ್​ನ ಮತ್ತು 1992ರ ಬ್ಯಾಚ್‌ನ ಐಎಎಸ್ ಅಧಿಕಾರಿ ಚಂಚಲ್ ಕುಮಾರ್ ಅವರನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
2001ರ ಬ್ಯಾಚ್‌ನ ಮತ್ತೊಬ್ಬ ಬಿಹಾರ ಕೇಡರ್ ಐಎಎಸ್ ಅಧಿಕಾರಿ, ಪಿಎಂಒದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಧರ್ ಚಿರುವೋಲು ಅವರನ್ನು ಈಗ ಅದೇ ಕಚೇರಿಯಲ್ಲಿ ಹೆಚ್ಚುವರಿ ಕಾರ್ಯದರ್ಶಿಯನ್ನಾಗಿ ಮಾಡಲಾಗಿದೆ.
ಹಣಕಾಸು ಸಚಿವಾಲಯದ ಕಂದಾಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ದಿವಾಕರ್ ನಾಥ್ ಮಿಶ್ರಾ ಅವರನ್ನು ವಿದ್ಯುತ್ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯಾಗಿ ನೇಮಿಸಿದ್ರೆ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ವೀರ್ ವಿಕ್ರಮ್ ಯಾದವ್ ಐಎಎಸ್ ಅವರನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ಮಹಾನಿರ್ದೇಶಕರಾಗಿ ನೇಮಿಸಿದೆ.
ಪ್ರಸ್ತುತ ಡಿಜಿಸಿಎ ಮಹಾನಿರ್ದೇಶಕರಾಗಿರುವ ಫೈಜ್ ಅಹ್ಮದ್ ಕಿದ್ವಾಯ್ ಅವರನ್ನು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯದ ಅಡಿಯಲ್ಲಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಅವರು ನೇಮಿಸಲಾಗಿದೆ.
ಪುನೀತ್ ಕನ್ಸಾಲ್ ಅವರನ್ನು ನಾಗರಿಕ ವಿಮಾನಯಾನ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಅದೇ ರೀತಿ, ಪ್ರಸ್ತುತ ಕೇಡರ್‌ನಲ್ಲಿರುವ ಮೋನಾ ಕೆ. ಖಂಡರ್ ಅವರನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಡಿಯಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಜ್ಞಾನೇಂದ್ರ ಡಿ ತ್ರಿಪಾಠಿ ಅವರನ್ನು ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯಾಗಿ ಮತ್ತು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಬರುವ ಭಾರತ ಕೃಷಿ ಸಂಶೋಧನಾ ಮಂಡಳಿಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.ವಿಶಾಲ್ ಗಗನ್ ಅವರನ್ನು ಕೇಂದ್ರ ಮಾಹಿತಿ ಆಯೋಗದ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಕೇಂದ್ರ ದೂರಸಂಪರ್ಕ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಎನ್ ಗುಲ್ಜಾರ್ ಅವರನ್ನು ರಾಷ್ಟ್ರೀಯ ರಾಜಧಾನಿ ಪ್ರದೇಶ ಯೋಜನಾ ಮಂಡಳಿಯ (NCRPB) ಕಾರ್ಯದರ್ಶಿಯಾಗಿ ನೇಮಿಸಲಾಗಿದ್ದು, ಗಣಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸಂಜಯ್ ಲೋಹಿಯಾ ಅವರನ್ನು ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯ ವಿಶೇಷ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ.
ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್‌ಐಸಿ) ಮಹಾನಿರ್ದೇಶಕರಾಗಿರುವ ಅಭಿಷೇಕ್ ಸಿಂಗ್ ಅವರನ್ನು ಶಿಕ್ಷಣ ಸಚಿವಾಲಯದ ಅಧೀನದಲ್ಲಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಮಹಾನಿರ್ದೇಶಕರಾಗಿ ನೇಮಿಸಲಾಗಿದೆ. ಪ್ರವಾಸೋದ್ಯಮ ಕಾರ್ಯದರ್ಶಿ ಶ್ರೀವತ್ಸ ಕೃಷ್ಣ ಅವರನ್ನು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಹೊಸ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ.
ಚಂದ್ರಶೇಖರ್ ಕುಮಾರ್ ಅವರನ್ನು ರಾಷ್ಟ್ರೀಯ ಮಳೆಯಾಶ್ರಿತ ಪ್ರದೇಶ ಪ್ರಾಧಿಕಾರದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿಯೂ ವರ್ಗಾವಣೆ ಮಾಡಲಾಗಿದ್ದು, ಭುವನೇಶ್ ಕುಮಾರ್ ಅವರನ್ನು ಪ್ರವಾಸೋದ್ಯಮ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಪ್ರಸ್ತುತ ಜವಳಿ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ರೋಹಿತ್ ಕನ್ಸಾಲ್ ಅವರನ್ನು ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
1992ರ ಉತ್ತರ ಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿ ನರೇಂದ್ರ ಭೂಷಣ್ ಅವರನ್ನು ಭೂ ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ. 1994ರ ಪಂಜಾಬ್ ಕೇಡರ್‌ನ ಐಎಎಸ್ ಅಧಿಕಾರಿ ತೇಜ್‌ವೀರ್ ಸಿಂಗ್ ಅವರನ್ನು ರಾಸಾಯನಿಕ ಮತ್ತು ಪೆಟ್ರೋ-ರಾಸಾಯನಿಕ ಇಲಾಖೆಯ ಹೊಸ ಕಾರ್ಯದರ್ಶಿಯಾಗಿ ನಿವೇದಿತಾ ಶುಕ್ಲಾ ವರ್ಮಾ ಅವರ ಸ್ಥಾನಕ್ಕೆ ವರ್ಗಾಯಿಸಲಾಗಿದೆ.
ಶುಕ್ಲಾ ವರ್ಮಾ ಅವರನ್ನು ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ. ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net