

ನವದೆಹಲಿ: ದಕ್ಷಿಣ ದೆಹಲಿಯ ಕಿಯಾ ಕಾರು ಶೋ ರೂಂವೊಂದರಲ್ಲಿ ಶುಕ್ರವಾರ(ನ. 06) ಭಾರಿ ಬೆಂಕಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಹಲವು ಕಾರುಗಳು ಬೆಂಕಿಗಾಹುತಿಯಾಗಿವೆ ಎಂದು ವರದಿಯಾಗಿದೆ.
ಸಾಕೇತ್‌ನ ಸೈದುಲ್ ಅಜೈಬ್ ಪ್ರದೇಶದಲ್ಲಿರುವ ಕೆಐಎ ಶೋ ರೂಂನಲ್ಲಿ ಈ ಘಟನೆ ನಡೆದಿದೆ. ಕಟ್ಟಡದಿಂದ ಮೊದಲಿಗೆ ಭಾರಿ ಮಟ್ಟದಲ್ಲಿ ಹೊಗೆ ಆವರಿಸಿದ್ದು, ಬಳಿಕ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಪೊಲೀಸ್ ಸಿಬ್ಬಂದಿ ಮತ್ತು ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಒಟ್ಟು ಕಟ್ಟಡದಿಂದ 12-15 ಜನರನ್ನು ರಕ್ಷಿಸಲಾಗಿದೆ. ಆರು ಕಾರುಗಳು ಸುಟ್ಟು ಕರಕಲಾಗಿವೆ. ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಇನ್ನೂ ಘಟನೆ ಕುರಿತು ಮಾತನಾಡಿರುವ ಪ್ಯೂಟಿ ಮ್ಯಾಜಿಸ್ಟ್ರೇಟ್ ಲಕ್ಷ್ಯ ಸಿಂಘಾಲ್, ಮಧ್ಯಾಹ್ನ 3.45 ರ ಸುಮಾರಿಗೆ, ಮೆಟ್ರೋ ನಿಲ್ದಾಣದ ಎದುರಿನ ಕಿಯಾ ಶೋ ರೂಂ ಬೆಂಕಿಗೆ ಆಹುತಿಯಾಗಿದೆ ಎಂದು ನಮಗೆ ಮಾಹಿತಿ ಸಿಕ್ಕಿತು. ಅಗ್ನಿಶಾಮಕ ಇಲಾಖೆ, ಪೊಲೀಸರು ಮತ್ತು ಇತರ ಏಜೆನ್ಸಿಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿವೆ. ತಕ್ಷಣಕ್ಕೆ ಯಾವುದೇ ಸಾವು ನೋವು ಸಂಭವಿಸಿಲ್ಲ. ಕಟ್ಟಡದಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).