

ನವದೆಹಲಿ: ವಾಯುವ್ಯ ದೆಹಲಿಯ ಮಂಗೋಲ್‌ಪುರಿ ಕೈಗಾರಿಕಾ ಪ್ರದೇಶ ಹಂತ -1 ರಲ್ಲಿರುವ ಶೂ ಕಾರ್ಖಾನೆಯೊಂದರಲ್ಲಿ ಶುಕ್ರವಾರ(ಅ. 30) ರಾತ್ರಿ ಭಾರಿ ಅಗ್ನಿ ಅವಘಡ ನಡೆದಿದೆ. ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ರಾತ್ರಿ 9.32ಕ್ಕೆ ಕಾರ್ಖಾನೆಯಲ್ಲಿನ ಬೆಂಕಿ ಅವಘಡದ ಬಗ್ಗೆ ಮಾಹಿತಿ ಬಂದ ಬಳಿಕ ದೆಹಲಿ ಅಗ್ನಿಶಾಮಕ ದಳ 20 ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಅಗ್ನಿಶಾಮಕ ದಳದ ತಂಡಗಳು ಗಂಟೆಗಳ ಕಾಲ ಶ್ರಮಿಸಿದವು ಎನ್ನಲಾಗಿದೆ.
ಬಳಿಕ ಕಾರ್ಖಾನೆಯ ಒಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆರು ಜನರನ್ನು ರಕ್ಷಿಸಿ ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಗೆ ಪೊಲೀಸರು ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ. ಉಳಿದ ಇಬ್ಬರಿಗೆ ಚಿಕಿತ್ಸೆ ಮುಂದುವರೆದಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.
ಈ ಕುರಿತು ಮಾತನಾಡಿರುವ ಹೊರ ಜಿಲ್ಲೆಯ ಡಿಸಿಪಿ ವಿಕ್ರಮ್ ಸಿಂಗ್, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕಾರ್ಖಾನೆ ಮಾಲೀಕರಿಗೆ ಸಮನ್ಸ್ ಜಾರಿ ಮಾಡಿದ್ದಾರೆ. ಬೆಂಕಿಗೆ ಕಾರಣವನ್ನು ತನಿಖೆ ಮಾಡಲಾಗುತ್ತಿದೆ. ಬೆಂಕಿಯು ನೆಲಮಾಳಿಗೆಯಲ್ಲಿ ಹುಟ್ಟಿಕೊಂಡಿತು. ಬಳಿಕ ಉಳಿದ ಕಡೆ ಹೊತ್ತಿಕೊಂಡು ಹರಡಿದೆ. ಕಾರ್ಖಾನೆಯ ಮಾಲೀಕರನ್ನು ಕರೆಸಲಾಗಿದೆ, ಮತ್ತು ಹಾಜರಿದ್ದ ಒಟ್ಟು ಕಾರ್ಮಿಕರ ಸಂಖ್ಯೆಯನ್ನು ನಿರ್ಧರಿಸಲು ನಾವು ಗುತ್ತಿಗೆದಾರ ಮತ್ತು ಕಾರ್ಮಿಕರನ್ನು ಸಹ ಪ್ರಶ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ (ಏಜೆನ್ಸೀಸ್).