ರೆಬೆಲ್ಸ್​ಗೆ ಕಾನೂನೇ ಗೊತ್ತಿಲ್ಲ!..ದ್ರೋಹಿಗಳೇ ಧೈರ್ಯವಿದ್ದರೆ ರಾಜೀನಾಮೆ ಕೊಡಿ ಎಂದು ಸವಾಲ್​ ಹಾಕಿದ ಸಂಸದೆ ಮೊಯಿತ್ರಾ | Mahua Moitra

TMC Rebellion | ದ್ರೋಹಿಗಳೇ ಧೈರ್ಯವಿದ್ದರೆ ರಾಜೀನಾಮೆ ಕೊಡಿ ಎಂದು ಸವಾಲ್​ ಹಾಕಿದ ಸಂಸದೆ ಮೊಯಿತ್ರಾ
TMC Rebellion | ದ್ರೋಹಿಗಳೇ ಧೈರ್ಯವಿದ್ದರೆ ರಾಜೀನಾಮೆ ಕೊಡಿ ಎಂದು ಸವಾಲ್​ ಹಾಕಿದ ಸಂಸದೆ ಮೊಯಿತ್ರಾ
Published on
TMC Rebellion: ಇತ್ತೀಚಿನ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬೇಗುದಿ ತಾರಕಕ್ಕೇರಿದೆ. ಇದರ ನಡುವೆಯೇ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ಘೋಷಿಸಿರುವ 19 ಬಂಡಾಯ ಸಂಸದರ ವಿರುದ್ಧ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭಿನ್ನಮತೀಯರನ್ನು ದ್ರೋಹಿಗಳು ಎಂದು ಕರೆದಿರುವ ಅವರು, ಧೈರ್ಯವಿದ್ದರೆ ತಕ್ಷಣ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ, ಬಿಜೆಪಿ ಟಿಕೆಟ್ ಮೇಲೆ ಮರುಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿದ್ದಾರೆ.
ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಮಹುವಾ ಮೊಯಿತ್ರಾ, ಪಕ್ಷಾಂತರ ನಿಷೇಧ ಕಾಯ್ದೆಯ ತಾಂತ್ರಿಕ ಅಂಶಗಳನ್ನು ಮುಂದಿಟ್ಟುಕೊಂಡು ಅನರ್ಹತೆಯಿಂದ ಬಚಾವಾಗಬಹುದು ಎಂಬ ರೆಬೆಲ್ ಸಂಸದರ ಆಲೋಚನೆ ತಪ್ಪು ಎಂದು ಕುಟುಕಿದ್ದಾರೆ. 2003ರ ಸಂವಿಧಾನದ 91ನೇ ತಿದ್ದುಪಡಿಯ ಪ್ರಕಾರ ಪಕ್ಷದ ಒಡಕು ಅಥವಾ ಪ್ರತ್ಯೇಕ ಬಣ ರಚನೆಗೆ ಇದ್ದ ಅವಕಾಶವನ್ನು ರದ್ದುಗೊಳಿಸಲಾಗಿದೆ ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ.
ಸಂಸದರ ಸಂಖ್ಯೆ ಏನೇ ಇದ್ದರೂ, ಮೂಲ ರಾಜಕೀಯ ಪಕ್ಷದ ಮೂರನೇ ಎರಡರಷ್ಟು (2/3) ಭಾಗದಷ್ಟು ಜನರು ಮತ್ತೊಂದು ಪಕ್ಷದೊಂದಿಗೆ ಸಂಪೂರ್ಣವಾಗಿ ವಿಲೀನಗೊಂಡರೆ ಮಾತ್ರ ಪಕ್ಷಾಂತರ ನಿಷೇಧ ಕಾಯ್ದೆಯಿಂದ ತಪ್ಪಿಸಿಕೊಳ್ಳಲು ಸಾಧ್ಯ. ಹೀಗಾಗಿ ಈ 19 ಮಂದಿ ಸಂಸದರು ರಾಜೀನಾಮೆ ನೀಡುವುದೊಂದೇ ದಾರಿ ಎಂದು ಅವರು ಪ್ರತಿಪಾದಿಸಿದ್ದಾರೆ.

ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದಲ್ಲಿ ದಂಗೆ

ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದ 19 ಅತೃಪ್ತ ಟಿಎಂಸಿ ಸಂಸದರ ಗುಂಪು ಇತ್ತೀಚೆಗೆ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ಪತ್ರವೊಂದನ್ನು ಸಲ್ಲಿಸಿತ್ತು ಎಂದು ತಿಳಿದುಬಂದಿದ್ದು, ಆ ಪತ್ರದಲ್ಲಿ, ಕಾಕೋಲಿ ಘೋಷ್ ದಸ್ತಿದಾರ್ ಅವರೇ ಲೋಕಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕರಾಗಿ (Chief Whip) ಮುಂದುವರಿದಿದ್ದಾರೆ ಎಂದು ಹೇಳಿಕೊಳ್ಳಲಾಗಿತ್ತು ಹಾಗೂ ತಾವು ಎನ್‌ಡಿಎ ಮೈತ್ರಿಕೂಟವನ್ನು ಬೆಂಬಲಿಸುವುದಾಗಿ ಸ್ಪೀಕರ್‌ಗೆ ತಿಳಿಸಲಾಗಿತ್ತು.
ಮಮತಾ ಬ್ಯಾನರ್ಜಿ ಅವರು ಕಾಕೋಲಿ ಘೋಷ್ ಅವರನ್ನು ಸಚೇತಕ ಸ್ಥಾನದಿಂದ ಮುಖ್ತಗೊಳಿಸಿ, ಅವರ ಜಾಗಕ್ಕೆ ಕಲ್ಯಾಣ್ ಬ್ಯಾನರ್ಜಿ ಅವರನ್ನು ನೇಮಿಸಿದ್ದರೂ, ಈ ಬದಲಾವಣೆಯನ್ನು ಲೋಕಸಭೆಯ ಸಚಿವಾಲಯಕ್ಕೆ ಅಧಿಕೃತವಾಗಿ ಮುಟ್ಟಿಸದ ಕಾರಣ ಅಧಿಕೃತ ದಾಖಲೆಗಳಲ್ಲಿ ತಾವೇ ಚೀಫ್ ವಿಪ್ ಎಂದು ಬಂಡಾಯಗಾರರು ವಾದಿಸುತ್ತಿದ್ದಾರೆ. ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಕಾಕೋಲಿ ಘೋಷ್ ದಸ್ತಿದಾರ್, ಪಶ್ಚಿಮ ಬಂಗಾಳದಲ್ಲಿ ಆಡಳಿತ ವ್ಯವಸ್ಥೆ ಹದಗೆಡುತ್ತಿರುವುದು ಮತ್ತು ಆರ್ಥಿಕ ಅಕ್ರಮಗಳೇ ತಾವು ಈ ನಿರ್ಧಾರ ತೆಗೆದುಕೊಳ್ಳಲು ಕಾರಣ ಎಂದು ಸಮರ್ಥಿಸಿಕೊಂಡಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net