

ಗಜೇಂದ್ರ ಬಾಬು
(ಲೇಖಕರು ಜ್ಯೋತಿಷರು ಮತ್ತು ವಾಸ್ತುತಜ್ಞರು)
ಕಾತ್ಯಾಯಿನಿ ಪೂಜನೇನ ಶುಕ್ರ ಗ್ರಹ ದೋಷ ವಿನಶ್ಯತಿ, ವಿವಾಹಂ, ಪ್ರೇಮಂ, ಐಶ್ವರ್ಯಂ, ಆರೋಗ್ಯಂ, ದೀರ್ಘಾಯಸ್ಸು, ಪುತ್ರಸುಖಂ ಲಭೇತ್; ದಾನವ ಘಾತಿನಿ.
ಮಹಿಷಾಸುರನು ಮೇರು ಪರ್ವತದಲ್ಲಿ ಹತ್ತು ಸಾವಿರ ವರ್ಷ ತಪಸ್ಸು ಮಾಡಿದ. "ಯಾವುದೇ ದೇವತೆ, ಮಾನವ, ಅಸುರರಿಂದ ತನಗೆ ಮರಣ ಸಂಭವಿಸಬಾರದು; ಸ್ತ್ರೀಯಿಂದ ಮಾತ್ರ ಮರಣವಾಗಬೇಕು' ಎಂದು ಬ್ರಹ್ಮದೇವನಿಂದ ವರ ಪಡೆದ. ಸ್ತ್ರೀ ದುರ್ಬಲ ಎಂಬ ಅಜ್ಞಾನ ಅವನಿಗಿತ್ತು. ಕೋಣದಲ್ಲಿ ಸಿಟ್ಟು ಮದಗಳು ಪ್ರಬಲವಾಗಿರುವಂತೆ ಕ್ರೋಧ ಮದಗಳಂಥ ಗುಣವಿರುವವನು ಈ ಮಹಿಷಾಸುರ. ಮೂರು ಲೋಕಗಳ ದೇವತೆಗಳಿಗೆ ಹಿಂಸಿಸುತ್ತಿದ್ದ. ಇಂದ್ರ ಪದವಿಯನ್ನು ಪಡೆಯುವ ಉದ್ದೇಶ ಅವನಿಗಿತ್ತು. ಈತನ ಹಿಂಸೆ ತಾಳಲಾರದೇ ದೇವತೆಗಳು ಬ್ರಹ್ಮ-ವಿಷ್ಣು-ಶಿವ ಈ ತ್ರಿಮೂರ್ತಿಗಳ ಮೊರೆ ಹೋದರು. ತ್ರಿಮೂರ್ತಿಗಳ ಕೋಪದಿಂದ ತೇಜಸ್ಸು ಹೊರಬಂತು. ಎಲ್ಲ ದೇವತೆಗಳ ತೇಜಸ್ಸು ಸಹ ಒಂದುಗೂಡಿತು.
ಇದು ಕಾತ್ಯಾಯನ ಋಷಿಗೆ ಅವರ ಜ್ಞಾನ ದೃಷ್ಟಿಯಿಂದ ಗೊತ್ತಾಯಿತು. ಮಹಾಮಾಯೆ ತನಗೆ ಮಗಳಾಗಿ ಜನಿಸಬೇಕು ಎಂದು ಕಾತ್ಯಾಯನರು ನೂರು ವರ್ಷಗಳಿಂದ ತಪಸ್ಸು ಮಾಡಿದ್ದರು. ಅದರ ಬಲದಿಂದ ಕಾತ್ಯಾಯನ ಋಷಿಯ ಆಶ್ರಮದಲ್ಲಿ ದೇವಿ ಕಾತ್ಯಾಯಿನಿ ಜನಿಸಿದಳು. ನವದುರ್ಗೆಯರ ಪೈಕಿ ಕಾತ್ಯಾಯಿನಿಯದು ಯುದ್ಧದ ರೂಪ. ಚಂದ್ರಹಾಸ, ಕತ್ತಿ, ಹೊಳೆಯುವ ಕೈ, ಚತುರ್ಭುಜ, ಸಿಂಹಾರೂಢ, ಪದ್ಮ, ಅಭಯ ವರದ, ರಾಕ್ಷಸರನ್ನು ಕೊಲ್ಲುವವಳು, ಮಹಿಷಾಸುರ ಮರ್ದಿನಿ, ತ್ರಿನೇತ್ರಾ, ಬಂಗಾರದ ವರ್ಣ, ಬಲಗೈಯಲ್ಲಿ ಖಡ್ಗ, ದೊಡ್ಡ ಕತ್ತಿ, ಚಂದ್ರನಂತೆ ಹೊಳೆಯುವ ಕತ್ತಿ. ಕೆಳಗಿನ ಬಲಗೈ ಅಭಯ ಮುದ್ರೆ. ಭಕ್ತರಿಗೆ "ಭಯ ಬೇಡ, ನಾನಿದ್ದೇನೆ' ಎಂಬ ಅಭಯ. ವರದ ಮುದ್ರೆ- ವರಗಳನ್ನು ಧಾರಾಳವಾಗಿ ಕೊಡುವವಳು. ತನ್ನ ಪಾದದ ಕೆಳಗೆ ಮಹಿಷಾಸುರನನ್ನು ಸಂಹಾರ ಮಾಡಿದವಳು. ಕಾತ್ಯಾಯಿನಿ ಪೂಜೆಯಿಂದ ವಿವಾಹ, ಪ್ರೇಮ, ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಅಹಂಕಾರ ನಾಶ, ಕೋಪ ದಮನ ಆಗುತ್ತದೆ. ಮಾನಸಿಕ ಶುದ್ಧಿ, ಕಫ ನಾಶ, ಉತ್ಸಾಹ ವೃದ್ಧಿ ಸಾಧ್ಯ. ಐಶ್ವರ್ಯ, ಸೌಂದರ್ಯ, ಕಲೆ, ಸಂಗೀತ, ಸಿನಿಮಾದಲ್ಲಿ ಔನ್ನತ್ಯ. ಹಣದ ಸಮಸ್ಯೆ ನಿವಾರಣೆ ಆಗುತ್ತದೆ. ಸಂತಾನ ಸಮಸ್ಯೆ, ಸಕ್ಕರೆ ಕಾಯಿಲೆ, ಕಿಡ್ನಿ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಆಜ್ಞಾಚಕ್ರಕ್ಕೆ ಶಕ್ತಿ, ಬಲವರ್ಧನೆಯಾಗುತ್ತದೆ.
ಗ್ರಹ: ಶುಕ್ರ, ಬಣ್ಣ: ಹಳದಿ, ದಾನ: ಜೇನುತುಪ್ಪ, ವಸ್ತ್ರ, ಸಂಗೀತ: ಕಲ್ಯಾಣಿ ರಾಗ, ಮಂತ್ರ: ಓಂ ಹ್ರೀಂ ಕಾತ್ಯಾಯಿನ್ಯೆ ನಮಃ