ಮುಂಬೈ: ಮಗಳ ಮದುವೆ ಮಾಡಿಸಲು ಪಡೆದಿದ್ದ ಕೇವಲ 25 ಸಾವಿರ ಸಾಲಕ್ಕೆ ಬರೋಬ್ಬರಿ 4.5 ಎಕರೆ ಜಮೀನು ಕಳೆದುಕೊಂಡಿದ್ದ ಮಹಾರಾಷ್ಟ್ರದ ಮಹಿಳೆಯೊಬ್ಬರಿಗೆ ಸುಮಾರು 30 ವರ್ಷಗಳ ಬಳಿಕ ನ್ಯಾಯ ಸಿಕ್ಕಿದೆ. ಖಾಸಗಿ ಲೇವಾದೇವಿದಾರನ ವಶದಲ್ಲಿದ್ದ ಜಮೀನನ್ನು ಜಿಲ್ಲಾಡಳಿತ ಮರಳಿ ಕೊಡಿಸಿದ್ದು, ಮಹಿಳೆಯ ಮುಖದಲ್ಲಿ ಮತ್ತೆ ಸಂತಸ ಮೂಡಿದೆ. ಬರೋಬ್ಬರಿ ಮೂರು ದಶಕಗಳ ಕಾಲ ನಡೆಸಿದ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದೆ.
ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಚಾಕೂರ್ ತಾಲ್ಲೂಕಿನ ಕಲ್ಕುಟಿ ಗ್ರಾಮದ ಮುಂಡುಬಾಯಿ ಇರಪ್ಪಾ ದಾವ್ರೆ ಎಂಬುವರೇ ಜಮೀನು ಮರಳಿ ಪಡೆದ ಮಹಿಳೆ. ಗುರುವಾರ ಲಾತೂರ್ ಜಿಲ್ಲೆಗೆ ಭೇಟಿ ನೀಡಿದ್ದ ರಾಜ್ಯಪಾಲ ಜಿಷ್ಣು ದೇವ್ ವರ್ಮಾ ಅವರು ಮಹಿಳೆಗೆ ಜಮೀನಿನ ಮಾಲೀಕತ್ವಕ್ಕೆ ಸಂಬಂಧಿಸಿದ 7/12 (ಸಾತ್‌ಬಾರಾ) ದಾಖಲೆ ಹಾಗೂ ಇತರ ಅಗತ್ಯ ಪತ್ರಗಳನ್ನು ಹಸ್ತಾಂತರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು ಮೂರು ದಶಕಗಳ ಹಿಂದೆ ಮುಂಡುಬಾಯಿ ಅವರ ಮಗಳ ಮದುವೆ ನಿಶ್ಚಯವಾಗಿತ್ತು. ಮದುವೆಯ ಖರ್ಚು ಭರಿಸಲು ಹಣದ ಅಗತ್ಯ ಎದುರಾದಾಗ ಖಾಸಗಿ ಲೇವಾದೇವಿದಾರನಿಂದ 25 ಸಾವಿರ ಸಾಲ ಪಡೆದಿದ್ದರು. ಇದಕ್ಕಾಗಿ ತಮ್ಮ 4.5 ಎಕರೆ ಜಮೀನನ್ನು ಅಡಮಾನವಿಟ್ಟಿದ್ದರು.ಆರಂಭದಲ್ಲಿ ಕೃಷಿಯಿಂದ ಬರುವ ಉತ್ಪನ್ನದಲ್ಲಿ ಪಾಲು ನೀಡುವ ಒಪ್ಪಂದದ ಆಧಾರದ ಮೇಲೆ ಸಾಲ ನೀಡಿದ್ದ ವ್ಯಕ್ತಿ, ನಂತರ ಜಮೀನಿನ ಮೇಲಿನ ಹಿಡಿತವನ್ನು ತನ್ನದಾಗಿಸಿಕೊಂಡಿದ್ದಾನೆ ಎಂದು ಮುಂಡುಬಾಯಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ನಕಲಿ ಸಾಕ್ಷಿಗಳನ್ನು ಬಳಸಿಕೊಂಡು ಜಮೀನನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡಿದ್ದಾನೆ ಎಂಬುದು ಅವರ ದೂರಾಗಿದೆ.
ಸಾಲ ಪಡೆದ ಹಣವನ್ನು ಹಿಂದಿರುಗಿಸಿ ಜಮೀನು ವಾಪಸ್ ಪಡೆಯಲು ಮುಂಡುಬಾಯಿ ಹಲವು ಬಾರಿ ಪ್ರಯತ್ನಿಸಿದ್ದರು. ಒಂದು ಹಂತದಲ್ಲಿ 2.5 ಲಕ್ಷ ನೀಡಲು ಸಿದ್ಧರಾಗಿ ಲೇವಾದೇವಿದಾರನನ್ನು ಸಂಪರ್ಕಿಸಿದ್ದರು. ಆದರೆ ಆತ ಅಷ್ಟಕ್ಕೆ ಒಪ್ಪದೆ, ಬಡ್ಡಿ ಸೇರಿ ಬಾಕಿ ಮೊತ್ತ 10 ಲಕ್ಷಕ್ಕೆ ತಲುಪಿದೆ ಎಂದು ಹೇಳಿ ಜಮೀನು ಹಿಂದಿರುಗಿಸಲು ನಿರಾಕರಿಸಿದ್ದಾನೆ ಎಂದು ಅವರು ತಿಳಿಸಿದ್ದಾರೆ.2.5 ಲಕ್ಷ ಹಣವನ್ನು ಹಿಂದಿರುಗಿಸಲು ತೆಗೆದುಕೊಂಡು ಹೋಗಿ ನನ್ನ ಜಮೀನನ್ನು ವಾಪಸ್ ಕೊಡುವಂತೆ ಕೇಳಿದೆ. ಆದರೆ ಬಾಕಿ ಮೊತ್ತ 10 ಲಕ್ಷವಾಗಿದೆ ಎಂದು ಹೇಳಿ ಆತ ನಿರಾಕರಿಸಿದ. ಅಷ್ಟು ದೊಡ್ಡ ಮೊತ್ತವನ್ನು ಪಾವತಿಸುವ ಶಕ್ತಿ ನನಗಿರಲಿಲ್ಲ ಎಂದು ಮುಂಡುಬಾಯಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ 10 ಲಕ್ಷ ಹೊಂದಿಸುವುದು ಅಸಾಧ್ಯವಾಗಿತ್ತು. ಹೀಗಾಗಿ ತಮ್ಮದೇ ಜಮೀನನ್ನು ಮರಳಿ ಪಡೆಯಲಾಗದೆ ವರ್ಷಗಳ ಕಾಲ ನೋವು ಅನುಭವಿಸಬೇಕಾಯಿತು.
ಇದನ್ನೂ ಓದಿ : ಬಡತನಕ್ಕೆ ಬಲೆ ಬೀಸಿದ ಮಾಫಿಯಾ! ಆಸ್ಪತ್ರೆ ಬಿಲ್‌ಗಾಗಿ 140 ಕೋಟಿ ಡ್ರಗ್ಸ್ ಸಾಗಿಸಿದ ವ್ಯಾಪಾರಿ | Drugs
ವರ್ಷಗಳು ಕಳೆದಂತೆ ಜಮೀನು ಮರಳಿ ಪಡೆಯುವ ನಿರೀಕ್ಷೆಯನ್ನೇ ಮುಂಡುಬಾಯಿ ಕಳೆದುಕೊಳ್ಳುವಂತಾಗಿತ್ತು. ಆದರೆ ಕುಟುಂಬದ ಸದಸ್ಯರು ಆರ್ಥಿಕ ನೆರವು ನೀಡಿದ ಬಳಿಕ ಅವರು ಜಿಲ್ಲಾಡಳಿತದ ಮೊರೆ ಹೋಗಲು ನಿರ್ಧರಿಸಿದರು. ತಮ್ಮ ಜಮೀನಿನ ದಾಖಲೆಗಳು ಮತ್ತು ನಡೆದ ಅನ್ಯಾಯದ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಈ ಪ್ರಕರಣವನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಭಾರತ್ ಬಸ್ತವಾಡ್ ಅವರು ಜಮೀನಿನ ದಾಖಲೆಗಳನ್ನು ಸರಿಪಡಿಸಲು ಆದೇಶಿಸಿದರು. ತಹಸೀಲ್ದಾರ್ ಅನುಮೋದನೆಯ ಬಳಿಕ ಕಂದಾಯ ದಾಖಲೆಗಳಲ್ಲಿ ಮುಂಡುಬಾಯಿ ಅವರನ್ನೇ ಜಮೀನಿನ ಮಾಲೀಕರನ್ನಾಗಿ ದಾಖಲಿಸಲಾಯಿತು ಎಂದು ಶೆಲ್ಗಾಂವ್ ವೃತ್ತಾಧಿಕಾರಿ ಮಹೇಶ್ ಹಿಪ್ಪರ್ಗೆ ತಿಳಿಸಿದ್ದಾರೆ.
1995ರಲ್ಲಿ 25 ಸಾವಿರ ಸಾಲಕ್ಕೆ ಸಂಬಂಧಿಸಿದಂತೆ ಮಹಿಳೆಯ ಕುಟುಂಬದಿಂದ ಮಾರಾಟ ಪತ್ರ ಮಾಡಿಸಿಕೊಳ್ಳಲಾಗಿತ್ತು ಎಂಬ ಅಂಶವೂ ಅಧಿಕಾರಿಗಳ ಪರಿಶೀಲನೆಯಲ್ಲಿ ಉಲ್ಲೇಖವಾಗಿದೆ. ಅಗತ್ಯ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಜಮೀನಿನ ಮಾಲೀಕತ್ವವನ್ನು ಮತ್ತೆ ಮುಂಡುಬಾಯಿ ಅವರ ಹೆಸರಿಗೆ ವರ್ಗಾಯಿಸಲಾಗಿದೆ.
ಕೊನೆಗೂ ಯಾವುದೇ ಹಣ ಪಾವತಿಸದೆ ತಮ್ಮ 4.5 ಎಕರೆ ಜಮೀನನ್ನು ಮರಳಿ ಪಡೆದಿರುವುದಾಗಿ ಮುಂಡುಬಾಯಿ ಸಂತಸ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿಗಳ ಸಹಕಾರದಿಂದ ಜಮೀನನ್ನು ಬಿಡುಗಡೆ ಮಾಡಿಸಲಾಗಿದೆ. ರಾಜ್ಯಪಾಲರು ಸ್ವತಃ 7/12 ದಾಖಲೆಯನ್ನು ಹಸ್ತಾಂತರಿಸಿದ್ದು ಮತ್ತಷ್ಟು ಸಂತಸ ತಂದಿದೆ ಎಂದು ಅವರು ಹೇಳಿದ್ದಾರೆ. ಈ ಹೋರಾಟದಲ್ಲಿ ನೆರವಾದ ಲಾತೂರ್ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಅಮೋಲ್ ತಾಂಬೆ ಹಾಗೂ ಸ್ಥಳೀಯ ತಹಸೀಲ್ದಾರ್ ಅವರಿಗೆ ಮಹಿಳೆ ಕೃತಜ್ಞತೆ ಸಲ್ಲಿಸಿದ್ದಾರೆ.