ಆಧಾರ್ ಕಾರ್ಡ್‌ನಿಂದ ಬಯಲಾದ ಸತ್ಯ: 2 ವರ್ಷಗಳ ಹಿಂದೆ ಕಳೆದುಹೋದ 24,000 ರೂ. ಮರಳಿ ತಲುಪಿಸಿದ ಬಸ್ ಕಂಡಕ್ಟರ್! Bus Conductor

Bus Conductor (ಚಿತ್ರ X)
Bus Conductor (ಚಿತ್ರ X)
Published on

ಮಹಾರಾಷ್ಟ್ರ: ಬಸ್ ಪ್ರಯಾಣದ ವೇಳೆ ಕಳೆದುಹೋದ ಹಣ ಮರಳಿ ಸಿಗುವುದು ತೀರಾ ವಿರಳ. ಅದರಲ್ಲೂ ವರ್ಷಗಳು ಕಳೆದ ಮೇಲೆ ಆ ಹಣ ವಾಪಸ್ ಸಿಗುತ್ತದೆ ಎಂದರೆ ನಂಬುವುದು ಕಷ್ಟ. ಆದರೆ ಮಹಾರಾಷ್ಟ್ರದಲ್ಲಿ ಇಂತಹದ್ದೊಂದು ಅಚ್ಚರಿಯ ಪವಾಡ ನಡೆದಿದೆ. ಎರಡು ವರ್ಷಗಳ ಹಿಂದೆ ಬಸ್‌ನಲ್ಲಿ ಕಳೆದುಕೊಂಡಿದ್ದ 24,000 ರೂಪಾಯಿ ನಗದನ್ನು 75 ವರ್ಷದ ವೃದ್ಧೆ ಕಸಾಬಾಯಿ ಗಾಯಕ್ವಾಡ್ ಅವರಿಗೆ ಅದೇ ಬಸ್ ಕಂಡಕ್ಟರ್ (

Bus Conductor)

ಅತ್ಯಂತ ಪ್ರಾಮಾಣಿಕವಾಗಿ ಮರಳಿಸಿ ಎಲ್ಲರ ಹುಬ್ಬೇರಿಸಿದ್ದಾರೆ.

2024 ಏಪ್ರಿಲ್‌ನಲ್ಲಿ ನಡೆದಿದ್ದೇನು?

2024ರ ಏಪ್ರಿಲ್‌ನಲ್ಲಿ ಕಸಾಬಾಯಿ ಗಾಯಕ್ವಾಡ್ ಅವರು ತಮ್ಮ ಪತಿಯೊಂದಿಗೆ ಬಸ್​ನಲ್ಲಿ ಪ್ರಯಾಣಿಸುತ್ತಿದ್ದರು. ಸುಮಾರು ನಾಲ್ಕು ಗಂಟೆಗಳ ಪ್ರಯಾಣದ ನಂತರ ಅವರು ಮಾಲೆಗಾಂವ್ ಬಸ್ ನಿಲ್ದಾಣದಲ್ಲಿ ಇಳಿದಿದ್ದರು. ಬಸ್​ ಡಿಪೋಗೆ ತಲುಪಿದ ನಂತರ ಕಂಡಕ್ಟರ್​ ರಾಜು ಪ್ರಯಾಣಿಕರು ಬಿಟ್ಟುಹೋದ ವಸ್ತುಗಳಿಗಾಗಿ ಸೀಟುಗಳನ್ನು ಪರಿಶೀಲಿಸುತ್ತಿದ್ದರು.
ಆ ವೇಳೆ ಸೀಟೊಂದರ ಮೇಲೆ ಸಣ್ಣ ಬ್ಯಾಗ್ ಒಂದು ಕಂಡುಬಂದಿತ್ತು. ಅದರ ಒಳಗೆ ಸುಮಾರು 24 ಸಾವಿರ ಹಣ ಹಾಗೂ ಕಸಾಬಾಯಿ ಗಾಯಕ್ವಾಡ್ ಹೆಸರಿನಲ್ಲಿ ವೈದ್ಯಕೀಯ ಚೀಟಿ ಇತ್ತು. ಆದಾಗ್ಯೂ, ಹಣ ಕಳೆದುಕೊಂಡವರು ವಾಪಾಸ್​ ಬರಬಹುದು ಎಂದು ರಾಜು 1 ಗಂಟೆಗಳಿಗೂ ಹೆಚ್ಚು ಕಾಲ ಕಾಯುತ್ತಿದ್ದರು. ಜೊತೆಗೆ ವಿಚಾರಣಾ ಕೇಂದ್ರಕ್ಕೂ ಮಾಹಿತಿ ನೀಡಿದ್ದರು. ಆದರೆ ಯಾರೊಬ್ಬರೂ ಹಣ ಹುಡುಕಿಕೊಂಡು ಬರಲಿಲ್ಲ. ವೈದ್ಯಕೀಯ ಚೀಟಿಯಲ್ಲಿದ್ದ ನಂಬರ್‌ಗೆ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಲಿಲ್ಲ. ಹೀಗಾಗಿ ಕಂಡಕ್ಟರ್ ಆ ಹಣವನ್ನು ತಮ್ಮ ಬಳಿಯೇ ಭದ್ರವಾಗಿ ಇಟ್ಟುಕೊಂಡಿದ್ದರು.

ಆಧಾರ್ ಕಾರ್ಡ್ ಬಿಚ್ಚಿಟ್ಟ ರಹಸ್ಯ!

ಹೀಗೆಯೇ ದಿನಗಳು ಕಳೆಯುತ್ತಾ ಎರಡು ವರ್ಷಗಳು ಕಳೆದವು. ಈ ಸಂದರ್ಭದಲ್ಲಿ ರಾಜು ಕರ್ತವ್ಯ ನಿರ್ವಹಿಸುತ್ತಿದ್ದಾಗ ವೃದ್ಧೆಯೊಬ್ಬರು ಬಸ್ ಹತ್ತಿ ಮಾಲೆಗಾಂವ್‌ಗೆ ಟಿಕೆಟ್ ಕೇಳಿದರು. ಮಹಾರಾಷ್ಟ್ರದಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಉಚಿತ ಪ್ರಯಾಣದ ಸೌಲಭ್ಯವಿರುವ ಕಾರಣ, ಕಂಡಕ್ಟರ್ ರಾಜು ವಯಸ್ಸನ್ನು ಖಚಿತಪಡಿಸಿಕೊಳ್ಳಲು ವೃದ್ಧೆಯ ಆಧಾರ್ ಕಾರ್ಡ್ (Aadhaar Card) ಕೇಳಿದರು.
ಆಧಾರ್ ಕಾರ್ಡ್‌ನಲ್ಲಿ 'ಕಸಾಬಾಯಿ ಗಾಯಕ್ವಾಡ್' ಎಂಬ ಹೆಸರನ್ನು ನೋಡಿದ ರಾಜು ಅಚ್ಚರಿಗೊಂಡರು. ತಕ್ಷಣವೇ ಅವರ ಬಳಿ ಮಾತನಾಡಿದಾಗ, ಆ ಅಜ್ಜಿ 2 ವರ್ಷಗಳ ಹಿಂದೆ 24,000 ರೂ. ಕಳೆದುಕೊಂಡಿರುವುದಾಗಿ ಹೇಳಿದರು. ಕೂಡಲೇ ಕಂಡಕ್ಟರ್​ ಅವರನ್ನು ಬಸ್ ಡಿಪೋಗೆ ಕರೆದೊಯ್ದು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಅಗತ್ಯ ಪರಿಶೀಲನೆಯ ಬಳಿಕ ಆ ಹಣವನ್ನು ವೃದ್ಧೆಗೆ ಹಸ್ತಾಂತರಿಸಲಾಯಿತು. ಕಳೆದುಹೋದ ಹಣ ಮತ್ತೆ ಸಿಗುವುದಿಲ್ಲ ಎಂದು ಆಸೆ ಬಿಟ್ಟಿದ್ದ ವೃದ್ಧೆ, ಕಂಡಕ್ಟರ್ ಪ್ರಾಮಾಣಿಕತೆಗೆ ಕಣ್ಣೀರಿಟ್ಟು, ಕೃತಜ್ಞತೆಯ ಸಂಕೇತವಾಗಿ 1,100 ರೂ.ಗಳನ್ನು ರಾಜು ಅವರಿಗೆ ನೀಡಿದರು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net