'ಮೇಯರ್' ಸಂಘರ್ಷ..ಚಾನ್ಸ್​ ಕೊಟ್ಟರೆ ಶಿಂಧೆ ಉಪಸ್ಥಿತಿಯನ್ನು ಅಳಿಸಿಹಾಕಬಹುದು ಎಂದ ಮಹಾ ಸಚಿವ | Ganesh Naik

Ganesh Naik | ಮಹಾರಾಷ್ಟ್ರ ಸಚಿವ ಗಣೇಶ್ ನಾಯಕ್
Ganesh Naik | ಮಹಾರಾಷ್ಟ್ರ ಸಚಿವ ಗಣೇಶ್ ನಾಯಕ್
Published on
ಮುಂಬೈ: ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧ ವಾಗ್ದಾಳಿ ನಡೆಸಿರುವ ಮಹಾರಾಷ್ಟ್ರ ಸಚಿವ ಗಣೇಶ್ ನಾಯಕ್, ಬಿಜೆಪಿ ನಾಯಕರು ತಮಗೆ ಅವಕಾಶ ನೀಡಿದರೆ, ಶಿಂಧೆ ಉಪಸ್ಥಿತಿಯನ್ನು ರಾಜಕೀಯವಾಗಿ ಅಳಿಸಿಹಾಕಬಹುದು ಎಂದಿದ್ದಾರೆ.
ಇತ್ತೀಚಿನ ಪುರಸಭೆ ಚುನಾವಣಾ ಫಲಿತಾಂಶಗಳ ಹಿನ್ನೆಲೆಯಲ್ಲಿ ಈ ಹೇಳಿಕೆಗಳು ಹೊರ ಬಿದ್ದಿವೆ ಎಂದು ವಿಶ್ಲೇಷಿಸಲಾಗುತ್ತಿದ್ದು, ನಾಯಕ್​ ಮೈತ್ರಿ ತಂತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಬಿಜೆಪಿ ಶಿಸ್ತಿನ ಪಕ್ಷವಾಗಿರುವುದರಿಂದ ಆಂತರಿಕ ಭಿನ್ನಾಭಿಪ್ರಾಯಗಳಿದ್ದರೂ ಸಹ ಕಾರ್ಯಕರ್ತರು ನಾಯಕತ್ವದ ನಿರ್ಧಾರಗಳಿಗೆ ಬದ್ಧರಾಗಿರುತ್ತಾರೆ ಎಂದರು.
ಬಿಜೆಪಿ ಸ್ವತಂತ್ರವಾಗಿ ಸ್ಪರ್ಧಿಸಿದ್ದರೆ ಥಾಣೆ, ಕಲ್ಯಾಣ್ ಮತ್ತು ಉಲ್ಲಾಸ್‌ನಗರದಂತಹ ಪ್ರದೇಶಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿತ್ತು ಎಂದು ನಾಯಕ್ ವಾದವಾಗಿದ್ದು, ಪಕ್ಷದ ಅನೇಕ ಕಾರ್ಯಕರ್ತರು ಸೀಟು ಹಂಚಿಕೆ ಮತ್ತು ಮೈತ್ರಿ ನಿರ್ಧಾರಗಳಿಂದ ಅತೃಪ್ತರಾಗಿದ್ದರು, ಇದು ಫಲಿತಾಂಶಗಳ ಮೇಲೆ ಪರಿಣಾಮ ಬೀರಿತು ಎಂದು ಹೇಳಿದರು.
ಕಳೆದ ಮೂರ್ನಾಲ್ಕು ದಶಕಗಳಿಂದ ಬಿಎಂಸಿಯಲ್ಲಿ ಶಿವಸೇನೆಯ ಮೇಯರ್ ಇದ್ದು, ಆ ಸಂಪ್ರದಾಯಕ್ಕೆ ಅನುಗುಣವಾಗಿ ಮೇಯರ್ ಹುದ್ದೆಯನ್ನು ತಮಗೆ ನೀಡಬೇಕೆಂಬ ಬೇಡಿಕೆಯನ್ನು ಶಿವಸೇನೆ ಇಟ್ಟಿದೆ ಎನ್ನುವ ವಿಷಯವಾಗಿ ಈ ಹಿಂದೆ ವರದಿಯಾಗಿತ್ತು. ಈ ತಿಂಗಳ ಆರಂಭದಲ್ಲಿ ಶಿಂಧೆ ತಮ್ಮ ಕಾರ್ಪೊರೇಟರ್‌ಗಳನ್ನು ಪಂಚತಾರಾ ಹೋಟೆಲ್‌ಗೆ ಸ್ಥಳಾಂತರಿಸಿದಾಗ ಈ ಸುದ್ದಿಗೆ ಮತ್ತಷ್ಟು ಬಲ ಬಂತು.
ಮೇಯರ್ ಹುದ್ದೆಯ ನಿರ್ಧಾರ ಇನ್ನೂ ಬಾಕಿ ಇದ್ದು, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಶಿಂಧೆ ಸೇರಿದಂತೆ ಮೈತ್ರಿಕೂಟದ ನಾಯಕರು ಮೇಯರ್ ವಿಷಯವಾಗಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಜನವರಿ 15 ರಂದು ಮಹಾರಾಷ್ಟ್ರದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶಿಂಧೆಯವರ ಶಿವಸೇನೆ ಒಟ್ಟು 2,869 ವಾರ್ಡ್‌ಗಳಲ್ಲಿ ಸ್ಪರ್ಧಿಸಿ 399 ವಾರ್ಡ್‌ಗಳನ್ನು ಗೆದ್ದು ಬಿಜೆಪಿ ನಂತರದ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು.

ಬಿಎಂಸಿಯಲ್ಲಿ ಬಿಜೆಪಿ ಪಾರುಪತ್ಯ

227 ಸದಸ್ಯ ಬಲದ ಬಿಎಂಸಿಯಲ್ಲಿ ಅಧಿಕಾರ ಹಿಡಿಯಲು 114 ಸ್ಥಾನಗಳು ಬೇಕು. ಬಿಜೆಪಿ 89 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ, ಡಿಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 29 ಸ್ಥಾನಗಳನ್ನು ಗೆದ್ದಿದ್ದು, ಮಹಾಯುತಿ ಮೈತ್ರಿಕೂಟ 118 ವಾರ್ಡ್​ಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ನಾಲ್ಕು ದಶಕಗಳಿಂದ ಬಿಎಂಸಿಯನ್ನು ಆಳುತ್ತಿರುವ ಠಾಕ್ರೆ ಬಣವು 65 ಸ್ಥಾನಗಳೊಂದಿಗೆ ಎರಡನೇ ಅತಿದೊಡ್ಡ ಪಕ್ಷವಾಗಿದೆ(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net