ಮಹಾದೇವ್ ಬೆಟ್ಟಿಂಗ್ ಕಿಂಗ್‌ಪಿನ್‌ ಸೌರಭ್ ಚಂದ್ರಕರ್ ಅರೆಸ್ಟ್​! ಓಮನ್‌ನಿಂದ ಭಾರತಕ್ಕೆ ಹಸ್ತಾಂತರ; CBI ಬಲೆಗೆ ಬಿದ್ದ ಮಹಾ ಖದೀಮ! Mahadev Betting App

Visuals of Mahadev betting app kingpin Saurabh Chandrakar in CBI custody.
ಮಹಾದೇವ್ ಬೆಟ್ಟಿಂಗ್ ಆ್ಯಪ್ ಕಿಂಗ್​ಪಿನ್​​ ಸೌರಭ್ ಚಂದ್ರಕರ್ ಸಿಬಿಐ ವಶದಲ್ಲಿರುವ ದೃಶ್ಯ.
Published on: 

ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ್ದ ಬಹುಕೋಟಿ ರೂಪಾಯಿಗಳ 'ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಆ್ಯಪ್' ಹಗರಣದ ಮಾಸ್ಟರ್‌ಮೈಂಡ್ ಸೌರಭ್ ಚಂದ್ರಕರ್ ನ ಆಟ ಕೊನೆಗೂ ಅಂತ್ಯವಾಗಿದೆ.

ಇಷ್ಟು ದಿನ ವಿದೇಶದಲ್ಲಿ ಕುಳಿತು ಅಧಿಕಾರಿಗಳ ಕಣ್ಣಿಗೆ ಮಣ್ಣೆರಚುತ್ತಿದ್ದ ಈ ಆನ್‌ಲೈನ್ ಗ್ಯಾಂಗ್‌ಸ್ಟರ್‌ನನ್ನು ಕೇಂದ್ರ ತನಿಖಾ ದಳ (CBI) ಓಮನ್‌ನಿಂದ ಭಾರತಕ್ಕೆ ಯಶಸ್ವಿಯಾಗಿ ಹಸ್ತಾಂತರಿಸಿಕೊಂಡಿದೆ. ಸೋಮವಾರ (ನ.2) ಛತ್ತೀಸ್‌ಗಢದ ರಾಯ್‌ಪುರದ ವಿಶೇಷ ನ್ಯಾಯಾಲಯದ ಮುಂದೆ ಈತನನ್ನು ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಒಂದೇ ತಿಂಗಳಲ್ಲಿ ಎರಡನೇ ವಿಕೆಟ್ ಪತನ!

ಕಳೆದ ತಿಂಗಳಷ್ಟೇ ದುಬೈನಿಂದ ಹೈದರಾಬಾದ್‌ನ ರಾಜೀವ್ ಗಾಂಧಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಮುಖ ಆರೋಪಿ ಅಭಿಷೇಕ್ ಕುಮಾರ್‌ನನ್ನು ಸಿಬಿಐ ರೆಡ್‌ಹ್ಯಾಂಡ್‌ ಆಗಿ ಅರೆಸ್ಟ್ ಮಾಡಿತ್ತು. ಆ ಬೆನ್ನಲ್ಲೇ ಈಗ ನೇರವಾಗಿ ಸಿಂಡಿಕೇಟ್‌ನ ಕಿಂಗ್‌ಪಿನ್ ಸೌರಭ್ ಚಂದ್ರಕರ್‌ ನನ್ನು ಭಾರತಕ್ಕೆ ಎಳೆದುತಂದಿರುವುದು ಸಿಬಿಐಗೆ ಸಿಕ್ಕ ಅತಿ ದೊಡ್ಡ ಗೆಲುವಾಗಿದೆ. ದೇಶದ ಹೊರಗೆ ಕುಳಿತು ಅಕ್ರಮ ದಂಧೆ ನಡೆಸುತ್ತಿದ್ದ ಪರಾರಿಯಾದವರ ಬೇಟೆಯಲ್ಲಿ ಇದೊಂದು 'ಐತಿಹಾಸಿಕ ಮೈಲಿಗಲ್ಲು' ಎಂದು ತನಿಖಾ ಸಂಸ್ಥೆ ಬಣ್ಣಿಸಿದೆ.

ಏನಿದು ಮಹಾದೇವ್ ಬೆಟ್ಟಿಂಗ್ ಮಾಯಾಲೋಕ?

ಭಾರತದಾದ್ಯಂತ ಫ್ರಾಂಚೈಸಿ, ಏಜೆಂಟ್‌ಗಳು ಮತ್ತು 'ಪ್ಯಾನೆಲ್'ಗಳ ಜಾಲ ಸೃಷ್ಟಿಸಿ ಕ್ರಿಕೆಟ್, ಫುಟ್‌ಬಾಲ್ ಹಾಗೂ ಕಾರ್ಡ್ ಆಟಗಳ ಮೇಲೆ ಸಾವಿರಾರು ಕೋಟಿ ಬೆಟ್ಟಿಂಗ್ ಕಟ್ಟಿಸಿಕೊಳ್ಳಲಾಗುತ್ತಿತ್ತು.

ಹವಾಲಾ ಮಾರ್ಗ: ಜನರ ಹಣವನ್ನು ನಕಲಿ ಬ್ಯಾಂಕ್ ಖಾತೆಗಳ ಮೂಲಕ ವರ್ಗಾಯಿಸಿ, ಹಲವು ಹಂತಗಳಲ್ಲಿ ಸುತ್ತಿ, ಹವಾಲಾ ಮುಖಾಂತರ ದುಬೈ, ಓಮನ್‌ನಂತಹ ವಿದೇಶಗಳಿಗೆ ಕೋಟ್ಯಂತರ ಹಣ ಸಾಗಿಸಲಾಗುತ್ತಿತ್ತು.

ರಕ್ಷಣೆಗೆ ಲಂಚದ ಹೊಳೆ: ಈ ಅಕ್ರಮ ಸಾಮ್ರಾಜ್ಯಕ್ಕೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಲು, ಸಾರ್ವಜನಿಕ ಅಧಿಕಾರಿಗಳು ಮತ್ತು ಪ್ರಭಾವಿಗಳಿಗೆ ಕೋಟಿ ಕೋಟಿ ರೂಪಾಯಿಗಳ ಹಫ್ತಾ ಮುಟ್ಟಿಸಲಾಗುತ್ತಿತ್ತು ಎಂದು ಸಿಬಿಐ ಪತ್ತೆಹಚ್ಚಿದೆ.

Also Read
ಜಲ್ಸಾ ಬಂಗಲೆಗೆ ಬಾಂಬ್ ಬೆದರಿಕೆ: ಬುಲೆಟ್ ಪ್ರೂಫ್ ಗ್ಲಾಸ್ ಹಿಂದಿನಿಂದ 'ಬಿಗ್ ಬಿ' ದರ್ಶನ; ಬಿಷ್ಣೋಯ್ ಗ್ಯಾಂಗ್ ಹಿಟ್ ಲಿಸ್ಟ್‌ನಲ್ಲಿ ಅಮಿತಾಭ್? Amitabh Bachchan
Visuals of Mahadev betting app kingpin Saurabh Chandrakar in CBI custody.

ಸಿಬಿಐ ಖಡಕ್ ಚಾರ್ಜ್‌ಶೀಟ್, ಇಡಿ ಆಸ್ತಿ ಜಪ್ತಿ!

ಈಗಾಗಲೇ ಸಿಬಿಐ ಭ್ರಷ್ಟಾಚಾರ ತಡೆ ಕಾಯ್ದೆ, ವಂಚನೆ, ನಕಲಿ ದಾಖಲೆ ಸೃಷ್ಟಿ ಮತ್ತು ಗ್ಯಾಂಬ್ಲಿಂಗ್ ಕಾಯ್ದೆಯಡಿ ಎರಡು ಬಲವಾದ ಚಾರ್ಜ್‌ಶೀಟ್‌ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಇತ್ತ ಜಾರಿ ನಿರ್ದೇಶನಾಲಯ (ED) ಕೂಡ ಮನಿ ಲಾಂಡರಿಂಗ್ ಪ್ರಕರಣ ದಾಖಲಿಸಿ, ಭಾರತ ಹಾಗೂ ವಿದೇಶಗಳಲ್ಲಿ ಚಂದ್ರಕರ್ ಸೇರಿದಂತೆ ಆತನ ಗ್ಯಾಂಗ್ ಸಂಪಾದಿಸಿದ್ದ ಕೋಟ್ಯಂತರ ಮೌಲ್ಯದ ಆಸ್ತಿಗಳನ್ನು ಸೀಜ್ ಮಾಡಿದೆ.

ಓಮನ್ ಪೊಲೀಸರ ಬಿಗ್ ಆಪರೇಷನ್

ಕೇಂದ್ರ ಸರ್ಕಾರ ಹಾಗೂ ಇಂಟರ್‌ಪೋಲ್ ನೆರವಿನೊಂದಿಗೆ ಸಿಬಿಐ ಮತ್ತು ಇಡಿ ಅಧಿಕಾರಿಗಳು ರಾಯಲ್ ಓಮನ್ ಪೊಲೀಸರಿಗೆ ಅಧಿಕೃತ ಹಸ್ತಾಂತರ ಪ್ರಸ್ತಾವನೆ ಸಲ್ಲಿಸಿದ್ದರು. ಓಮನ್ ಸರ್ಕಾರದ ಪೂರ್ಣ ಸಹಕಾರದೊಂದಿಗೆ ಚಂದ್ರಕರ್‌ನನ್ನು ವಶಕ್ಕೆ ಪಡೆದ ಸಿಬಿಐ, ಎರಡೂ ದೇಶಗಳ ಸ್ನೇಹ ಮತ್ತು ಗಡಿಯಾಚೆಗಿನ ಅಪರಾಧಗಳನ್ನು ಮಟ್ಟಹಾಕುವಲ್ಲಿನ ಒಗ್ಗಟ್ಟಿಗೆ ಕೃತಜ್ಞತೆ ಸಲ್ಲಿಸಿದೆ.

ಈಗ ಸೌರಭ್ ಚಂದ್ರಕರ್ ಭಾರತದ ನೆಲಕ್ಕೆ ಕಾಲಿಟ್ಟಿದ್ದು, ಆತನ ವಿಚಾರಣೆಯಿಂದ ಯಾರ‍್ಯಾರ ತಲೆದಂಡವಾಗಲಿದೆ, ಬೆಟ್ಟಿಂಗ್ ದಂಧೆಯ ಹಿಂದೆ ಅಡಗಿರುವ ಪ್ರಭಾವಿ ರಾಜಕಾರಣಿಗಳು ಮತ್ತು ಉದ್ಯಮಿಗಳ ಹೆಸರುಗಳು ಹೇಗೆ ಹೊರಬರಲಿವೆ ಎಂಬುದು ಇಡೀ ದೇಶದ ಕುತೂಹಲಕ್ಕೆ ಕಾರಣವಾಗಿದೆ, (ಏಜೆನ್ಸೀಸ್​).