ಟ್ರಂಪ್​ರ ಮ್ಯಾಗಾಗೆ ಮೊದಲ ಬಲಿ ಮಡುರೊ

Maduro
Maduro
Published on
ಡಿಸೆಂಬರ್ 31, 2025ರ ಸಂಜೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಬಂಧುಮಿತ್ರರಿಗಾಗಿ, ರಾಷ್ಟ್ರದ ಗಣ್ಯರಿಗಾಗಿ ಖಾಸಗಿ ನಿವಾಸ ಮಾರಾ ಲಾಗೋನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಸಮಾರಂಭವೊಂದನ್ನು ಏರ್ಪಡಿಸಿದ್ದರು. ಅಲ್ಲಿ ಅವರಿಗೆ ಎದುರಾದ ಪ್ರಶ್ನೆಗಳಲ್ಲೊಂದು- 2026ಕ್ಕಾಗಿ ನಿಮ್ಮ ನಿರ್ಣಯ ಏನು? ಅದಕ್ಕೆ ಟ್ರಂಪ್ ಕೊಟ್ಟ ಉತ್ತರ- ಭೂಮಿಯ ಮೇಲೆ ಶಾಂತಿ.
ಆದರೆ ನೆರೆಯ ವೆನೆಜುವೆಲಾ ಮೇಲೆ ದಾಳಿಯೆಸಗುವ ಆದೇಶವನ್ನು ಅವರು ಅಮೆರಿಕದ ರಕ್ಷಣಾ ಪಡೆಗಳಿಗೆ ಅದಾಗಲೇ ನೀಡಿಯಾಗಿತ್ತು, ಅದಕ್ಕಾಗಿ ಘಾತಕ ಡೆಲ್ಟಾ ಫೋರ್ಸ್ ಸಿದ್ಧತೆಗಳನ್ನು ಪೂರ್ಣಗೊಳಿಸಿಯೂ ಆಗಿತ್ತು! ಅದರಂತೆ ದಕ್ಷಿಣ ಅಮೆರಿಕದ ಆ ತೈಲಸಂಪನ್ನ ದೇಶದ ರಾಜಧಾನಿ ಕರಾಕಸ್ ಹಾಗೂ ಮುಖ್ಯ ರೇವುಪಟ್ಟಣ ಲಾ ಗ್ವೆರಾ ಸೇರಿದಂತೆ ಐದು ನಗರಗಳು ಮತ್ತು ಸೇನಾ ನೆಲೆಗಳ ಮೇಲೆ ಅಮೆರಿಕದ ನೂರೈವತ್ತು ಯುದ್ಧವಿಮಾನಗಳು ಮಿಂಚಿನ ದಾಳಿಯೆಸಗಿದವು, ವೆನೆಜುವೆಲಾದ ವಾಯು ಪಡೆ ಮತ್ತು ವಾಯು ಸುರಕ್ಷಾ ವ್ಯವಸ್ಥೆಗಳನ್ನು ನಿಷ್ಕ್ರಿಯಗೊಳಿಸಿ, ಅಧ್ಯಕ್ಷರ ಅಧಿಕೃತ ನಿವವಾಸಕ್ಕೆ ನುಗ್ಗಿ ನಿಕೊಲಾಸ್ ಮಡುರೊ ಮತ್ತವರ ಪತ್ನಿಯನ್ನು ಮಲಗುವ ಕೋಣೆಯಿಂದ ಹೊರಗೆಳೆದು ಬಂಧಿಗಳನ್ನಾಗಿಸಿ ಹೆಲಿಕಾಪ್ಟರ್ ಮೂಲಕ ದೇಶದಿಂದ ಹೊರಗೊಯ್ದಿದೆ. ಇಡೀ ಕಾರ್ಯಾಚರಣೆಗೆ ತಗುಲಿದ್ದು ಎರಡು ತಾಸು ಹತ್ತೊಂಬತ್ತು ನಿಮಿಷಗಳು. ಅಮೆರಿಕಕ್ಕೆ ಮಾದಕವಸ್ತುಗಳ ಕಳ್ಳಸಾಗಾಣಿಕೆಯ ಆರೋಪದ ಮೇಲೆ ಮೂವತ್ತಾರು ವರ್ಷಗಳ ಹಿಂದೆ ಪನಾಮಾದ ಅಂದಿನ ಅಧ್ಯಕ್ಷ ಮ್ಯಾನ್ಯುಯೆಲ್ ನೊರಿಯೇಗಾರನ್ನು ಅವರ ದೇಶದೊಳಗೇ ನುಗ್ಗಿ ಬಂಧಿಸಿ ಅಮೆರಿಕಕ್ಕೆ ಸಾಗಿಸಿದ ನಂತರ ಅಂತಹ ಮತ್ತೊಂದು ಕೃತ್ಯವನ್ನು ವಾಷಿಂಗ್ಟನ್ ಎಸಗಿರುವುದು ಇದು ಎರಡನೆಯ ಬಾರಿ. ಮಡುರೊ ಅವರ ಮೇಲೆ ಟ್ರಂಪ್ ಆಡಳಿತ ಹೊರಿಸುತ್ತಿರುವ ಆಪಾದನೆಗಳೂ ಹಿಂದೆ ನೊರಿಯೇಗಾ ಮೇಲೆ ಹೊಡಿಸಲಾದ ಆಪಾದನೆಗಳೇ- ಮಾದಕದ್ರವ್ಯಗಳ ಕಳ್ಳಸಾಗಾಣಿಕೆ. ನೊರಿಯೇಗಾಗೆ ಆದಂತೆ ಮಡುರೊ ಅವರಿಗೂ ಶಿಕ್ಷೆಯಾಗಿ ಅವರೂ ದಶಕಗಳ ಕಾಲ ಅಮೆರಿಕದ ಕಾರಾಗೃಹವೊಂದರಲ್ಲಿ ಕೊಳೆಯುವುದು ನಿಶ್ಚಿತ. ಹಾಗಿದ್ದರೆ 13 ವರ್ಷಗಳಿಂದ ವೆನೆಜುವೆಲಾದ ಅಧ್ಯಕ್ಷರಾಗಿದ್ದ ಮಡುರೊ ಮಾದಕವಸ್ತುಗಳ ಕಳ್ಳಸಾಗಣೆದಾರರೇ?
ಈ ಪ್ರಶ್ನೆಗೆ ಉತ್ತರ ಹೌದು ಎನ್ನಬಹುದಾದರೂ ವೆನೆಜುವೆಲಾದಿಂದ ಅಮೆರಿಕಕ್ಕೆ ಕಳ್ಳಮಾರ್ಗದಲ್ಲಿ ಸಾಗುತ್ತಿದ್ದ ಮಾದಕವಸ್ತುಗಳ ಪ್ರಮಾಣ ತೀರಾ ಕಡಿಮೆ. ಹಾಗೆ ನೋಡಿದರೆ ಮೆಕ್ಸಿಕೋ ಮತ್ತು ಕೊಲಂಬಿಯಾದಿಂದ ಅಮೆರಿಕಾಗೆ ಕಳ್ಳಸಾಗಣೆಯಾಗುವ ಫೆಂಟಾನಿಲ್, ಕೊಕೇನ್ ಮುಂದೆ ವೆನೆಜುವೆಲಾದಿಂದ ಬರುತ್ತಿದ್ದ ವಸ್ತುಗಳು ಏನೇನೂ ಅಲ್ಲ. ಹೀಗಾಗಿಯೇ ಮಡುರೊ ಮೇಲೆ ಟ್ರಂಪ್ ಕೈಗೊಂಡ ಈ ಕ್ರಮಕ್ಕೆ ಕಾರಣ ಮಾದಕವಸ್ತು ಅಲ್ಲ, ಅದೊಂದು ನೆಪವಷ್ಟೆ. ನಿಜವಾದ ಕಾರಣ ಆ ದೇಶದಲ್ಲಿರುವ ಅಗಾಧ ತೈಲನಿಕ್ಷೇಪ. ಖುದ್ದು ಟ್ರಂಪ್ ಈ ಅನುಮಾನಕ್ಕೆ ಇಂಬುಗೊಡುವಂತಹ ಮಾತುಗಳನ್ನಾಡಿದ್ದಾರೆ. ಇನ್ನು ಮುಂದೆ ವೆನೆಜುವೆಲಾದ ತೈಲವನ್ನು ಅಮೆರಿಕದ ತೈಲ ಕಂಪನಿಗಳೂ ಹೊರತೆಗೆದು ಮಾರುವ ಕೆಲಸ ಆರಂಭಿಸುತ್ತವೆ ಎಂದವರು ಹೇಳಿದ್ದಾರೆ.
ಜಾಗತಿಕವಾಗಿ ಇಂದಿನವರೆಗೆ ಪತ್ತೆಯಾಗಿರುವ ಅತಿ ಬೃಹತ್ ತೈಲ ಸಂಪತ್ತಿನ ಒಡೆಯ ವೆನೆಜುವೆಲಾ. ಅಂದಾಜು 303 ದಶಲಕ್ಷ ಬ್ಯಾರೆಲ್​ಗಳ ಆ ಅಗಾಧ ತೈಲಸಂಪತ್ತಿನ ಮೌಲ್ಯ ಇಂದಿನ ಬೆಲೆಯಲ್ಲಿ 18 ಟ್ರಿಲಿಯನ್ ಡಾಲರ್​ಗಳು! ಹಿಂದೆ ಇದರ ವಹಿವಾಟನ್ನು ಬಹುತೇಕ ಪೂರ್ಣವಾಗಿ ಅಮೆರಿಕದ ತೈಲ ಕಂಪನಿಗಳೂ ನಿರ್ವಹಿಸುತ್ತಿದ್ದವು. ಆದರೆ 1998ರಲ್ಲಿ ಅಧಿಕಾರಕ್ಕೆ ಬಂದ ಸಮಾಜವಾದಿ ಅಧ್ಯಕ್ಷ ಹ್ಯೂಗೋ ಚಾವೆಝå್ ಅದಕ್ಕೆ ತಡೆಯೊಡ್ಡಿದರು. ನೀವು ಸ್ಥಾಪಿಸಿರುವ ಸಂಸ್ಕರಣಾ ವ್ಯವಸ್ಥೆಯನ್ನು ನಮಗೆ ಬಿಟ್ಟು ಅವುಗಳ ಬೆಲೆಯನ್ನು ಹಣದ ರೂಪದಲ್ಲಿ ತೆಗೆದುಕೊಂಡು ಹೊರನಡೆಯಿರಿ ಎಂದು ಚಾವೆಝå್ ಹೇಳಿದ್ದನ್ನು ನಿರಾಕರಿಸಲು ಅಮೆರಿಕದ ತೈಲ ಕಂಪೆನಿಗಳಿಗೆ ಆಗಲೇ ಇಲ್ಲ. ಆದರೆ ತಮಗಾದ ನಷ್ಟಕ್ಕೆ ತಕ್ಕ ಪರಿಹಾರ ಅವುಗಳಿಗೆ ಸಿಗಲಿಲ್ಲ. ಸಹಜವಾಗಿಯೇ ಇದನ್ನು ಅಮೆರಿಕ ಒಂದು ರಾಷ್ಟ್ರವಾಗಿ ಇಂದಿಗೂ ಅರಗಿಸಿಕೊಂಡಿಲ್ಲ.
ಹೋಗಲಿ, ಅಮೆರಿಕನ್ ಕಂಪನಿಗಳು ಹೊರನಡೆದ ಮೇಲೆ ಕರಾಕಸ್​ನ ಸಮಾಜವಾದಿ ಸರ್ಕಾರ ತೈಲ ಸಂಪತ್ತನ್ನು ಯುಕ್ತವಾಗಿ ಬಳಸಿಕೊಂಡು ಜನತೆಯ ಬದುಕನ್ನು ಸುಧಾರಿಸಿತೇ? ಇಲ್ಲ, ಇಲ್ಲವೇ ಇಲ್ಲ. ಅದಕ್ಕೆ ಸಂಕೀರ್ಣ ಕಾರಣಗಳಿವೆ. ವೆನೆಜುವೆಲಾದಲ್ಲಿ ಜಗತ್ತಿನಲ್ಲೇ ಅತಿ ಬೃಹತ್ ತೈಲನಿಕ್ಷೇಪವಿರಬಹುದು, ಅದರೆ ಅಲ್ಲಿನ ತೈಲ ಮಂದವಾದುದು. ಹೀಗಾಗಿ ಅದನ್ನು ಹೊರತೆಗೆಯುವುದೂ, ಸಂಸ್ಕರಿಸುವುದೂ ತ್ರಾಸದಾಯಕ, ವೆಚ್ಚದಾಯಕ. ಅಮೆರಿಕನ್ನರು ಬಿಟ್ಟುಹೋದ ಮೇಲೆ ಆ ಕೆಲಸವನ್ನು ಸಮರ್ಥವಾಗಿ ನಿಭಾಯಿಸುವ ಕೌಶಲ, ಸಾಮರ್ಥ್ಯವನ್ನು ವೆನೆಜುವೆಲನ್ನರು ರೂಢಿಸಿಕೊಳ್ಳಲಿಲ್ಲ. ಹೀಗಾಗಿ ವೆನೆಜುವೆಲಾದ ತೈಲ ರಫ್ತು ಏಕಾಏಕಿ ಕುಗ್ಗಿಹೋಯಿತು. ಜತೆಗೆ ವ್ಯಗ್ರ ಅಮೆರಿಕ ವಿಧಿಸಿದ ಆರ್ಥಿಕ ಬಹಿಷ್ಕಾರಗಳಿಂದಾಗಿ ರಫ್ತಿಗೂ ಸಂಚಕಾರ ಬಂತು. ಇಷ್ಟಾಗಿಯೂ ಚೀನಾ, ಉತ್ತರ ಕೊರಿಯಾ ಮತ್ತು ದಕ್ಷಿಣ ಅಮೆರಿಕಾದ್ದೇ ಕೆಲವು ದೇಶಗಳ ಆಮದಿನಿಂದ ಬಂದ ಹಣವನ್ನು ಸರ್ಕಾರಗಳು ಸರಿಯಾಗಿ ಬಳಸಿಕೊಳ್ಳಬಹುದಾಗಿತ್ತು. ಸಮಾಜವಾದಿ ಸರ್ಕಾರಗಳ ಜಾಯಮಾನದಂತೆ ಚಾವೆಝå್ ಸರ್ಕಾರ ಮತ್ತು ಫೆಬ್ರವರಿ 2013ರಲ್ಲಿ ಬಂದ ಮಡುರೊ ಸರ್ಕಾರ ಅನುಸರಿಸಿದ ಪುಕ್ಕಟೆ ನೀತಿ ಅರ್ಥವ್ಯವಸ್ಥೆಗೆ ಮಾರಕವಾಯಿತು. ಪೆಟ್ರೋಲ್ ಮತ್ತು ಡೀಸೆಲ್ ಜತೆಗೆ ಆರೋಗ್ಯಸೇವೆ, ಪ್ರಯಾಣ ಸೌಲಭ್ಯ ಮುಂತಾದ ಎಲ್ಲ ಸಾರ್ವಜನಿಕ ಸೇವೆಗಳನ್ನು ಸರ್ಕಾರ ಪುಕ್ಕಟೆಯಾಗಿ ನೀಡತೊಡಗಿದ್ದರಿಂದಾಗಿ ತೈಲ ಆದಾಯ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಾಯಿತು.
ಪರಿಣಾಮವಾಗಿ ಅಗತ್ಯವಸ್ತುಗಳ ಆಮದಿಗೂ ಸಂಚಕಾರವಾಗಿ ದೇಶದಲ್ಲಿ ಹಾಹಾಕಾರವೆದ್ದಿತು. ಬೆಲೆಯೇರಿಕೆ ಶೇ. 600ನ್ನು ದಾಟಿತು. ಇದನ್ನು ಸರಿಪಡಿಸುವ ಕ್ರಮಗಳತ್ತ ಗಮನ ನೀಡದ ಮಡುರೊ, ಅಮೆರಿಕಾ ಭೂತವನ್ನು ಜನರ ಮುಂದೆ ನಿಲ್ಲಿಸಿ, ಕೈಯಲ್ಲಿದ್ದ ಅಲ್ಪಸ್ವಲ್ಪ ಹಣವನ್ನು ಕಳಪೆ ಚೀನಿ ಶಸ್ತ್ರಾಸ್ತ್ರಗಳಿಗಾಗಿ ವ್ಯರ್ಥ ಮಾಡಿತು. ತನ್ನ ನೀತಿಗಳನ್ನು ವಿರೋಧಿಸಿದ ಜನರನ್ನು ದಮನಿಸಿತು. ಅಂತಿಮವಾಗಿ ಮಡುರೊ ಸೇನೆ ಮತ್ತು ಪೊಲೀಸ್ ಪಡೆಗಳನ್ನು ಬಳಸಿ ಜನಾಭಿಪ್ರಾಯವನ್ನು ತಿರುಚಿ 2024ರ ಅಧ್ಯಕ್ಷೀಯ ಚುನಾವಣೆ ಗೆದ್ದರು. ಸತ್ತಾವಿರೋಧಿ ಜನಾಂದೋಲನಕ್ಕೆ ಹದವಾದ ಪರಿಸ್ಥಿತಿ ಅದು. ಆದರೆ ಹೊರಗಿನ ಬೆಂಬಲವಿಲ್ಲದೇ ಮಡುರೊ ಬರ್ಬರತೆಯನ್ನು ಸಮರ್ಥವಾಗಿ ಎದುರಿಸುವ ಶಕ್ತಿ ವಿರೋಧ ಪಕ್ಷಗಳಿಗಿರಲಿಲ್ಲ. ಎಡಪಂಥೀಯ ವಿಚಾರಧಾರೆಯತ್ತ ವಾಲಿದ ಡೆಮೊಕ್ರಾಟಿಕ್ ಪಕ್ಷದ ಆಡಳಿತಾವಧಿಯಲ್ಲಿ ಮಡುರೊ ವಿರುದ್ಧ ಯಾವುದೇ ಕ್ರಮವನ್ನು ಶ್ವೇತಭವನದಿಂದ ನಿರೀಕ್ಷಿಸುವುದೂ ಸಾಧ್ಯವಿರಲಿಲ್ಲ. ಎಲ್ಲ ಬದಲಾದದ್ದು ಕಳೆದ ಜನವರಿಯಲ್ಲಿ ಟ್ರಂಪ್ ಮತ್ತೆ ಶ್ವೇತಭವನ ಪ್ರವೇಶಿಸಿದಾಗ.
ಇಲ್ಲಿ ಟ್ರಂಪ್ ವೆನೆಜುವೆಲನ್ನರ ಆಪದ್ಬಾಂಧವ ಆಗಬಯಸಿದರು ಎಂದು ತಿಳಿದರೆ ತಪ್ಪಾಗುತ್ತದೆ. ಮಡುರೊ ಸರ್ಕಾರವನ್ನು ಕಿತ್ತೊಗೆಯುವುದು ಟ್ರಂಪ್​ರ ಮೇಕ್ ಅಮೆರಿಕಾ ಗ್ರೇಟ್ ಅಗೇನ್ (ಮ್ಯಾಗಾ) ನೀತಿಯ ಒಂದು ಭಾಗ. ಬೈಡನ್, ಒಬಾಮಾ ಆಡಳಿತದಲ್ಲಿ ಮಣ್ಣಿಗೆ ಬಿದ್ದ ಅಮೆರಿಕದ ಮಾನವನ್ನು ಮೇಲೆತ್ತಿ ತಮ್ಮ ದೇಶವನ್ನು ಮತ್ತೆ ಮಹಾನ್​ಗೊಳಿಸಬೇಕಾದರೆ ಅಮೆರಿಕದ ಹಿತ್ತಲಾದ ಪಶ್ಚಿಮಾರ್ಧ ಗೋಲದಿಂದ ಅಮೆರಿಕದ ಆರ್ಥಿಕ-ಸಾಮರಿಕ ಪ್ರತಿದ್ವಂದ್ವಿಗಳನ್ನು ಹೊರಗಟ್ಟುವುದು ಅಗತ್ಯ ಎನ್ನುವುದು ಟ್ರಂಪ್ ವಿಚಾರ. ಅದಕ್ಕೆ ನೇರ ಗುರಿಯಾಗಿ ಕಂಡದ್ದು ಚೀನಾ. ಒಬಾಮಾ ಆಡಳಿತದ ಸಡಿಲ ನೀತಿಗಳಿಂದಾಗಿ ಚೀನಾ ತನ್ನ ಆರ್ಥಿಕ ಕಬಂಧಬಾಹುಗಳನ್ನು ಲ್ಯಾಟಿನ್ ಅಮೆರಿಕಕ್ಕೂ ವಿಸ್ತರಿಸಿದ್ದು, ಕೆನಡಾದಲ್ಲೂ ಪರೋಕ್ಷ ಪ್ರಭಾವ ಗಳಿಸಿದ್ದು ಈಗ ಇತಿಹಾಸ. ಅದನ್ನು ತಡೆಯುವುದಷ್ಟೇ ಅಲ್ಲ, ಮೂಲೋತ್ಪಾಟನೆ ಮಾಡುವುದನ್ನೂ ಟ್ರಂಪ್ ತಮ್ಮ ಮೊದಲ ಆವಧಿಯಲ್ಲಿ ಆರಂಭಿಸಿದರೂ ಅವರ ಎಲ್ಲ ಕಾರ್ಯಯೋಜನೆಗಳು ಬೈಡನ್ ಆಡಳಿತಾವಧಿಯಲ್ಲಿ ಮಣ್ಣುಪಾಲಾದವು. ಹೀಗಾಗಿ ಒಂದು ನಿಖರ ಹಾಗೋ ಕಠೋರ ನೀತಿಯನ್ನು ರೂಪಿಸಿಕೊಂಡೇ ಟ್ರಂಪ್ ಎರಡನೆಯ ಬಾರಿಗೆ ಶ್ವೇತಭವನ ಪ್ರವೇಶಿಸಿದರು. ಅದು ಮೊದಲಿಗೆ ಅನುಷ್ಠಾನಗೊಂಡದ್ದು ಪನಾಮಾದಲ್ಲಿ.
ಕಳೆದ ಶತಮಾನದ ಅಂತ್ಯದಲ್ಲಿ ಪನಾಮಾ ಕಾಲುವೆಯನ್ನು ಪನಾಮಾಗೆ ಅಮೆರಿಕ ಹಸ್ತಾಂತರಿಸಿದಾಗಿನಿಂದಲೂ ಅದರ ಮೇಲೆ ಚೀನಾ ತನ್ನ ಅಧಿಕಾರವನ್ನು ಹಂತಹಂತವಾಗಿ ವೃದ್ಧಿಸಿಕೊಳ್ಳುತ್ತಲೇ ಬಂದಿತ್ತು. ಅಮೆರಿಕದ ಪೂರ್ವ, ಪಶ್ಚಿಮ ತೀರಗಳ ಬೃಹತ್ ಆರ್ಥಿಕ ವಲಯಗಳನ್ನು ಸಂರ್ಪಸುವ ಹತ್ತಿರದ, ಸುಲಭದ ಜಲಮಾರ್ಗ ಚೀನಾದ ಕೈಗೆ ಪೂರ್ಣವಾಗಿ ಬಿದ್ದರೆ ಶೀಘ್ರದಲ್ಲೇ ಅದು ಅಮೆರಿಕದ ಕೊರಳಿಗೆ ಉರುಳಾಗಬಹುದಾದ ಸನ್ನಿವೇಶವನ್ನು ಮನಗಂಡಿದ್ದ ಟ್ರಂಪ್ ಪನಾಮಾ ಕಾಲುವೆ ಕ್ಷೇತ್ರದಿಂದ ಚೀನೀ ಶಿಪ್ಪಿಂಗ್ ಕಂಪನಿಗಳನ್ನು ಹೊರಗಟ್ಟುವಂತೆ, ಅಲ್ಲಿ ಚೀನೀ ವಹಿವಾಟನ್ನು ಮಿತಿಗೊಳಿಸುವಂತೆ ಘಾನಾದ ಅಧ್ಯಕ್ಷ ಹೋಸೆ ರಾವುಲ್ ಮುಲಾನೋ ಕ್ವಿಂತೆರಾಗೆ ಸ್ಪಷ್ಟ ಸೂಚನೆ ನೀಡಿದರು. ತಮ್ಮದೇ ದೇಶದ ಹಿಂದಿನ ಅಧ್ಯಕ್ಷ ಮ್ಯಾನ್ಯುಯೆಲ್ ನೊರಿಯೇಗಾರಿಗೆ ಆಗಿರುವ ಗತಿಯನ್ನು ಹೋಸೆ ಮರೆತಿರಲಿಲ್ಲ. ಪರಿಣಾಮ- ಪನಾಮಾ ಕಾಲುವೆ ವಲಯದಿಂದ ಚೀನಾಗೆ ತುರ್ತು ಗೇಟ್​ಪಾಸ್! ಟ್ರಂಪ್​ರ ಮುಂದಿನ ಗುರಿ ವೆನೆಜುವೆಲಾ ಎನ್ನುವುದು ಆಗಲೇ ಸ್ಪಷ್ಟವಾಯಿತು. ಅದಕ್ಕಾಗಿ ತೆರೆಯ ಹಿಂದಿನ ತಯಾರಿಗಳನ್ನು ಮಾಡಿಕೊಂಡ ಟ್ರಂಪ್ ನೇರ ಕಾರ್ಯಾಚರಣೆಯನ್ನು ಆಗಸ್ಟ್​ನಿಂದಲೇ ಆರಂಭಿಸಿದರು.
ಪನಾಮಾ ನೀತಿಯನ್ನು ತಾನೂ ಅನುಸರಿಸುವ ಸೂಚನೆಯನ್ನು ಮಡುರೊ ನೀಡಿದ್ದರೆ ಇಂದು ಅವರು ನ್ಯೂಯಾರ್ಕ್​ನಲ್ಲಿ ಅಪರಾಧಿಯಾಗಿ ನಿಲ್ಲುತ್ತಿರಲಿಲ್ಲ. ತಮ್ಮ ಚೀನಾಪರ ನೀತಿಯಿಂದಲೇ ವೆನೆಜುವೆಲಾದಲ್ಲಿ ತಾವು ಟ್ರಂಪ್​ರ ನೇರ ಹಾಗೂ ಏಕೈಕ ಗುರಿ ಎಂದು ಅರಿತೇ ಇದ್ದ ಮಡುರೊ ತಮ್ಮ ನಿವಾಸಗಳ ಸಂಖ್ಯೆಯನ್ನು ಐದಕ್ಕೆ ಏರಿಸಿಕೊಂಡು, ಅದರಿಂದಷ್ಟೇ ತಾವು ಟ್ರಂಪ್​ರ ಕ್ಷಿಪಣಿ ದಾಳಿಗಳಿಂದ ತಪ್ಪಿಸಿಕೊಳ್ಳಬಹುದೆಂದು ತಿಳಿದರು. ತಮ್ಮ ಯೋಜನೆ ತಮ್ಮನ್ನು ಸುರಕ್ಷಿತವಾಗಿ ಇಡುತ್ತದೆಂದೂ, ಜನವರಿ 2030ರವರೆಗೆ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ತಮಗೆ ಸಾವಿರ ವರ್ಷ ಆಯಸ್ಸು ಎಂದೂ ಆ ಎಡಪಂಥೀಯ ನಿರಂಕುಶಾಧಿಕಾರಿ ತಿಳಿದರು. ಆ ಧೈರ್ಯದಿಂದಲೇ ಅವರು, ತಾಕತ್ತಿದ್ದರೆ ನನ್ನನ್ನು ಹಿಡಿ, ಧೈರ್ಯವಿದ್ದರೆ ನನ್ನನ್ನು ಮುಟ್ಟು ಎಂದು ಟ್ರಂಪ್​ಗೆ ಮತ್ತೆಮತ್ತೆ ಸವಾಲೊಡ್ಡಿದರು. ಚೀನಿ ವಾಯುಸುರಕ್ಷಾ ವ್ಯವಸ್ಥೆಗಳ ನಿಷ್ಪ್ರಯೋಜಕತೆಯನ್ನು ಆಪರೇಷನ್ ಸಿಂಧೂರ್​ನಲ್ಲಿ ಭಾರತ ಜಗಜ್ಜಾಹೀರು ಮಾಡಿದ್ದನ್ನು ಮಡುರೊ ಅದು ಹೇಗೆ ಗಮನಿಸದೇಹೋದರೋ! ಡೆಲಾ ಫೋರ್ಸ್​ನಿಂದ ತಮ್ಮ ಅಪಹರಣವನ್ನು ತಡೆಯಲು ಮಡುರೊ ಪ್ರಯತ್ನಿಸಿದ್ದರೆ ಅವರನ್ನು ಕೊಲ್ಲುವುದು ಟ್ರಂಪ್ ಇಂಗಿತವಾಗಿತ್ತು.
ವೆನೆಜುವೆಲಾದ ಉಪಾಧ್ಯಕ್ಷೆ ಡೆಲ್ಸೀ ರಾಡ್ರಿಗಸ್ ಈಗ ಆಡಳಿತ ವಹಿಸಿಕೊಂಡಿದ್ದು, ತಿಂಗಳೊಳಗೆ ಅಧ್ಯಕ್ಷೀಯ ಚುನಾವಣೆ ನಡೆಸಬೇಕು. ಅದರಲ್ಲಿ ಅಮೆರಿಕದ ಹಸ್ತಕ್ಷೇಪ ಇದ್ದೇ ಇರುತ್ತದೆ, ವಿರೋಧ ಪಕ್ಷದ ನೇತಾರ ಎಡ್ಮಂಡೋ ಗೊನ್ಸಾಲ್ವೆಸ್ ಗೆಲ್ಲುವುದು ಟ್ರಂಪ್ ಲೆಕ್ಕಾಚಾರ. ಮತ್ತಾರಾದರೂ ಗೆದ್ದರೆ ಅಥವಾ ಖುದ್ದು ಡೆಲ್ಸೀ ಮುಂದುವರೆದರೂ ಅವರು ಟ್ರಂಪ್ ಮಾತುಗಳನ್ನು ಕೇಳಲೇಬೇಕಾಗುತ್ತದೆ. ಅದರ ಸೂಚನೆಯನ್ನು ಟ್ರಂಪ್ ನೀಡಿಯಾಗಿದೆ. ಅಮೆರಿಕ-ಪರ ಸರ್ಕಾರ ಬರುವುದು ಟ್ರಂಪ್ ಉದ್ದೇಶ. ಅದರಿಂದ ವೆನೆಜುವೆಲಾ ಜನತೆಗೆ ಏನಾದರೂ ಉಪಯೋಗವಾದರೆ ಅದೊಂದು ಉಪ ಉತ್ಪನ್ನ ಅಷ್ಟೇ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net