ಮಧ್ಯಪ್ರದೇಶದಲ್ಲಿ ಮಕಾಡೆ ಮಲಗಿರುವ ಆರೋಗ್ಯ ವ್ಯವಸ್ಥೆ: ಆಸ್ಪತ್ರೆ ಎದುರಿನ ರಸ್ತೆಯಲ್ಲೇ ಮಗುವಿಗೆ ಜನ್ಮವಿತ್ತ ಮಹಿಳೆ | Healthcare

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರದೇಶದ ಆಸ್ಪತ್ರೆ ಎದುರಿನ ರಸ್ತೆಯಲ್ಲಿ ಮಹಿಳೆಗೆ ಹೆರಿಗೆ
  • ಟಾರ್ಚಿನ ಬೆಳಕಿನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ
  • ಅಂಬ್ಯುಲೆನ್ಸ್​ಗೆ ಕರೆ ಮಾಡಿದರೂ ಸಹಾಯಕ್ಕೆ ಬಾರದ ಸರ್ಕಾರದ ಸೇವೆ
ವಿದಿಶಾ: ಅಭಿವೃದ್ಧಿಯ ಅಬ್ಬರದ ಘೋಷಣೆಗಳು, ಹೈಟೆಕ್ ಆರೋಗ್ಯ ಸೇವೆ (Healthcare) ಗಳ ಭರವಸೆಗಳು ಮತ್ತು ಆಧುನಿಕತೆಯ ಮುಖವಾಡ ಇವೆಲ್ಲವೂ ಒಂದು ಹೆಣ್ಣಿನ ನೋವಿನ ಮುಂದೆ ಕಳಚಿ ಬಿದ್ದಿವೆ. ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಪಠಾರಿ ತಹಸಿಲ್‌ನಲ್ಲಿ ನಡೆದ ಘಟನೆಯು ಕೇವಲ ಒಂದು ಅಪಘಾತವಲ್ಲ, ಬದಲಿಗೆ ನಮ್ಮ ಸಮಾಜದ ಆರೋಗ್ಯ ವ್ಯವಸ್ಥೆಯು ಎಷ್ಟರ ಮಟ್ಟಿಗೆ ಕುಸಿದಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಆವರಿಸಿದ ಕತ್ತಲೆ, ಅಸಹಾಯಕ ಆರ್ತನಾದ

ಬೆಳಗಿನ ಜಾವ 3 ಗಂಟೆ. ಪ್ರಪಂಚವೆಲ್ಲಾ ಗಾಢ ನಿದ್ರೆಯಲ್ಲಿದ್ದಾಗ ಸಂಜನಾ ಎಂಬ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಕುಟುಂಬದವರು ಗಾಬರಿಯಿಂದ 108 ಆಂಬ್ಯುಲೆನ್ಸ್ ಸಂಖ್ಯೆಗೆ ಪದೇ ಪದೇ ಕರೆ ಮಾಡಿದರು. "ಈಗ ಬರುತ್ತೇವೆ, ದಾರಿಯಲ್ಲಿದ್ದೇವೆ" ಎಂಬ ಭರವಸೆಗಳೇನೋ ಸಿಕ್ಕವು, ಆದರೆ ಗಂಟೆಗಳು ಕಳೆದರೂ ಆಂಬ್ಯುಲೆನ್ಸ್‌ನ ಸದ್ದು ಕೇಳಿಸಲಿಲ್ಲ. ಕೊರೆಯುವ ಚಳಿ, ಮನೆಯಲ್ಲಿ ಹೆಚ್ಚುತ್ತಿದ್ದ ಪ್ರಸವದ ವೇದನೆ. ಇವೆರಡರ ನಡುವೆ ಆ ಅಸಹಾಯಕ ಕುಟುಂಬ ಸುಮಾರು ಮೂರು ಗಂಟೆಗಳ ಕಾಲ ಸಾವಿನೊಂದಿಗೆ ಕಾದಾಟ ನಡೆಸಿತು.

ರಸ್ತೆಯೇ ಹೆರಿಗೆ ಕೋಣೆಯಾದಾಗ

ವೈದ್ಯಕೀಯ ಸಹಾಯ ಸಿಗುವ ಲಕ್ಷಣಗಳು ಕಾಣದಿದ್ದಾಗ, ನೋವಿನಿಂದ ನರಳುತ್ತಿದ್ದ ಸಂಜನಾರನ್ನು ಕುಟುಂಬದವರು ಕಾಲ್ನಡಿಗೆಯಲ್ಲೇ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದರು. ಆದರೆ ವಿಧಿಯಾಟ ಬೇರೆಯೇ ಇತ್ತು. ಆಸ್ಪತ್ರೆಗೆ ಕೇವಲ ಅರ್ಧ ಕಿಲೋಮೀಟರ್ ಇರುವಾಗಲೇ ಸಂಜನಾ ನೋವು ತಾಳಲಾರದ ಹಂತ ತಲುಪಿ, ರಸ್ತೆಬದಿಯಲ್ಲೇ ಹೆರಿಗೆ ಮಾಡುವುದು ಅನಿವಾರ್ಯವಾಯಿತು.
ಅಲ್ಲಿ ವೈದ್ಯರಿರಲಿಲ್ಲ, ಬೆಚ್ಚಗಿನ ಹಾಸಿಗೆಯಿರಲಿಲ್ಲ. ಇದ್ದದ್ದು ಮಿನುಗುವ ಟಾರ್ಚ್ ಬೆಳಕು ಮತ್ತು ಮರೆಗೆ ಹಿಡಿದ ಒಂದು ಟಾರ್ಪಾಲಿನ್ ತುಂಡು. ಗ್ರಾಮಸ್ಥರು ಮಾನವೀಯತೆಯಿಂದ ನೆರವಾದರು. ಚಳಿಯಿಂದ ಮಗುವನ್ನು ರಕ್ಷಿಸಲು ಟಾರ್ಪಾಲಿನ್ ಪರದೆಯಂತೆ ಕೆಲಸ ಮಾಡಿತು. ಆ ಹಿಮಭರಿತ ಕತ್ತಲೆಯ ರಸ್ತೆಯಲ್ಲಿ ನವಜಾತ ಶಿಶುವಿನ ಅಳು ಕೇಳಿಸಿತು. ಆದರೆ ಆ ಅಳು ವ್ಯವಸ್ಥೆಯ ಕ್ರೌರ್ಯವನ್ನು ಪ್ರಶ್ನಿಸುತ್ತಿರುವಂತಿತ್ತು.

ವ್ಯವಸ್ಥೆಯ ಹಾರಿಕೆ ಉತ್ತರಗಳು

ಘಟನೆಯ ನಂತರ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆಯ ಅಧಿಕಾರಿಗಳು, ಮೊಬೈಲ್ ಬ್ಯಾಟರಿ ಖಾಲಿಯಾಗಿದ್ದರಿಂದ ಸಂವಹನ ಕಡಿತಗೊಂಡಿತು ಎಂಬ ತಾಂತ್ರಿಕ ಕಾರಣಗಳನ್ನು ನೀಡಿದ್ದಾರೆ. "ತಾಯಿ ಮತ್ತು ಮಗು ಈಗ ಆರೋಗ್ಯವಾಗಿದ್ದಾರೆ ಎಂದು ಹೇಳಿ ಕೈತೊಳೆದುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ, ಆಸ್ಪತ್ರೆಯಿಂದ ಕೇವಲ 500 ಮೀಟರ್ ದೂರದಲ್ಲಿ ರಸ್ತೆಬದಿಯಲ್ಲಿ ಹೆರಿಗೆಯಾಗುವವರೆಗೆ ಸೌಲಭ್ಯಗಳು ಎಲ್ಲಿ ಹೋಗಿದ್ದವು? ಆ ಮೂರು ಗಂಟೆಗಳ ಕಾಲ ಆಂಬ್ಯುಲೆನ್ಸ್ ಏಕ ಬರಲಿಲ್ಲ? ಎಂಬ ಪ್ರಶ್ನೆಗಳಿಗೆ ಯಾರ ಬಳಿಯೂ ಉತ್ತರವಿಲ್ಲ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net