'ನೀನು ಕಪ್ಪು, ನಂಗೆ ಸೂಟ್​ ಆಗೋಲ್ಲ' ಎನ್ನುತ್ತಲೇ ಪತಿ ಕೊಲೆಗೆ ಸುಪಾರಿ ಕೊಟ್ಟವಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?..MP Murder

MP Husband Murder
MP Husband Murder
Published on

ಪ್ರಮುಖ ಮುಖ್ಯಾಂಶಗಳು

  • ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದ ಯುವತಿಯ ಬಂಧನ
  • ಪತಿಯನ್ನು ದರೋಡೆಕೋರರು ಕೊಂದರು ಎಂದು ನಾಟಕವಾಡಿದ್ದ ಪತ್ನಿ
  • 1 ಲಕ್ಷ ರೂಪಾಯಿಗೆ ಸುಪಾರಿ ನೀಡಿ ಪತಿಯನ್ನು ಮುಗಿಸಿದ ಕಿರಾತಕಿ
  • ತಾಂತ್ರಿಕ ಪುರಾವೆ ಮತ್ತು ಒಡವೆಗಳು ಪತ್ತೆಯಾದ ಬಳಿಕ ತಪ್ಪೊಪ್ಪಿಕೊಂಡ ಆರೋಪಿ
ಧಾರ್: ಮಧ್ಯಪ್ರದೇಶದಲ್ಲಿ (Madhya Pradesh Murder) ಬಾಲಿವುಡ್​ನ ಹಸೀನಾ ದಿಲ್​ರುಬಾ ಸಿನಿಮಾ ಹೋಲಿಕೆಯ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿ ಪ್ರಿಯಕರನ ಬದಲಿಗೆ ಪತಿ ಸಂತ್ರಸ್ತ. ಮನೆಗೆ ನುಗ್ಗಿದ್ದ ಕಳ್ಳರು ಗಂಡನನ್ನು ಹಿಗ್ಗಾಮುಗ್ಗ ಥಳಿಸಿ, ಕೊಲೆ ಮಾಡಿ ಆಭರಣ ದೋಚಿದರು ಎಂದು ಅಳುತ್ತಾ ಪೊಲೀಸ್​ ಮುಂದೆ ದೂರು ಕೊಟ್ಟ, ಆ ಹೆಣ್ಣಿನ ಹಿಂದೆ ಭಯಾನಕವಾದ ಕ್ರೂರತ್ವವಿತ್ತು. ಬಣ್ಣದ ಕಾರಣಕ್ಕೆ ನಿತ್ಯವೂ ಪತಿಯನ್ನು ದೂಷಿಸುತ್ತಿದ್ದ ಆಕೆ ಪ್ರಿಯಕರನೊಂದಿಗೆ ಸೇರಿ ರೂಪಿಸಿದ್ದ ಸ್ಕೆಚ್ ಯಾವುದೇ ಸಿನಿಮಾಕ್ಕೂ ಕಮ್ಮಿಯಿರಲಿಲ್ಲ. ದರೋಡೆಯ ನಾಟಕವಾಡಿ ಪೊಲೀಸರನ್ನೇ ದಿಕ್ಕು ತಪ್ಪಿಸಲು ಯತ್ನಿಸಿದ್ದ ಈ ಕಿರಾತಕಿಯ ಅಸಲಿ ಕಥೆ ಬಯಲಾಗಿದ್ದು ಹೀಗೆ...

ಏನಿದು ಘಟನೆ?

ಮಧ್ಯಪ್ರದೇಶದ ಧಾರ ಜಿಲ್ಲೆಯ ನಿವಾಸಿಯಾದ ಮಸಾಲೆ ಪದಾರ್ಥಗಳ ವ್ಯಾಪಾರಿ ಪುರೋಹಿತ್ ದೇವಕೃಷ್ಣ (28)ಏಪ್ರಿಲ್ 7 ರ ರಾತ್ರಿ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರ ದೇಹದ ಮೇಲೆ ಚೂಪಾದ ಚಾಕುವಿನಿಂದ ಹಲ್ಲೆ ಮಾಡಿದ ಗಾಯಗಳ ಗುರುತು ಇತ್ತು. ಆತನ ಪತ್ನಿ ಪ್ರಿಯಾಂಕಾ ಪುರೋಹಿತ್ (25) ದರೋಡೆಕೋರರು ಮನೆಗೆ ನುಗ್ಗಿ 3.5 ಲಕ್ಷ ರೂ. ಮೌಲ್ಯದ ಒಡವೆಗಳನ್ನು ದೋಚಿ ಪರಾರಿಯಾಗಿದ್ದಾರೆ. ಈ ವೇಳೆ ಅವರನ್ನು ತಡೆಯಲು ಹೋದ ಪತಿಯನ್ನು ಕೊಂದಿದ್ದಾರೆ ಎಂದು ಹೇಳಿದ್ದಳು.

ತಗ್ಲಾಕ್ಕೊಂಡಿದ್ದು ಹೀಗೆ

ಪೊಲೀಸರಿಗೆ ಸಂಶಯ ಬಂದಿದ್ದು ಅಲ್ಲೇ ನೋಡಿ, ಪತಿ ಗಂಭೀರವಾಗಿ ಗಾಯಗೊಂಡ ಪತಿ ಸತ್ತೇ ಹೋಗಿದ್ದಾನೆ. ಈಕೆಯನ್ನು ಕಟ್ಟಿ ಹಾಕಿದರೂ ಸಹ ದೇಹದ ಮೇಲೆ ಕಿಂಚಿತ್ತೂ ಗಾಯವಾಗಿರಲಿಲ್ಲ. ಪ್ರಿಯಾಂಕಾಳ ನಡವಳಿಕೆಯ ಮೇಲೆ ಅವರಿಗೆ ಅನುಮಾನ ಮೂಡಿತು. ಆಕೆ ಪದೇ ಪದೇ ಹೇಳಿಕೆಗಳನ್ನು ಬದಲಿಸುತ್ತಿದ್ದಳು. ಪೊಲೀಸರು ಮನೆಯನ್ನು ಶೋಧಿಸಿದಾಗ, ಕಳುವಾಗಿದೆ ಎಂದು ಹೇಳಲಾಗಿದ್ದ ಒಡವೆಗಳು ಮನೆಯಲ್ಲೇ ಪತ್ತೆಯಾದವು. ಮೊಬೈಲ್ ಫೋನ್ ದಾಖಲೆಗಳನ್ನು ಪರಿಶೀಲಿಸಿದಾಗ ಆಕೆಯ ಗುಟ್ಟು ರಟ್ಟಾಯಿತು.

ತಂಗಿ ಹೇಳಿದ್ದಿಷ್ಟು

ಪುರೋಹಿತ್ ದೇವಕೃಷ್ಣ ತಂಗಿ ಜ್ಯೋತಿ ಕೊಟ್ಟ ಹೇಳಿಕೆಯು ಪ್ರಕರಣ ಬೇಧಿಸಲು ಸಹಕಾರವಾಯಿತು. "ಪ್ರಿಯಾಂಕಾ ಯಾವಾಗಲೂ ತನ್ನ ಪತಿಯ ಬಣ್ಣದ ಬಗ್ಗೆ ಹೀಯಾಳಿಸುತ್ತಿದ್ದಳು. ನೀನು ಕಪ್ಪಗಿದ್ದೀಯಾ, ನೀನು ನನಗೆ ಅರ್ಹನಲ್ಲ, ನನಗಿಂತ ಉತ್ತಮ ವ್ಯಕ್ತಿ ನನಗೆ ಸಿಗಬೇಕು" ಎಂದು ಟೀಕೆ ಮಾಡುತ್ತಿದ್ದಳು ಎನ್ನಲಾಗಿದೆ.

ಕೊಲೆಗೆ ಕಾರಣವೇನು?

ಪ್ರಿಯಾಂಕಾಳಿಗೂ ರಾಜ್‌ಗಢದ ಕಮಲೇಶ್ ಪುರೋಹಿತ್ (32) ಎಂಬುವವನಿಗೂ ಸಂಬಂಧವಿತ್ತು. ಇವರಿಬ್ಬರ ಪ್ರೀತಿಗೆ ದೇವಕೃಷ್ಣ ಅಡ್ಡಿಯಾಗಿದ್ದ ಕಾರಣ, ಆತನನ್ನು ಮುಗಿಸಲು ಸಂಚು ರೂಪಿಸಿದ್ದರು. ತಮ್ಮ ಪ್ಲ್ಯಾನ್​ ಪ್ರಕಾರ ಅವರನ್ನು ಕೊಲೆ ಮಾಡಿದ್ದರು.
ಕಮಲೇಶ್ ತನ್ನ ಸಹಚರ ಸುರೇಂದ್ರ ಭಾಟಿ ಎಂಬಾತನಿಗೆ 1 ಲಕ್ಷ ರೂಪಾಯಿ ಸುಪಾರಿ ನೀಡಿ ಕೊಲೆಗೆ ಸಂಚು ರೂಪಿಸಿದ್ದ ಮುಂಗಡವಾಗಿ 50,000 ರೂಪಾಯಿ ನೀಡಲಾಗಿತ್ತು. ಘಟನೆಯ ರಾತ್ರಿ ಪ್ರಿಯಾಂಕಾ ಉದ್ದೇಶಪೂರ್ವಕವಾಗಿ ಮನೆಯ ಬಾಗಿಲನ್ನು ತೆರೆದಿಟ್ಟಿದ್ದಳು. ಸುರೇಂದ್ರ ಒಳನುಗ್ಗಿ ನಿದ್ದೆಯಲ್ಲಿದ್ದ ದೇವಕೃಷ್ಣ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದನು. ಕೊಲೆಯ ನಂತರ, ಇದನ್ನು ದರೋಡೆ ಎಂದು ಬಿಂಬಿಸಲು ಪ್ರಿಯಾಂಕಾ ತಾನೇ ರೂಮನ್ನು ಅಸ್ತವ್ಯಸ್ತಗೊಳಿಸಿ, ತನ್ನನ್ನು ಕಟ್ಟಿಹಾಕಲಾಗಿತ್ತು ಎಂದು ನಾಟಕವಾಡಿದ್ದಳು.
ಪೊಲೀಸರು ಸದ್ಯ ಪತ್ನಿ ಪ್ರಿಯಾಂಕಾ ಮತ್ತು ಆಕೆಯ ಪ್ರಿಯಕರ ಕಮಲೇಶ್‌ನನ್ನು ಬಂಧಿಸಿದ್ದಾರೆ. ಸುಪಾರಿ ಹಂತಕ ಸುರೇಂದ್ರ ಭಾಟಿಗಾಗಿ ಹುಡುಕಾಟ ಮುಂದುವರಿದಿದೆ, (ಏಜೆನ್ಸೀಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net