ಸೆರೆಮನೆಯಲ್ಲಿ ಅರಳಿತು ಪ್ರೀತಿ! ಹೆತ್ತವರ ವಿರೋಧದ ಮಧ್ಯೆ ಕೊಲೆ ಆರೋಪಿಯನ್ನೇ ಮದುವೆಯಾದ ಜೈಲಧಿಕಾರಿ

ಸೆರೆಮನೆಯಲ್ಲಿ ಪ್ರೀತಿಸಿ, ಮದುವೆಯಾದ ಜೋಡಿ
ಸೆರೆಮನೆಯಲ್ಲಿ ಪ್ರೀತಿಸಿ, ಮದುವೆಯಾದ ಜೋಡಿ
Published on

ಪ್ರಮುಖ ಮುಖ್ಯಾಂಶಗಳು

  • ಜೈಲಿನ ಅಧಿಕಾರಿಯೊಬ್ಬರು ಕೊಲೆ ಆರೋಪಿಯನ್ನೇ ಮದುವೆಯಾದ ಘಟನೆ ವೈರಲ್​
  • ಮಧ್ಯಪ್ರದೇಶದ ಸತ್ನಾದಲ್ಲಿ ಈ ಅಚ್ಚರಿ​ ಘಟನೆ ಬೆಳಕಿಗೆ
  • ಜೈಲಿನಲ್ಲಿ ಪ್ರೀತಿಸಿದ ಜೋಡಿ ಕಡೆಗೂ ಹೆತ್ತವರ ವಿರೋಧದ ನಡುವೆಯೇ ಮದುವೆ
ಸಾತ್ನ: ಪ್ರೀತಿ ಕುರುಡೋ, ಪ್ರೇಮಿಗಳು ಕರುಡೋ ಎಂಬುದು ನಿಜಕ್ಕೂ ತಿಳಿಯದು. ಪ್ರೀತಿ ಯಾವಾಗ, ಯಾರಲ್ಲಿ, ಯಾಕೆ ಮತ್ತು ಹೇಗೆ ಮೂಡುತ್ತೆ ಅನ್ನೋದೇ ಇಂದಿಗೂ ಅರ್ಥವಾಗದೆ ಉಳಿದಿರುವ ಪ್ರಶ್ನೆ ಎಂದರೆ ಖಂಡಿತ ತಪ್ಪಾಗಲಾರದು. ಪ್ರೀತಿ ಎಂದರೆ ಹಿತ, ಮಧುರ, ಅಮರ, ಸುಮಧರ ಭಾವ ಎಂಬ ಪದಗಳ ಮಧ್ಯೆ ವಿಚಿತ್ರ ಅಂತಲೂ ಹೇಳಬಹುದು ಎಂಬುದಕ್ಕೆ ಈ ಘಟನೆಯೇ ನಿಮಗೆ ಜ್ವಲಂತ ಸಾಕ್ಷಿ.
ಮಧ್ಯಪ್ರದೇಶದ ಸತ್ನಾದಲ್ಲಿ ಜೈಲಿನ ಅಧಿಕಾರಿಯೊಬ್ಬರು ಕೊಲೆ ಆರೋಪಿಯನ್ನೇ ಮದುವೆಯಾಗುವ ಮೂಲಕ ಸ್ಥಳೀಯರನ್ನು ಅಕ್ಷರಶಃ ಬೆರಗಾಗಿಸಿದ್ದಾರೆ. ಸತ್ನಾ ಕೇಂದ್ರ ಕಾರಾಗೃಹದ ಸಹಾಯಕ ಸೂಪರಿಂಟೆಂಡೆಂಟ್ ಫಿರೋಜಾ ಖಾತುನ್ ಮತ್ತು ಜೀವಾವಧಿ ಶಿಕ್ಷೆಗೊಳಗಾಗಿದ್ದ ಧರ್ಮೇಂದ್ರ ಸಿಂಗ್ ಜೋಡಿ, ಇದೇ ಮೇ.05ರಂದು ಹಿಂದೂ ಸಂಪ್ರಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಹಲವರ ಗಮನ ಸೆಳೆಯಿತು.
ಜೈಲಿನೊಳಗೆ ಆರಂಭವಾದ ಪರಿಚಯ ಸ್ನೇಹವಾಗಿ, ಆ ನಂತರ ಪ್ರೀತಿಯಾಗಿ ಬದಲಾಗಿ, ಕಡೆಗೆ ಧಾರ್ಮಿಕ ಗಡಿಗಳನ್ನು ಮೀರಿ, ಹೆತ್ತವರ ವಿರೋಧದ ನಡುವೆಯೇ ಮದುವೆಯಲ್ಲಿ ಕೊನೆಗೊಂಡಿರುವುದು ಸ್ಥಳೀಯರ ಹುಬ್ಬೇರಿಸಿದೆ. 2007ರಲ್ಲಿ ಕೌನ್ಸಿಲರ್ ಒಬ್ಬರ ಕೊಲೆಗೆ ಸಂಬಂಧಿಸಿದಂತೆ ಜೈಲು ಶಿಕ್ಷೆಗೆ ಗುರಿಯಾಗಿದ್ದ ಧರ್ಮೇಂದ್ರ ಸಿಂಗ್, ಕಾರಾಗೃಹದ ವಾರಂಟ್ ಇನ್‌ಚಾರ್ಜ್ ಆಗಿ ಕೆಲಸ ಮಾಡುತ್ತಿದ್ದ ಮತ್ತು ತನಗೆ ವಾರಂಟ್ ಸಂಬಂಧಿತ ಕೆಲಸದಲ್ಲಿ ಸಹಾಯ ಮಾಡುತ್ತಿದ್ದ ಫಿರೋಜಾ ಜೊತೆಗೆ ಒಳ್ಳೆಯ ಸ್ನೇಹ ಹೊಂದಿದ್ದರು.
ಸುಮಾರು 14 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದ ಧರ್ಮೇಂದ್ರ, ಉತ್ತಮ ನಡವಳಿಕೆಯ ಆಧಾರದ ಮೇಲೆ ನಾಲ್ಕು ವರ್ಷಗಳ ಹಿಂದೆಯೇ ಜೈಲಿನಿಂದ ಬಿಡುಗಡೆಯಾದರು. ಜೈಲು ಕಂಬಿಯಿಂದ ಹೊರಬಂದ ಬಳಿಕ, ತಮ್ಮ ಪ್ರೀತಿಯನ್ನು ಮನೆಯವರಿಗೆ ತಿಳಿಸಿದ ಈ ಜೋಡಿಗೆ ಭಾರೀ ವಿರೋಧ ವ್ಯಕ್ತವಾಯಿತು. ಎಷ್ಟೇ ಪ್ರಯತ್ನಿಸಿದರೂ ಒಪ್ಪದ ಕುಟುಂಬಸ್ಥರ ನಡುವೆಯೇ ಕಡೆಗೂ ಇಬ್ಬರೂ ಹಿಂದು ಸಂಪ್ರದಾಯದಂತೆ ಮದುವೆಯಾಗಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net