'ನಿನ್ನಂಥ ಸಾವಿರ ಗಂಡಂದಿರನ್ನು...' ಪತ್ನಿಯ ಅದೊಂದು ಮಾತೇ ಕೊಲೆಗೆ ಕಾರಣ: ಆರೋಪಿಗೆ ಶಿಕ್ಷೆ ತಗ್ಗಿಸಿದ ಹೈಕೋರ್ಟ್

ಮಧ್ಯಪ್ರದೇಶ ಹೈಕೋರ್ಟ್​
ಮಧ್ಯಪ್ರದೇಶ ಹೈಕೋರ್ಟ್​
Published on

ಪ್ರಮುಖ ಮುಖ್ಯಾಂಶಗಳು

  • 7 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಲೆಗೈದ ಆರೋಪಿ ಗಂಡ
  • ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿಗೆ ಶಿಕ್ಷೆ ಇಳಿಸಿದ ಹೈಕೋರ್ಟ್​
  • ಪತ್ನಿಯ ಮಾತೇ ಕೊಲೆಗೆ ಕಾರಣವೆಂದು 7 ವರ್ಷ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ
ಜಬಲ್‌ಪುರ: 'ನಿನ್ನಂಥ ಸಾವಿರ ಗಂಡಂದಿರನ್ನು ಇಟ್ಟುಕೊಳ್ಳುವ ತಾಕತ್ತು ನನಗಿದೆ' ಎಂದು ಪತ್ನಿ ಆಡಿದ ಮಾತುಗಳೇ ಗಂಡನ ಕೊಲೆಗೆ ಇಲ್ಲಿ ಕಾರಣವಾಗಿದೆ ಎಂದು ಹೇಳಿದ ಮಧ್ಯಪ್ರದೇಶ ಹೈಕೋರ್ಟ್, ಆರೋಪಿಯ ಶಿಕ್ಷೆಯನ್ನು 7 ವರ್ಷಕ್ಕೆ ಕಡಿತಗೊಳಿಸುವ ಮೂಲಕ ದೇಶವ್ಯಾಪಿ ಹೊಸ ಸಂಚಲನ ಸೃಷ್ಟಿಸಿದೆ.
ಪತ್ನಿಯ ಇಂತಹ ಮಾತುಗಳು ಗಂಡನ ಘನತೆಗೆ ಧಕ್ಕೆ ತಂದಿದೆ ಮತ್ತು ಇದೇ ಆತನನ್ನು ಕೆರಳಿಸಿ, ಆಕೆಯನ್ನು ಕೊಲೆಗೈಯಲು ಕಾರಣವಾಗಿದೆ. ಈ ಕ್ರಮದಲ್ಲಿ, ಈಗಾಗಲೇ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು 7 ವರ್ಷಗಳ ಜೈಲು ಶಿಕ್ಷೆಗೆ ಇಳಿಸಲಾಗುವುದು ಎಂದು ನ್ಯಾಯಮೂರ್ತಿಗಳಾದ ವಿವೇಕ್ ಅಗರ್ವಾಲ್ ಮತ್ತು ಅವನೀಂದ್ರ ಕುಮಾರ್ ಸಿಂಗ್ ಅವರನ್ನೊಳಗೊಂಡ ಪೀಠವು ತೀರ್ಪು ನೀಡಿತು.
ಗರ್ಭಿಣಿ ಪತ್ನಿಯನ್ನು ಕೊಂದ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಈಗ 7 ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಇಳಿಸಿರುವ ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನಿಜಕ್ಕೂ ಭಾರಿ ಅಚ್ಚರಿ ಮೂಡಿಸಿದೆ. ಗಂಡನ ನಿಷ್ಪ್ರಯೋಜಕತೆಯ ಬಗ್ಗೆ, ಅವನಿಗೆ ಮನುಷ್ಯನಾಗಿ ಅಥವಾ ಪತಿಯಾಗಿ ಯಾವುದೇ ಮೌಲ್ಯವಿಲ್ಲ ಎಂದು ಆಕೆಯ ಹೇಳಿಕೆ ಸೂಚಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಏನಿದು ಘಟನೆ?

ಪ್ರಾಸಿಕ್ಯೂಷನ್ ಮಾಹಿತಿಯ ಪ್ರಕಾರ, ಛಿಂದ್ವಾರಾ ಜಿಲ್ಲೆಯ ಚೌರಾಯ್ ನಿವಾಸಿ ಶಿವ ಕಹಾರ್ ಎಂಬಾತ ಸೆಪ್ಟೆಂಬರ್ 18, 2021ರಂದು ತನ್ನ 7 ತಿಂಗಳ ಗರ್ಭಿಣಿ ಪತ್ನಿಯನ್ನು ಕಲ್ಲು ಎತ್ತಾಕಿ ಹತ್ಯೆಗೈದ. ಅಂದು ದಂಪತಿಗಳ ನಡುವೆ ಜೋರು ಜಗಳವಾಗಿತ್ತು. ಈ ವೇಳೆ ಕಿರಣ್, 'ನಿನ್ನಂಥ ಸಾವಿರ ಗಂಡಂದಿರನ್ನು ಇಟ್ಟುಕೊಳ್ಳುವ ಸಾಮರ್ಥ್ಯ ನನಗಿದೆ' ಎಂದು ಹೇಳಿದ್ದರು. ಇದರಿಂದ ಸಿಟ್ಟಾದ ಆರೋಪಿ ಶಿವ ಕಹಾರ್, ಪಕ್ಕದಲ್ಲೇ ಬಿದ್ದಿದ್ದ ಕಲ್ಲನ್ನು ಪತ್ನಿಯ ತಲೆ ಮೇಲೆ ಎಸೆದು ಆಕೆಯ ಸಾವಿಗೆ ಕಾರಣನಾಗಿದ್ದಾನೆ.
ಘಟನೆಯ ಬೆನ್ನಲ್ಲೇ ಪಶ್ಚಾತ್ತಾಪ ಪಟ್ಟ ಆರೋಪಿ, ಖುದ್ದಾಗಿ ತನ್ನ ಮಾವನಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಲ್ಲದೆ, ಪೊಲೀಸ್ ಸ್ಟೇಷನ್‌ಗೂ ಮಾಹಿತಿ ನೀಡಿದ್ದ. ಶಿವ ಕಹಾರ್​ನನ್ನು ಕೋರ್ಟ್​ಗೆ ಒಪ್ಪಿಸಿದ ಪೊಲೀಸರು, ಘಟನೆ ಬಗ್ಗೆ ಮಾಹಿತಿ ನೀಡಿದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಛಿಂದ್ವಾರಾ ಜಿಲ್ಲಾ ನ್ಯಾಯಾಲಯವು, ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದೇ ಇಂದಿನ ಈ ತೀರ್ಪಿಗೆ ಕಾರಣವಾಗಿದೆ.

ಹೈಕೋರ್ಟ್ ಪೀಠ ಹೇಳಿದ್ದಿಷ್ಟು

ಪೂರ್ವಯೋಜಿತ ಕೃತ್ಯವಲ್ಲ: ಇದು ಮೊದಲೇ ಉದ್ದೇಶಪೂರ್ವಕವಾಗಿ ಪ್ಲ್ಯಾನ್​ ಮಾಡಿರುವ ಕೊಲೆಯಲ್ಲ. ಜಗಳದ ಸಂದರ್ಭದಲ್ಲಿ ಕೋಪಕ್ಕೆ ಕೈಕೊಟ್ಟಾಗ ನಡೆದಿರುವ ಕೃತ್ಯ.
ಪತಿಯ ಘನತೆಗೆ ಧಕ್ಕೆ: ಪತ್ನಿಯು ನಿನ್ನಂಥ ಸಾವಿರ ಗಂಡಂದಿರನ್ನು ಇಟ್ಟುಕೊಳ್ಳಬಲ್ಲೆ ಎಂದಾಗ, ಅದು ಪತಿಯು ಒಬ್ಬ ಮನುಷ್ಯನಾಗಿ ಅಥವಾ ಗಂಡನಾಗಿ ಯಾವುದೇ ಯೋಗ್ಯತೆ ಇಲ್ಲ ಎಂಬ ಅರ್ಥವನ್ನು ಕೊಡುತ್ತದೆ. ಹೆಂಡತಿಯ ಈ ಮಾತುಗಳು ಪತಿಯನ್ನು ಕೊಲೆಗೈಯಲು ಪ್ರಚೋದಿಸಿದೆ.
ಆರೋಪಿಯ ನಡವಳಿಕೆ: ಕೊಲೆಗೈದ ತಕ್ಷಣ ಆರೋಪಿ ಎಲ್ಲಿಗೂ ಪರಾರಿಯಾಗಿಲ್ಲ. ಬದಲಿಗೆ ತಾನೇ ಪೊಲೀಸರಿಗೆ ಮತ್ತು ಸಂಬಂಧಿಕರಿಗೆ ಮಾಹಿತಿ ನೀಡಿದ್ದಾನೆ ಎಂದು ತಿಳಿಸಿದೆ. ಹೀಗಾಗಿ, ಹೈಕೋರ್ಟ್ ಆರೋಪಿಗೆ ಐಪಿಸಿ ಸೆಕ್ಷನ್ 304 ಪಾರ್ಟ್-II ಅಡಿಯಲ್ಲಿ 7 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 1,000 ರೂ. ದಂಡ ವಿಧಿಸಿದೆ. ದಂಡ ಪಾವತಿಸದಿದ್ದರೆ ಹೆಚ್ಚುವರಿಯಾಗಿ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಒತ್ತಿ ತಿಳಿಸಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net