ಅಬ್ಬಾ.. ಸಾಮೂಹಿಕ ವಿವಾಹದಲ್ಲಿ ಸಿಎಂ ಪುತ್ರನ ಮದುವೆ!...ಇದಕ್ಕೆ ಪ್ರಧಾನಿ ಮಾತೇ ಪ್ರೇರಣೆ ಎಂದ ಯಾದವ್, ಅಷ್ಟಕ್ಕೂ ಮೋದಿ ಹೇಳಿದ್ದೇನು..? | Mohan Yadav

Mohan Yadav | ಸಾಮೂಹಿಕ ವಿವಾಹದಲ್ಲಿ ಸಿಎಂ ಮೋಹನ್ ಯಾದವ್ ಪುತ್ರನ ಮದುವೆ
Mohan Yadav | ಸಾಮೂಹಿಕ ವಿವಾಹದಲ್ಲಿ ಸಿಎಂ ಮೋಹನ್ ಯಾದವ್ ಪುತ್ರನ ಮದುವೆ
Published on
ಭೊಪಾಲ್: ಈ ಕಾಲದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷನಾದರೆ ಸಾಕು ತನ್ನನ್ನೇ ತಾನು ಮುಖ್ಯಮಂತ್ರಿ ಎಂದು ಭಾವಿಸಿ ವೈಭೋಗಯುತ ಜೀವನದತ್ತ ವಾಲುವ ಅನೇಕ ಜನರನ್ನು ನಾವು ಕಂಡಿರುತ್ತೇವೆ, ಆದರೆ ಇಲ್ಲೊಂದು ರಾಜ್ಯದ ಮುಖ್ಯಮಂತ್ರಿ, ತಮ್ಮ ಮಗನ ಮದುವೆಯನ್ನು ಸಾಮೂಹಿಕ ವಿವಾಹದಲ್ಲಿ ಆಯೋಜಿಸುವ ಮೂಲಕ, ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದು, ಹೀಗೂ ವರ್ತಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಕಿರಿಯ ಪುತ್ರ ಅಭಿಮನ್ಯು ಯಾದವ್ ಮದುವೆ ಭಾನುವಾರ ಉಜ್ಜಯಿನಿಯಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ನಡೆದಿದ್ದು, ಅಭಿಮನ್ಯು, ಡಾ. ಇಶಿತಾ ಯಾದವ್​​ರೊಂದಿಗೆ ನೂತನ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವೇಳೆ 21 ಜೋಡಿಗಳು ವಿವಾಹವಾಗಿದ್ದು, ಇದು ದೇಶ್ಯಾದ್ಯಂತ ಚರ್ಚೆಯ ವಿಷಯವಾಗಿದೆ, ಸಿಎಂ ಯಾದವ್​ ಸರಳತೆಗೆ ಎಲ್ಲರು ಬೇಷ್​ ಎಂದಿದ್ದಾರೆ.
ಎಲ್ಲಾ ವಧು-ವರರು ಸುಂದರವಾಗಿ ಅಲಂಕರಿಸಿಕೊಂಡಿದ್ದ ಎತ್ತಿನ ಬಂಡಿಗಳಲ್ಲಿ ಮಂಟಪಕ್ಕೆ ಆಗಮಿಸಿದ್ದು, ಈ ಮಧ್ಯೆ ಸಿಎಂ ಮೋಹನ್ ಯಾದವ್​ ಮದುವೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಮದುವೆಗಳು ಸರಳವಾಗಿರಬೇಕು ಎಂಬ ಪ್ರಧಾನಿಗಳ ಆಶಯವೇ ಈ ಕಾರ್ಯಕ್ಕೆ ಪ್ರೇರಣೆ ಎಂದು ಹೇಳಿದರು. ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಈ ವಿವಾಹದಲ್ಲಿ ಭಾಗವಹಿಸಿದ್ದು, ಬಳಿಕ ಮಾತನಾಡಿದ ಅವರು, ಈ ಸಾಮೂಹಿಕ ವಿವಾಹ ಸಮಾರಂಭ ಎಲ್ಲರಿಗೂ ಒಂದು ದೊಡ್ಡ ಸಂದೇಶವನ್ನು ನೀಡಿದೆ ಎಂದರು.

ಬಾಬಾ ರಾಮ್‌ದೇವ್, ಧೀರೇಂದ್ರ ಶಾಸ್ತ್ರಿ ಭಾಗಿ

ಯೋಗ ಗುರು ಬಾಬಾ ರಾಮದೇವ್ ಮತ್ತು ಬಾಗೇಶ್ವರ ಧಾಮದ ಮುಖ್ಯಸ್ಥ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಕೂಡ ಈ ವಿಶೇಷ ವಿವಾಹ ಸಮಾರಂಭಕ್ಕೆ ಸಾಕ್ಷಿಯಾಗಿದ್ದು, ನಮ್ಮ ಪಾದಯಾತ್ರೆಯ ಸಮಯದಲ್ಲಿ ನಾವು ಜಾತಿವಾದಕ್ಕೆ ವಿದಾಯ ಹೇಳಿ ಎಂಬ ಘೋಷಣೆಯನ್ನು ಕೂಗಿದ್ದೆವು, ಇಂದು ಒಂದೇ ಸೂರಿನಡಿ, ಎಲ್ಲಾ ಜಾತಿ ಮತ್ತು ಧರ್ಮದ ಜನರು ನೂತನ ಬದುಕಿಗೆ ಕಾಲಿಡುತ್ತಿದ್ದಾರೆ, ಮುಖ್ಯಮಂತ್ರಿಗಳ ಈ ಕಾರ್ಯ ಅತ್ಯಂತ ಶ್ಲಾಘನೀಯ ಹೆಜ್ಜೆಯಾಗಿದೆ. ಒಂದು ಕಡೆ ಚಾಲಕನ ಮದುವೆಯಾಗುತ್ತಿದ್ದರೆ, ಇನ್ನೊಂದು ಕಡೆ ರಾಜ್ಯವನ್ನು ಚಾಲನೆ ಮಾಡುವವನ ಮಗ ಕೂಡ ಮದುವೆಯಾಗುತ್ತಿದ್ದಾನೆ ಎಂದು ಶಾಸ್ತ್ರಿ ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಯೋಗ ಗುರು ಬಾಬಾ ರಾಮದೇವ್, ಇಂತಹ ವಿವಾಹವು ಮಾದರಿಯ ನಡೆಯಾಗಿದ್ದು, ಇತರ ರಾಜ್ಯದ ಮುಖ್ಯಮಂತ್ರಿಗಳು, ನಾಯಕರುಗಳು ಮತ್ತು ಉದ್ಯಮಿಗಳು ಇದರಿಂದ ಸ್ಫೂರ್ತಿ ಪಡೆದು, ಆಡಂಬರದ ವಿವಾಹಗಳಿಗೆ ಖರ್ಚು ಮಾಡುವ ವೆಚ್ಚವನ್ನು ಕಡಿಮೆ ಮಾಡಬೇಕು, ಇನ್ನು ಮುಂದೆ ನಾವು ಗಮ್ಯಸ್ಥಾನ ವಿವಾಹಗಳಿಂದ, ದೈವಿಕ ವಿವಾಹಗಳತ್ತ ಸಾಗಬೇಕಿದೆ ಎಂದು ಹೇಳಿದರು.

ಸಾಮಾಜಿಕ ಸಂದೇಶ ಸಾರಿದ ಸಿಎಂ ಮೋಹನ್ ಯಾದವ್​...

ಡೆಸ್ಟಿನೇಶನ್ ವೆಡ್ಡಿಂಗ್ಸ್ ಮತ್ತು ರಾಜಮನೆತನದ ದುಂದು ವೆಚ್ಚದ ಈ ಯುಗದಲ್ಲಿ, ಸಿಎಂ ಮೋಹನ್ ಯಾದವ್ ಮಗನ ಮದುವೆಯನ್ನು ಸರಳವಾಗಿ ಆಯೋಜಿಸುವ ನಿರ್ಧಾರದ ಮೂಲಕ ಸಾಮಾಜಿಕ ಸಂದೇಶವನ್ನು ಸಾರಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net