ಪುಣೆಗೆ ಬಂದ ಮೇಡ್​ ಇನ್​ ಪಾಕಿಸ್ತಾನ್​ ಚಾದರ್​: ಮಹಿಳೆ ವಿಡಿಯೋ ನೋಡಿ ಅಖಾಡಕ್ಕಿಳಿದ ಪೊಲೀಸರು! Made In Pakistan

ಜಾತ್ರೆಯಲ್ಲಿ ಖರೀದಿಸಿದ ಬೆಡ್‌ಶೀಟ್ ಮೇಲೆ 'ಮೇಡ್ ಇನ್ ಪಾಕಿಸ್ತಾನ್' ಲೇಬಲ್ ಪತ್ತೆ
ಜಾತ್ರೆಯಲ್ಲಿ ಖರೀದಿಸಿದ ಬೆಡ್‌ಶೀಟ್ ಮೇಲೆ 'ಮೇಡ್ ಇನ್ ಪಾಕಿಸ್ತಾನ್' ಲೇಬಲ್ ಪತ್ತೆ
Published on

ಪ್ರಮುಖ ಮುಖ್ಯಾಂಶಗಳು

  • ಜಾತ್ರೆಯಲ್ಲಿ ಖರೀದಿಸಿದ ಬೆಡ್‌ಶೀಟ್ ಮೇಲೆ 'ಮೇಡ್ ಇನ್ ಪಾಕಿಸ್ತಾನ್' ಲೇಬಲ್ ಪತ್ತೆ
  • ಪುಣೆ ಮಹಿಳೆಯೊಬ್ಬರ ವಿಡಿಯೋ ವೈರಲ್
  • ವೈರಲ್​ ವಿಡಿಯೋ ನೋಡಿ ತನಿಖೆಗೆ ಮುಂದಾದ ಮಹಾರಾಷ್ಟ್ರ ಪೊಲೀಸ್​
ಪುಣೆ: ಸಾಮಾಜಿಕ ಮಾಧ್ಯಮದಲ್ಲಿ ಸದ್ಯ ಪುಣೆಯ ಮಹಿಳೆಯೊಬ್ಬರು ಹಂಚಿಕೊಂಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಪಿಂಪ್ರಿ-ಚಿಂಚ್‌ವಾಡ್‌ನ ಸ್ಥಳೀಯ ಧಾರ್ಮಿಕ ಮೇಳವೊಂದರಲ್ಲಿ ಖರೀದಿಸಿದ ಬೆಡ್‌ಶೀಟ್ ಮೇಲೆ ಮೇಡ್ ಇನ್ ಪಾಕಿಸ್ತಾನ (Made in Pakistan) ಎನ್ನುವ ಲೇಬಲ್ ಪತ್ತೆಯಾಗಿದ್ದು, ಜನಸಾಮಾನ್ಯರಷ್ಟೇ ಅಲ್ಲದೇ ಈಗ ಪೊಲೀಸ್ ಅಧಿಕಾರಿಗಳೂ ಅಲರ್ಟ್ ಆಗಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವೆ ಆಮದು ನಿರ್ಬಂಧಗಳಿದ್ದರೂ, ಈ ಪ್ರಾಡಕ್ಟ್ ಸ್ಥಳೀಯ ಮಾರ್ಕೆಟ್‌ಗೆ ಹೆಂಗೆ ಬಂತು? ಎನ್ನುವುದನ್ನು ಪತ್ತೆ ಹಚ್ಚಲು ಪೊಲೀಸ್​ ಅಧಿಕಾರಿಗಳು ಈಗ ತನಿಖೆ ಕೈಗೆತ್ತಿಕೊಂಡಿದ್ದಾರೆ.

ಬಟ್ಟೆ ತೊಳೆಯುವಾಗ ಶಾಕ್​ ಆದ ಮಹಿಳೆ!

ಪೂಜಾ ಸರಾಫ್ ಎಂಬ ಮಹಿಳೆ ಈ ವಿಡಿಯೋ ಪೋಸ್ಟ್ ಮಾಡಿದ್ದು, ಸಂಕಷ್ಟಿ ಚತುರ್ಥಿಯ ಸಂದರ್ಭದಲ್ಲಿ ಪಿಂಪ್ರಿ-ಚಿಂಚ್‌ವಾಡ್‌ನ ಪ್ರಸಿದ್ಧ ಮೊರಾಯ ಗೋಸಾವಿ ದೇವಸ್ಥಾನದ ಹತ್ತಿರ ನಡೆದ ಜಾತ್ರೆಯಲ್ಲಿ ಅವರು ಈ ಬೆಡ್‌ಶೀಟ್ ಖರೀದಿಸಿದ್ದರು. ತಂದ ಹೊಸ ಚಾದರ್ ಅನ್ನು ತೊಳೆಯಲು ಹೋದಾಗ ಅವರಿಗೆ ಈ ಶಾಕಿಂಗ್ ವಿಷಯ ಗೊತ್ತಾಗಿದೆ.
ಮರಾಠಿ ಭಾಷೆಯಲ್ಲಿ ವಿಡಿಯೋ ರೆಕಾರ್ಡ್ ಮಾಡಿರೋ ಪೂಜಾ, ಪ್ರತಿ ತಿಂಗಳು ಸಂಕಷ್ಟಿ ಚತುರ್ಥಿ ದಿನ ಇಲ್ಲಿ ಮೇಳ ನಡೆಯುತ್ತೆ. ಬಡ ವ್ಯಾಪಾರಿಗಳು ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡ್ತಾರೆ. ನಾನು ಕೂಡ ಅಲ್ಲಿಂದ ಎರಡರಿಂದ ಮೂರು ಸಾಮಾನು ತಂದಿದ್ದೆ, ಅದರಲ್ಲಿ ಈ ಬೆಡ್‌ಶೀಟ್ ಕೂಡ ಒಂದು ಎಂದು ವಿವರಿಸಿದ್ದಾರೆ.
ನಾವೇನು ಗಡಿ ಪ್ರದೇಶದಲ್ಲಿ ವಾಸಿಸುತ್ತಿಲ್ಲ. ಆದರೂ ನಮ್ಮ ಮನೆ ಒಳಗಡೆ ಮೇಡ್ ಇನ್ ಪಾಕಿಸ್ತಾನ್ ಲೇಬಲ್ ಇರೋ ವಸ್ತು ಬಂದಿದೆ! ಎಂದು ಅವರು ಬೆಡ್‌ಶೀಟ್‌ನಲ್ಲಿದ್ದ ಟ್ಯಾಗ್ ತೋರಿಸುತ್ತಾ ಆತಂಕ ವ್ಯಕ್ತಪಡಿಸಿದ್ದಾರೆ.

ಅಖಾಡಕ್ಕಿಳಿದ ಪೊಲೀಸರು

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಂತೆ ಪಿಂಪ್ರಿ-ಚಿಂಚ್‌ವಾಡ್ ಪೊಲೀಸರು ತಾವಾಗಿಯೇ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಯಾವುದೇ ಅಧಿಕೃತ ದೂರು ದಾಖಲಾಗದಿದ್ದರೂ, ವೈರಲ್ ವಿಡಿಯೋ ಆಧರಿಸಿ ಪ್ರಾಡಕ್ಟ್‌ನ ಅಸಲಿಯತ್ತು ಮತ್ತು ಅದು ಎಲ್ಲಿಂದ ಬಂತು ಎನ್ನುವುದನ್ನು ಪತ್ತೆ ಹಚ್ಚಲು ಒಂದು ಸ್ಪೆಷಲ್ ಟೀಮ್ ರೆಡಿ ಮಾಡಿದ್ದಾರೆ.
ಅಷ್ಟೇ ಅಲ್ಲದೇ, ಪಿಂಪ್ರಿ-ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಷನ್‌ಗೂ ಪತ್ರ ಬರೆದಿರೋ ಪೊಲೀಸರು, ಆ ಮೇಳದಲ್ಲಿ ಅಂಗಡಿ ಹಾಕಿದ್ದ ವ್ಯಾಪಾರಿಗಳ ಲಿಸ್ಟ್ ಚೆಕ್ ಮಾಡಲು ಮತ್ತು ಕಾನೂನು ಉಲ್ಲಂಘನೆ ಆಗಿದ್ದರೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ಗ್ರಾಹಕರೇ ಎಚ್ಚರ!
ನನಗೆ ತುಂಬಾ ಬೇಸರವಾಗುತ್ತಿದೆ. ನನ್ನ ಹಾಗೆ ಇನ್ನು ಎಷ್ಟೋ ಜನ ಅಲ್ಲಿಂದ ಚಾದರ್‌ಗಳನ್ನು ತಂದಿರ್ತಾರೆ. ನಮ್ಮ ಅರಿವಿಗೆ ಬರದೆ ಈ ವಸ್ತುಗಳು ಜನರ ಮನೆ ತಲುಪಿವೆ, ಎಂದು ಪೂಜಾ ಸರಾಫ್ ಕಳವಳ ವ್ಯಕ್ತಪಡಿಸಿದ್ದಾರೆ. ಕೊನೆಯದಾಗಿ ಜನರಿಗೆ ಒಂದು ಕಿವಿಮಾತು ಹೇಳಿರೋ ಅವರು, ಇನ್ಮುಂದೆ ಮಾರ್ಕೆಟ್‌ಗೆ ಹೋಗಿ ಶಾಪಿಂಗ್ ಮಾಡುವಾಗ ಕಣ್ಣು ಕಿವಿಯನ್ನ ತೆರೆದಿಟ್ಟುಕೊಳ್ಳಿ. ನನಗಂತೂ ಈಗ ಬುದ್ಧಿ ಬಂದಿದೆ ಎಂದು ಹೇಳಿದ್ದಾರೆ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net