ಬಂಗಾಳದ ಚುನಾವಣಾ ಕಣದಲ್ಲಿ ಮೀನಿನ ಪ್ರಚಾರ...ಟಿಎಂಸಿ ಮಾಂಸಾಹಾರ ಅಸ್ತ್ರಕ್ಕೆ ಬಿಜೆಪಿ ಮಾಚ್-ಭಾತ್ ಕೌಂಟರ್! | West Bengal Election

West Bengal Election |  ಬಂಗಾಳದ ಚುನಾವಣಾ ಕಣದಲ್ಲಿ ಮೀನಿನ ಪ್ರಚಾರ
West Bengal Election | ಬಂಗಾಳದ ಚುನಾವಣಾ ಕಣದಲ್ಲಿ ಮೀನಿನ ಪ್ರಚಾರ
Published on
West Bengal Election: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಕೆಲವೇ ವಾರಗಳು ಬಾಕಿ ಉಳಿದಿದ್ದು, ರಾಜ್ಯದ ರಾಜಕೀಯ ಅಖಾಡದಲ್ಲಿ ಭ್ರಷ್ಟಾಚಾರ, ನಿರುದ್ಯೋಗ ಮತ್ತು ಮತದಾರರ ಪಟ್ಟಿಯಂತಹ ಗಂಭೀರ ವಿಷಯಗಳ ನಡುವೆ ಅಚ್ಚರಿಯ ವಿಷಯವೊಂದು ಮುನ್ನೆಲೆಗೆ ಬಂದಿದೆ. ಬಂಗಾಳಿಗಳ ಅವಿಭಾಜ್ಯ ಅಂಗವಾಗಿರುವ ಮೀನು ಈಗ ಕೇವಲ ಆಹಾರವಾಗಿ ಉಳಿಯದೆ, ಚುನಾವಣಾ ಪ್ರಚಾರದ ಪ್ರಬಲ ಅಸ್ತ್ರವಾಗಿ ಮಾರ್ಪಟ್ಟಿದೆ. 
15 ವರ್ಷಗಳ ಕಾಲ ಅಧಿಕಾರ ನಡೆಸಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ), ಬಂಗಾಳಿ ಅಸ್ಮಿತೆಯನ್ನು ಎತ್ತಿಹಿಡಿಯಲು ಈ ಮೀನು ಮತ್ತು ಮಾಂಸದ ವಿಚಾರವನ್ನು ರಾಜಕೀಯ ದಾಳವಾಗಿ ಬಳಸಿಕೊಂಡಿದ್ದು, ಬಿಜೆಪಿಯನ್ನು ಬಂಗಾಳಿ ವಿರೋಧಿ ಎಂದು ಬಿಂಬಿಸುತ್ತಿರುವ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಮಾಂಸಾಹಾರಿ ಆಹಾರದ ಮೇಲೆ ನಿರ್ಬಂಧ ಹೇರಲಿದೆ ಎಂಬ ಭಯವನ್ನು ಮತದಾರರ ಮನಸ್ಸಿನಲ್ಲಿ ಬಿತ್ತುತ್ತಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಬಿಹಾರದಲ್ಲಿ ಎನ್‌ಡಿಎ ಸರ್ಕಾರವು ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ಮಾಂಸ ಮಾರಾಟವನ್ನು ನಿರ್ಬಂಧಿಸಿದ ಉದಾಹರಣೆಯನ್ನು ಮಮತಾ ಬ್ಯಾನರ್ಜಿ ಪ್ರಚಾರದಲ್ಲಿ ಉಲ್ಲೇಖಿಸುತ್ತಿದ್ದಾರೆ.

ಎಚ್ಚೆತ್ತುಕೊಂಡ ಬಿಜೆಪಿ..

ಈ ಆರೋಪದಿಂದ ಉಂಟಾಗಬಹುದಾದ ಹಾನಿಯನ್ನು ಅರಿತ ಬಿಜೆಪಿ, ಕೂಡಲೇ ಪ್ರತಿತಂತ್ರ ರೂಪಿಸಿ ತಾನು ಕೂಡ ಮಾಂಸಾಹಾರ ಮತ್ತು ಮೀನಿನ ಪ್ರೇಮಿ ಎಂದು ಸಾಬೀತುಪಡಿಸಲು ಮುಂದಾಗಿದೆ, ಇತ್ತೀಚಿನ ದಿನಗಳಲ್ಲಿ ಬಿಜೆಪಿ ನಾಯಕರ ಪ್ರಚಾರ ಶೈಲಿ ಸಂಪೂರ್ಣವಾಗಿ ಬದಲಾಗಿದ್ದು, ಹಿರಿಯ ನಾಯಕರು ಸಾರ್ವಜನಿಕವಾಗಿ ಮಾಂಸಾಹಾರವನ್ನು ಬೆಂಬಲಿಸುತ್ತಿದ್ದಾರೆ. 
ಬಿಜೆಪಿ ರಾಜ್ಯಾಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಈ ವಿಷಯವಾಗಿ ಮಾತನಾಡಿದ್ದು, ಬಂಗಾಳಿಗಳು ಎಂದಿಗೂ ಮಾಚ್-ಭಾತ್ ಆನಂದಿಸುವುದನ್ನು ನಿಲ್ಲಿಸುವುದಿಲ್ಲ ಎಂದು ಘೋಷಿಸಿದರೆ, ಸುವೇಂದು ಅಧಿಕಾರಿ, ಸುಕಾಂತ ಮಜುಂದಾರ್ ಮತ್ತು ರುದ್ರನೀಲ್ ಘೋಷ್​ರಂತಹ ನಾಯಕರು ಕ್ಯಾಮೆರಾ ಮುಂದೆ ಕುಳಿತು ಮೀನಿನ ಸಾರು ಸವಿಯುವ ಮೂಲಕ ತಾವೂ ಬಂಗಾಳಿ ಸಂಸ್ಕೃತಿಯ ಭಾಗ ಎಂದು ತೋರಿಸಿಕೊಳ್ಳುತ್ತಿದ್ದಾರೆ. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಬಿಜೆಪಿ ಅಭ್ಯರ್ಥಿ ಶರದ್ವತ್ ಮುಖರ್ಜಿ ಕೈಯಲ್ಲಿ ಮೀನನ್ನು ಹಿಡಿದುಕೊಂಡೇ ಮತಯಾಚನೆ ಮಾಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಜನವರಿ 1 ರಿಂದ ಮಾರ್ಚ್ 24 ರವರೆಗೆ ಪಶ್ಚಿಮ ಬಂಗಾಳ ಬಿಜೆಪಿಯ ಅಧಿಕೃತ ಎಕ್ಸ್ ಖಾತೆಯಲ್ಲಿ ಮೀನಿನ ಬಗ್ಗೆ ಸುಮಾರು ಏಳು ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗಿದೆ ಎನ್ನಲಾಗಿದ್ದು, ಟಿಎಂಸಿಯ 10 ಪೋಸ್ಟ್‌ಗಳಿಗೆ ಪ್ರಬಲ ಪೈಪೋಟಿ ನೀಡುತ್ತಿದೆ. ಟಿಎಂಸಿ ಆಡಳಿತದಲ್ಲಿ ಮೀನು ಉತ್ಪಾದನೆ ಕುಂಠಿತವಾಗಿರುವ ಬಗ್ಗೆ ಮತ್ತು ಸ್ಥಳೀಯ ಸಂಸ್ಥೆಗಳ ನಿರ್ಬಂಧಗಳ ಬಗ್ಗೆ ಪ್ರಶ್ನಿಸುವ ಮೂಲಕ ಬಿಜೆಪಿ ತಿರುಗೇಟು ನೀಡುತ್ತಿದೆ. 
ಈ ಬದಲಾವಣೆಯು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳಿಗೂ ಗುರಿಯಾಗಿದ್ದು, ಈ ಹಿಂದೆ ನವರಾತ್ರಿಯ ಸಮಯದಲ್ಲಿ ಮೀನು ತಿಂದಿದ್ದಕ್ಕಾಗಿ ತೇಜಸ್ವಿ ಯಾದವ್​ರನ್ನು ಟ್ರೋಲ್ ಮಾಡಿದ್ದ ಬಿಜೆಪಿ ನಾಯಕರು, ಈಗ ಬಂಗಾಳದಲ್ಲಿ ಅದೇ ಮೀನನ್ನು ಹಿಡಿದು ಪ್ರಚಾರ ಮಾಡುತ್ತಿರುವುದೇಕೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಅಲ್ಲದೆ, ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಮಾಂಸಾಹಾರ ಬಡಿಸುವುದಿಲ್ಲ ಎಂದಾದ ಮೇಲೆ ಬಂಗಾಳದಲ್ಲಿ ಮಾತ್ರ ಈ ಓಲೈಕೆ ಏಕೆ ಎಂಬ ಪ್ರಶ್ನೆಗಳು ಎದ್ದಿವೆ.
ಈ ಸಂಪೂರ್ಣ ಬೆಳವಣಿಗೆಯ ಬಗ್ಗೆ ಟಿಎಂಸಿ ವಕ್ತಾರ ಕುನಾಲ್ ಘೋಷ್ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಯು ಸೋಲಿನ ಆತಂಕದಿಂದ ಇಂತಹ ನಾಟಕಗಳನ್ನು ಮಾಡುತ್ತಿದೆ ಎಂದು ಲೇವಡಿ ಮಾಡಿದ್ದಾರೆ. ಚುನಾವಣಾ ಕಣದಲ್ಲಿ ಮತದಾರರನ್ನು ಸೆಳೆಯಲು ಎರಡೂ ಪಕ್ಷಗಳು ಮೀನಿನ ಬಲೆ ಬೀಸಿವೆಯಾದರೂ, ಅಂತಿಮವಾಗಿ ಬಂಗಾಳಿ ಮತದಾರರು ಯಾರಿಗೆ ಒಲಿಯಲಿದ್ದಾರೋ ಕಾದು ನೋಡಬೇಕಿದೆ.
ಪಶ್ಚಿಮ ಬಂಗಾಳದ 294 ಕ್ಷೇತ್ರಗಳಿಗೆ ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಹೊರಬೀಳಲಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net