ಮಾರುಕಟ್ಟೆಗೆ ಬಂತು ಲಕ್ಷುರಿ ಮೀನು: ದುಬಾರಿಯಾದ್ರೂ ಖರೀದಿಸಲು ಜನರ ಮುಗಿಬಿದ್ದಿರುವುದೇಕೆ? ಇದರ ವಿಶೇಷತೆ ಏನು? Luxury Fish

ಮಾರುಕಟ್ಟೆಯಲ್ಲಿ ಸದ್ಯ ಭಾರಿ ಸದ್ದು ಮಾಡುತ್ತಿರುವ 'ವಿಲಾಸ' ಮೀನಿಗೂ ಮತ್ತು ದಕ್ಷಿಣ ಭಾರತದ ಅತ್ಯಂತ ದುಬಾರಿ ಮೀನೆನಿಸಿಕೊಂಡಿರುವ 'ಪುಲಸಾ' ಮೀನಿಗೂ ನಿಕಟ ಹಾಗೂ ಕುತೂಹಲಕಾರಿ ಸಂಬಂಧವಿದೆ.
Luxury Fish
ವಿಲಾಸ ಮೀನು
Published on: 

Luxury Fish : ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಯು.ಕೊತ್ತಪಲ್ಲಿ ಮಂಡಲ ವ್ಯಾಪ್ತಿಯಲ್ಲಿ ಬರುವ ಪ್ರಸಿದ್ಧ ಉಪ್ಪಾಡ ಮೀನು ಮಾರುಕಟ್ಟೆಯಲ್ಲಿ ಭಾನುವಾರ ಮೀನು ಪ್ರಿಯರ ಸಾಗರವೇ ನೆರೆದಿತ್ತು. ಸಮುದ್ರದಿಂದ ಹೊಸದಾಗಿ ಹಿಡಿದು ತರಲಾದ ದುಬಾರಿ ಹಾಗೂ ಅಪರೂಪದ ಮೀನುಗಳನ್ನು ಖರೀದಿಸಲು ಜನರು ಮುಗಿಬಿದ್ದಿದ್ದರು. ಸ್ಥಳೀಯ ಮಾರುಕಟ್ಟೆಯಲ್ಲಿ ಈ ವಿಶೇಷ ತಳಿಯ ಮೀನುಗಳು ಕನಿಷ್ಠ 1,000 ರೂಪಾಯಿನಿಂದ ಹಿಡಿದು ಅತಿ ಹೆಚ್ಚು ಬೆಲೆಗೆ ಮಾರಾಟವಾದವು. ಸಾಮಾನ್ಯ ಮೀನುಗಳಿಗಿಂತ ವಿಭಿನ್ನವಾಗಿರುವ ಈ ಮೀನುಗಳನ್ನು ಕಣ್ಣಾರೆ ಕಂಡು ತಮ್ಮ ಮನೆಗೆ ಕೊಂಡೊಯ್ಯಲು ಗ್ರಾಹಕರು ತೀವ್ರ ಆಸಕ್ತಿ ತೋರಿದ್ದು ಇಡೀ ಮಾರುಕಟ್ಟೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿತ್ತು.

ಈ ಮಾರುಕಟ್ಟೆಯಲ್ಲಿ ಸದ್ಯ ಭಾರಿ ಸದ್ದು ಮಾಡುತ್ತಿರುವ 'ವಿಲಾಸ' ಮೀನಿಗೂ ಮತ್ತು ದಕ್ಷಿಣ ಭಾರತದ ಅತ್ಯಂತ ದುಬಾರಿ ಮೀನೆನಿಸಿಕೊಂಡಿರುವ 'ಪುಲಸಾ' ಮೀನಿಗೂ ನಿಕಟ ಹಾಗೂ ಕುತೂಹಲಕಾರಿ ಸಂಬಂಧವಿದೆ. ಮತ್ಸ್ಯಶಾಸ್ತ್ರಜ್ಞರು ಹಾಗೂ ಸ್ಥಳೀಯ ಮೀನುಗಾರರ ಪ್ರಕಾರ, ಸಮುದ್ರದ ಉಪ್ಪು ನೀರಿನಲ್ಲಿದ್ದಾಗ ಇವುಗಳನ್ನು ವಿಲಾಸ ಎಂದು ಕರೆಯಲಾಗುತ್ತದೆ. ಆದರೆ ಸಂತಾನೋತ್ಪತ್ತಿಗಾಗಿ ಇವು ಸಮುದ್ರದಿಂದ ನದಿಯ ಸಿಹಿ ನೀರಿಗೆ, ಅಂದರೆ ಗೋಧಾವರಿ ನದಿಗೆ ಎದುರಾಗಿ ಈಜುತ್ತಾ ಬಂದಾಗ ಇವುಗಳ ದೈಹಿಕ ಬದಲಾವಣೆಯಾಗಿ 'ಪುಲಸಾ' ಆಗಿ ರೂಪಾಂತರಗೊಳ್ಳುತ್ತವೆ. ಹೀಗೆ ಗೋಧಾವರಿ ನದಿ ನೀರನ್ನು ಪ್ರವೇಶಿಸುತ್ತಿದ್ದಂತೆ ಈ ಮೀನಿನ ರುಚಿ ನೂರರಷ್ಟು ಹೆಚ್ಚುತ್ತದೆ ಮತ್ತು ಅದಕ್ಕೆ ತಕ್ಕಂತೆ ಬೆಲೆಯೂ ಆಕಾಶಕ್ಕೇರುತ್ತದೆ.

Also Read
ವಿಜಯ್ ಕೊಂಕು ಮಾತಿಗೆ ವೇದಿಕೆಯಲ್ಲೇ ಕಣ್ಣೀರಿಟ್ರಾ ರಶ್ಮಿಕಾ? 'ಕಾಫಿ ವಿತ್ ಕರಣ್' ಸೆಟ್‌ನಲ್ಲಿ ಹೈಡ್ರಾಮಾ, 1 ಗಂಟೆ ಶೂಟಿಂಗ್ ಬಂದ್! Rashmika Mandanna
Luxury Fish

ಪುಲಸಾ ಮೀನಿನ ಋತುವಿನಲ್ಲಿ (ಮಳೆಗಾಲದ ಸಮಯದಲ್ಲಿ) ಮಾರುಕಟ್ಟೆಯಲ್ಲಿ ಈ ಮೀನಿಗೆ ವಿಪರೀತ ಬೇಡಿಕೆ ಇರುತ್ತದೆ. "ಆಸ್ತಿ ಮಾರಿಯಾದರೂ ಪುಲಸಾ ಮೀನಿನ ಸಾರು ಸವಿಯಬೇಕು" ಎಂಬ ನಾಣ್ಣುಡಿಯೇ ಆಂಧ್ರ ಭಾಗದಲ್ಲಿದೆ. ಗೋಧಾವರಿಯ ಎದುರು ನೀರಿನಲ್ಲಿ ಈಜಿ ಬರುವ ಈ ಮೀನಿನ ರುಚಿ ಅದ್ಭುತವಾಗಿರುವುದರಿಂದ, ಮಾರುಕಟ್ಟೆಯಲ್ಲಿ ಒಂದೇ ಒಂದು ಪುಲಸಾ ಮೀನಿನ ಬೆಲೆ 20,000 ರೂ.ಗೂ ಮೀರಿ ಹೋದ ಉದಾಹರಣೆಗಳಿವೆ. ಈ ಕಾರಣಕ್ಕಾಗಿಯೇ ಸಮುದ್ರದಲ್ಲಿದ್ದಾಗ ಕೇವಲ 1,000 ರೂ.ಗೆ ಸಿಗುವ ವಿಲಾಸ ಮೀನು, ಗೋಧಾವರಿ ನದಿಗೆ ಬಂದಾಗ 'ಚಿನ್ನದ ಬೆಲೆ' ಪಡೆಯುತ್ತದೆ.

ಆದರೆ ಈ ಭಾರಿ ಬೇಡಿಕೆಯನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಕೆಲ ಮೀನು ಮಾರಾಟಗಾರರು, ಗ್ರಾಹಕರ ಗೊಂದಲದ ಲಾಭ ಪಡೆಯುತ್ತಿದ್ದಾರೆ. ವಿಲಾಸ ಮತ್ತು ಪುಲಸಾ ಎರಡೂ ನೋಡಲು ಒಂದೇ ರೀತಿಯ ಬಣ್ಣ ಮತ್ತು ಆಕಾರ ಹೊಂದಿರುವುದರಿಂದ, ಅನೇಕ ಗ್ರಾಹಕರು ಉಪ್ಪಾಡದಂತಹ ಸಮುದ್ರ ತೀರದ ಮಾರುಕಟ್ಟೆಗಳಲ್ಲಿ ಸಿಗುವ 'ವಿಲಾಸ' ಮೀನನ್ನೇ ಅತ್ಯಂತ ದುಬಾರಿಯ 'ಪುಲಸಾ' ಎಂದು ಭಾವಿಸಿ ಭ್ರಮೆಯಿಂದ ಖರೀದಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅನುಭವಿ ಮೀನುಗಾರರು ಗ್ರಾಹಕರಿಗೆ ಎಚ್ಚರಿಕೆಯ ನೀಡಿದ್ದು, ಸಮುದ್ರದ ವಿಲಾಸ ಮೀನಿಗೂ ನದಿಯ ಅಸಲಿ ಪುಲಸಾ ಮೀನಿಗೂ ಇರುವ ರುಚಿ ಮತ್ತು ವ್ಯತ್ಯಾಸವನ್ನು ತಿಳಿದು ಖರೀದಿಸುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.

Also Read
ಈ ಹೋಟೆಲ್​ನಲ್ಲಿ ನೀವು ಊಟ ಮಾಡಿದ್ರೆ ತಟ್ಟೆ ಜತೆ ಮನೆಗೆ ಹೋಗಬೇಕು! ಉಚಿತದ ಹಿಂದಿದೆ ಸಖತ್​ ಇಂಟ್ರೆಸ್ಟಿಂಗ್ ಸ್ಟೋರಿ | Restaurant
Luxury Fish

ಪುಲಸಾ ಮೀನು ದುಬಾರಿ ಏಕೆ?

ಗೋಧಾವರಿ ನದಿಗೆ ಎದುರಾಗಿ ಈಜುತ್ತಾ ಬರುವ ಪುಲಸಾ (ಸಮುದ್ರದಲ್ಲಿ 'ವಿಲಾಸ') ಮೀನಿಗೆ ಭಾರತದಲ್ಲೇ ಅತ್ಯಂತ ಹೆಚ್ಚು ಬೇಡಿಕೆ ಇರಲು ಮುಖ್ಯ ಕಾರಣ ಅದರ ಅಸಾಧಾರಣ ರುಚಿ ಮತ್ತು ಅಪರೂಪದ ಲಭ್ಯತೆ. ಸಮುದ್ರದ ಉಪ್ಪು ನೀರಿನಲ್ಲಿದ್ದಾಗ ಸಾಧಾರಣವಾಗಿದ್ದ ಈ ಮೀನು, ಸಂತಾನೋತ್ಪತ್ತಿಗಾಗಿ ಮಳೆಗಾಲದಲ್ಲಿ ಗೋಧಾವರಿಯ ಸಿಹಿ ನೀರಿಗೆ ಧುಮುಕುತ್ತಿದ್ದಂತೆ ಅದರ ದೇಹದಲ್ಲಿ ವಿಶಿಷ್ಟ ರಾಸಾಯನಿಕ ಹಾಗೂ ಕೊಬ್ಬಿನಾಂಶದ ಬದಲಾವಣೆಗಳಾಗಿ ಅತ್ಯಂತ ಮೃದು ಮತ್ತು ಸ್ವಾದಿಷ್ಟಕರ ತಳಿಯಾಗಿ ಬದಲಾಗುತ್ತದೆ. ವರ್ಷದಲ್ಲಿ ಕೇವಲ ಕೆಲವೇ ತಿಂಗಳುಗಳು (ಮಳೆಗಾಲದಲ್ಲಿ) ಮಾತ್ರ ಸಿಗುವ ಈ ಮೀನನ್ನು ಹಿಡಿಯುವುದು ಅತ್ಯಂತ ಕಷ್ಟಕರವಾಗಿರುವುದರಿಂದ ಮತ್ತು ಈ ಮೀನಿನಿಂದ ಮಾಡುವ ಸಾರಿನ ರುಚಿ ಅದ್ಭುತವಾಗಿರುವುದರಿಂದ ಮಾರುಕಟ್ಟೆಯಲ್ಲಿ ಇದಕ್ಕೆ ಭಾರಿ ಬೇಡಿಕೆ ಹಾಗೂ ಲಕ್ಷಾಂತರ ರೂಪಾಯಿಗಳ ಮೌಲ್ಯವಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net