ಒಂದೇ ಕುಟುಂಬದ ಮೂವರ ಹತ್ಯೆ ಕೇಸ್​: ಗುಂಡು ಹಾರಿಸಿದ ಆರೋಪಿ ರಾಜ್ಯಮಟ್ಟದ ಶೂಟರ್! ವಿಡಿಯೋ ವೈರಲ್ | Lucknow Triple Murder

Lucknow Triple Murder
ಒಂದೇ ಕುಟುಂಬದ ಮೂವರ ಹತ್ಯೆ ಕೇಸ್​: ಗುಂಡು ಹಾರಿಸಿದ ಆರೋಪಿ ರಾಜ್ಯಮಟ್ಟದ ಶೂಟರ್! ವಿಡಿಯೋ ವೈರಲ್
Published on: 

ಉತ್ತರ ಪ್ರದೇಶ: ಈ ತಿಂಗಳ 24ರಂದು ಲಖನೌದಲ್ಲಿ ಒಂದೇ ಕುಟುಂಬದ ಮೂವರು ಪುರುಷರನ್ನು ಗುಂಡಿಕ್ಕಿ ಹತ್ಯೆಗೈದ ಘಟನೆಗೆ ಸಂಬಂಧಿಸಿದ ಎರಡು ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ. ಸಾದತ್‌ಗಂಜ್ ಪ್ರದೇಶದಲ್ಲಿ ನಡೆದ ಈ ಘಟನೆಯಲ್ಲಿ ಶಂಭು, ಶಿವ ತಿವಾರಿ ಮತ್ತು ಅವರ ಪುತ್ರ ಸುಯಶ್ ಎಂಬುವವರು ಆರೋಪಿ ರಿಷಭ್ ಶುಕ್ಲಾ ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟ ದುರ್ದೈವಿಗಳು ಎಂದು ವರದಿಯಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ಆರೋಪಿ ಪಿಸ್ತೂಲ್ ಹಿಡಿದು ಗುಂಡು ಹಾರಿಸುತ್ತಿರುವುದು ಮತ್ತು ತಾನು ಆತ್ಮರಕ್ಷಣೆಗಾಗಿ ಈ ಕೃತ್ಯ ಎಸಗಿದ್ದಾಗಿ ಪದೇ ಪದೇ ಹೇಳುತ್ತಿರುವುದು ಕಂಡುಬಂದಿದೆ. ಘಟನೆಯ ವೇಳೆ ಕುಟುಂಬಸ್ಥರು ಚೀರಾಡುತ್ತಿರುವುದು ಹಾಗೂ ರಸ್ತೆಯಲ್ಲಿದ್ದ ಜನರು ಭಯ, ಗಾಬರಿಯಿಂದ ಓಡಾಡುತ್ತಿರುವ ದೃಶ್ಯಗಳೂ ವಿಡಿಯೋದಲ್ಲಿ ಸೆರೆಯಾಗಿವೆ.

ಒಂದು ವಿಡಿಯೋದಲ್ಲಿ ಮೊದಲು ಶಂಭು, ನಂತರ ಶಿವ ತಿವಾರಿ ಮತ್ತು ಅವರ ಪುತ್ರ ಸುಯಶ್ ಮೇಲೆ ಗುಂಡು ಹಾರಿಸಿರುವುದಾಗಿ ಆರೋಪಿಸಲಾಗಿದೆ. ಮತ್ತೊಂದು ದೃಶ್ಯದಲ್ಲಿ ಪಿಸ್ತೂಲ್ ಹಿಡಿದು ಆಕ್ರೋಶದಿಂದ ಮಾತನಾಡುವ ಆರೋಪಿ, ತನ್ನ ಮೇಲೆ ಮೊದಲು ಹಲ್ಲೆ ನಡೆಸಲಾಗಿತ್ತು ಎಂದು ಹೇಳಿಕೊಂಡಿದ್ದಾನೆ. ಇಟ್ಟಿಗೆಗಳಿಂದ ಹಲ್ಲೆ ನಡೆಸಿದ್ದರು ಎಂಬ ಆರೋಪವನ್ನೂ ಮಾಡಿದ್ದಾನೆ ಎಂದು ವರದಿಗಳು ತಿಳಿಸಿವೆ.

ಮೂಲಗಳ ಪ್ರಕಾರ, ಎರಡೂ ಕುಟುಂಬಗಳ ನಡುವೆ ಬಹಳ ವರ್ಷಗಳಿಂದ ವಿವಾದವಿತ್ತು. ಘಟನೆಯ ದಿನ ಈ ಗಲಾಟೆ ಮಾತಿನ ಚಕಮಕಿಯಿಂದ ತೀವ್ರಗೊಂಡಿದ್ದು, ಎರಡೂ ಕಡೆಯವರು ಪರಸ್ಪರ ವಿಡಿಯೋ ಚಿತ್ರೀಕರಿಸಲು ಆರಂಭಿಸಿದ್ದರು ಎನ್ನಲಾಗಿದೆ. ಬೆದರಿಕೆ ಎದುರಾದರೆ ವಿಡಿಯೋ ದಾಖಲಿಸುವಂತೆ ಪೊಲೀಸರು ತಿವಾರಿ ಕುಟುಂಬಕ್ಕೆ ಸಲಹೆ ನೀಡಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ. ಇದರ ಅನ್ವಯ, ದಾಳಿಗೂ ಮುನ್ನ ವಿಡಿಯೋಗಳನ್ನು ರೆಕಾರ್ಡ್​ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ.

Also Read
ಯಾರೀ 'ಎಲಿಫೆಂಟ್​ ಮ್ಯಾನ್'? ಎಲ್ಲರಂತೆ ನಿದ್ರಿಸಲಾಗದ ಈ ವಿಚಿತ್ರ ಮುಖದ ಹಿಂದಿತ್ತು ಯಾರಿಗೂ ಬೇಡವಾದ ಕಣ್ಣೀರು| Joseph Carey Merrick
Lucknow Triple Murder

ಆರೋಪಿ ರಾಜ್ಯಮಟ್ಟದ ಶೂಟರ್!

ಆರೋಪಿ ರಿಷಭ್ ಶುಕ್ಲಾ ರಾಜ್ಯಮಟ್ಟದ ಶೂಟರ್ ಆಗಿದ್ದು, ವಿವಿಧ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆದ್ದಿದ್ದಾನೆ ಎಂದು ತಿಳಿದುಬಂದಿದೆ. 2024ರಲ್ಲಿ ನಡೆದ ಪೂರ್ವ ರಾಜ್ಯಮಟ್ಟದ ಟ್ರ್ಯಾಪ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಪಡೆದಿದ್ದ ಎನ್ನಲಾಗಿದೆ. ಶೂಟಿಂಗ್ ಸಂಸ್ಥೆಯೊಂದರ ಸದಸ್ಯರು ಆತನನ್ನು ಸನ್ಮಾನಿಸಿದ್ದರು ಎಂಬ ಮಾಹಿತಿಯೂ ಸಿಕ್ಕಿದೆ. ಆತ ತನ್ನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪಿಸ್ತೂಲ್​ಗಳ ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದ ಎನ್ನಲಾಗಿದೆ. ಈ ಹಿಂದೆ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ್ದ ಎಂಬ ಹೇಳಿಕೆಯನ್ನು ಸದ್ಯ ಪೊಲೀಸರು ಪರಿಶೀಲಿಸುತ್ತಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ,(ಏಜೆನ್ಸೀಸ್).